ಗಡಿ ಒಪ್ಪಂದ ಘೋಷಿಸಿದ ಭಾರತ; ಚೀನಾದ ನಿಲುವಿನತ್ತ ಎಲ್ಲರ ಚಿತ್ತ

author-image
admin
Updated On
ಗಡಿ ಒಪ್ಪಂದ ಘೋಷಿಸಿದ ಭಾರತ; ಚೀನಾದ ನಿಲುವಿನತ್ತ ಎಲ್ಲರ ಚಿತ್ತ
Advertisment
  • ಭಾರತ-ಚೀನಾ ಗಡಿಯಲ್ಲಿ 50,000 ಹೆಚ್ಚುವರಿ ಯೋಧರು
  • ನೂತನ ಒಪ್ಪಂದದ ಬಗ್ಗೆ ಮಾಹಿತಿ ನೀಡಿದ ವಿಕ್ರಮ್ ಮಿಸ್ರಿ
  • ಭಾರತ-ಚೀನಾ ಉದ್ವಿಗ್ನತೆ, ವ್ಯಾಪಾರದ ಮೇಲೆ ದುಷ್ಪರಿಣಾಮ

ಭಾರತ ಮತ್ತು ಚೀನಾಗಳು ತಮ್ಮ ವಿವಾದಿತ ಗಡಿಯಲ್ಲಿ ಹೇಗೆ ಗಸ್ತು ನಿರ್ವಹಿಸಬೇಕು ಎಂಬ ಕುರಿತು ಒಂದು ಒಪ್ಪಂದಕ್ಕೆ ಬಂದಿವೆ ಎಂದು ಹಿರಿಯ ಭಾರತೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಒಪ್ಪಂದ ಪರಮಾಣು ಶಸ್ತ್ರಾಸ್ತ್ರ ಸಜ್ಜಿತವಾಗಿರುವ ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಚೀನಾಗಳ ನಡುವಿನ ಉದ್ವಿಗ್ನತೆಗಳು ಅವುಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತು ವ್ಯಾಪಾರ ವಹಿವಾಟುಗಳ ಮೇಲೂ ದುಷ್ಪರಿಣಾಮ ಬೀರಿದೆ. ಆದರೆ ಈ ನೂತನ ಒಪ್ಪಂದ ಪರಸ್ಪರ ಸಹಕಾರವನ್ನು ಉತ್ತಮಗೊಳಿಸಿ, ಭಾರತ- ಚೀನಾ ಸಂಬಂಧದ ಮೇಲಿದ್ದ ಕಲೆಯನ್ನು ತೊಡೆದುಹಾಕುವ ನಿರೀಕ್ಷೆಗಳಿವೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಅಕ್ಟೋಬರ್ 22ರಂದು ರಷ್ಯಾದ ಕಜಾನ್‌ನಲ್ಲಿ ಆರಂಭವಾಗುವ ಬ್ರಿಕ್ಸ್ ಸಮಾವೇಶಕ್ಕೂ ಮುನ್ನ ನೂತನ ಒಪ್ಪಂದ ಅಂತಿಮ ಹಂತ ತಲುಪಿದೆ ಎಂದಿದ್ದಾರೆ. ಬ್ರಿಕ್ಸ್ ಸಮಾವೇಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಚೀನಾ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್ ಅವರು ಭಾಗವಹಿಸುವ ಸಾಧ್ಯತೆಗಳಿದ್ದು, ಅಲ್ಲಿ ಉಭಯ ನಾಯಕರ ನಡುವೆ ಇನ್ನಷ್ಟು ವಿಸ್ತೃತ ಮಾತುಕತೆಗಳಿಗೆ ಅವಕಾಶ ಲಭಿಸಬಹುದು.

ಭಾರತ ಮತ್ತು ಚೀನಾಗಳ ನಡುವಿನ ಗಡಿಯನ್ನು ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್ಎಸಿ) ಎಂದು ಕರೆಯಲಾಗುತ್ತದೆ. 2020ರಲ್ಲಿ ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಹಿಂಸಾತ್ಮಕ ಹೊಡೆದಾಟ ನಡೆದಿದ್ದು, ಅದರಲ್ಲಿ ಕನಿಷ್ಠ 24 ಜನ ಯೋಧರು ಪ್ರಾಣ ಕಳೆದುಕೊಂಡಿದ್ದರು. ಅವರಲ್ಲಿ ಹೆಚ್ಚಿನವರು ಭಾರತೀಯ ಯೋಧರು ಎನ್ನಲಾಗಿದೆ.

ದೆಹಲಿಯಲ್ಲಿ ನೂತನ ಒಪ್ಪಂದದ ಕುರಿತು ಮಾಹಿತಿ ನೀಡಿದ ಮಿಸ್ರಿ, ಕಳೆದ ಕೆಲವು ವಾರಗಳಿಂದ ಭಾರತ ಮತ್ತು ಚೀನಾಗಳ ರಾಜತಾಂತ್ರಿಕರು ಮತ್ತು ಮಿಲಿಟರಿ ಅಧಿಕಾರಿಗಳು ತಮ್ಮ ದೇಶಗಳ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ನಿರಂತರವಾಗಿ ಸಂವಹನ ನಡೆಸುತ್ತಿದ್ದರು ಎಂದಿದ್ದಾರೆ.

ಈ ಮಾತುಕತೆಗಳ ಬಳಿಕ, ಭಾರತ ಮತ್ತು ಚೀನಾಗಳು ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್ಎಸಿ) ಆದ್ಯಂತ ಹೊಸದಾದ ಗಸ್ತು ವ್ಯವಸ್ಥೆ ಜಾರಿಗೆ ತರಲು ಒಪ್ಪಿಗೆ ಸೂಚಿಸಿವೆ. ಈ ಒಪ್ಪಂದದ ಅನುಸಾರ, 2020ರಿಂದ ವಿವಾದಕ್ಕೆ ಹಾದಿ ಮಾಡಿಕೊಟ್ಟಿರುವ ಪ್ರದೇಶದಿಂದ ಸೇನಾ ಪಡೆಗಳ ಹಿಂಪಡೆತ ಮತ್ತು ಸಮಸ್ಯೆಯ ಪರಿಹಾರಕ್ಕೆ ಅನುಕೂಲ ಮಾಡಿಕೊಡಲಿದೆ.

ಆದರೆ ಕೆಲವು ವರದಿಗಳ ಪ್ರಕಾರ, ಚೀನಾದ ವಿದೇಶಾಂಗ ಸಚಿವಾಲಯ ಭಾರತದ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯೆ ತೋರಲಿಲ್ಲ. ಸೋಮವಾರ, ಅಕ್ಟೋಬರ್‌ 21ರಂದು ಬೀಜಿಂಗ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿನ್ ಅವರು ಚೀನಾ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಹಕಾರ ವೃದ್ಧಿಸಲು ಬದ್ಧವಾಗಿದ್ದು, ಗ್ಲೋಬಲ್ ಸೌತ್‌ಗಾಗಿ ಹೊಸ ಯುಗವನ್ನು ಆರಂಭಿಸಲು ಉತ್ಸುಕವಾಗಿದೆ ಎಂದಿದ್ದರು.

publive-image

ಅಜಿತ್ ದೋವಲ್ ಜೊತೆ ಚೀನಾ ಮಾತುಕತೆ

ಕಳೆದ ತಿಂಗಳು ಚೀನಾದ ಅತ್ಯುನ್ನತ ರಾಜತಂತ್ರಜ್ಞ ವಾಂಗ್ ಯಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನಡುವಿನ ಮಾತುಕತೆಯ ಬಳಿಕ ಈ ಒಪ್ಪಂದ ರೂಪುಗೊಂಡಿರುವ ಸಾಧ್ಯತೆಗಳಿವೆ. ಆ ಸಮಯದಲ್ಲಿ, ಭಾರತ ಮತ್ತು ಚೀನಾಗಳು ತಮ್ಮ ಸಂಬಂಧವನ್ನು ಉತ್ತಮಪಡಿಸಲು ಅನುಕೂಲಕರವಾದ ವಾತಾವರಣವನ್ನು ನಿರ್ಮಿಸುವ ಸಲುವಾಗಿ ಜೊತೆಯಾಗಿ ಕಾರ್ಯಾಚರಿಸಲು ಒಪ್ಪಿಗೆ ಸೂಚಿಸಿವೆ ಎಂದು ಚೀನಾದ ರಾಷ್ಟ್ರೀಯ ಮಾಧ್ಯಮ ವರದಿ ಮಾಡಿತ್ತು.

ಭಾರತ ಮತ್ತು ಚೀನಾಗಳ ನಡುವೆ 1962ರಲ್ಲಿ ಒಂದು ಭೀಕರ ಯುದ್ಧ ನಡೆದಿತ್ತು. ಬಳಿಕ, ಹಿಮಾಲಯದ ಅತ್ಯಂತ ಎತ್ತರದ ಪ್ರದೇಶಗಳ ಮೂಲಕ ಹಾದುಹೋಗುವ, 3,500 ಕಿಲೋಮೀಟರ್ ವ್ಯಾಪ್ತಿಯ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್ಎಸಿ) ಏಷ್ಯಾದ ಅತ್ಯಂತ ಸೂಕ್ಷ್ಮ ಮತ್ತು ವಿವಾದಾತ್ಮಕ ಪ್ರದೇಶವಾಗಿ ಹೊರಹೊಮ್ಮಿತ್ತು.

ಚೀನಾ ಈ ಪ್ರದೇಶದಲ್ಲಿ ತನ್ನ ಉಪಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ, ಎಲ್ಎಸಿ ಆದ್ಯಂತ, ಟಿಬೆಟ್‌ನಲ್ಲಿ ಹಳ್ಳಿಗಳನ್ನು ನಿರ್ಮಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತವೂ ಗಡಿಯಾದ್ಯಂತ ತನ್ನ ಉಪಸ್ಥಿತಿಯನ್ನು ಬಲಪಡಿಸಲು 'ವೈಬ್ರೆಂಟ್ ವಿಲೇಜಸ್' ಯೋಜನೆಯಡಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸುತ್ತಿದೆ.

ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಡೆದ ಚಕಮಕಿಯ ಬಳಿಕ, ಭಾರತ ಮತ್ತು ಚೀನಾಗಳು ಎಲ್ಎಸಿ ಆದ್ಯಂತ ಕನಿಷ್ಠ 50,000 ಹೆಚ್ಚುವರಿ ಯೋಧರನ್ನು ನಿಯೋಜಿಸಿವೆ. ಭಾರತ ಪಾಕಿಸ್ತಾನ ಗಡಿಯಲ್ಲಿದ್ದ ತನ್ನ ಹೆಚ್ಚುವರಿ ಯೋಧರನ್ನು ತನ್ನ ಸ್ಥಾನವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಎಸಿ ಕಡೆಗೆ ಸ್ಥಳಾಂತರಿಸಿದೆ. ಚೀನೀ ಪಡೆಗಳು ಕೆಲವು ಸ್ಥಳಗಳಿಗೆ ಪ್ರವೇಶಕ್ಕೆ ಅಡ್ಡಿಪಡಿಸಿರುವುದರಿಂದ, ಭಾರತೀಯ ಯೋಧರು ಅಲ್ಲಿ ಹಿಂದಿನಂತೆ ಗಸ್ತು ತಿರುಗಲು ಆಗುತ್ತಿಲ್ಲ ಎಂದು ಭಾರತ ಸರ್ಕಾರ ತನ್ನ ಕಳವಳ ವ್ಯಕ್ತಪಡಿಸಿತ್ತು.

2020ರ ಬಳಿಕ, ಮೋದಿ ಸರ್ಕಾರ ಒಂದು ದೃಢವಾದ ನಿಲುವು ತೆಗೆದುಕೊಂಡಿದ್ದು, ಚೀನಾದೊಡನೆ ಸಹಜ ಸಂಬಂಧ ಮರಳಿ ಆರಂಭಗೊಳ್ಳುವ ಮುನ್ನ ಎಲ್ಎಸಿಯಲ್ಲಿ ತಲೆದೋರಿರುವ ಉದ್ವಿಗ್ನ ಪರಿಸ್ಥಿತಿ ತಿಳಿಯಾಗಬೇಕು ಎಂದು ಅಭಿಪ್ರಾಯ ಪಟ್ಟಿತ್ತು.

ಭಾರತದ ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದು ಏನು?

ಇತ್ತೀಚೆಗೆ ಈ ಕುರಿತು ಹೇಳಿಕೆ ನೀಡಿದ್ದ ಭಾರತದ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರು, ಚೀನಾ ಮತ್ತು ಭಾರತಗಳ ಉದ್ವಿಗ್ನ ಪರಿಸ್ಥಿತಿಯ ತಿಳಿಗೊಳಿಸುವಿಕೆ 75% ಪೂರ್ಣಗೊಂಡಿದೆ ಎಂದಿದ್ದರು. ಆದರೆ, ಗಡಿಯಲ್ಲಿ ಹೆಚ್ಚುತ್ತಿರುವ ಮಿಲಿಟರಿ ಉಪಸ್ಥಿತಿಯೇ ಮುಖ್ಯ ಕಳವಳದ ಅಂಶವಾಗಿದೆ ಎಂದು ಅವರು ಹೇಳಿದ್ದರು. ಮಾತುಕತೆಗಳು ಇನ್ನೂ ಮುಂದುವರಿದಿದ್ದು, ಈ ನಿಟ್ಟಿನಲ್ಲಿ ಒಂದಷ್ಟು ಪ್ರಗತಿ ಸಾಧಿತವಾಗಿದೆ, ಆದರೆ ಒಂದಷ್ಟು ವಿಚಾರಗಳನ್ನು ಇನ್ನೂ ಪರಿಹರಿಸಬೇಕಿದೆ ಎಂದು ಸಚಿವರು ವಿವರಿಸಿದ್ದರು.

ಹಲವಾರು ಸುತ್ತುಗಳ ಮಾತುಕತೆಗಳ ಬಳಿಕ, ಭಾರತ ಮತ್ತು ಚೀನಾಗಳು 2020ರ ಗಲ್ವಾನ್ ಕಣಿವೆಯ ಹೊಡೆದಾಟಕ್ಕೂ ಮುನ್ನ ಇದ್ದಂತಹ ಗಡಿ ಗಸ್ತು ವ್ಯವಸ್ಥೆಯನ್ನು ಮರಳಿ ಜಾರಿಗೆ ತರುವ ಕುರಿತ ಒಪ್ಪಂದಕ್ಕೆ ಬಂದಿವೆ. ಈಗಿನ ನೂತನ ಒಪ್ಪಂದ ದೆಪ್ಸಾಂಗ್ ಮತ್ತು ದೆಮ್‌ಚಾಕ್‌ಗಳಂತಹ ಪ್ರಮುಖ ಪ್ರದೇಶಗಳನ್ನೂ ಒಳಗೊಂಡಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.

ವಿದೇಶಾಂಗ ಸಚಿವಾಲಯದ ಘೋಷಣೆಯ ಬಳಿಕ, ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರು ಈ ಕುರಿತು ವಿವರಣೆ ನೀಡಿದ್ದು, ಭಾರತ ಮತ್ತು ಚೀನಾಗಳ ನಡುವಿನ ಗಡಿಯ ಪರಿಸ್ಥಿತಿ ಈಗ 2020ರ ಮೊದಲಿನ ಸ್ಥಿತಿಗೆ ಮರಳಿದೆ ಎಂದಿದ್ದಾರೆ. "ಚೀನಾದ ಜೊತೆಗಿನ ಉದ್ವಿಗ್ನ ಪರಿಸ್ಥಿತಿಯ ನಿವಾರಣೆ ಈಗ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ನಾವು ಹೇಳಬಹುದು" ಎಂದು ಸಚಿವರು ತಿಳಿಸಿದ್ದಾರೆ.

"ಕೆಲವೊಂದು ಪ್ರದೇಶಗಳಲ್ಲಿ, 2020ರ ಬಳಿಕ ಎರಡೂ ಬದಿಗಳು ಪರಸ್ಪರರಿಗೆ ಪ್ರವೇಶ ಇಲ್ಲದಂತೆ ತಡೆಹಿಡಿದಿದ್ದವು. ಈಗ ಉಭಯ ರಾಷ್ಟ್ರಗಳು ಒಂದು ಒಪ್ಪಂದಕ್ಕೆ ಬಂದಿದ್ದು, ಅದರಂತೆ ಗಸ್ತು ಪ್ರಕ್ರಿಯೆ ಮುಂದುವರಿಯಲಿದೆ" ಎಂದು ಸಚಿವರು ವಿವರಿಸಿದ್ದಾರೆ.

ಚೀನಾದ ಹೂಡಿಕೆಯ ಮೇಲೆ ಭಾರತ ನಿಯಂತ್ರಣ

2020ರಲ್ಲಿ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್ಎಸಿ) ಆದ್ಯಂತ ನಡೆದ ಚಕಮಕಿಯ ಬಳಿಕ, ಭಾರತ ಹಲವಾರು ಚೀನೀ ಆ್ಯಪ್‌ಗಳನ್ನು ನಿಷೇಧಿಸಿ, ಚೀನಾದಿಂದ ಬರುವ ಹೂಡಿಕೆಯ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಿತ್ತು. ಭಾರತದ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಚೀನಾದ ಹೂಡಿಕೆಗಳನ್ನು ನಿಯಂತ್ರಿಸುವ ವಿಚಾರದಲ್ಲಿ, ಭಾರತ ಜಗತ್ತಿನಲ್ಲೇ ಅತ್ಯಂತ ಕಠಿಣ ನಿಯಮಗಳನ್ನು ಹೊಂದಿತ್ತು.

ಇತ್ತೀಚಿನ ತಿಂಗಳುಗಳಲ್ಲಿ, ಚೀನಾದ ಹೂಡಿಕೆಗಳ ಮೇಲೆ ಮತ್ತು ಚೀನೀ ನಾಗರಿಕರಿಗೆ ವೀಸಾ ನೀಡುವ ಕುರಿತು ಭಾರತ ವಿಧಿಸಿರುವ ನಿರ್ಬಂಧಗಳು ಭಾರತದ ಉತ್ಪಾದನಾ ವಲಯವನ್ನು ಅಭಿವೃದ್ಧಿ ಪಡಿಸುವ ಪ್ರಯತ್ನಕ್ಕೆ ಅಡ್ಡಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದರು. ಮೋದಿ ಸರ್ಕಾರದ ಕೆಲವು ಅಧಿಕಾರಿಗಳು ಆರ್ಥಿಕ ಅಭಿವೃದ್ಧಿ ಸಾಧಿಸುವ ಸಲುವಾಗಿ, ಒಂದಷ್ಟು ಕಠಿಣ ನಿಯಮಗಳನ್ನು ಸಡಿಲಿಸುವುದಕ್ಕೆ ಬೆಂಬಲ ನೀಡುತ್ತಿದ್ದಾರೆ.

ವಿಶೇಷ ವರದಿ: ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment