/newsfirstlive-kannada/media/media_files/2025/11/04/art-of-living-ravi-shankar-guruji-2025-11-04-18-20-25.jpg)
ನವೆಂಬರ್ 3, 2025 ರಂದು ಮಸ್ಸಾಚುಸೆಟ್ಸ್ ನ ಬೋಸ್ಟನ್ ನಲ್ಲಿ, ಬೋಸ್ಟನ್ ಗ್ಲೋಬಲ್ ಫೋರಂ (BGF) ಮತ್ತು ಎಐ ವರ್ಲ್ಡ್ ಸೊಸೈಟಿ (AIWS) 2025 ರ ವರ್ಲ್ಡ್ ಲೀಡರ್ ಫಾರ್ ಪೀಸ್ ಆಂಡ್ ಸೆಕ್ಯೂರಿಟಿ ಪ್ರಶಸ್ತಿಯನ್ನು ಗುರುದೇವ್ ಶ್ರೀ ಶ್ರೀ ರವಿ ಶಂಕರರಿಗೆ ನೀಡಿದ್ದಾರೆ. ಜಾಗತಿಕ ಶಾಂತಿಸ್ಥಾಪನೆಗಾಗಿ, ಸಮನ್ವಯತೆಗಾಗಿ ಮತ್ತು ಮಾನವತ್ವದ ನಾಯಕತ್ವಕ್ಕಾಗಿ ರವಿಶಂಕರ್ ಗುರೂಜಿ ನೀಡಿರುವ ಅಸಾಧಾರಣವಾದ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.
ವರ್ಲ್ಡ್ ಲೀಡರ್ ಫಾರ್ ಪೀಸ್ ಆಂಡ್ ಸೆಕ್ಯೂರಿಟಿ ಪ್ರಶಸ್ತಿಯ ಹತ್ತನೆಯ ವಾರ್ಷಿಕೋತ್ಸವ ಇದಾಗಿದ್ದು (2015 - 2025), ಜಾಗತಿಕ ಶಾಂತಿ ಮತ್ತು ನೈತಿಕ ಪ್ರಗತಿಯನ್ನು ಮುನ್ನಡೆಸುವಲ್ಲಿ ನೈತಿಕ ಧೈರ್ಯ, ದೂರದೃಷ್ಟಿಯ ಆಡಳಿತ ಮತ್ತು ಸಹಾನುಭೂತಿಯನ್ನು ಸಾಕಾರಗೊಳಿಸುವ ಜಾಗತಿಕ ನಾಯಕರಿಗೆ ಮಾತ್ರ, ವಿಶೇಷ ಗೌರವವನ್ನು ನೀಡುವ ಸಲುವಾಗಿ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ.
ಇದು ಪ್ರಾರಂಭವಾದಾಗಿನಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ದಿಗ್ಗಜರೆಂದರೆ, 2015ರಲ್ಲಿ ಅಬೆ (ಜಪಾನ್) ಮತ್ತು ಆಂಜೆಲ ಮರ್ಕಲ್ (ಜರ್ಮನಿ); 2016 ರಲ್ಲಿ ಯುಎನ್ ನ ಮಾಜಿ ಸೆಕ್ರೆಟರಿ ಜೆನರಲ್ ಬನ್ ಕೀ ಮೂನ್; 2018 ರಲ್ಲಿ ಸೌಲಿ ನೀನಿಸ್ತೋ (ಫಿನ್ಲಾಂಡ್); 2022 ರಲ್ಲಿ ವೊಲೋದಿಮರ್ ಝೆಲೆನ್ಸ್ಕಿ ಮತ್ತು ಯೂಕ್ರೇನ್ ನ ಜನತೆಗೆ; ಮತ್ತು 2024 ರಲ್ಲಿ ಇಮ್ಮಾನ್ಯುಯೆಲ್ ಮಾಕ್ರಾನ್ (ಫ್ರಾನ್ಸ್).
ಭಾರತಕ್ಕೆ ಇದು ವಿಶೇಷವಾಗಿ ಮಹತ್ವದ ಕ್ಷಣವಾಗಿದೆ . ಶ್ರೀ ರವಿ ಶಂಕರ್ ಗುರೂಜಿಗೆ ನೀಡಲಾಗಿರುವ ಈ ಮನ್ನಣೆಯು, ಜಗತ್ತಿನ ಅತೀ ಗೌರವಾನ್ವಿತ ದಾರ್ಶನಿಕರ ಹಾಗೂ ರಾಜನೀತಿಜ್ಞರಿಗೆ ಸರಿಸಮನಾಗಿ ನಮ್ಮ ದೇಶದ ಆಧ್ಯಾತ್ಮಿಕ ಹಾಗೂ ಮಾನವತಾವಾದಿ ನಾಯಕತ್ವವನ್ನು ಸ್ಥಿರವಾಗಿ ಸ್ಥಾಪಿಸುತ್ತದೆ. ಜಾಗತಿಕ ವೇದಿಕೆಯಲ್ಲಿ ಭಾರತದ "ವಿಶ್ವಗುರು" ಪಾತ್ರವನ್ನು ಇದರಿಂದ ಎತ್ತಿಹಿಡಿಯಲಾಗಿದ್ದು, ಪ್ರಾಚೀನ ಜ್ಞಾನವು ಆಧುನಿಕ ನೈತಿಕತೆ ಹಾಗೂ ಆಡಳಿತದ ಮೇಲೆ ಈಗಲೂ ತನ್ನ ಪ್ರಭಾವವನ್ನು ಬೀರುತ್ತಿರುವುದು ಸ್ಪಷ್ಟವಾಗಿದೆ.
ರವಿಶಂಕರ್ ಗುರೂಜಿಿ ಶಾಂತಿ ಮತ್ತು ಸಮನ್ವಯತೆಗಾಗಿ ಹೊತ್ತಿರುವ ಜಾಗತಿಕ ನಾಯಕತ್ವಕ್ಕಾಗಿ, 180+ ದೇಶಗಳಲ್ಲಿ ಅವರು ಬೀರಿರುವ ಮಾನವೀಯ ಪ್ರಭಾವಕ್ಕಾಗಿ ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ಪರಿವರ್ತನೆಯ ಯುಗದಲ್ಲಿ ಅವರು ನೀಡಿರುವ ನೈತಿಕ ಮಾರ್ಗದರ್ಶನಕ್ಕಾಗಿ ಬಿಜಿಎಫ್ ಈ ಪ್ರಶಸ್ತಿಯನ್ನು ರವಿಶಂಕರ್ ಗುರೂಜಿಗೆ ನೀಡಿ ಗೌರವಿಸಿತು.
"ಯಾವ ಪೂರ್ವೋದ್ದೇಶವನ್ನೂ ಅಥವಾ ಪಕ್ಷಪಾತವನ್ನೂ ಹೊಂದಿರದಂತಹ, ಸಂಪರ್ಕ ಸೃಷ್ಟಿಕಾರ" ಎಂದು ಫೋರಂ ಅವರನ್ನು ಬಣ್ಣಿಸಿದೆ. ಸಂಘರ್ಷ-ಪೀಡಿತ ಪ್ರದೇಶಗಳಲ್ಲಿ ಅವರು ನಿರ್ವಹಿಸಿದ ಪಾತ್ರ - ಕೊಲಂಬಿಯಾ (ಇಲ್ಲಿ ಗುರುದೇವರು ಮಧ್ಯಸ್ಥಿಕೆ ವಹಿಸಿ, 52 ವರ್ಷಗಳಿಂದ ಫಾರ್ಕ್ ಹಾಗೂ ಕೊಲಂಬಿಯಾ ಸರ್ಕಾರದ ನಡುವೆ ನಡೆಯುತ್ತಿದ್ದ ಸಶಸ್ತ್ರ ಕದನವನ್ನು ಅಂತ್ಯಗೊಳಿಸಿದರು), ಇರಾಕ್, ಶ್ರೀಲಂಕಾ, ಮಿಯಾನ್ಮಾರ್, ವೆನಿಜುವೆಲ್ಲಾ ಮತ್ತು ಕಾಶ್ಮೀರದಲ್ಲಿ ಅವರು ನಿರ್ವಹಿಸಿದ ಪಾತ್ರವು, ಅವರ ಪ್ರಾಯೋಗಿಕ, ಕರುಣಾಮಯ ವಿಧಾನಕ್ಕೆ ಉದಾಹರಣೆಗಳಾಗಿವೆ.
ಈ ಪ್ರಶಸ್ತಿಯನ್ನು ಸ್ವೀಕರಿಸಿದ ರವಿಶಂಕರ್ ಗುರೂಜಿ ಅವರು, ಜಾಗತಿಕ ಆಡಳಿತದಲ್ಲಿ ಆಧ್ಯಾತ್ಮಿಕ ಹಾಗೂ ಶಾಂತಿ ಶಿಕ್ಷಣವನ್ನೂ ಅಳವಡಿಸಬೇಕೆಂಬುದರ ಬಗ್ಗೆ ಒತ್ತೆಯನ್ನಿಟ್ಟರು: "ಶಾಂತಿಯು ಮಾತುಗಳಿಂದ ಬರಲು ಸಾಧ್ಯವಿಲ್ಲ; ಅದನ್ನು ಕಾರ್ಯರೂಪಕ್ಕೆ ತರಬೇಕು. ನಾವು ಸಾಮಾನ್ಯವಾಗಿ ಒಂದೇ ಉಸಿರಿನಲ್ಲಿ 'ಶಾಂತಿ ಮತ್ತು ಭದ್ರತೆ' ಎನ್ನುತ್ತೇವೆ. ಭದ್ರತೆಗಾಗಿ ಬಹಳಷ್ಟು ಮಾಡುತ್ತೇವೆ. ಆದರೆ ಶಾಂತಿಯ ಮೇಲೆ ಬಹಳ ಕಡಿಮೆ ಗಮನವನ್ನು ಕೊಡುತ್ತೇವೆ. ಶಾಂತಿ ಸ್ಥಾಪನೆ ಅವಶ್ಯಕ. ಇಂದು ನಮ್ಮ ಸಮಾಜವು ಎದುರಿಸುತ್ತಿರುವ ಅಪನಂಬಿಕೆ ಮತ್ತು ದುಃಖವನ್ನು ಶಮನಗೊಳಿಸಲು ಒಂದು ನೈತಿಕ ಹಾಗೂ ಆಧ್ಯಾತ್ಮಿಕ ಶಕ್ತಿಯು ಅವಶ್ಯಕ. ಒತ್ತಡಮುಕ್ತ, ಹಿಂಸಾಮುಕ್ತ ಜಗತ್ತಿನ ಕನಸನ್ನು ಕಾಣೋಣ- ಶಾಂತಿ, ಕರುಣೆ ಮತ್ತು ಸೃಜನಶೀಲತೆಯು ಬೆಳೆಯುವಂತಹ ಸಮಾಜದ ಕನಸನ್ನು ಕಾಣೋಣ" ಎಂದರು.
/filters:format(webp)/newsfirstlive-kannada/media/media_files/2025/11/04/art-of-living-ravi-shankar-guruji02-2025-11-04-18-22-25.jpg)
1981 ರಲ್ಲಿ ಸ್ಥಾಪನೆಯಾದ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಮೂಲಕ, ರವಿಶಂಕರ್ ಗುರೂಜಿ ಆಘಾತವನ್ನು ಗುಣಪಡಿಸುವ, ಒತ್ತಡವನ್ನು ಕಡಿಮೆ ಮಾಡುವ ಮತ್ತು ಭಾವನಾತ್ಮಕ ಸಹಿಷ್ಣುತೆಯನ್ನು ಬೆಳೆಸುವ ಸ್ಕೈ ಬ್ರೆತ್ ಮೆಡಿಟೇಶನ್ (ಸುದರ್ಶನ ಕ್ರಿಯಾ) ನಂತಹ ಪ್ರಾಯೋಗಿಕ ಕಾರ್ಯಕ್ರಮಗಳನ್ನು ಪ್ರವರ್ತಿಸಿದ್ದಾರೆ - ಇದು ಸುಸ್ಥಿರ ಶಾಂತಿಗೆ ಅಡಿಪಾಯವಾಗಿದೆ. ಸಂಘರ್ಷ ವಲಯಗಳಲ್ಲಿ ಶಾಂತಿ ಪ್ರಕ್ರಿಯೆಗಳಿಗೆ ಮಧ್ಯಸ್ಥಿಕೆ ವಹಿಸುವುದು, ಧ್ಯಾನ ಕಾರ್ಯಕ್ರಮಗಳ ಮೂಲಕ 800,000 ಕ್ಕೂ ಹೆಚ್ಚು ಕೈದಿಗಳಿಗೆ ಪುನರ್ವಸತಿ ಕಲ್ಪಿಸುವುದು, ಪರಿಸರ ಯೋಜನೆಗಳ ಮೂಲಕ 70 ಕ್ಕೂ ಹೆಚ್ಚು ನದಿಗಳು ಮತ್ತು ಸಾವಿರಾರು ಜಲಮೂಲಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಭಾರತದ 1,300 ಶಾಲೆಗಳಲ್ಲಿ 100,000 ಕ್ಕೂ ಹೆಚ್ಚು ಸವಲತ್ತುರಹಿತ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಪೋಷಣೆಯನ್ನು ಒದಗಿಸುವುದು ಈ ಸ್ಥಾಪನೆಯ ಕೆಲಸಗಳಲ್ಲಿ ಸೇರಿವೆ.
ರವಿಶಂಕರ್ ಗುರೂಜಿ ಅವರನ್ನು ಶ್ಲಾಘಿಸುವಾಗ, ಬಿಜಿಎಫ್‌ನ ಗವರ್ನರ್ ಮೈಕೆಲ್ ಡುಕಾಕಿಸ್ ಮತ್ತು ಸಹ-ಸಂಸ್ಥಾಪಕ ನ್ಯುಯೆನ್ ಅನ್ಹ್ ತುವಾನ್ ರವರು, ರವಿಶಂಕರ್ ಗುರೂಜಿ ನಾಯಕತ್ವದಿಂದಾಗಿ ಹೇಗೆ ಕರುಣೆಯು ಘನಕಾರ್ಯವಾಗಿ ಪರಿವರ್ತನೆಗೊಳ್ಳುತ್ತದೆ, ಮತ್ತು ಅವರ ಸಾವಧಾನತೆ ಮತ್ತು ಜವಾಬ್ದಾರಿಯ ಸಂದೇಶವು ಡಿಜಿಟಲ್ ಯುಗದಲ್ಲಿ ಶಾಂತಿಗೆ ನೈತಿಕ ಅಡಿಪಾಯವನ್ನು ಹೇಗೆ ಒದಗಿಸುತ್ತದೆ ಎಂಬುದನ್ನು ಗಮನಿಸಿದರು.
ಈ ಪ್ರಶಸ್ತಿಯ ಹತ್ತನೆಯ ವಾರ್ಷಿಕೋತ್ಸವವನ್ನು ಆಚರಿಸಲು, ಬಿಜಿಎಫ್ ಹೊಸ ಕಾರ್ಯಗಳನ್ನು ಕೈಗೊಳ್ಳಲಿದೆ. ಇವುಗಳಲ್ಲಿ ಕೆಲವು, "ವರ್ಲ್ಡ್ ಲೀಡರ್ ಸ್ಪಿರಿಟ್ ಸಿಂಪೋಸಿಯಮ್", ಮತ್ತು "ವರ್ಲ್ಡ್ ಲೀಡರ್ ಸ್ಪಿರಿಟ್ ಕಾನ್ಸರ್ಟ್". ಇದರಲ್ಲಿ ಗುರುದೇವರು, ಅಂತರಧರ್ಮದ ಸಂವಾದ ಮತ್ತು AI ಯುಗದಲ್ಲಿ ನೈತಿಕ ನಾಯಕತ್ವಕ್ಕೆ ಮಾರ್ಗದರ್ಶಿಯಾಗುವರು.
ರವಿಶಂಕರ್ ಗುರೂಜಿ ಅವರು ಇತ್ತೀಚೆಗೆ ನಡೆಸಿದ ಉತ್ತರ ಅಮೆರಿಕದ ಪ್ರವಾಸದ ಸಂದರ್ಭದಲ್ಲಿ ವ್ಯಾಂಕೂವರ್, ಸಿಯಾಟಲ್ ಮತ್ತು ಪೋರ್ಟ್‌ಲ್ಯಾಂಡ್ ನಗರಗಳು,"ಗುರುದೇವ್ ಶ್ರೀ ಶ್ರೀ ರವಿ ಶಂಕರ್ ದಿವಸ" ಎಂದು ಅಧಿಕೃತವಾಗಿ ಘೋಷಿಸುವ ಮೂಲಕ ಅವರನ್ನು ಗೌರವಿಸಿದವು. ಬೃಹತ್ ಸಮುದಾಯದ ನಾಯಕರು, ವಿದ್ಯಾರ್ಥಿಗಳು ಮತ್ತು ಕುಟುಂಬಗಳು ಸಾಮೂಹಿಕ ಧ್ಯಾನ ಮತ್ತು ಮನನಕ್ಕಾಗಿ ಗುರುದೇವರೊಡನೆ ಒಂದಾಗಿ ಸೇರಿದರು.
ರವಿಶಂಕರ್ ಗುರೂಜಿ ಅವರ ಅಸಾಧಾರಣವಾದ ಪಯಣದಲ್ಲಿ ಈ ಪ್ರಶಸ್ತಿಯು ಮತ್ತೊಂದು ಮುಖ್ಯವಾದ ಮೈಲಿಗಲ್ಲಾಗಿದೆ. ಜಗತ್ತು ಕೃತಕ ಬುದ್ಧಿಮತ್ತೆಯಿಂದ, ತಾಂತ್ರಿಕ ಪರಿವರ್ತನೆಯಿಂದ ನಾಗಾಲೋಟವಾಗಿ ಓಡುತ್ತಿರುವಾಗಲೂ, ಆಂತರಿಕ ಶಾಂತಿ, ಕರುಣೆಯಿಂದ ಕೂಡಿದ ಕಾರ್ಯ ಮತ್ತು ಅಂತರಧಾರ್ಮಿಕ ಸಂವಾದವು ವಿಭಜಿತವಾದ ಪರಿಸ್ಥಿತಿಗಳಿಗೆ ಸೇತುವೆಯನ್ನು ನಿರ್ಮಿಸಬಲ್ಲವು ಎಂಬುದನ್ನು ರವಿಶಂಕರ್ ಗುರೂಜಿ ಕಾರ್ಯಗಳು ತೋರಿಸಿಕೊಟ್ಟಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us