/newsfirstlive-kannada/media/post_attachments/wp-content/uploads/2025/05/Pakistan-terrorist.jpg)
ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತ, (POK) ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ 9 ಸ್ಥಳಗಳಲ್ಲಿ ವೈಮಾನಿಕ ದಾಳಿ ನಡೆಸಿದೆ. ಗುಪ್ತಚರ ನಿಖರ ಮಾಹಿತಿ ಮೇಲೆ ದಾಳಿ ನಡೆಸಿರುವ ಭಾರತ ಮೂವರು ರಕ್ಕಸರ ಬೇರುಗಳನ್ನೇ ಅಲುಗಾಡಿಸಿದೆ.
ಭಾರತದ ವೈಮಾನಿಕ ದಾಳಿಯ ಬಳಿಕ ಮೂರು ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರು ತತ್ತರಿಸಿ ಹೋಗಿದ್ದಾರೆ. ಭಾರತೀಯ ಸೇನೆ ಈ ರೀತಿಯಾಗಿ ರಕ್ಕಸರ ಬೆನ್ನು ಮೂಳೆ ಮುರಿಯಲಿದೆ ಅಂತ ಉಗ್ರ ರಾಕ್ಷಸರು ಕನಸಿನಲ್ಲಿಯೂ ಯೋಚಿಸಿರಲಿಲ್ಲ.
ಇದೀಗ ಭಯೋತ್ಪಾದಕರು ಅಕ್ಷರಶಃ ಕಣ್ಣೀರು ಸುರಿಸುತ್ತಿದ್ದಾರೆ. ಈ ಮೂವರು ಭಯೋತ್ಪಾದಕ ಮಾಸ್ಟರ್ ಮೈಂಡ್ಗಳಿಗೆ ಭಾರತೀಯ ಸೇನೆ ಕೊಟ್ಟ ಏಟು ಎಂಥಹದ್ದು ನೋಡೋಣ.
1. ಹಫೀಜ್ ಮುಹ್ಮದ್ ಸಯೀದ್ (ಲಷ್ಕರ್ ಇ-ತೊಯ್ಬಾ)
2008 ನವೆಂಬರ್ 26 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್-ಇ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಮುಖ್ಯವಾಗಿ 3 ಉಗ್ರರ ಶಿಬಿರ ನಡೆಸುತ್ತಿದ್ದ. ಇವುಗಳಲ್ಲಿ ಮುರಿಡ್ಕೆ, ಸವಾಯಿ ನಲ್ಲ ಮತ್ತು ಮರ್ಕಜ್ ಅಹ್ಲೆ ಹದಿತ್ (ಬರ್ನಾಲ್) ಸೇರಿವೆ. ಭಾರತೀಯ ಸೇನೆ ಈ ಮೂರೂ ಉಗ್ರ ಶಿಬಿರಗಳನ್ನು ಸಂಪೂರ್ಣ ನಾಶಪಡಿಸಿದೆ.
ಲಷ್ಕರ್ನ ಸೈದ್ಧಾಂತಿಕ ಮತ್ತು ಮಿಲಿಟರಿ ಕೇಂದ್ರದಂತಿದ್ದ ಮುರಿಡ್ಕೆ ಉಗ್ರ ಶಿಬಿರ ಭಾರತದ ಗಡಿಯಿಂದ ಕೇವಲ 30 ಕಿಮೀ ದೂರವಿತ್ತು. ಬರ್ನಾಲಾ ಮತ್ತು ಸವಾಯಿ ನಲ್ಲ ಉಗ್ರ ಶಿಬಿರಗಳಲ್ಲಿ ಶಸ್ತ್ರಾಸ್ತ್ರಗಳು, ಡ್ರೋನ್, ಐಇಡಿ ತರಬೇತಿ ನೀಡಲಾಗುತ್ತಿತ್ತು.
ಪರಿಣಾಮ: ಹಫೀಜ್ ಸಯೀದ್ನ ನೆಲೆ ಸಂಪೂರ್ಣ ಛಿದ್ರವಾಗಿದೆ. ಆತ ಹೊಸ ಉಗ್ರರಿಗೆ ತರಬೇತಿ ನೀಡುತ್ತಿದ್ದ, ಭಾರತ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಶಿಬಿರ ಸಂಪೂರ್ಣ ನಾಶವಾಗಿದೆ.
2. ಮಸೂದ್ ಅಜರ್(ಜೈಶ್ ಎ- ಮೊಹ್ಮದ್)
ಭಾರತಕ್ಕೆ ಬೇಕಾದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರ ಈತ. ಜೈಶ್-ಎ-ಮೊಹ್ಮದ್ ಮುಖ್ಯಸ್ಥ ಮಸೂದ್ ಅಜರ್ ಗೂ ಸಹ ಭಾರತದ ದಾಳಿಯಲ್ಲಿ ತೀವ್ರ ಹಾನಿಯಾಗಿದೆ. ಜೈಶ್-ಎ-ಮೊಹ್ಮದ್ನ ಪ್ರಧಾನ ಕಚೇರಿ ಬಹಾವಲ್ಪುರ, ಸರ್ಜಲ್, ಬಿಲಾಲ್ ಕ್ಯಾಂಪ್ ಮತ್ತು ಕೋಟ್ಲಿಯಲ್ಲಿರುವ ಲಾಂಚ್ ಪ್ಯಾಂಡ್ ಅನ್ನು ಭಾರತೀಯ ಸೇನೆ ದಾಳಿ ನಡೆಸಿ ಧ್ವಂಸಗೊಳಿಸಿದೆ. ಹಫೀಜ್ ಮಸೂದ್ ಅಜರ್ ಕುಟುಂಬದ 14 ಸದಸ್ಯರು ಸಾವನ್ನಪ್ಪಿದ್ದಾರೆ. ಮಸೂದ್ ಅಜರ್ ಸಹೋದರಿ ಮತ್ತು ಬಾವ ಸೇರಿದಂತೆ 14 ಜನರು ಹತ್ಯೆಯಾಗಿದ್ದಾರೆ. ತನ್ನ ಕುಟುಂಬದ 14 ಮಂದಿ ಮೃತಪಟ್ಟಿದ್ದಾರೆ ಎಂದು ಮಸೂದ್ ಅಜರ್ ತಿಳಿಸಿದ್ದಾರೆ.
ಜೈಶ್-ಎ-ಮೊಹ್ಮದ್ನ ಅತಿ ದೊಡ್ಡ ಕಾರ್ಯಾಚರಣೆ ಕೇಂದ್ರವಾಗಿದ್ದ ಬಹವಾಲ್ಪುರ ಉಗ್ರ ಶಿಬಿರ ಅಂತಾರಾಷ್ಟ್ರೀಯ ಗಡಿಯಿಂದ 100 ಕಿಮೀ ದೂರವಿತ್ತು. ಅದು ಈಗ ಸಂಪೂರ್ಣ ನಾಶವಾಗಿದೆ.
ಪರಿಣಾಮ: ಮೌಲಾನಾ ಮಸೂದ್ ಅಜರ್ನ ನೇಮಕಾತಿ, ಆತ್ಮಹತ್ಯೆ ದಾಳಿಯ ಯೋಜನೆ ನಿಂತು ಹೋಗಿದೆ. ಉಗ್ರ ಸಂಘಟನೆ ಜೈಶ್-ಎ-ಮೊಹ್ಮದ್ ಸಾಮರ್ಥ್ಯ ಕನಿಷ್ಠ ಶೇ.70ರಷ್ಟು ಕುಸಿದಿದೆ.
ಇದನ್ನೂ ಓದಿ: ಮೋದಿಗೆ ಹೇಳಿದ್ದೇನೆ.. ಆಪರೇಷನ್ ಸಿಂಧೂರ; #justiceserved #Itoldmodi ವೈರಲ್!
3. ಸೈಯ್ಯದ್ ಸಲಾವುದ್ದೀನ್(ಹಿಜ್ಬುಲ್ ಮುಜಾಹಿದ್ದೀನ್)
ಭಾರತದ ಪ್ರಬಲ ಏರ್ ಸ್ಟ್ರೈಕ್ನಿಂದಾಗಿ ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡುವ ಮತ್ತೊಂದು ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ದುರ್ಬಲಗೊಂಡಿದೆ. ಹಿಜ್ಬುಲ್ ಮುಜಾಹಿದ್ದೀನ್ ನೆಲೆಗಳಾದ ಕೋಟ್ಲಿ, ಮೆಹ್ಮನಾ ಜೋಯಾ(ಸಿಯಾಲ್ಕೋಟ್) ಮತ್ತು ರಹಿಲ್ ಶಾಹಿದ್ ಕ್ಯಾಂಪ್ ಧ್ವಂಸವಾಗಿವೆ.
ವಿಶೇಷವೆಂದರೆ ಹೆಚ್ಚಿನ ಹಿಜ್ಬುಲ್ ಉಗ್ರ ಶಿಬಿರಗಳು ಎಲ್ಒಸಿಯಿಂದ 10-15 ಕಿಮೀ ದೂರದಲ್ಲಿದ್ದವು. ಇದರಿಂದಾಗಿ ಗಡಿಯಾಚೆಗಿನ ಒಳನುಸುಳುವಿಕೆಗೆ ಸಂಪೂರ್ಣ ಬ್ರೇಕ್ ಬೀಳಲಿದೆ.
ಆಪರೇಷನ್ ಸಿಂಧೂರ್ ಈವರೆಗಿನ ಭಾರತದ ಅತ್ಯಂತ ನಿಖರ, ಕಾರ್ಯತಂತ್ರದ ವೈಮಾನಿಕ ದಾಳಿ ಎಂದು ವಿಶ್ಲೇಷಿಸಲಾಗುತ್ತಿದೆ. ಗಡಿಯಲ್ಲಿನ ಅಡಗಿರುವ ಶತ್ರುಗಳ ಮನೆಗಳಿಗೆ ಹೊಕ್ಕು ಭಾರತ ಪಾಠ ಕಲಿಸಲಿದೆ ಎಂಬ ಸಂದೇಶವೂ ಹೋಗಿದೆ.
ಮಸೂದ್ ಅಜರ್, ಹಫೀಜ್ ಸಯೀದ್, ಸೈಯ್ಯದ್ ಸಲಾವುದ್ದೀನ್ ನಂತಹ ಉಗ್ರರ ನಾಯಕರು ಮತ್ತೆ ಮೇಲೆಳಲು ಸಾಧ್ಯವಾಗದಷ್ಟು ಪೆಟ್ಟು ಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ