/newsfirstlive-kannada/media/post_attachments/wp-content/uploads/2025/06/MODI_Mark_Carney_G7_TRUMP.jpg)
ದೇಶದ ಸರ್ಕಾರಗಳು ಬದಲಾದಂತೆ ಆಯಾ ದೇಶಗಳ ವಿದೇಶಾಂಗ ನೀತಿ, ನಿಲುವು, ಒಲವುಗಳು ಬದಲಾಗುತ್ತಾವೆ. ವೈರಿಗಳಾಗಿ ದೂರ, ದೂರ ಇದ್ದವರು ಕೆಲವೊಮ್ಮೆ ಹತ್ತಿರವಾಗುತ್ತಾರೆ. ಹತ್ತಿರ ಇದ್ದವರೂ, ಕೆಲವೊಮ್ಮೆ ಪರಿಸ್ಥಿತಿಯ ಕಾರಣದಿಂದ ದೂರವಾಗ್ತಾರೆ. ಇದಕ್ಕೆ ಭಾರತ- ಕೆನಡಾ- ಅಮೆರಿಕಾ ಸಂಬಂಧವೇ ಉತ್ತಮ ಉದಾಹರಣೆ. ಕಳೆದ ವರ್ಷ ದೂರವಾಗಿದ್ದ ಭಾರತ- ಕೆನಡಾ ಈಗ ಹತ್ತಿರವಾಗಿ ಪರಸ್ಪರ ದೋಸ್ತಿಗಳಾಗಿದ್ದಾರೆ. ಎರಡೂ ರಾಷ್ಟ್ರಗಳು ಈಗ ಸ್ನೇಹದ ಹಸ್ತಚಾಚಿವೆ. ಹತ್ತಿರವಾಗಿ ದೋಸ್ತಿಗಳಾಗಿದ್ದ ಭಾರತ- ಅಮೆರಿಕಾ ಈಗ ದೂರವಾಗುತ್ತಿವೆ. ದೋಸ್ತ್ ಡೋನಾಲ್ಡ್ ಟ್ರಂಪ್ ಅಮೆರಿಕಾಕ್ಕೆ ಬನ್ನಿ ಎಂದು ಕರೆದರೂ, ನಾನು ಬರಲ್ಲ ಎಂದು ಭಾರತದ ಪ್ರಧಾನಿ ಮೋದಿ ಕಡ್ಡಿ ಮುರಿದಂತೆ ಹೇಳಿದ್ದಾರೆ. ಇದೆಲ್ಲಾ ಹೇಗಾಯಿತು, ಇದಕ್ಕೆ ಕಾರಣವೇನು?.
ಕಳೆದ ವರ್ಷ ಕೆನಡಾದಲ್ಲಿ ಜಸ್ಟೀನ್ ಟ್ರೂಡೋ ಅವರ ನೇತೃತ್ವದ ಸರ್ಕಾರ ಇತ್ತು. ಜಸ್ಟೀನ್ ಟ್ರೂಡೋ ಸರ್ಕಾರವು ಕೆನಡಾದಲ್ಲಿ ವೋಟಿಗಾಗಿ ಖಲಿಸ್ತಾನಿಗಳನ್ನು ಬೆಂಬಲಿಸುತ್ತಿತ್ತು. ಕೆನಡಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಪಂಜಾಬ್ ಮೂಲದ ಜನರಿದ್ದಾರೆ. ಪಂಜಾಬ್ ಜನರ ಪಾಲಿಗೆ ಕೆನಡಾ 2ನೇ ತವರು ಮನೆ ಇದ್ದಂತೆ. ಉದ್ಯೋಗ, ಉತ್ತಮ ಜೀವನ ಮಟ್ಟ ಸೇರಿದಂತೆ ವಿವಿಧ ಕಾರಣಗಳಿಗಾಗಿ ಪಂಜಾಬ್ ಜನರು ಕೆನಡಾಗೆ ವಲಸೆ ಹೋಗಿದ್ದಾರೆ. ಪಂಜಾಬ್ ಜನರ ಜೊತೆಗೆ ಭಾರತ ದೇಶದಿಂದ ಪಂಜಾಬ್ ಅನ್ನು ಬೇರ್ಪಡಿಸಿ, ಪ್ರತೇಕ ಖಾಲಿಸ್ತಾನ್ ದೇಶ ರಚಿಸಬೇಕೆಂದು ಆಗ್ರಹಿಸುವ ಖಲಿಸ್ತಾನಿಗಳು ಕೆನಡಾದಲ್ಲೇ ನೆಲೆಯೂರಿದ್ದಾರೆ. ಈ ಖಲಿಸ್ತಾನಿಗಳು ಜಸ್ಟೀನ್ ಟ್ರೂಡೋ ಅವರ ಪಕ್ಷವನ್ನು ಹೆಚ್ಚಾಗಿ ಬೆಂಬಲಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಜಸ್ಟೀನ್ ಟ್ರೂಡೋ ಕೂಡ ಖಲಿಸ್ತಾನಿಗಳನ್ನೇ ಬೆಂಬಲಿಸುತ್ತಾ ಬಂದಿದ್ದರು, ಜಸ್ಟೀನ್ ಟ್ರೂಡೋ ತಂದೆ ಕೂಡ ಕೆನಡಾದ ಪ್ರಧಾನಿಯಾಗಿದ್ದರು.
ಟ್ರೂಡೋ ತಂದೆ ಕೂಡ ಭಾರತ ವಿರೋಧಿ ನಿಲುವು ಅನ್ನೇ ಹೊಂದಿದ್ದರು. ಮಗ ಕೂಡ ಅದೇ ಧೋರಣೆ ಮುಂದುವರಿಸಿದ್ದ. ಕಳೆದ ವರ್ಷ ಕೆನಡಾದಲ್ಲಿ ಖಲಿಸ್ತಾನಿ ಹೋರಾಟಗಾರ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಾಯಿತು. ಈ ಹತ್ಯೆಯನ್ನೇ ಭಾರತ ಸರ್ಕಾರವೇ ಮಾಡಿದೆ ಅಂತ ಜಸ್ಟೀನ್ ಟ್ರೂಡೋ ಸರ್ಕಾರ ಆರೋಪ ಮಾಡಿತ್ತು. ಜೊತೆಗೆ ಕೆನಡಾದ ಸಾರ್ವಭೌಮತ್ವವನ್ನು ಭಾರತ ಪ್ರಶ್ನಿಸುತ್ತಿದೆ. ಕೆನಡಾದಲ್ಲಿ ಸೀಕ್ರೆಟ್ ಏಜೆಂಟ್ಗಳ ಮೂಲಕ ಭಾರತವೇ ಹರದೀಪ್ ಸಿಂಗ್ ನಿಜ್ಜರ್ ಹತ್ಯೆ ಮಾಡಿದೆ, ಇದಕ್ಕೆ ಬೇಕಾದ ಸಾಕ್ಷ್ಯಗಳು ನಮ್ಮ ಬಳಿ ಇವೆ ಎಂದು ಜಸ್ಟೀನ್ ಟ್ರೂಡೋ ಹೇಳಿದ್ದರು. ಇದರಿಂದಾಗಿ ಭಾರತ- ಕೆನಡಾದ ರಾಜತಾಂತ್ರಿಕ ಸಂಬಂಧ ಹಾಳಾಗಿತ್ತು. ಭಾರತವು ಕೆನಡಾದಿಂದ ತನ್ನ ರಾಯಭಾರಿ ಸೇರಿದಂತೆ ರಾಜತಾಂತ್ರಿಕ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಂಡಿತ್ತು. ಕೆನಡಾ ಕೂಡ ಭಾರತದಿಂದ ತನ್ನ ರಾಯಭಾರಿ ಹಾಗೂ ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡಿತ್ತು. ಎರಡೂ ದೇಶಗಳ ಭಾಂಧವ್ಯ, ಸಂಬಂಧ, ರಾಜತಾಂತ್ರಿಕ ನಂಟು ಕೊನೆಗೊಂಡಿತ್ತು. ಆದರೇ, ಈ ವರ್ಷ ನಡೆದ ಕೆನಡಾ ಪಾರ್ಲಿಮೆಂಟ್ ಚುನಾವಣೆಯಲ್ಲಿ ಜಸ್ಟೀನ್ ಟ್ರೂಡೋ ಪಕ್ಷಕ್ಕೆ ಸೋಲಾಗಿದೆ. ಎದುರಾಳಿ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ. ಈಗ ಭಾರತವನ್ನು ನೋಡುವ ಕೆನಡಾ ಸರ್ಕಾರದ ದೃಷ್ಟಿಕೋನವೇ ಬದಲಾಗಿದೆ.
ಕೆನಡಾದಲ್ಲಿ ಈಗ ಮಾರ್ಕ್ ಕಾರ್ನಿ ಪ್ರಧಾನಿಯಾಗಿದ್ದಾರೆ. ಭಾರತದೊಂದಿಗಿನ ಸಂಬಂಧ ಸುಧಾರಿಸಲು ವಿದೇಶಾಂಗ ಮಂತ್ರಿಯಾಗಿ ಭಾರತ ಮೂಲದ ಅನಿತಾ ಆನಂದ್ ಅವರನ್ನೇ ನೇಮಿಸಿದ್ದಾರೆ. ಜೊತೆಗೆ ಮಾರ್ಕ್ ಕಾರ್ನಿ , ಜಸ್ಟಿನ್ ಟ್ರೂಡೋ ರೀತಿ ಖಲಿಸ್ತಾನಿಗಳ ಓಲೈಕೆ ಮಾಡುತ್ತಿಲ್ಲ. ಖಲಿಸ್ತಾನಿಗಳ ಒತ್ತಡಕ್ಕೂ ಮಾರ್ಕ್ ಕಾರ್ನಿ ಮಣಿಯುತ್ತಿಲ್ಲ. ಕೆನಡಾದಲ್ಲಿ ನಡೆದ ಜಿ-7 ಶೃಂಗಸಭೆಗೆ ಭಾರತದ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಬಾರದೆಂದು ಖಲಿಸ್ತಾನಿಗಳು ಕೆನಡಾ ಸರ್ಕಾರವನ್ನು ಆಗ್ರಹಿಸಿದ್ದರು. ಆದರೇ, ಈ ಒತ್ತಡಕ್ಕೆ ಮಣಿಯದ ಮಾರ್ಕ್ ಕಾರ್ನಿ, ಭಾರತದ ಪ್ರಧಾನಿ ಮೋದಿಗೆ ಜಿ-7 ಶೃಂಗಸಭೆಗೆ ಆಹ್ವಾನ ನೀಡಿದ್ದರು. ಇದರಿಂದಾಗಿ ಮೋದಿ ಜಿ-7 ಶೃಂಗಸಭೆಯಲ್ಲಿ ಭಾಗಿಯಾಗಿದ್ದರು.
ಕೆನಡಾದಲ್ಲಿ ಭಾರತೀಯ ರಾಯಭಾರ ಕಚೇರಿ ತೆರೆಯಲಾಗುತ್ತೆ
ಇನ್ನೂ ಜಿ-7 ಶೃಂಗಸಭೆ ವೇಳೆ ಕೆನಡಾದ ಹೊಸ ಪ್ರಧಾನಿ ಮಾರ್ಕ್ ಕಾರ್ನಿ ಜೊತೆಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತ-ಕೆನಡಾ ಎರಡೂ ದೇಶಗಳು ಮತ್ತೆ ರಾಜತಾಂತ್ರಿಕ ಸಂಬಂಧ ಹೊಂದಬೇಕೆಂದು ನಿರ್ಧರಿಸಿದ್ದಾರೆ. ಇದರಿಂದಾಗಿ ಭಾರತ ಈಗ ಮತ್ತೆ ಕೆನಡಾದಲ್ಲಿ ಭಾರತೀಯ ರಾಯಭಾರ ಕಚೇರಿ ತೆರೆದು ರಾಯಭಾರಿ ನೇಮಿಸಲಿದೆ. ಕೆನಡಾ ಕೂಡ ದೆಹಲಿಯಲ್ಲಿ ತನ್ನ ರಾಯಭಾರ ಕಚೇರಿಗೆ ರಾಯಭಾರಿ ನೇಮಿಸಲಿದೆ. 2024 ರಿಂದಲೂ ಎರಡು ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧವೇ ಇರಲಿಲ್ಲ. ರಾಯಭಾರಿಗಳು ಇರಲಿಲ್ಲ.
ಇನ್ನೂ ಕೆನಡಾಕ್ಕೆ ಮೋದಿ ಭೇಟಿ ವೇಳೆ ಮಾರ್ಕ್ ಕಾರ್ನಿ, ನಿಜ್ಜರ್ ಹತ್ಯೆ ವಿಷಯವನ್ನು ಪ್ರಸ್ತಾಪಿಸಿಲ್ಲ. ಮಾಧ್ಯಮಗಳು ಪ್ರಶ್ನಿಸಿದಾಗಲೂ ಅದರ ಬಗ್ಗೆ ನ್ಯಾಯಾಂಗ ಪ್ರಕ್ರಿಯೆಯು ನಡೆಯುತ್ತಿದೆ, ನಾನು ಆ ಬಗ್ಗೆ ಹೆಚ್ಚು ಮಾತನಾಡಲ್ಲ, ಮುಂದಿನ ಹೇಳಿಕೆಯ ಬಗ್ಗೆ ನಾನು ಎಚ್ಚರದಿಂದ ಇರಬೇಕು ಎಂದು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಹೇಳಿದ್ದಾರೆ. ಈ ಮೂಲಕ ಸಂಬಂಧ ಸುಧಾರಿಸಿಕೊಳ್ಳುವ ಸುಳಿವು, ಜಾಣತನ ತೋರಿದ್ದಾರೆ. ಭಾರತವನ್ನು ಜಸ್ಟೀನ್ ಟ್ರೂಡೋ ರೀತಿ ಟೀಕಿಸುವ ಯತ್ನವನ್ನು ಹೊಸ ಪ್ರಧಾನಿ ಮಾರ್ಕ್ ಕಾರ್ನಿ ಮಾಡಿಲ್ಲ. ಇದು ಬದಲಾದ ಕೆನಡಾದ ಧೋರಣೆ. ಕೆನಡಾಕ್ಕೆ ಭಾರತದೊಂದಿಗೆ ಉತ್ತಮ ಸಂಬಂಧ, ಬಾಂಧವ್ಯ ಬೇಕು. ಭಾರತವು ವಿಶ್ವದಲ್ಲಿ 2ನೇ ಅತಿ ದೊಡ್ಡ ಜನಸಂಖ್ಯೆಯ ರಾಷ್ಟ್ರ. ಆರ್ಥಿಕತೆಯಲ್ಲಿ 4ನೇ ಅತಿ ದೊಡ್ಡ ಅರ್ಥಿಕತೆಯ ರಾಷ್ಟ್ರ. ಹಾಗಾಗಿ ಭಾರತವನ್ನು ಜಿ-7 ಶೃಂಗಸಭೆಗೆ ಆಹ್ವಾನಿಸುತ್ತಿದ್ದೇನೆ ಎಂದು ಮಾರ್ಕ್ ಕಾರ್ನಿ ಜಿ-7 ಶೃಂಗಸಭೆಗೂ ಮುನ್ನ ಹೇಳಿದ್ದರು.
ಇನ್ನೂ ಕೆನಡಾದ ಇಂಟಲಿಜೆನ್ಸ್ ಏಜೆನ್ಸಿಯು ಈಗ ಹೊಸ ವರದಿಯೊಂದನ್ನು ಸರ್ಕಾರಕ್ಕೆ ನೀಡಿದೆ. ಈ ವರದಿಯಲ್ಲಿ ಕೆನಡಾದ ನೆಲವನ್ನು ಖಲಿಸ್ತಾನಿಗಳು ಭಾರತದ ವಿರುದ್ಧದ ಹಿಂಸೆಗೆ ಬಳಸಿಕೊಳ್ಳುತ್ತಿವೆ. ಖಲಿಸ್ತಾನಿ ತಂಡಗಳು ಕೆನಡಾದಲ್ಲಿ ಹಿಂಸಾಚಾರ ನಡೆಸುತ್ತಿವೆ ಎಂದು ಕೆನಡಾ ಸರ್ಕಾರಕ್ಕೆ ವರದಿ ನೀಡಿದೆ.
ಇದನ್ನೂ ಓದಿ: ಲೀಡ್ಸ್ಗೆ ಹೋದ್ರೆ ಕೊಹ್ಲಿ ದಂಪತಿ ಈ ರೆಸ್ಟೋರೆಂಟ್ಗೆ ವಿಸಿಟ್ ಮಾಡೇ ಮಾಡ್ತಾರೆ.. ಕಾರಣವೇನು?
ಪ್ರಧಾನಿ ಮೋದಿ ಅಸಮಾಧಾನಕ್ಕೆ ಕಾರಣ?
ಇದೆಲ್ಲದರ ಮಧ್ಯೆ ಭಾರತದ ಮಿತ್ರನಾಗಿದ್ದ ಅಮೆರಿಕಾ ಹಾಗೂ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಡೆ ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ಗೆ ಅಮೆರಿಕಾದ ಶ್ವೇತಭವನದಲ್ಲಿ ಭೋಜನಾ ಕೂಟ ಆಯೋಜಿಸಿದ್ದು ಅಮೆರಿಕಾದ ಕೂಟನೀತಿಯ ಭಾಗ. ಜೊತೆಗೆ ಡೋನಾಲ್ಡ್ ಟ್ರಂಪ್ ಡಜನ್ಗೂ ಹೆಚ್ಚು ಭಾರಿ ಭಾರತ- ಪಾಕ್ ನಡುವೆ ಕದನ ವಿರಾಮಕ್ಕೆ ನಾನೇ ಮಧ್ಯಸ್ಥಿಕೆ ಮಾಡಿದ್ದು ಎಂದು ಪದೇ ಪದೇ ಹೇಳಿದ್ದು ಪ್ರಧಾನಿ ಮೋದಿ ಅಸಮಾಧಾನಕ್ಕೆ ಕಾರಣವಾಗಿದೆ.
ಹೀಗಾಗಿ ನೇರವಾಗಿ ಟ್ರಂಪ್ ಜೊತೆ ಮಾತನಾಡಿದ ಮೋದಿ, ಪಾಕಿಸ್ತಾನವೇ ಕದನ ವಿರಾಮಕ್ಕೆ ಬೇಡಿಕೊಂಡಿತ್ತು. ಭಾರತ- ಪಾಕ್ ಯುದ್ಧ ನಿಲ್ಲಿಸಲು ಅಮೆರಿಕಾವೇನೂ ಮಧ್ಯಸ್ಥಿಕೆ ವಹಿಸಿಲ್ಲ, ನಮಗೆ ಯಾರ ಮಧ್ಯಸ್ಥಿಕೆಯೂ ಬೇಕಿಲ್ಲ ಎಂದು ಖಂಡಾತುಂಡವಾಗಿ ಹೇಳಿದ್ದಾರೆ. ಈ ವೇಳೆ ಭಾರತದ ಪ್ರಧಾನಿ ಮೋದಿಯನ್ನು ಅಮೆರಿಕಾಕ್ಕೆ ಟ್ರಂಪ್ ಆಹ್ವಾನಿಸಿದ್ದಾರೆ. ಆದರೇ, ಪ್ರಧಾನಿ ಮೋದಿ, ಅಮೆರಿಕಾಕ್ಕೆ ಭೇಟಿ ನೀಡಲು ನಿರಾಕರಿಸಿದ್ದಾರೆ. ಅಮೆರಿಕಾ, ಟ್ರಂಪ್ ಮೇಲಿನ ಅಸಮಾಧಾನದಿಂದ ಅಮೆರಿಕಾಕ್ಕೆ ಭೇಟಿ ನೀಡಲು ಮೋದಿ ನಿರಾಕರಿಸಿದ್ದಾರೆ ಎಂದು ಈಗ ಚರ್ಚೆಯಾಗುತ್ತಿದೆ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ