/newsfirstlive-kannada/media/post_attachments/wp-content/uploads/2024/04/Sarabjit_Singh-1.jpg)
ಪಾಕ್ ಜೈಲಿನಲ್ಲಿ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಹತ್ಯೆ ಮಾಡಿದ್ದ ಭೂಗತ ಪಾತಕಿಯನ್ನ ಅಪರಿಚಿತ ದಾಳಿಕೋರರು ಹತ್ಯೆ ಮಾಡಿದ್ದಾರೆ.
ಅಪರಿಚತ ದಾಳಿಕೋರರಿಂದ ಅಮೀರ್ ಸರ್ಫರಾಜ್ ಹತ್ಯೆ!
ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ನನ್ನ ಹತ್ಯೆ ಮಾಡಿದ್ದ ಭೂಗತ ಪಾತಕಿ ಅಮೀರ್ ಸರ್ಫರಾಜ್ ಎಂಬಾತನನ್ನು ಅಪರಿಚಿತ ದಾಳಿಕೋರರು ಹತ್ಯೆ ಮಾಡಿದ್ದಾರೆ. ಸರಬ್ಜಿತ್ ಸಿಂಗ್ ಮೇಲೆ ದಾಳಿ ಮಾಡಿದ್ದಕ್ಕಾಗಿ ಸರ್ಫರಾಜ್ ಹಾಗೂ ಗ್ಯಾಂಗ್ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆದ್ರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 2018ರಲ್ಲಿ ಪ್ರಕರಣದಲ್ಲಿ ಖುಲಾಸೆಗೊಂಡಿದ್ದರು. ಇದೀಗ ಅದೇ ಲಾಹೋರ್ನಲ್ಲಿ ಅಪರಿಚಿತ ಬಂದೂಕುಧಾರಿಗಳು ಸರ್ಫರಾಜ್ನನ್ನು ಕೊಂದುಹಾಕಿದ್ದಾರೆ. ಹಾಗಿದ್ರೆ 2013ರಲ್ಲಿ ಹತ್ಯೆಯಾಗಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಹಿನ್ನೆಲೆ ಏನು ಅಂತ ನೋಡೋದಾದ್ರೆ..
ಸರಬ್ಜಿತ್ ಸಿಂಗ್ ಯಾರು?
- ಸರಬ್ಜಿತ್ ಪಂಜಾಬ್‌ನ ಭಿಖಿವಿಂಡ್ ಗ್ರಾಮದ ರೈತ
- 1990 ಆ.30ರಂದು ಆಕಸ್ಮಿಕವಾಗಿ ಪಾಕ್ಗೆ ಹೋಗಿದ್ದ
- ಗೂಢಚಾರಿಕೆ ಆರೋಪದಲ್ಲಿ ಬಂಧಿಸಿದ್ದ ಪಾಕ್ ಸೇನೆ
- ಸರಬ್ಜಿತ್ ಮೇಲೆ ಸುಳ್ಳು ಪ್ರಕರಣಗಳನ್ನು ಹಾಕಿದ್ದ ಪಾಕ್
- ಬಾಂಬ್ ಸ್ಫೋಟದಲ್ಲಿ ಸರಬ್ಜಿತ್ ಸಿಂಗ್ ಕೈವಾಡ ಆರೋಪ
- ಸರಬ್ಜಿತ್ಗೆ ಮರಣದಂಡನೆ ವಿಧಿಸಿದ್ದ ಪಾಕಿಸ್ತಾನ ಕೋರ್ಟ್
- ಭಾರತಕ್ಕೆ ಸರಬ್ಜಿತ್ ಕರೆತರುವ ಎಲ್ಲ ಪ್ರಯತ್ನ ವಿಫಲ ಆಗಿತ್ತು
- ಸರಬ್ಜಿತ್ ಸಿಂಗ್ ಜೈಲಿನಲ್ಲಿದ್ದಾಗಲೇ ಮಾರಣಾಂತಿಕ ಹಲ್ಲೆ
- ಸ್ವಲ್ಪ ದಿನಗಳ ಬಳಿಕ ಸಾವನ್ನಪ್ಪಿದ್ದ ಸರಬ್ಜಿತ್ ಸಿಂಗ್
- ಸರಬ್ಜಿತ್ ಸಿಂಗ್ ದೇಹವನ್ನು ಭಾರತಕ್ಕೆ ಕಳುಹಿಸಿದ್ದ ಪಾಕ್
ಭಾರತಕ್ಕೆ ಮಾರಕವಾದ ಉಗ್ರರು, ಡಾನ್ಗಳು ವಿಶ್ವದ ವಿವಿಧೆಡೆ ನಿಗೂಢವಾಗಿ ಸಾವನ್ನಪ್ಪುತ್ತಿರುವುದು ಮುಂದುವರಿದಿದೆ. ಸದ್ಯ ಆಮಿರ್ ಸರ್ಫರಾಜ್ ಹತ್ಯೆಯಾಗಿದ್ದು ಯಾರು ಈ ಕೃತ್ಯ ಎಸಗಿದ್ದು ಎಂಬುದು ಗೊತ್ತಾಗಿಲ್ಲ. ಇಬ್ಬರು ಅಪರಿಚಿತ ಬಂದೂಕುಧಾರಿಗಳು ಸರ್ಫರಾಜ್ನನ್ನು ಗುಂಡಿಟ್ಟು ಹತ್ಯೆಗೈದಿರುವುದು ವರದಿಯಾಗಿದೆ.
ಇದನ್ನೂ ಓದಿ:ಪೆಟ್ರೋಲ್ ದರ ಏರಿಕೆಯಾಗುತ್ತಾ? ಭಾರತದಲ್ಲೂ ಸಂಚಲನ ಸೃಷ್ಟಿಸಿದ ಇಸ್ರೇಲ್-ಇರಾನ್ ದೇಶಗಳ ಸಂಘರ್ಷ!
ಒಟ್ಟಾರೆ ಕಳೆದ ಕೆಲ ವರ್ಷಗಳಲ್ಲಿ, ಪಾಕಿಸ್ತಾನದಲ್ಲಿ ಭಾರತದ ಅನೇಕ ಶತ್ರು ಭಯೋತ್ಪಾದಕರು ಒಬ್ಬೊಬ್ಬರಾಗಿ ಹತ್ಯೆಯಾಗುತ್ತಿದ್ದಾರೆ. ಅಜ್ಞಾತ ದಾಳಿಕೋರರು ಇದುವರೆಗೆ ಅನೇಕ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್ ತನ್ನ ವರದಿಯಲ್ಲಿ 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ, ಭಾರತ ವಿದೇಶಿ ನೆಲದಲ್ಲಿ 20 ಜನರನ್ನು ಹತ್ಯೆ ಮಾಡಿಸಿದೆ ಅಂತ ವರದಿ ಮಾಡಿದೆ. ಭಾರತ ತನ್ನ ಶತ್ರುಗಳನ್ನು ಗುರಿ ಮಾಡಿ ಹತ್ಯೆ ಮಾಡ್ತಿದೆ ಅಂತ ಆರೋಪಿಸಿದೆ. ಪಾಕಿಸ್ತಾನದ ಪ್ರಕಾರ ಈ ಸಾವುಗಳು ಹೆಚ್ಚಾಗಿ ಯುಎಇಯಿಂದ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಗುಪ್ತಚರ ಸ್ಲೀಪರ್-ಸೆಲ್‌ಗಳಿಂದ ನಡೆಸಲ್ಪಟ್ಟಿವೆ ಅಂತ ಹೇಳಿದೆ. ಆದ್ರೆ ಈ ಆರೋಪಗಳನ್ನು ಭಾರತ ಸರ್ಕಾರ ತಿರಸ್ಕರಿಸಿದೆ. ಅದೇನೇ ಆರೋಪ-ಪ್ರತ್ಯಾರೋಪಗಳಿರಲಿ ಭಾರತದ ವಿರೋಧಿಗಳು ಮಾತ್ರ ಪಾಕಿಸ್ತಾನದಲ್ಲಿ ಒಬ್ಬರ ಮೇಲೊಬ್ಬರು ಖಲಾಸ್ ಆಗ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ