/newsfirstlive-kannada/media/post_attachments/wp-content/uploads/2025/06/NR_Narayana_Murthy.jpg)
ಆರ್ಟಿಫಿಷಿಲ್ ಇಂಟಲಿಜೆನ್ಸ್ನಿಂದ ಐಟಿ ವಲಯದಲ್ಲಿ ಉದ್ಯೋಗಗಳು ನಷ್ಟವಾಗುತ್ತವೆ. ಐಟಿ ಇಂಜಿನಿಯರ್ಗಳು ಉದ್ಯೋಗ ಕಳೆದುಕೊಳ್ಳಬೇಕಾಗುತ್ತೆ ಅಂತ ಅನೇಕರು ಸಮಾಜದಲ್ಲಿ ಭಯ, ಭೀತಿ ಹುಟ್ಟಿಸುತ್ತಿದ್ದಾರೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಈಗಾಗಲೇ ಬಂದಿರುವುದರಿಂದ ಇನ್ನೂ ಐಟಿ ಇಂಜಿನಿಯರ್ಗಳಿಗೆ ಬೇಡಿಕೆ ಇಲ್ಲ ಎಂದೆಲ್ಲಾ ಹೇಳುತ್ತಿದ್ದಾರೆ. ಆದರೇ, ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ಎನ್.ಆರ್ ನಾರಾಯಣಮೂರ್ತಿ ಇದೆಲ್ಲವನ್ನೂ ತಳ್ಳಿ ಹಾಕಿದ್ದಾರೆ.
ಮನಿ ಕಂಟ್ರೋಲ್ ಜೊತೆ ಮಾತನಾಡಿದ ಎನ್.ಆರ್ ನಾರಾಯಣಮೂರ್ತಿ ಅವರು, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಟೆಕ್ನಾಲಜಿಯು ಹೊಸ ರೀತಿಯ ಉದ್ಯೋಗಗಳನ್ನು ಸೃಷ್ಟಿಸಲಿದೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ನಿಂದ ಐಟಿ ವಲಯದಲ್ಲಿ ಉತ್ಪಾದಕತೆ ಕೂಡ ಹೆಚ್ಚಾಗಲಿದೆ. ಕಂಪನಿಗಳು ಎಐ ಅನ್ನು ಕಂಪನಿಗಳಿಗೆ ಸಹಾಯಕವಾಗುವ ಅಸ್ತ್ರವಾಗಿ ನೋಡಬೇಕೇ ವಿನಃ ಮಾನವ ಶ್ರಮಕ್ಕೆ ಪರ್ಯಾಯವಲ್ಲ. ಮಾನವ ಉದ್ಯೋಗಗಳನ್ನು ಕಿತ್ತುಕೊಳ್ಳಲಿದೆ ಎಂಬ ಭಯ ಸರಿಯಲ್ಲ. ಎಐ ಹೊಸ ರೀತಿಯ ಉದ್ಯೋಗಗಳನ್ನು ಸೃಷ್ಟಿಸಲಿದೆ. ದಶಕದ ಹಿಂದೆ ಬ್ಯಾಂಕಿಂಗ್ ವಲಯದಲ್ಲಿ ಕಂಪ್ಯೂಟರ್ಗಳನ್ನು ಪರಿಚಯಿಸಲಾಯಿತು. ಅದರಿಂದ ಯಾವುದೇ ಉದ್ಯೋಗಗಳು ನಷ್ಟವಾಗಿಲ್ಲ ಎಂದು ಎಐ ಅನ್ನು ಬ್ಯಾಂಕಿಂಗ್ ವಲಯದ ಕಂಪ್ಯೂಟರ್ಗೆ ನಾರಾಯಣಮೂರ್ತಿ ಹೋಲಿಕೆ ಮಾಡಿದ್ದಾರೆ.
1970ರ ದಶಕದ ಬ್ಯಾಂಕಿಂಗ್ ಕ್ಷೇತ್ರದ ಉದಾಹರಣೆಯನ್ನೇ ತೆಗೆದುಕೊಂಡರೂ ಟೆಕ್ನಾಲಜಿಯು ಉದ್ಯೋಗ ಸೃಷ್ಟಿಸಿದೆಯೇ ಹೊರತು ಉದ್ಯೋಗಗಳನ್ನು ಕಿತ್ತುಕೊಂಡಿಲ್ಲ. ಬ್ಯಾಂಕಿಂಗ್ ವಲಯದಲ್ಲಿ ಕಂಪ್ಯೂಟರ್ ಬಂದ ಮೇಲೆ ಉದ್ಯೋಗಗಳ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು ಎಂದು ಹೇಳಿದ್ದಾರೆ.
ಚಾಟ್ ಜಿಪಿಟಿ ಇಂದ ಹೆಚ್ಚಿನ ಉಪಯೋಗ
ಚಾಟ್ ಜಿಪಿಟಿಯಿಂದ ಕೆಲಸದ ದಕ್ಷತೆ ಹೆಚ್ಚಾಗಿದೆ. ಈ ಹಿಂದೆ ಉಪನ್ಯಾಸಕ್ಕೆ ಸಿದ್ಧತೆ ನಡೆಸಲು 25 ರಿಂದ 30 ಗಂಟೆ ತೆಗೆದುಕೊಳ್ಳುತ್ತಿದ್ದಿದ್ದು ಈಗ 5 ಗಂಟೆ ತೆಗೆದುಕೊಳ್ಳುತ್ತಿದೆ. ನನ್ನ ಉತ್ಪಾದಕತೆಯು ಚಾಟ್ ಜಿಪಿಟಿಯಿಂದಾಗಿ 5 ಪಟ್ಟು ಉತ್ತಮವಾಗಿದೆ. ಎಐ ಮಾನವ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆಯೇ ಹೊರತು ನಷ್ಟ ಉಂಟು ಮಾಡಲ್ಲ ಎಂದರು.
ಇನ್ನೂ ಐಟಿ ವಲಯದಲ್ಲಿ ಪ್ರೊಗ್ರಾಮರ್ಗಳು ಮತ್ತು ಅನಾಲಿಸ್ಟ್ ಗಳು ಮತ್ತಷ್ಟು ಸ್ಮಾರ್ಟ್ ಆಗ್ತಾರೆ. ದೊಡ್ಡ ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಎಐನಲ್ಲಿ ಸರಿಯಾದ ಪ್ರಶ್ನೆಗಳನ್ನು ಕೇಳುವುದು ಮುಖ್ಯ. ಎಐ ಅನ್ನು ಸರಿಯಾಗಿ ಬಳಸಿದಾಗ, ಅದು ಐಟಿ ವಲಯದ ಬೆಳವಣಿಗೆ ರೇಟ್ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಎನ್.ಆರ್.ನಾರಾಯಣಮೂರ್ತಿ ಸ್ಪಷ್ಟವಾಗಿ ಹೇಳಿದ್ದಾರೆ.
ಇದನ್ನೂ ಓದಿ:ಒಂದೇ ಇನ್ನಿಂಗ್ಸ್ನಲ್ಲಿ ಜೈಸ್ವಾಲ್, ಗಿಲ್, ಪಂತ್ ಶತಕ.. ಬೃಹತ್ ರನ್ ಕಲೆ ಹಾಕಿದ ಟೀಮ್ ಇಂಡಿಯಾ, ಆಲೌಟ್!
ಉದ್ಯೋಗ ಕಳೆದುಕೊಳ್ಳುವ ಭಯ ಬೇಡ
ಹೀಗಾಗಿ ಎಐನಿಂದ ಐಟಿ ವಲಯವೇ ಆಗಲಿ, ಬ್ಯಾಂಕಿಂಗ್ ವಲಯವೇ ಆಗಲಿ ಬೇರೆ ಯಾವುದೇ ಕ್ಷೇತ್ರದಲ್ಲಾಗಲೀ, ಉದ್ಯೋಗ ನಷ್ಟವಾಗುತ್ತೆ ಎಂಬ ಭಯ, ಆತಂಕ ಬೇಡ. ಈಗ ಐಟಿ ವಲಯದಲ್ಲಿ ಉದ್ಯೋಗಾವಕಾಶಗಳು ಸಿಗದೇ ಇರೋದಕ್ಕೆ ಬೇಡಿಕೆ ಕಡಿಮೆಯಾಗಿರುವುದೇ ಕಾರಣ ಅಂತ ಇನ್ಫೋಸಿಸ್ ಮಾಜಿ ಸಿಎಫ್‌ಓ ಮೋಹನ್ ದಾಸ್ ಪೈ ಇತ್ತೀಚೆಗೆ ನ್ಯೂಸ್ ಫಸ್ಟ್ ಜೊತೆ ಮಾತನಾಡುತ್ತಾ ಹೇಳಿದ್ದರು.
ಜೊತೆಗೆ ಇಂಜಿನಿಯರ್ ಗಳು ಹೆಚ್ಚಿನ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಐಐಟಿ, ಐಐಎಂ ನಲ್ಲಿರುವ ಕೌಶಲ್ಯಗಳನ್ನು ವಿಟಿಯು ನಿಂದ ಹೊರಬರುವ ಇಂಜಿನಿಯರ್ಗಳು ಕೂಡ ರೂಢಿಸಿಕೊಂಡರೇ, ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯಲು ಸಾಧ್ಯ. ಐಎನಿಂದ ಉದ್ಯೋಗ ನಷ್ಟ, ಎಐನಿಂದ ಐಟಿ ವಲಯದಲ್ಲಿ ಉದ್ಯೋಗ ಸಿಗಲ್ಲ ಎಂಬ ಭಯ, ಆತಂಕ ಬಿಟ್ಟು ಹೆಚ್ಚಿನ ಕೌಶಲ್ಯವನ್ನು ಇಂಜಿನಿಯರಿಂಗ್ ಪದವೀಧರರರು ರೂಢಿಸಿಕೊಳ್ಳುವತ್ತ ಗಮನ ಕೊಡಬೇಕು ಅಷ್ಟೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ