/newsfirstlive-kannada/media/post_attachments/wp-content/uploads/2025/02/Indian-Army-power-3.jpg)
ಗ್ಲೋಬಲ್ ಫೈರ್ ಪವರ್ ಎಂಬ ಸಂಸ್ಥೆ ಮಿಲಿಟರಿ ಶಕ್ತಿಯ ಆಧಾರದ ಮೇಲೆ ವಿಶ್ವದ ದೇಶಗಳಿಗೆ ಟಾಪ್ ಱಂಕಿಂಗ್ ಪಟ್ಟಿ ನೀಡಿದೆ. ಗ್ಲೋಬರ್ ಫೈರ್ ಪವರ್ ಹೊಸ ಪಟ್ಟಿ ರಿಲೀಸ್ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತ ವಿಶ್ವದ ಬಲಿಷ್ಠ ಸೇನೆಗಳ ಪೈಕಿ 4ನೇ ಸ್ಥಾನದಲ್ಲಿದೆ.
ಬಲಿಷ್ಠ ಸೇನೆಗಳ ಪಟ್ಟಿಯಲ್ಲಿ ಅಮೆರಿಕ ನಂ.1 ಸ್ಥಾನದಲ್ಲಿದ್ದರೆ ರಷ್ಯಾ ಎರಡನೇ ಸ್ಥಾನದಲ್ಲಿದೆ. ಚೀನಾ ಮೂರನೇ ಸ್ಥಾನದಲ್ಲಿದ್ದು ಪಾಕಿಸ್ತಾನ 12ನೇ ಸ್ಥಾನಕ್ಕೆ ಕುಸಿದಿದೆ.
ಗ್ಲೋಬಲ್ ಫೈರ್ ಪವರ್ ಇಂಡೆಕ್ಸ್ ಪ್ರಕಾರ ಭಾರತ ವಿಶ್ವದ ಟಾಪ್-5 ಶಕ್ತಿಶಾಲಿ ಮಿಲಿಟರಿ ಶಕ್ತಿಗಳಲ್ಲಿ ಒಂದಾಗಿದೆ. ಗ್ಲೋಬಲ್ ಫೈರ್ ಪವರ್ ಸೂಚ್ಯಂಕವು, ಮಿಲಿಟರಿ ಘಟಕಗಳು, ಆರ್ಥಿಕ ಸ್ಥಿತಿ, ಲಾಜಿಸ್ಟಿಕ್ಸ್ ಸಾಮರ್ಥ್ಯ ಸೇರಿ 60ಕ್ಕೂ ಹೆಚ್ಚು ಅಂಶಗಳನ್ನು ಪರಿಗಣಿಸಿ ಅದರ ಆಧಾರದ ಮೇಲೆ ಮೌಲ್ಯಮಾಪನ ಮಾಡಿದೆ.
ಗ್ಲೋಬಲ್ ಫೈರ್ ಪವರ್ ಇಂಡೆಕ್ಸ್ ಱಂಕಿಂಗ್ ಪ್ರಕಾರ ಅಮೆರಿಕ ಮಿಲಿಟರಿ 0.0744 ಸ್ಕೋರ್ನೊಂದಿಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಎನಿಸಿದೆ. ರಷ್ಯಾ ಸೇನೆಯು 0.0788 ಮತ್ತು ಚೀನಾ ಮಿಲಿಟರಿಗೆ 0.0788 ಸ್ಕೋರ್ ನೀಡಲಾಗಿದೆ. ಭಾರತವು 0.1184 ಸ್ಕೋರ್ನೊಂದಿಗೆ ವಿಶ್ವದ 4ನೇ ಅತ್ಯಂತ ಶಕ್ತಿಶಾಲಿ ಮಿಲಿಟರಿ ಶಕ್ತಿಯಾಗಿ ಸ್ಥಾನ ಪಡೆದಿದೆ. ದಕ್ಷಿಣ ಕೊರಿಯಾ ಸೇನೆ ಟಾಪ್ -5 ರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿಯಲ್ಲಿ ಪಾಕಿಸ್ತಾನ ಮೊದಲಿಗಿಂತ ದುರ್ಬಲವಾಗಿದೆ. ಕಳೆದ ಬಾರಿ 9ನೇ ಸ್ಥಾನದಲ್ಲಿದ್ದ ಪಾಕಿಸ್ತಾನ ಈ ಬಾರಿ 12ನೇ ಸ್ಥಾನಕ್ಕೆ ಕುಸಿದಿದೆ.
ಇದನ್ನೂ ಓದಿ: ಅಕ್ರಮ ವಲಸಿಗ ಭಾರತೀಯರ ಗಡಿಪಾರಿಗೆ ಸಜ್ಜಾದ ಟ್ರಂಪ್; ಮಿಲಿಟರಿ ವಿಮಾನದಲ್ಲಿ ಹೊರಟ ಇಂಡಿಯನ್ಸ್!
ವಾಯುಪಡೆ, ನೌಕಾಪಡೆಯಲ್ಲೂ ಪಾಕ್ ಬಹಳ ಹಿಂದೆ
ಭಾರತದೊಂದಿಗೆ ಸದಾ ಕಾಲು ಕೆರೆಯುತ್ತಲೇ ಇರುವ ಪಾಕಿಸ್ತಾನ ಟಾಪ್-10ರ ಪಟ್ಟಿಯಲ್ಲೂ ಸ್ಥಾನ ಪಡೆದಿಲ್ಲ. ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರ ಹೊಂದಿದ್ದರೂ ಸಹ ಗ್ಲೋಬಲ್ ಫೈರ್ ಪವರ್ ಪಟ್ಟಿಯಲ್ಲಿ 12ನೇ ಸ್ಥಾನಕ್ಕೆ ಕುಸಿದಿದೆ. ವಾಯುಪಡೆ, ನೌಕಾಪಡೆ ವಿಷಯದಲ್ಲೂ ಪಾಕಿಸ್ತಾನದ ಸ್ಥಾನ ಭಾರತದ ಹತ್ತಿರಕ್ಕೂ ಇಲ್ಲ.
ಭಾರತದ ವಾಯುಪಡೆಯು ವಿಶ್ವದಲ್ಲೇ 4ನೇ ಸ್ಥಾನದಲ್ಲಿದೆ. ಭಾರತದ ನೌಕಾಪಡೆ ವಿಶ್ವದಲ್ಲೇ 6ನೇ ಸ್ಥಾನದಲ್ಲಿದೆ. ಆದರೆ ಪಾಕಿಸ್ತಾನ ವಾಯುಪಡೆ 7ನೇ ಸ್ಥಾನದಲ್ಲಿದ್ದರೆ, ಪಾಕ್ನ ನೌಕಾಪಡೆ 27ನೇ ಸ್ಥಾನದಲ್ಲಿದೆ.
ಭಾರತವು ರಕ್ಷಣಾ ಉತ್ಪಾದನೆ ಮತ್ತು ಸ್ವಾವಲಂಬನೆಗೆ ಒತ್ತು ನೀಡಿದ್ದು ತನ್ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಭಾರತವು ಒಟ್ಟು 51.37 ಲಕ್ಷ ಮಿಲಿಟರಿ ಬಲವನ್ನು ಹೊಂದಿದೆ.ಇದರಲ್ಲಿ 14.55 ಲಕ್ಷ ಸಕ್ರಿಯ ಸೈನಿಕರು ಮತ್ತು 111.55 ಲಕ್ಷ ಮೀಸಲು ಸೈನಿಕರಿದ್ದಾರೆ. 25 ಲಕ್ಷಕ್ಕೂ ಹೆಚ್ಚು ಅರೆಸೇನಾ ಪಡೆಗಳ ಬಲವಿದೆ. ಭಾರತೀಯ ವಾಯುಪಡೆಯಲ್ಲಿ 3,10,575 ಮತ್ತು ನೌಕಾಪಡೆಯಲ್ಲಿ 1,42,251 ಸೈನಿಕರಿದ್ದಾರೆ.
ಭಾರತವು ಟಿ-90 ಭೀಷ್ಮ ಮತ್ತು ಅರ್ಜುನ ಟ್ಯಾಂಕರ್ಗಳು, ಬ್ರಹ್ಮೋಸ್ ಮತ್ತು ಪಿನಾಕಾ ರಾಕೆಟ್ ವ್ಯವಸ್ಥೆಯಂತಹ ಸುಧಾರಿತ ಶಸ್ತ್ರಾಸ್ತ್ರ ಹೊಂದಿದೆ. ವಿಶ್ವದಲ್ಲಿ 4ನೇ ಸ್ಥಾನದಲ್ಲಿರುವ ಭಾರತೀಯ ವಾಯುಪಡೆಯು 2,229 ವಿಮಾನಗಳನ್ನು ಹೊಂದಿದೆ. ಇದರಲ್ಲಿ 600 ಫೈಟರ್ ಜೆಟ್ಗಳು, 899 ಹೆಲಿಕಾಪ್ಟರ್ಗಳು, 831 ಸಪೋರ್ಟೆಟ್ ವಿಮಾನಗಳಿವೆ. ಭಾರತೀಯ ನೌಕಾಪಡೆಯು 1,42,251 ಸಿಬ್ಬಂದಿ ಮತ್ತು 150 ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳೊಂದಿಗೆ 6ನೇ ಸ್ಥಾನದಲ್ಲಿದೆ.
ವಿಶ್ವದಲ್ಲಿ 12ನೇ ಸ್ಥಾನ ಪಡೆದಿರುವ ಪಾಕಿಸ್ತಾನ ಸೇನೆ ಒಟ್ಟು 17.04 ಲಕ್ಷ ಸೇನಾ ಬಲ ಹೊಂದಿದೆ. 6.54 ಲಕ್ಷ ಸಕ್ರಿಯ ಸೈನಿಕರಿದ್ದಾರೆ. 5.50 ಲಕ್ಷ ಮೀಸಲು ಸೈನಿಕರಿದ್ದಾರೆ. ಪಾಕಿಸ್ತಾನ ಸೇನೆಯಲ್ಲಿ 13.11 ಲಕ್ಷ ಸೈನಿಕರು, ವಾಯುಪಡೆಯಲ್ಲಿ 78,128 ಸೈನಿಕರು, ನೌಕಾಪಡೆಯಲ್ಲಿ 1,24,800 ಸೈನಿಕರಿದ್ದಾರೆ. ಪಾಕಿಸ್ತಾವು 5 ಲಕ್ಷ ಅರೆಸೇನಾ ಪಡೆಗಳನ್ನು ಹೊಂದಿದೆ.
ಜಾಗತಿಕ ಮಿಲಿಟರಿ ಪವರ್ ಶ್ರೇಯಾಂಕದಲ್ಲಿ ಬ್ರಿಟನ್ 6ನೇ ಸ್ಥಾನ, ಫ್ರಾನ್ಸ್ 7ನೇ ಸ್ಥಾನ, ಜಪಾನ್ 8ನೇ ಸ್ಥಾನ, ಟರ್ಕಿ 9ನೇ ಸ್ಥಾನ ಮತ್ತು ಇಟಲಿ 10ನೇ ಸ್ಥಾನದಲ್ಲಿದೆ.
ವಿಶೇಷ ವರದಿ: ವಿಶ್ವನಾಥ್ ಜಿ. (ಸೀನಿಯರ್ ಕಾಪಿ ಎಡಿಟರ್)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ