Virat Kohli: ಡೆಲ್ಲಿಯ ಗಲ್ಲಿಯಿಂದ RCBವರೆಗೂ.. ಕಿಂಗ್ ಕೊಹ್ಲಿ ಬೆಳೆದು ಬಂದ ಹಾದಿಯೇ ರೋಚಕ ಸ್ಟೋರಿ!
ಭಾರತ ಕ್ರಿಕೆಟ್ ತಂಡದ ದಂತಕಥೆ ಮತ್ತು ಮಾಜಿ ನಾಯಕ Virat Kohli. ಇವರು ಕ್ರೀಡಾಲೋಕದ ದಿಗ್ಗಜರು. ಭಾರತೀಯ ಕ್ರಿಕೆಟ್ ಹಿರಿಮೆ ಮತ್ತು ಸಾಧನೆಗೆ ಜೀವಂತ ಉದಾಹರಣೆ ಎನ್ನಬಹುದು. 1988ರ ನವೆಂಬರ್ 5ರಂದು ದೆಹಲಿಯಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ವಿರಾಟ್ ಈಗ ಕಿಂಗ್ ಕೊಹ್ಲಿ ಎಂದೇ ಖ್ಯಾತಿಯಾದವರು. ಸಣ್ಣ ವಯಸಿನಲ್ಲೇ ಭಾರತ ತಂಡದ ಪರ ಆಡಬೇಕು ಅನ್ನೋ ಕನಸು ಕಂಡಿದ್ದ ಕೊಹ್ಲಿ ಇಂದು ಕ್ರಿಕೆಟ್ ಜಗತ್ತಿನಲ್ಲಿ ಉತ್ತುಂಗಕ್ಕೆ ಬೆಳೆದು ನಿಂತಿದ್ದಾರೆ.
ಕೊಹ್ಲಿ ಬಾಲ್ಯದ ದಿನಗಳು
ಕ್ರಿಕೆಟರ್ ಆಗಬೇಕು ಅನ್ನೋ ಕನಸು ಕೊಹ್ಲಿಗೆ ಬಾಲ್ಯದಲ್ಲೇ ಚಿಗುರಿತು. ತನ್ನ ಕನಸು ಮಾಡುವ ಸಲುವಾಗಿ ಬಾಲ್ಯದಲ್ಲೇ ಕ್ರಿಕೆಟ್ ಅಭ್ಯಾಸ ಶುರು ಮಾಡಿದರು. ಬಳಿಕ ದೆಹಲಿಯಲ್ಲಿರೋ ಪ್ರತಿಷ್ಠಿತ ವೆಸ್ಟ್ ಡೆಲ್ಲಿ ಕ್ರಿಕೆಟ್ ಅಕಾಡೆಮಿಗೆ ಸೇರಿದರು. ಬಾಲ್ಯದಲ್ಲೇ ತನ್ನ ತಾಳ್ಮೆ ಮತ್ತು ಅತ್ಯಂತ ಕಠಿಣ ಪರಿಶ್ರಮದಿಂದ ಕ್ರಿಕೆಟ್ ಅನ್ನೋ ಕಲೆಯನ್ನು ಕರಗತ ಮಾಡಿಕೊಂಡರು. ಇಂದು ಅವರ ಪರಿಶ್ರಮವೇ ಕ್ರಿಕೆಟ್ ಲೋಕದ ಅಧಿಪತಿಯನ್ನಾಗಿ ಮಾಡಿದೆ.
ವಿರಾಟ್ 2008ರ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಅದಕ್ಕಾಗಿ ಕೊಹ್ಲಿ ಅವರನ್ನು ಜಗತ್ತಿನ ಅತ್ಯಂತ ಬಲಿಷ್ಠ ಕ್ರೀಡಾಪಟು ಎಂದು ಗುರುತಿಸಲಾಯ್ತು. ಇವರ ಚಾತುರ್ಯ ಮತ್ತು ಉತ್ತಮ ಬ್ಯಾಟಿಂಗ್ ಸಾಮರ್ಥ್ಯದ ಕಾರಣಕ್ಕೆ ಭಾರತದ ಸ್ಟಾರ್ ಆಟಗಾರರೇ ತಂಡದಲ್ಲಿ ಸ್ಥಾಕ ಕಳೆದುಕೊಂಡರು. ಅಂಡರ್ 19 ವಿಶ್ವಕಪ್ ಗೆದ್ದ ಬಳಿಕ ವಿರಾಟ್ 2008ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ರು.
ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊಹ್ಲಿ ಸಾಧನೆ
ಆರಂಭದಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ವಿರಾಟ್ ಕೊಹ್ಲಿ ಸಾಕಷ್ಟು ಶ್ರಮ ಹಾಕಿದ್ದರು. ಬ್ಯಾಕ್ ಟು ಬ್ಯಾಕ್ ಸಾಲಿಡ್ ಇನ್ನಿಂಗ್ಸ್ ಕಟ್ಟಿದ ನಂತರ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಖಾಯಂ ಸ್ಥಾನ ಸದಸ್ಯರಾದರು. 2011ರ ವಿಶ್ವಕಪ್‌ನಲ್ಲಿ ಕೊಹ್ಲಿ ತನ್ನ ಕಠಿಣ ಪರಿಶ್ರಮ ಮತ್ತು ಉತ್ತಮ ಬ್ಯಾಟಿಂಗ್ನಿಂದಲೇ ಎಲ್ಲರ ಗಮನ ಸೆಳೆದರು. ಈ ಮೂಲಕ ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ನಂತರ ಕೊಹ್ಲಿ 2013ರ ಚಾಂಪಿಯನ್ಸ್ ಟ್ರೋಫಿ, 2016ರ ಟಿ20 ವಿಶ್ವಕಪ್, 2017ರ ಚಾಂಪಿಯನ್ಸ್ ಟ್ರೋಫಿ ಮತ್ತು 2019ರ ವಿಶ್ವಕಪ್ನಲ್ಲೂ ಪ್ರಮುಖ ಪಾತ್ರವಹಿಸಿದ್ದರು. ಜತೆಗೆ ಪ್ರಮುಖ ಟೂರ್ನಿಗಳಲ್ಲಿ ಭಾರತ ತಂಡವನ್ನು ಕೊಹ್ಲಿ ಲೀಡ್ ಮಾಡಿದ್ರು.
ತಂದೆಯ ಸಾವು ಮತ್ತು ಕೊಹ್ಲಿ ಕರಿಯರ್
2006ರ ಡೆಸೆಂಬರ್ನಲ್ಲಿ ಪ್ರಮುಖ ಪಂದ್ಯ ಒಂದಿತ್ತು. ಅಂದು ಕೊಹ್ಲಿಯನ್ನು ತಮ್ಮ ತಂದೆ ಅಗಲಿದರು. ತಂದೆ ಚಿರನಿದ್ರೆಗೆ ಜಾರಿದ್ರೂ ಕೊಹ್ಲಿ ಕಠಿಣ ನಿರ್ಧಾರ ಕೈಗೊಂಡರು. ತಮ್ಮ ತಂದೆಯನ್ನು ನೋಡಲು ಹೋಗದೆ ತನ್ನ ತಂಡವನ್ನು ಪ್ರತಿನಿಧಿಸಿದರು. ಆ ಪಂದ್ಯದಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡುವ ಮೂಲಕ ತಂದೆ ಆಸೆಯಂತೆ ಬೆಸ್ಟ್ ಕ್ರಿಕೆಟರ್ ಆಗಬೇಕು ಅನ್ನೋ ಕನಸು ಈಡೇರಿಸಿದರು. ಆ ಇನ್ನಿಂಗ್ಸ್ ಕೊಹ್ಲಿ ಕರಿಯರ್ ಅನ್ನೇ ಬದಲಾಯಿಸಿತು.
ಭಾರತ ತಂಡದ ಕ್ಯಾಪ್ಟನ್ ಆಗಿ ಕೊಹ್ಲಿ..!
2013ರಲ್ಲಿ ಎಂ.ಎಸ್ ಧೋನಿ ಕ್ಯಾಪ್ಟನ್ ಆಗಿದ್ದಾಗ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಉಪ ನಾಯಕರಾದರು. 2014ರಲ್ಲಿ ಧೋನಿ ನಿವೃತ್ತಿ ನಂತರ ಕೊಹ್ಲಿ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಆದರು. 2017ರಲ್ಲಿ ಟೀಮ್ ಇಂಡಿಯಾದ ಏಕದಿನ ಮತ್ತು ಟಿ20 ಕ್ಯಾಪ್ಟನ್ ಆಗಿ ಜವಾಬ್ದಾರಿ ಹೊತ್ತರು. ಟೀಮ್ ಇಂಡಿಯಾ ಕ್ರಿಕೆಟ್ ತಂಡದ ಸಂಪೂರ್ಣ ಕ್ಯಾಪ್ಟನ್ ಆಗಿ ವಿರಾಟ್ ಕೊಹ್ಲಿ ಎಷ್ಟೋ ಐಸಿಸಿ ಮೆಗಾ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ್ರು. ಕಠಿಣ ಸಂದರ್ಭದಲ್ಲೂ ತನ್ನ ಆಲೋಚನಾ ಶಕ್ತಿಯಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಬೆಸ್ಟ್ ಕ್ಯಾಪ್ಟನ್ ಎಂದು ಸಾಬೀತು ಮಾಡಿದ್ರು.
ಕೊಹ್ಲಿ ವೈಯಕ್ತಿಕ ಜೀವನ
ವಿರಾಟ್ ಕೊಹ್ಲಿ ವೈಯಕ್ತಿಕ ಜೀವನ ಗಮನಾರ್ಹವಾಗಿದೆ. 2017ರಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಕೊಹ್ಲಿ ಮದುವೆಯಾದರು. ಕೊಹ್ಲಿ ತಮ್ಮ ಆರೋಗ್ಯದ ಮೇಲೂ ಹೆಚ್ಚಿನ ಗಮನ ಕೊಡುತ್ತಾರೆ. ಯಾವಾಗಲೂ ಅತ್ಯಂತ ನಿಖರವಾದ ತರಬೇತಿ ಪದ್ಧತಿಯನ್ನು ಅನುಸರಿಸುತ್ತಾರೆ.
ಕೊಹ್ಲಿ ಕೇವಲ ಭಾರತದ ಕ್ರಿಕೆಟ್ನಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಪ್ರಭಾವ ಬೀರಿದ್ದಾರೆ. ಇವರಿಗೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಪ್ರತಿ ಪಂದ್ಯದಲ್ಲೂ ಕೊಹ್ಲಿ ಹೊಸ ಹೊಸ ಸಾಧನೆಗಳನ್ನು ಮಾಡುತ್ತಲೇ ಇದ್ದಾರೆ.