/newsfirstlive-kannada/media/post_attachments/wp-content/uploads/2025/06/Infosys-founders-dividend.jpg)
ಇನ್ಫೋಸಿಸ್ ಸಂಸ್ಥಾಪಕರಿಗೆ ಒಂದೇ ಬಾರಿಗೆ ಬರೋಬ್ಬರಿ 2,330 ಕೋಟಿ ರೂಪಾಯಿ ಹಣ ಹರಿದು ಬಂದಿದೆ. ಇದು ಕಂಪನಿಯ ಲಾಭಾಂಶ ಅಥವಾ ಡಿವಿಡೆಂಟ್‌ನಿಂದ ಬಂದ ಹಣ ಎಂಬುದು ವಿಶೇಷ. ಇನ್ಫೋಸಿಸ್ ಸಂಸ್ಥಾಪಕರಲ್ಲಿ ಯಾರ್ ಯಾರಿಗೆ ಎಷ್ಟೆಷ್ಟು ಕೋಟಿ ಹಣ ಬಂದಿದೆ ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇನ್ಫೋಸಿಸ್ ಕಂಪನಿಯು ತನ್ನ ಸಂಸ್ಥಾಪಕರಿಗೆ ಭರ್ಜರಿ ಡಿವಿಡೆಂಟ್ ನೀಡಿದೆ. ಸಂಸ್ಥಾಪಕರುಗಳು ಬರೋಬ್ಬರಿ 54.2 ಕೋಟಿ ಇನ್ಫೋಸಿಸ್ ಷೇರುಗಳನ್ನು ಹೊಂದಿದ್ದಾರೆ. ಈ ಪ್ರತಿಯೊಂದು ಷೇರಿಗೂ ಈಗ 43 ರೂಪಾಯಿ ಲಾಭಾಂಶ ಅಥವಾ ಡಿವಿಡೆಂಟ್ ಅನ್ನು ಕಂಪನಿಯು ಘೋಷಿಸಿದೆ. ಇದರಿಂದ ಕಂಪನಿಯ ಸಂಸ್ಥಾಪಕರುಗಳಿಗೆ ಬರೋಬ್ಬರಿ 2,330 ಕೋಟಿ ರೂಪಾಯಿ ಹಣ ಸಿಕ್ಕಿದೆ.
ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್ ನಾರಾಯಣಮೂರ್ತಿ ಮತ್ತು ಕುಟುಂಬದಿಂದ ಹಿಡಿದು ನಂದನ್ ನೀಲೇಕಣಿ ಮತ್ತು ಕುಟುಂಬ, ಕ್ರಿಸ್ ಗೋಪಾಲಕೃಷ್ಣ ಮತ್ತು ಕುಟುಂಬ, ಕೆ.ದಿನೇಶ್ ಅಂಡ್ ಕುಟುಂಬ ಹಾಗೂ ಎಸ್.ಡಿ. ಶಿಬುಲಾಲ್ ಮತ್ತು ಕುಟುಂಬಕ್ಕೆ ಈ ಡಿವೆಂಡೆಟ್ ಸಿಗುತ್ತಿದೆ.
2024-25ನೇ ಸಾಲಿನ ಮಧ್ಯಂತರ ಡಿವಿಡೆಂಟ್ ಪ್ರತಿ ಷೇರಿಗೆ 21 ರೂಪಾಯಿ ಸೇರಿದಂತೆ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ 43 ರೂಪಾಯಿ ಡಿವಿಡೆಂಟ್ ನೀಡಲಾಗುತ್ತಿದೆ. 2023- 24ನೇ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಸಂಸ್ಥಾಪಕರಿಗೆ 1,527 ಕೋಟಿ ರೂಪಾಯಿ ಲಾಭಾಂಶ ನೀಡಲಾಗಿತ್ತು. ಅದಕ್ಕೆ ಹೋಲಿಸಿದರೆ 2024-25ನೇ ಹಣಕಾಸು ವರ್ಷದಲ್ಲಿ ಶೇ.52ರಷ್ಟು ಹೆಚ್ಚಿನ ಲಾಭಾಂಶ ನೀಡುತ್ತಿರುವುದು ವಿಶೇಷ.
ಇನ್ಫೋಸಿಸ್ ಅಧ್ಯಕ್ಷರಾಗಿರುವ ನಂದನ್ ನಿಲೇಕಣಿ ಅವರು 4 ಕೋಟಿ ರೂಪಾಯಿ ಷೇರುಗಳನ್ನು ಹೊಂದಿದ್ದಾರೆ. ಈ ಷೇರುಗಳಿಗೆ 175 ಕೋಟಿ ರೂಪಾಯಿ ಡಿವಿಡೆಂಟ್ ಪಡೆದಿದ್ದಾರೆ.
ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ 1.5 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಈ ಷೇರುಗಳಿಗೆ 65 ಕೋಟಿ ರೂಪಾಯಿ ಹಣ ಎನ್‌ಆರ್‌ಎನ್ ಅವರಿಗೆ ಸಿಗಲಿದೆ.
ಕ್ರಿಸ್ ಗೋಪಾಲಕೃಷ್ಣ ಅವರು 3.2 ಕೋಟಿ ರೂಪಾಯಿ ಷೇರುಗಳನ್ನು ಹೊಂದಿದ್ದಾರೆ. ಇವುಗಳಿಗೆ 137 ಕೋಟಿ ರೂಪಾಯಿ ಹಣ ಸಿಗಲಿದೆ.
ಸುಧಾ ಗೋಪಾಲಕೃಷ್ಣ ಅವರು ಇನ್ಫೋಸಿಸ್‌ನ ಹೆಚ್ಚಿನ ಷೇರುಗಳನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಸುಧಾ ಗೋಪಾಲಕೃಷ್ಣ ಅವರು ಬರೋಬ್ಬರಿ 9.5ಕೋಟಿ ಷೇರುಗಳನ್ನು ಹೊಂದಿದ್ದು, 410 ಕೋಟಿ ರೂಪಾಯಿ ಹಣ ಸಿಗಲಿದೆ.
ಇದನ್ನೂ ಓದಿ: 108 ವರ್ಷಗಳಲ್ಲೇ ದಾಖಲೆ.. ವಿವಾದದ ಬಳಿಕ ಮೈಸೂರು ಸ್ಯಾಂಡಲ್ ಸೋಪಿಗೆ ಕೋಟಿ, ಕೋಟಿ ಲಾಭ
ಆಶಾ ದೀನೇಶ್ ಅವರು 4 ಕೋಟಿ ಇನ್ಫೋಸಿಸ್ ಷೇರುಗಳನ್ನು ಹೊಂದಿದ್ದು, 165 ಕೋಟಿ ರೂಪಾಯಿ ಹಣವನ್ನು ಡಿವಿಡೆಂಟ್ ಆಗಿ ಪಡೆಯಲಿದ್ದಾರೆ. ದಿನೇಶ್ ಕೃಷ್ಣಸ್ವಾಮಿ ಅವರು 3.2 ಕೋಟಿ ಇನ್ಫೋಸಿಸ್ ಷೇರು ಹೊಂದಿದ್ದು, 139 ಕೋಟಿ ರೂಪಾಯಿ ಹಣವನ್ನು ಡಿವಿಡೆಂಟ್ ಆಗಿ ಪಡೆಯುವರು. ಇದೆಲ್ಲಾ ಇನ್ಫೋಸಿಸ್ ಸಂಸ್ಥಾಪಕರು ಹೊಂದಿರುವ ಇನ್ಫಿ ಷೇರುಗಳಿಗೆ ಸಿಕ್ಕ ಡಿವಿಡೆಂಟ್.
ಇನ್ಫೋಸಿಸ್ ಸಂಸ್ಥಾಪಕರು ತಮ್ಮ ಮಕ್ಕಳು, ಕುಟುಂಬ ವರ್ಗದ ಹೆಸರಿನಲ್ಲೂ ಷೇರುಗಳನ್ನು ಹೊಂದಿದ್ದಾರೆ. ಇನ್ಫಿ ನಾರಾಯಣಮೂರ್ತಿ ಪುತ್ರ ರೋಹನ್ ಮೂರ್ತಿ 6 ಕೋಟಿ ಇನ್ಫಿ ಷೇರು ಹೊಂದಿದ್ದು, 261 ಕೋಟಿ ರೂಪಾಯಿ ಡಿವಿಡೆಂಟ್ ಪಡೆಯುವರು.
ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಾಕ್ ಪತ್ನಿ ಹಾಗೂ ನಾರಾಯಣಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಅವರು ₹3.8 ಕೋಟಿ ಷೇರು ಹೊಂದಿದ್ದು, 167 ಕೋಟಿ ರೂಪಾಯಿ ಅನ್ನು ಡಿವಿಡೆಂಟ್ ಆಗಿ ಪಡೆಯುವರು.
ಎನ್. ಆರ್ ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮೊಮ್ಮಗ 18 ತಿಂಗಳ ಏಕಾಗ್ರ ರೋಹನ್ ಮೂರ್ತಿ ಇನ್ಫಿಯ ₹15 ಲಕ್ಷ ಷೇರುಗಳನ್ನು ಹೊಂದಿದ್ದು, 18 ತಿಂಗಳ ಮಗುವಿಗೆ 6.5 ಕೋಟಿ ರೂಪಾಯಿ ಡಿವಿಡೆಂಟ್‌ನಿಂದ ಸಿಗಲಿದೆ. ಇನ್ಫೋಸಿಸ್‌ನ ಮೂರನೇ ತಲೆಮಾರು ಕೂಡ ಡಿವಿಡೆಂಟ್ ಲಾಭ ಪಡೆಯುತ್ತಿದೆ.
ಯಾವ್ಯಾವ ಕುಟುಂಬಗಳಿಗೆ ಒಟ್ಟಾರೆ ಎಷ್ಟು ಮೊತ್ತದ ಡಿವಿಡೆಂಟ್ ಸಿಕ್ಕಿದೆ?
- ನಂದನ್ ನಿಲೇಕಣಿ ಮತ್ತು ಕುಟುಂಬಕ್ಕೆ ಬರೋಬ್ಬರಿ 431 ಕೋಟಿ ರೂಪಾಯಿ
- ಎನ್. ಆರ್. ನಾರಾಯಣ ಮೂರ್ತಿ ಕುಟುಂಬಕ್ಕೆ 649 ಕೋಟಿ ರೂಪಾಯಿ
- ಕ್ರಿಸ್ ಗೋಪಾಲಕೃಷ್ಣ ಅಂಡ್ ಕುಟುಂಬಕ್ಕೆ 610 ಕೋಟಿ ರೂಪಾಯಿ
- ಕೆ. ದಿನೇಶ್ ಅಂಡ್ ಕುಟುಂಬಕ್ಕೆ 371 ಕೋಟಿ ರೂಪಾಯಿ
- ಎಸ್.ಡಿ ಶಿಬುಲಾಲ್ ಅಂಡ್ ಕುಟುಂಬಕ್ಕೆ 267 ಕೋಟಿ ರೂಪಾಯಿ
ಇನ್ಫೋಸಿಸ್ ಕಂಪನಿಯು 2024- 25ನೇ ಹಣಕಾಸು ವರ್ಷದಲ್ಲಿ ಬರೋಬ್ಬರಿ 2,330 ಕೋಟಿ ರೂಪಾಯಿ ಹಣವನ್ನು ಡಿವಿಡೆಂಟ್ ಆಗಿ ನೀಡಿದೆ.
Dividend (ಲಾಭಾಂಶ) ಎಂದರೇನು?
ಡಿವಿಡೆಂಟ್ ಅಥವಾ ಲಾಭಾಂಶ ಅಂದರೆ, ಕಂಪನಿಯು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ತಾನು ಗಳಿಸಿದ ಆದಾಯವನ್ನು ಕಂಪನಿಯ ಷೇರುದಾರರಿಗೆ ಹಂಚುತ್ತೆ. ಕಂಪನಿಯ ಒಟ್ಟಾರೆ ಲಾಭವನ್ನು ಎಲ್ಲಾ ಷೇರುಗಳಿಗೆ ಸಮಾನವಾಗಿ ಹಂಚುತ್ತೆ. ಹೀಗಾಗಿ ಪ್ರತಿಯೊಂದು ಷೇರಿಗೆ ಎಷ್ಟು ಲಾಭಾಂಶ ಸಿಗುತ್ತೆ ಅನ್ನೋದು ಕಂಪನಿಯ ಒಟ್ಟಾರೆ ಲಾಭದ ಮೊತ್ತವನ್ನು ಅವಲಂಬಿಸಿರುತ್ತೆ. ಕಂಪನಿಯು ಹೆಚ್ಚಿನ ಲಾಭವನ್ನ ಗಳಿಸಿದರೆ ಪ್ರತಿ ಷೇರಿಗೆ ಸಿಗುವ ಲಾಭಾಂಶದ ಮೊತ್ತ ಹೆಚ್ಚಾಗುತ್ತೆ.
ಕಂಪನಿಯೊಂದು ಸಕ್ಸಸ್ ಆಗಿ ನಡೆಯುತ್ತಿದ್ದರೆ ಎಷ್ಟು ತಲೆಮಾರು ಬೇಕಾದರೂ, ಹಣವನ್ನು ಪಡೆಯಬಹುದು ಎಂಬುದಕ್ಕೆ ಇನ್ಫೋಸಿಸ್ ಕಂಪನಿಯೇ ಉತ್ತಮ ಉದಾಹರಣೆ. ಕನ್ನಡಿಗರು, ಕನ್ನಡ ನೆಲದಲ್ಲಿ ಕಟ್ಟಿ ಬೆಳೆಸಿದ ಇನ್ಫೋಸಿಸ್ ಅಂತಾರಾಷ್ಚ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಜೊತೆಗೆ ಕಂಪನಿಯ ಸಂಸ್ಥಾಪಕರು ಮತ್ತು ಅವರ ಕುಟುಂಬ ವರ್ಗದ ಪಾಲಿಗೆ ಅಕ್ಷರಶಃ ಕಾಮಧೇನು ಕೂಡ ಆಗಿದೆ. ಕಂಪನಿಯು ಈ ಮಟ್ಟಿಗಿನ ಯಶಸ್ಸು ಪಡೆಯಲು ಕಂಪನಿಯ ಸಂಸ್ಥಾಪಕರ ಪರಿಶ್ರಮ ಪ್ರಮುಖ ಕಾರಣವಾಗಿದೆ ಎನ್ನುವುದರಲ್ಲಿ ಯಾವುದೇ ಮಾತಿಲ್ಲ.
ವಿಶೇಷ ವರದಿ: ಚಂದ್ರಮೋಹನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ