2024ರ ಪ್ಯಾರಿಸ್ ಒಲಿಂಪಿಕ್ಸ್: ಭಾರತಕ್ಕೆ ಮೊದಲ ಪದಕ ಗೆದ್ದ ಮನು ಭಾಕರ್​​ ಯಾರು..?

author-image
Ganesh Nachikethu
Updated On
2024ರ ಪ್ಯಾರಿಸ್ ಒಲಿಂಪಿಕ್ಸ್: ಭಾರತಕ್ಕೆ ಮೊದಲ ಪದಕ ಗೆದ್ದ ಮನು ಭಾಕರ್​​ ಯಾರು..?
Advertisment
  • 2024ರ ಪ್ಯಾರಿಸ್ ಒಲಿಂಪಿಕ್ಸ್​​ ಶುರುವಾದ 2ನೇ ದಿನಕ್ಕೆ ​ಭಾರತಕ್ಕೆ ಶುಭ ಸುದ್ದಿ..!
  • 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚು ಗೆದ್ದ ಮನು ಭಾಕರ್​
  • ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಅನ್ನೋ ಹಿರಿಮೆ

2024ರ ಪ್ಯಾರಿಸ್ ಒಲಿಂಪಿಕ್ಸ್​​ ಶುರುವಾದ 2ನೇ ದಿನಕ್ಕೆ ​ಭಾರತಕ್ಕೆ ಶುಭ ಸುದ್ದಿ ಸಿಕ್ಕಿದೆ. ಈ ಕ್ರೀಡಾಕೂಟದಲ್ಲಿ ಭಾರತವು ಪದಕದ ಖಾತೆ ತೆರೆದಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಶೂಟಿಂಗ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

ಯಾರು ಈ ಮನು ಭಾಕರ್​​..?

ಮನು ಭಾಕರ್​​ ಭಾರತೀಯ ಮಹಿಳಾ ಶೂಟರ್​​. ಇವರಿಗೆ ಕೇವಲ 22 ವರ್ಷ. ಸದ್ಯ 2024ರ ಪ್ಯಾರಿಸ್​ ಒಲಿಪಿಂಕ್ಸ್​ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿದ್ದಾರೆ.

ಈ ಹಿಂದೆಯೂ ಮನು ಭಾಕರ್​ ಅವರು 2018ರಲ್ಲಿ ನಡೆದ ISSF ವರ್ಲ್ಡ್​ ಕಪ್​​ನಲ್ಲಿ ಭಾರತವನ್ನು ಪ್ರತಿನಿಧಿಸಿ 2 ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ISSF ವರ್ಲ್ಡ್​ ಕಪ್​ನಲ್ಲಿ ಶೂಟಿಂಗ್​ನಲ್ಲಿ ಚಿನ್ನ ಗೆದ್ದ ಕಿರಿಯ ಅಥ್ಲೀಟ್​ ಎಂಬ ಹಿರಿಮೆಗೆ ಪಾತ್ರರಾಗಿದ್ದರು.

ಇಷ್ಟೇ ಅಲ್ಲ ಇವರು 2018ರ ಕಾಮನ್​ವೆಲ್ತ್ ಗೇಮ್ಸ್​ನಲ್ಲೂ ​ಭಾರತವನ್ನು ಪ್ರತಿನಿಧಿಸಿದ್ದರು. ಆಗ ಮನು ಭಾಕರ್​ ಅವರಿಗೆ ಕೇವಲ 16 ವರ್ಷ. 2018ರ ಕಾಮನ್​ವೆಲ್ತ್ ಗೇಮ್ಸ್​ನಲ್ಲೂ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸಣ್ಣ ವಯಸ್ಸಿನಲ್ಲೇ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

publive-image

ಇವರ ಈ ಸಾಧನೆಗೆ ಇಡೀ ಕ್ರೀಡಾ ಲೋಕವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಜತೆಗೆ ಮನು ಭಾಕರ್​​ 2022ರ ಏಷಿಯನ್​ ಗೇಮ್ಸ್​ನಲ್ಲೂ 25 ಮೀಟರ್​​​ ಏರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಗೆದ್ದು ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು.

ಮನು ಭಾಕರ್​​ ಕೌಟುಂಬಿಕ ಹಿನ್ನೆಲೆಯೇನು?

ಭಾರತೀಯ ಮಹಿಳಾ ಶೂಟರ್​​ ಮನು ಭಾಕರ್​ ಅವರು ಹುಟ್ಟಿದ್ದು ಹರಿಯಾಣದಲ್ಲಿ. ಹರಿಯಾಣದ ಜಾಜರ್​​ ಜಿಲ್ಲೆಯ ಗೋರಿಯಾ ಅನ್ನೋ ಗ್ರಾಮದಲ್ಲಿ ಮಾಜಿ ನೇವಿ ಅಧಿಕಾರಿ ರಾಮ್​ ಕಿಶನ್​ ಭಾಕರ್​ ಅವರ ದಂಪತಿಗೆ ಜನಿಸಿದ್ರು. 14 ವರ್ಷಕ್ಕೆ ಬಾಕ್ಸಿಂಗ್​​, ಮಾರ್ಷಲ್​ ಆರ್ಟ್ಸ್​​, ಸ್ಕೇಟಿಂಗ್​​ ಸೇರಿದಂತೆ ಹಲವು ರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿ ಮೆಡಲ್ಸ್​ ತನ್ನದಾಗಿಸಿಕೊಂಡಿದ್ದರು.

2020ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಯಾವುದೇ ವಿಭಾಗದಲ್ಲೂ ಅರ್ಹತೆ ಪಡೆಯಲು ವಿಫಲರಾಗಿದ್ದ ಮನು ಭಾಕರ್ ಅವರಿಗೆ ಇದು ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ 221.7 ಪಾಯಿಂಟ್‌ಗಳನ್ನು ಸಂಪಾಧಿಸಿದ ಮನು ಭಾಕರ್ 3ನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.

publive-image

ಭಾರತಕ್ಕೆ ಮೊದಲ ಪದಕ ಗೆದ್ದ ಮನು ಭಾಕರ್​ಗೆ ಇಡೀ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಮನು ಭಾಕರ್​ ಅವರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇದುವರೆಗೂ ಶೂಟಿಂಗ್‌ನಲ್ಲಿ 4 ಪದಕಗಳನ್ನು ಗೆದ್ದಿದೆ. ಆದರೆ ಈ ನಾಲ್ಕೂ ಪದಗಳು ಪುರುಷ ಶೂಟರ್‌ಗಳಿಂದ ಬಂದಿದ್ದವು. ಈಗ ಮನು ಭಾಕರ್ ಭಾರತಕ್ಕಾಗಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ:ಪ್ಯಾರಿಸ್ ಅಂಗಳದಲ್ಲಿ ಇತಿಹಾಸ ಬರೆದ ಮನು ಭಾಕರ್: 10 ಮೀಟರ್ ಏರ್​ ಪಿಸ್ತೂಲ್​ನಲ್ಲಿ ಒಲಿದ ಕಂಚು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment