/newsfirstlive-kannada/media/post_attachments/wp-content/uploads/2025/05/Smriti_Mandhana_1.jpg)
ಸ್ಮೃತಿ ಮಂದಾನ ಅವರ ಭರ್ಜರಿ ಶತಕದ ನೆರವಿನಿಂದ ಶ್ರೀಲಂಕಾದ ಮಹಿಳಾ ತಂಡದ ವಿರುದ್ಧ ಭಾರತದ ಮಹಿಳಾ ಟೀಮ್ ದೊಡ್ಡ ಅಂತರದಿಂದ ಜಯ ಸಾಧಿಸಿದೆ. ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 97 ರನ್‌ಗಳ ಅಂತರದಿಂದ ಭಾರತ ಗೆಲುವು ಪಡೆದಿದೆ.
ಕೊಲಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿದರು. ಯೋಜನೆಯಂತೆ ಟೀಮ್ ಇಂಡಿಯಾ ದೊಡ್ಡ ಮೊತ್ತದ ರನ್ಗಳನ್ನು ಕಲೆ ಹಾಕಿತು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಪ್ರತಿಕಾ ರಾವಲ್ 30 ರನ್ಗೆ ಔಟ್ ಆದ್ರೆ, ಸ್ಮೃತಿ ಮಂದಾನ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು.
ಪಂದ್ಯದಲ್ಲಿ ಒಟ್ಟು 101 ಬಾಲ್ಗಳನ್ನು ಆಡಿದ ಸ್ಮೃತಿ ಮಂದಾನ 2 ಸಿಕ್ಸರ್ ಹಾಗೂ 15 ಅದ್ಭುತವಾದ ಬೌಂಡರಿಗಳಿಂದ 116 ರನ್ಗಳಿಸಿದರು. ಇದು ಮಂಧಾನ ಅವರ ಏಕದಿನ ಪಂದ್ಯಗಳ ವೃತ್ತಿಜೀವನದ 11ನೇ ಸೆಂಚುರಿ ಆಗಿದೆ. ಉಳಿದಂತೆ ಹರ್ಲೀನ್ ಡಿಯೋಲ್ 47, ನಾಯಕಿ ಕೌರ್ 41, ಜೆಮಿಮಾ ರೋಡ್ರಿಗಸ್ 44, ದೀಪ್ತಿ ಶರ್ಮಾ 20 ರನ್‌ಗಳ ನೆರವಿನಿಂದ ಭಾರತ ತಂಡ 50 ಓವರ್ಗಳಲ್ಲಿ 7 ವಿಕೆಟ್ಗೆ 342 ರನ್‌ಗಳ ಬೃಹತ್ ಟಾರ್ಗೆಟ್ ಅನ್ನು ನೀಡಿತ್ತು.
ಇದನ್ನೂ ಓದಿ: IPL ಅಭಿಮಾನಿಗಳಿಗೆ ಗುಡ್ನ್ಯೂಸ್; ಈ ದಿನಾಂಕದಿಂದ ಪಂದ್ಯಗಳು ನಡೆಯೋದು ಫಿಕ್ಸ್!
ಈ ದೊಡ್ಡ ಗುರಿ ಹಿಂದೆ ಬಿದ್ದ ಶ್ರೀಲಂಕಾ ಮಹಿಳಾ ತಂಡ ಪೈಪೋಟಿ ಕೊಡುವಲ್ಲಿ ವಿಫಲವಾಯಿತು. ಏಕೆಂದರೆ ಓಪನರ್ ವಿಫಲ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ವಿಷ್ಮಿ ಗುಣರತ್ನೆ 36, ನಾಯಕಿ ಚಾಮರಿ ಅಥಪತ್ತು 51, ನೀಲಾಕ್ಷಿ ಡಿ ಸಿಲ್ವಾ 48, ಸನುಷ್ಕಾ 28 ರನ್ ಬಿಟ್ಟರೇ ಉಳಿದವರು ಯಾರು ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ಇದರಿಂದ ಶ್ರೀಲಂಕಾ 48.2 ಓವರ್ಗಳಲ್ಲಿ 245 ರನ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 97 ರನ್‌ಗಳ ಅಂತರದಿಂದ ಪರಾಭವಗೊಂಡಿತು.
ಭಾರತ, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾದ ಮಹಿಳಾ ತಂಡಗಳ ನಡುವೆ ಈ ತ್ರಿಕೋನ ಏಕದಿನ ಸರಣಿ ನಡೆದಿತ್ತು. ಮೂರು ತಂಡಗಳ ಪೈಪೋಟಿಯಲ್ಲಿ ಭಾರತ ಹಾಗೂ ಶ್ರೀಲಂಕಾದ ಮಹಿಳಾ ತಂಡ ಫೈನಲ್ ಪ್ರವೇಶ ಪಡೆದಿದ್ದವು. ತವರಿನ ಪಿಚ್ ಆಗಿದ್ದರಿಂದ ಶ್ರೀಲಂಕಾ ಟ್ರೋಫಿ ಗೆಲ್ಲುವ ಫೇವರಿಟ್ ತಂಡ ಎನಿಸಿತ್ತು. ಆದರೆ ಫೈನಲ್ನಲ್ಲಿ ಭಾರತದ ವುಮೆನ್ಸ್ ಜಯ ಗಳಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ