ಅಮರನಾಥ ಯಾತ್ರೆ ಭಕ್ತಾದಿಗಳ ಸಂಖ್ಯೆ ಕುಸಿಯುತ್ತಾ.. ಭಾರತದ ಇಂಟಲಿಜೆನ್ಸ್​ನಿಂದ ಭಾರೀ ಎಚ್ಚರಿಕೆ!

author-image
Bheemappa
Updated On
ಅಮರನಾಥ ಯಾತ್ರೆ ಭಕ್ತಾದಿಗಳ ಸಂಖ್ಯೆ ಕುಸಿಯುತ್ತಾ.. ಭಾರತದ ಇಂಟಲಿಜೆನ್ಸ್​ನಿಂದ ಭಾರೀ ಎಚ್ಚರಿಕೆ!
Advertisment
  • ಪಹಲ್ಗಾಮ್ ಮಾರ್ಗದ ಮೂಲಕ ಯಾತ್ರಿಗಳ ಅಮರನಾಥ ಯಾತ್ರೆ
  • ಇತ್ತೀಚೆಗಷ್ಟೇ 26 ಭಾರತೀಯರನ್ನ ಬಲಿ ಪಡೆದಿದ್ದ ಭಯೋತ್ಪಾದಕರು
  • ಈ ಸಲ ಅಮರನಾಥ ಭಕ್ತಾದಿಗಳಿಗೆ ಹೆಲಿಕಾಪ್ಟರ್ ಸೇವೆ ಸಿಗಲ್ವಾ..?

ಈ ವರ್ಷದ ಮುಂಬರುವ ಅಮರನಾಥ ಯಾತ್ರೆ ವೇಳೆ ಭಯೋತ್ಪಾದನಾ ದಾಳಿಗೆ ಸಂಚು ರೂಪಿಸಲಾಗಿದೆ ಎಂದು ಭಾರತದ ಇಂಟಲಿಜೆನ್ಸ್ ಏಜೆನ್ಸಿಗಳು ಎಚ್ಚರಿಕೆ ನೀಡಿವೆ. ಈ ಆಲರ್ಟ್ ಜಮ್ಮು ಕಾಶ್ಮೀರದ ಸ್ಥಳೀಯ ಪೊಲೀಸರು, ಕೇಂದ್ರದ ಭದ್ರತಾ ಪಡೆಗಳಿಗೆ ರವಾನೆ ಮಾಡಲಾಗಿದೆ. ಲಷ್ಕರ್-ಇ-ತೋಯ್ಬಾದ ಅಂಗ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆಯ ಹೆಸರು ಅನ್ನು ಉಲ್ಲೇಖಿಸಿ ಇಂಟಲಿಜೆನ್ಸ್ ಏಜೆನ್ಸಿಗಳು ಈ ಆಲರ್ಟ್ ನೀಡಿವೆ. ದಿ ರೆಸಿಸ್ಟೆನ್ಸ್ ಫ್ರಂಟ್ ಇತ್ತೀಚೆಗೆ ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಭಾರತೀಯರ ಜೀವ ಬಲಿ ಪಡೆದಿತ್ತು.

publive-image

ಇನ್ನೂ ಜಮ್ಮು ಕಾಶ್ಮೀರ ಸರ್ಕಾರ, ಕೇಂದ್ರ ಸರ್ಕಾರ ಈಗಾಗಲೇ ಅಮರನಾಥ್ ಯಾತ್ರೆ ಮಾರ್ಗವನ್ನು ತಮ್ಮ ವಶಕ್ಕೆ ಪಡೆದಿದ್ದು, ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಆದರೇ, ಪಹಲ್ಗಾಮ್ ದಾಳಿಕೋರರನ್ನು ಇನ್ನೂ ಜೀವಂತವಾಗಿ ಸೆರೆ ಹಿಡಿಯಲು ಇಲ್ಲವೇ ಹೊಡೆದುರುಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಉಗ್ರರು ಕಾಶ್ಮೀರದಲ್ಲಿ ಅಡಗಿದ್ದಾರೆ. ಪೀರ್ ಪಂಜಲ್ ಕಾಡಿನಲ್ಲಿ ಅಡಗಿದ್ದು, ಮತ್ತೊಂದು ದಾಳಿಗೆ ಸಂಚು ರೂಪಿಸುತ್ತಿರಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಬೇಕೆಂದು ಇಂಟಲಿಜೆನ್ಸ್ ಏಜೆನ್ಸಿಗಳು ವಾರ್ನಿಂಗ್ ನೀಡಿವೆ. ಅಮರನಾಥ ಯಾತ್ರೆಗೆ ಭೇಟಿ ಕೊಡುವವರು ಪಹಲ್ಗಾಮ್ ಮಾರ್ಗದ ಮೂಲಕವೇ ಸಂಚರಿಸುತ್ತಿದ್ದರು. ನಿತ್ಯ 15 ಸಾವಿರ ಮಂದಿ ಯಾತ್ರಾರ್ಥಿಗಳು ಪಹಲ್ಗಾಮ್ ಮಾರ್ಗದ ಮೂಲಕ ಸಂಚರಿಸುತ್ತಿದ್ದರು.

ಅಮರನಾಥ ಯಾತ್ರೆಯ ಮಾರ್ಗ, ಭದ್ರತೆ ಬಗ್ಗೆ ಪರಿಶೀಲನೆ

ಇನ್ನೂ ಬಲ್ತಾಲ್ ಮಾರ್ಗವನ್ನು 15 ಸಾವಿರ ಮಂದಿ ಯಾತ್ರಾರ್ಥಿಗಳು ಬಳಸುತ್ತಿದ್ದರು. ಆದರೇ, ಈಗ ಬಲ್ತಾಲ್ ಮಾರ್ಗವೂ ಭದ್ರತೆಯ ದೃಷ್ಟಿಯಿಂದ ಕಳವಳಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ತೀವ್ರವಾಗಿ ಮಾನಿಟರ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಸಿಆರ್‌ಪಿಎಫ್ ಡಿಜಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಅಮರನಾಥ ಯಾತ್ರೆಯ ಮಾರ್ಗ, ಭದ್ರತೆಯ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸುವರು. ಈಗಾಗಲೇ ಇಂಟಲಿಜೆನ್ಸ್ ಬ್ಯೂರೋದ ಅಧಿಕಾರಿಗಳು ತಳಮಟ್ಟದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ವಿಮಾನ ಪತನದ ವಿಡಿಯೋ ರೆಕಾರ್ಡ್ ಮಾಡಿದ್ದ ಬಾಲಕನಿಗೆ ಈಗ ಭಯ!

publive-image

ಸಣ್ಣ ಸಣ್ಣ ಭದ್ರತಾ ವಲಯಗಳಾಗಿ ವಿಂಗಡಣೆ

ಈ ಭಾರಿ ಭಯೋತ್ಪಾದಕರ ದಾಳಿಯ ಬೆದರಿಕೆ ಹೆಚ್ಚಾಗಿರುವುದರಿಂದ ಅಮರನಾಥ ಯಾತ್ರೆಯ ಮಾರ್ಗವನ್ನು ವಿಮಾನ ಹಾರಾಟ, ಹೆಲಿಕಾಪ್ಟರ್ ಹಾರಾಟ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಭಕ್ತಾದಿಗಳಿಗೂ ಈ ಭಾರಿ ಹೆಲಿಕಾಪ್ಟರ್ ಸೇವೆ ಸಿಗೋದಿಲ್ಲ. ಇಡೀ ವಲಯವನ್ನು ಸಣ್ಣ ಭದ್ರತಾ ವಲಯಗಳಾಗಿ ವಿಂಗಡಿಸಲಾಗಿದೆ. ಸಮಗ್ರ ರಕ್ಷಣೆಗಾಗಿ ಅನೇಕ ಭದ್ರತಾ ಏಜೆನ್ಸಿಗಳನ್ನ ನಿಯೋಜಿಸಲಾಗಿದೆ. ಪಹಲ್ಗಾಮ್ ದಾಳಿ, ಉಗ್ರರ ದಾಳಿಯ ಬೆದರಿಕೆ ಕಾರಣದಿಂದ ಈ ಭಾರಿ ಅಮರನಾಥ ಯಾತ್ರೆಗೆ ಬರುವ ಭಕ್ತಾದಿಗಳ ಸಂಖ್ಯೆ ಕುಸಿತವಾಗುವ ಭೀತಿಯೂ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment