/newsfirstlive-kannada/media/post_attachments/wp-content/uploads/2025/07/MODI_ENGLAND_TOUR_1.jpg)
ಇಂಡಿಯಾ ಮತ್ತು ಇಂಗ್ಲೆಂಡ್ ಇಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಇದರಿಂದಾಗಿ ಭಾರತ ಮತ್ತು ಇಂಗ್ಲೆಂಡ್ ನಡುವೆ 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವು ದ್ವಿಗುಣವಾಗುವ ನೀರೀಕ್ಷೆ ಇದೆ. ಈ ಮುಕ್ತ ವ್ಯಾಪಾರ ಒಪ್ಪಂದವೂ ಎರಡು ದೇಶಗಳಿಗೆ ಆರ್ಥಿಕವಾಗಿ ಲಾಭವಾಗುವುದರ ಜೊತೆಗೆ 2 ದೇಶದ ಜನರಿಗೆ ಆರ್ಥಿಕವಾಗಿ ಲಾಭವಾಗಲಿದೆ.
ಭಾರತದ ಪ್ರಧಾನಿ ಮೋದಿ ಹಾಗೂ ಇಂಗ್ಲೆಂಡ್ ಪ್ರಧಾನಿ ಸರ್ ಕೀರ್ ರಾಡ್ನಿ ಸ್ಟಾರ್ಮರ್ ಸಮ್ಮುಖದಲ್ಲಿ ಭಾರತದ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಮತ್ತು ಬ್ರಿಟಿಷ್ ಟ್ರೇಡ್ ಸಚಿವ ಜೋನಾಥನ್ ರೇನಾಲ್ಡ್ಸ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದದಿಂದ ಭಾರತದ ರೈತರಿಗೆ ಅನುಕೂಲವಾಗಲಿದೆ. ಭಾರತದ ಕೃಷಿ ಹಾಗೂ ಸಂಸ್ಕರಿತ ಆಹಾರ ಪದಾರ್ಥಗಳು ಈಗ ತೆರಿಗೆ ಮುಕ್ತವಾಗಿ ಬ್ರಿಟಿಷ್ ಮಾರುಕಟ್ಟೆ ಪ್ರವೇಶಿಸಲಿವೆ. ಬ್ರಿಟಿಷ್ ಮಾರುಕಟ್ಟೆಯು ಈಗ ಭಾರತದ ಕೃಷಿ ಉತ್ಪನ್ನಗಳಿಗೆ ತನ್ನನ್ನು ತಾನು ತೆರೆದುಕೊಳ್ಳಲಿದೆ. ಯೂರೋಪಿಯನ್ ದೇಶಗಳ ರಫ್ತುದಾರರಿಗಿಂತ ಭಾರತದ ಕೃಷಿ ಉತ್ಪನ್ನಗಳ ರಫ್ತುದಾರರಿಗೆ, ರೈತರಿಗೆ ಸುಂಕ ಮುಕ್ತ ವ್ಯಾಪಾರ ಒಪ್ಪಂದದಿಂದ ಲಾಭವಾಗಲಿದೆ.
ಭಾರತದ ಯಾವ್ಯಾವ ವಲಯಕ್ಕೆ ಏನೇನು ಲಾಭ?
ಭಾರತದ ಹರಿಶಿಣ, ಮೆಣಸು, ಏಲಕ್ಕಿ ಹಾಗೂ ಸಂಸ್ಕರಿತ ಉತ್ಪನ್ನಗಳಾದ ಮಾವು ಹಣ್ಣಿನ ತಿರುಳು, ಉಪ್ಪಿನಕಾಯಿ, ಆಹಾರ ಧಾನ್ಯಗಳು ಇನ್ನೂ ಮುಂದೆ ಸುಂಕ, ತೆರಿಗೆ ಮುಕ್ತವಾಗಿ ಬ್ರಿಟನ್ ಮಾರುಕಟ್ಟೆ ಪ್ರವೇಶಿಸಬಹುದು. ಇದರಿಂದಾಗಿ ಭಾರತದ ರೈತರಿಗೆ ಮತ್ತೊಂದು ದೇಶದ ಮಾರುಕಟ್ಟೆಯೂ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಸಿಕ್ಕಂತಾಗಿದೆ. ಭಾರತದ ರೈತರಿಗೆ ಕೃಷಿ ಉತ್ಪನ್ನಗಳ ಮಾರಾಟದಿಂದ ಸಿಗುವ ಆದಾಯದ ಮಾರ್ಜಿನ್ ಕೂಡ ಹೆಚ್ಚಾಗುತ್ತೆ.
ಮುಕ್ತ ವ್ಯಾಪಾರ ಒಪ್ಪಂದದಡಿ, ಬ್ರಿಟನ್ಗೂ ಕೂಡ ಭಾರತದ ಮಾರುಕಟ್ಟೆ ಮುಕ್ತವಾಗಲಿದೆ. ಬ್ರಿಟನ್‌ನ ಉತ್ಪನ್ನಗಳನ್ನು ಯಾವುದೇ ಸುಂಕ, ತೆರಿಗೆ ಇಲ್ಲದೇ ಭಾರತದಲ್ಲಿ ಮಾರಾಟ ಮಾಡಬಹುದು. ಆದರೇ, ಭಾರತ ಸರ್ಕಾರವು, ಭಾರತದ ಕೃಷಿ ವಲಯಕ್ಕೆ ಬ್ರಿಟನ್ ಅಮದು ಉತ್ಪನ್ನಗಳಿಂದ ತೊಂದರೆಯಾಗದಂತೆ ಮುನ್ನೆಚ್ಚರಿಕೆ, ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದೆ. ಬ್ರಿಟನ್‌ನ ಡೈರಿ ಉತ್ಪನ್ನಗಳು, ಆ್ಯಪಲ್, ವೋಟ್ಸ್, ಅಡುಗೆ ಎಣ್ಣೆಗೆ ಭಾರತದಲ್ಲಿ ಅಮದು ಸುಂಕದಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ಇದರಿಂದಾಗಿ ಈ ಉತ್ಪನ್ನಗಳನ್ನು ಬೆಳೆಯುವ ಭಾರತದ ರೈತರಿಗೆ ಯಾವುದೇ ತೊಂದರೆಯಾಗಲ್ಲ ಎಂದು ಭಾರತ ಸರ್ಕಾರ ಹೇಳಿದೆ.
ಮೀನುಗಾರಿಕಾ ವಲಯಕ್ಕೆ ಲಾಭ
ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ಮೀನುಗಾರಿಕಾ ವಲಯಕ್ಕೆ ಲಾಭವಾಗಲಿದೆ. ವಿಶೇಷವಾಗಿ ಆಂಧ್ರಪ್ರದೇಶ, ಒರಿಸ್ಸಾ, ಕೇರಳ, ತಮಿಳುನಾಡು ರಾಜ್ಯಗಳ ಮೀನುಗಾರರಿಗೆ ಮೀನುಗಳನ್ನು ಸುಂಕ ರಹಿತವಾಗಿ ಬ್ರಿಟನ್ಗೆ ರಫ್ತು ಮಾಡುವ ಅವಕಾಶ ಸಿಗಲಿದೆ. ಇದುವರೆಗೂ ಮೀನುಗಳನ್ನು ಭಾರತದಿಂದ ಬ್ರಿಟನ್ಗೆ ರಫ್ತು ಮಾಡಲು ಶೇ.4.2 ರಿಂದ ಶೇ.8.5 ರವರೆಗೆ ಅಮದು ಸುಂಕವನ್ನು ಬ್ರಿಟನ್ ವಿಧಿಸುತ್ತಿತ್ತು. ಈಗ ಯಾವುದೇ ಅಮದು ಸುಂಕ ಇಲ್ಲದೇ ಭಾರತದ ಮೀನುಗಳನ್ನು ಬ್ರಿಟನ್ಗೆ ರಫ್ತು ಮಾಡಿ ಮಾರಾಟ ಮಾಡಬಹುದು.
ಭಾರತದ ಲೆದರ್, ಫುಟ್ ವೇರ್, ಅಟಿಕೆಗಳು, ಜವಳಿ, ಸಮುದ್ರೋತ್ಪನ್ನ, ಆಭರಣ, ಬಟ್ಟೆಗಳನ್ನು ಸುಲಭವಾಗಿ ಬ್ರಿಟನ್ಗೆ ರಫ್ತು ಮಾಡಬಹುದು. ಇವುಗಳ ಮೇಲಿನ ಅಮದು ಸುಂಕವನ್ನು ಬ್ರಿಟನ್ ಶೇ.90 ರಷ್ಟು ಇಳಿಸಲಿದೆ. ಇಂಜಿನಿಯರಿಂಗ್ ಉತ್ಪನ್ನಗಳು, ಆಟೋ ಸಲಕರಣೆಗಳು, ಎಲೆಕ್ಟ್ರಿಕ್, ಹೈಬ್ರಿಡ್ ವಾಹನಗಳು, ಕ್ರೀಡಾ ಪರಿಕರಗಳ ವಲಯಕ್ಕೂ ಹೆಚ್ಚು ಲಾಭವಾಗಲಿದೆ. ಕರ್ನಾಟಕದ ಚನ್ನಪಟ್ಟಣದ ಬೊಂಬೆಗಳನ್ನು ಯಾವುದೇ ಸುಂಕ ಇಲ್ಲದೇ ಬ್ರಿಟನ್ ಗೆ ರಫ್ತು ಮಾಡಬಹುದು.
ಭಾರತದ ಕಂಪನಿಗಳಿಗೆ ಲಾಭ
ಬ್ರಿಟನ್ ವಾರ್ಷಿಕ 3 ಬಿಲಿಯನ್ ಡಾಲರ್ ನಷ್ಟು ಚಿನ್ನಾಭರಣಗಳನ್ನು ಅಮದು ಮಾಡಿಕೊಳ್ಳುತ್ತಿದೆ. ಇದರಲ್ಲಿ ಭಾರತದ ಪಾಲು ಶೇ.15 ರಷ್ಟು ಮಾತ್ರ. ಇನ್ನೂ ಮುಂದೆ ಭಾರತದ ಜ್ಯುವೆಲ್ಲರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬ್ರಿಟನ್ಗೆ ರಫ್ತು ಮಾಡಲು ಸಾಧ್ಯವಾಗುತ್ತೆ. ಜೊತೆಗೆ ಭಾರತದ ಐಟಿ ಕಂಪನಿಗಳು, ಐಟಿ ಉದ್ಯೋಗಿಗಳಿಗೂ ಬ್ರಿಟನ್ ಮುಕ್ತ ಮಾರುಕಟ್ಟೆ ತೆರೆದುಕೊಳ್ಳಲಿದೆ. ಈ ಒಪ್ಪಂದದಿಂದ ಪ್ರತಿ ವರ್ಷ 60 ಸಾವಿರ ಐಟಿ ಉದ್ಯೋಗಿಗಳಿಗೆ ಲಾಭವಾಗಲಿದೆ. ವಿಶೇಷವಾಗಿ ಟಿಸಿಎಸ್, ಇನ್ಪೋಸಿಸ್, ಟೆಕ್ ಮಹೀಂದ್ರ, ಎಚ್‌ಸಿಎಲ್ ಟೆಕ್ನಾಲಜೀಸ್, ವಿಪ್ರೋ ಕಂಪನಿಗಳಿಗೆ ಹೆಚ್ಚಿನ ಲಾಭವಾಗಲಿದೆ.
ಭಾರತದ ಟೀ, ಮಸಾಲೆ ಪದಾರ್ಥಗಳು ಹಾಗೂ ರೆಡಿ ಟು ಈಟ್ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯತೆ ಹೆಚ್ಚಾಗಲಿದೆ.
ಇನ್ನೂ ಈ ಒಪ್ಪಂದದಲ್ಲಿ ಸೋಷಿಯಲ್ ಸೆಕ್ಯುರಿಟಿ ಆಗ್ರಿಮೆಂಟ್ ಕೂಡ ಸೇರ್ಪಡೆ ಆಗಿದೆ. ಇದರಿಂದ ಇಂಗ್ಲೆಂಡ್ನಲ್ಲಿರುವ ಭಾರತದ ಉದ್ಯೋಗಿಗಳು, ಬ್ರಿಟಿಷ್ ಸೋಷಿಯಲ್ ಸೆಕ್ಯುರಿಟಿ ಸಿಸ್ಟಮ್ಗೆ ಮೂರು ವರ್ಷ ಹಣ ಪಾವತಿ ಮಾಡುವುದರಿಂದ ವಿನಾಯಿತಿ ಪಡೆಯಲಿದ್ದಾರೆ. ಇದರಿಂದಾಗಿ ಇಂಗ್ಲೆಂಡ್ನಲ್ಲಿರುವ ಭಾರತದ ಉದ್ಯೋಗಿಗಳು, ಬ್ಯುಸಿನೆಸ್ಗಳಿಗೆ ವಾರ್ಷಿಕ 4 ಸಾವಿರ ಕೋಟಿ ರೂಪಾಯಿ ಉಳಿತಾಯ ಆಗಲಿದೆ.
ಭಾರತದಲ್ಲಿ ಬ್ರಿಟನ್ ವಿಸ್ಕಿ ದರ ಕಡಿಮೆ
ಇನ್ನೂ ಭಾರತದ ವೃತ್ತಿಪರರಿಗೂ ಹೊಸ ಅವಕಾಶಗಳು ಬ್ರಿಟನ್ ನಲ್ಲಿ ಸೃಷ್ಟಿಯಾಗಲಿವೆ. ಚೆಫ್, ಯೋಗ ಶಿಕ್ಷಕರು, ಮ್ಯೂಸಿಕ್ ಶಿಕ್ಷಕರು ಮತ್ತು ಇತರೆ ಗುತ್ತಿಗೆ ಆಧರಿತ ಉದ್ಯೋಗಿಗಳಿಗೆ ಇಂಗ್ಲೆಂಡ್ ಉದ್ಯೋಗ ಮಾರುಕಟ್ಟೆಗೆ ತಾತ್ಕಾಲಿಕ ಪ್ರವೇಶ ಸಿಗಲಿದೆ. ಇದರಿಂದ ಭಾರತದ ಸೇವಾ ವಲಯಕ್ಕೆ ಉತ್ತೇಜನ ಸಿಗಲಿದೆ.
ಬ್ರಿಟನ್‌ನ ಯಾವ್ಯಾವ ಉತ್ಪನ್ನ ಭಾರತದಲ್ಲಿ ಅಗ್ಗವಾಗಲಿವೆ ಗೊತ್ತಾ?. ಇನ್ನೂ ಬ್ರಿಟನ್ನಲ್ಲಿ ಉತ್ಪಾದನೆಯಾಗುವ ವಿಸ್ಕಿ, ಕಾರ್ಗಳು ಕೂಡ ಭಾರತಕ್ಕೆ ತೆರಿಗೆ ಮುಕ್ತವಾಗಿ ಅಮದು ಆಗಲಿವೆ. ಇದರಿಂದ ಭಾರತದಲ್ಲಿ ಬ್ರಿಟನ್ ವಿಸ್ಕಿ ಕಡಿಮೆ ಬೆಲೆಗೆ ಸಿಗಲಿದೆ. ಇದು ಮದ್ಯಪ್ರಿಯರಿಗಂತೂ ಖುಷಿಯ ವಿಷಯ. ಸ್ಕಾಚ್ ವಿಸ್ಕಿ ಮೇಲಿನ ಅಮದು ಸುಂಕ ಭಾರತ ತಕ್ಷಣದಿಂದಲೇ ಶೇ.150 ರಿಂದ ಶೇ.75ಕ್ಕೆ ಇಳಿಸಲಿದೆ. ಮುಂದಿನ 10 ವರ್ಷಗಳಲ್ಲಿ ಶೇ. 40 ಕ್ಕೆ ಇಳಿಸಲಿದೆ.
ಬ್ರಿಟನ್ನಲ್ಲಿ ಉತ್ಪಾದನೆಯಾಗುವ ಆಸ್ಟನ್ ಮಾರ್ಟಿನ್, ಬೆಂಟ್ಲಿ, ಲ್ಯಾಂಡ್ ರೋವರ್ ಕಾರ್ಗಳ ಅಮದು ಸುಂಕವನ್ನು ಶೇ.100 ರಿಂದ ಶೇ.10 ಕ್ಕೆ ಭಾರತ ಇಳಿಸಲಿದೆ. ಇದರಿಂದ ವಾಹನ ಪ್ರಿಯರು ಬೆಂಟ್ಲಿ, ಲ್ಯಾಂಡರ್ ರೋವರ್ ಕಾರ್ ಗಳನ್ನು ಖರೀದಿಸುವ ಆಸೆ ಈಡೇರಿಸಿಕೊಳ್ಳಬಹುದು. ಇನ್ನೂ ಬ್ರಿಟನ್ ನಿಂದ ಭಾರತಕ್ಕೆ ಅಮದು ಆಗುವ ಮೆಡಿಕಲ್ ಡಿವೈಸ್ಗಳ ಬೆಲೆ ಕೂಡ ಅಗ್ಗವಾಗಲಿದೆ. ಬ್ರಿಟನ್‌ನ ಕಾಸ್ಮೆಟಿಕ್ಸ್, ಏರೋಸ್ಪೇಸ್, ಮೆಡಿಕಲ್ ಡಿವೈಸ್, ಎಲೆಕ್ಟ್ರಿಕಲ್ ಮೆಷಿನರಿ, ಸಾಫ್ಟ್ ಡ್ರಿಂಕ್ಸ್, ಚಾಕೋಲೇಟ್, ಬಿಸ್ಕೆಟ್ಸ್ ಗಳು ಭಾರತದಲ್ಲಿ ಅಗ್ಗವಾಗಲಿವೆ.
ಬ್ರಿಟನ್ ಕಂಪನಿಗಳಿಗೆ ಅವಕಾಶ
ಇನ್ನೂ ಬ್ರಿಟಿಷ್ ಕಂಪನಿಗಳಿಗೆ ಭಾರತದಲ್ಲಿ ನಾನ್ ಸೆನ್ಸೀಟೀವ್ ಸರ್ಕಾರಿ ಟೆಂಡರ್ಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. 2 ಬಿಲಿಯನ್ ರೂಪಾಯಿವರೆಗಿನ ಸರ್ಕಾರಿ ಟೆಂಡರ್ಗಳಲ್ಲಿ ಬ್ರಿಟಿಷ್ ಕಂಪನಿಗಳೂ ಕೂಡ ಭಾಗವಹಿಸಬಹುದು. ಪ್ರತಿ ವರ್ಷ 40 ಸಾವಿರ ಸರ್ಕಾರಿ ಟೆಂಡರ್ಗಳಲ್ಲಿ ಬ್ರಿಟಿಷ್ ಕಂಪನಿಗಳು ಭಾಗವಹಿಸಬಹುದು. ಅಂದಾಜು 4.09 ಲಕ್ಷ ಕೋಟಿ ರೂಪಾಯಿ ಸರ್ಕಾರಿ ಟೆಂಡರ್ಗಳಲ್ಲಿ ಭಾಗವಹಿಸುವ ಅವಕಾಶ ಬ್ರಿಟಿಷ್ ಕಂಪನಿಗಳಿಗೆ ಸಿಗಲಿದೆ.
ಇನ್ನೂ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಒಪ್ಪಂದವು ಬ್ಯುಸಿನೆಸ್ ಮಾಡುವ ವೆಚ್ಚವನ್ನು ಕಡಿಮೆ ಮಾಡಲಿದೆ ಹಾಗೂ ಬ್ಯುಸಿನೆಸ್ ಮಾಡುವ ವಿಶ್ವಾಸವನ್ನು ಹೆಚ್ಚಿಸಲಿದೆ ಎಂದಿದ್ದಾರೆ. ವಿಶ್ವದ ಎರಡು ಪ್ರಮುಖ ಆರ್ಥಿಕತೆಯ ರಾಷ್ಟ್ರಗಳ ನಡುವಿನ ಈ ಒಪ್ಪಂದವು ಜಾಗತಿಕ ಸ್ಥಿರತೆ ಮತ್ತು ಸಮೃದ್ದಿಗೆ ಬಲ ನೀಡಲಿದೆ ಎಂದು ಭಾರತದ ಪ್ರಧಾನಿ ಮೋದಿ ಹೇಳಿದ್ದಾರೆ.
ಇಂದು ಆಗಿರುವ ಒಪ್ಪಂದಕ್ಕೆ ಬ್ರಿಟನ್ ಸಂಸತ್ ಮತ್ತು ಭಾರತದ ಕ್ಯಾಬಿನೆಡ್ನ ಒಪ್ಪಿಗೆ ದೊರೆತ ಬಳಿಕ ಸುಂಕ ಕಡಿತ ಜಾರಿಗೆ ಬರಲಿದೆ. ಇದಕ್ಕೆ ಸುಮಾರು 1 ವರ್ಷ ಸಮಯ ಹಿಡಿಯುವ ಸಾಧ್ಯತೆ ಇದೆ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ