150 ದೇಶಗಳಿಂದ 1.21 ಕೋಟಿ ಜನರು ಭಾಗಿ: ದಿ ಆರ್ಟ್ ಆಫ್ ಲಿವಿಂಗ್ ಸಹಯೋಗದೊಂದಿಗೆ ಗ್ಯಾಲಪ್ ಜಾಗತಿಕ ಕಲ್ಯಾಣ ಅಧ್ಯಯನಕ್ಕೆ ಚಾಲನೆ

ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ವಿಶ್ವದ 150 ದೇಶಗಳ 1.21 ಕೋಟಿ ಜನರು ಸೇರಿ ಸಾಮೂಹಿಕ ಧ್ಯಾನದಲ್ಲಿ ಭಾಗಿಯಾಗಿದ್ದರು. ವಿಶ್ನ ಧ್ಯಾನ ದಿನದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

author-image
Chandramohan
MASS MEDITATION BY ART OF LIVING

ಆರ್ಟ್ ಆಫ್ ಲಿವಿಂಗ್ ನಿಂದ ಸಾಮೂಹಿಕ ಧ್ಯಾನ ಆಯೋಜನೆ

Advertisment
  • ಆರ್ಟ್ ಆಫ್ ಲಿವಿಂಗ್ ನಿಂದ ಸಾಮೂಹಿಕ ಧ್ಯಾನ ಆಯೋಜನೆ


ಆರ್ಟ್ ಆಫ್ ಲಿವಿಂಗ್‌ನ  ಶ್ರೀ ರವಿಶಂಕರರ ನೇತೃತ್ವದಲ್ಲಿ 150 ದೇಶಗಳಿಂದ 1.21 ಕೋಟಿಗೂ ಹೆಚ್ಚಿನ ಜನರು ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಮೂಹಿಕ ಧ್ಯಾನದಲ್ಲಿ ಭಾಗವಹಿಸಿದರು. ತಜ್ಞರು ಇದನ್ನು ಜಾಗತಿಕ ಕಲ್ಯಾಣಕ್ಕೆ ಹೊಸ ಆಯಾಮವನ್ನು ನೀಡುವ ಮಹತ್ವದ ಕ್ಷಣವೆಂದು ಹೇಳುತ್ತಿದ್ದಾರೆ. ವಿಶ್ವ ಧ್ಯಾನ ದಿನದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೆಚ್ಚುತ್ತಿರುವ ಆತಂಕ, ಒತ್ತಡ, ಸಂಘರ್ಷ ಮತ್ತು ಮಾನಸಿಕ ಆರೋಗ್ಯ ಸವಾಲುಗಳ ನಡುವೆಯೇ ಮಾನವಕುಲ ಹುಡುಕುತ್ತಿರುವ ಶಾಂತಿ ಮತ್ತು ಸಹನಶೀಲತೆಯನ್ನು ಈ ಅಭ್ಯಾಸದ ಮೂಲಕ ಕಂಡುಕೊಳ್ಳುವ ಬಗೆಯನ್ನು ಇದು ಸ್ಪಷ್ಟವಾಗಿ ಸಾಬೀತುಪಡಿಸಿತು.

ಜಗತ್ತಿನಲ್ಲಿ ಮಾನಸಿಕ ನೆಮ್ಮದಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ನೆಲೆಗೊಳಿಸುವ ಉದ್ದೇಶದಿಂದ, 2024ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 21ನ್ನು 'ವಿಶ್ವ ಧ್ಯಾನ ದಿನ'ವೆಂದು ಅಧಿಕೃತವಾಗಿ ಅಂಗೀಕರಿಸಿತು. ಈ ವರ್ಷದ ಕಾರ್ಯಕ್ರಮವು, ನ್ಯೂಯಾರ್ಕ್ ನಗರದ ವಿಶ್ವಸಂಸ್ಥೆಯ ಟ್ರಸ್ಟೀಶಿಪ್ ಕೌನ್ಸಿಲ್ ಸಭಾಂಗಣದಲ್ಲಿ ನಡೆಯಿತು. ರವಿಶಂಕರ್ ಗುರೂಜಿ ಅವರ ನೇತೃತ್ವದಲ್ಲಿ ನಡೆದ ಧ್ಯಾನದ ಕಾರ್ಯಕ್ರಮದಲ್ಲಿ ರಾಜತಾಂತ್ರಿಕರು ಮತ್ತು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಧ್ಯಾನದಲ್ಲಿ, ಭಾರತದ ಗ್ರಾಮೀಣ-ನಗರ ಪ್ರದೇಶಗಳೂ ಸೇರಿದಂತೇ, ಆಫ್ರಿಕಾ, ಯುರೋಪ್, ಏಷ್ಯಾ, ಅಮೆರಿಕಾ ಹಾಗೂ ಆಸ್ಟ್ರೇಲಿಯಾ ಖಂಡಗಳಿಂದಲೂ ಜನರು ಆನ್ಲೈನ್ ಮೂಲಕ ಭಾಗವಹಿಸಿದ್ದರು. 

ಗದ್ದಲದಿಂದ ಕೂಡಿದ ದೊಡ್ಡ ಸಮಾವೇಶ ಅಥವಾ ಉತ್ಸವಗಳಂತೆ ಅಲ್ಲದೇ, ಈ ಕಾರ್ಯಕ್ರಮವು ಗಾಢವಾದ ಮೌನದ ಮಾರ್ದನಿಯಾಗಿತ್ತು. 60ಕ್ಕೂ ಅಧಿಕ ದೇಶಗಳಿಂದ ವಿದ್ಯಾರ್ಥಿಗಳು, ವೃತ್ತಿಪರರು, ರೈತರು, ಹಾಗೂ ಕಾರಾಗೃಹ ಕೈದಿಗಳವರೆಗೆ ವಿಭಿನ್ನ ಹಿನ್ನೆಲೆಯ ಜನರು ಒಂದೇ ಸಮಯದಲ್ಲಿ ಧ್ಯಾನದ ಅನುಭವಕ್ಕೆ ಸಾಕ್ಷಿಯಾಗಿದ್ದು ಇದರ ವಿಶೇಷತೆ.

ವಿಶ್ವಾದ್ಯಂತ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಜಾಗತಿಕ ಸಂಸ್ಥೆಯಾದ ಗ್ಯಾಲಪ್ ಮತ್ತು ದಿ ಆರ್ಟ್ ಆಫ್ ಲಿವಿಂಗ್ ಸಂಯುಕ್ತವಾಗಿ ಧ್ಯಾನ ಮತ್ತು ಸಮಾಜ ಕಲ್ಯಾಣ ಕುರಿತಾದ ಜಾಗತಿಕ ಅಧ್ಯಯನವನ್ನು  ಪ್ರಾರಂಭಿಸಿದ್ದು, ಈ ಜಾಗತಿಕ ಚಳವಳಿಗೆ ಮತ್ತೊಂದು ಮಹತ್ವದ ಆಯಾಮವನ್ನು ನೀಡಿತು. 
 
ವಿಶ್ವ ಧ್ಯಾನ ದಿನದ ಮುನ್ನ ಘೋಷಿಸಲಾದ ಈ ಸಹಕಾರದಡಿಯಲ್ಲಿ, ಗ್ಯಾಲಪ್ ತನ್ನ ಪ್ರಸಿದ್ಧ 'ಗ್ಯಾಲಪ್ ವರ್ಲ್ಡ್ ಪೋಲ್' ನಲ್ಲಿ ಧ್ಯಾನಕ್ಕೆ ಸಂಬಂಧಿಸಿದ ಹೊಸ ಪ್ರಶ್ನೆಗಳನ್ನು ಸೇರಿಸಲಿದೆ. ಇದರಿಂದ ಮಾನಸಿಕ ಆರೋಗ್ಯ, ಜೀವನ ಮೌಲ್ಯಮಾಪನ ಹಾಗೂ ಸಾಮಾಜಿಕ ಕಲ್ಯಾಣಕ್ಕೆ ಧ್ಯಾನದ ಪಾತ್ರವನ್ನು ವಿಶ್ಲೇಷಿಸಲಿದೆ. ಇದುವರೆಗೆ ಲಭ್ಯವಿರದ ಮಹತ್ತರ ದತ್ತಾಂಶ ಇದರಿಂದ ಸೃಷ್ಟಿಯಾಗಲಿದೆ.

MASS MEDITATION BY ART OF LIVING (1)




ಗ್ಯಾಲಪ್‌ನ ಇತ್ತೀಚಿನ ಸಂಶೋಧನೆಗಳು, ಜಾಗತಿಕ ಮಟ್ಟದಲ್ಲಿ ಒತ್ತಡ ಮತ್ತು ಚಿಂತೆಯಂತಹ ನಕಾರಾತ್ಮಕ ಭಾವನೆಗಳು ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವುದನ್ನು ತೋರಿಸುತ್ತವೆ. ಇದರಿಂದ ಮಾನಸಿಕ ಆರೋಗ್ಯ ಸುಧಾರಣಾ ಪರಿಹಾರಗಳ ಅಗತ್ಯತೆ ತೀವ್ರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಈ ಜಾಗತಿಕ ವೇದಿಕೆಯಲ್ಲಿ, ಭಾರತದ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಪರಂಪರೆ ಅಕ್ಷರಶಃ ಕೇಂದ್ರಸ್ಥಾನದಲ್ಲಿತ್ತು. ಇದು ಕೇವಲ ತತ್ತ್ವಮಟ್ಟದಲ್ಲಷ್ಟೇ ಅಲ್ಲದೇ, ಸಾಕ್ಷ್ಯಾಧಾರಿತ, ಅನುಷ್ಠಾನಯೋಗ್ಯ ಸಾಧನವಾಗಿ ಪ್ರಸ್ತುತಗೊಂಡಿತು. ಆತಂಕ, ದಣಿವು ಮತ್ತು ಸಾಮಾಜಿಕ ಒತ್ತಡಗಳಿಗೆ ಪರಿಹಾರ ಹುಡುಕುತ್ತಿರುವ ಕೋಟ್ಯಾಂತರ ಜನರಿಗೆ ಅದು ಮಾರ್ಗದರ್ಶನ ನೀಡಿತು.

ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಗುರುದೇವ ಶ್ರೀ ಶ್ರೀ ರವಿ ಶಂಕರರು ಹೇಳಿದಂತೆ, ಈಗ ಧ್ಯಾನವೆನ್ನುವುದು ವಿಲಾಸಿತನವಲ್ಲ; ಅದು ಅಗತ್ಯತೆ. ಈ ಮಾತು ಇಂದು ರಾಜತಾಂತ್ರಿಕ ವಲಯಗಳಿಂದ ಹಿಡಿದು ನೆಲಮಟ್ಟದ ಸಮುದಾಯಗಳವರೆಗೆ ವ್ಯಾಪಕವಾಗಿ ಪ್ರತಿಧ್ವನಿಸುತ್ತಿದೆ.

ಈ ಅಧ್ಯಯನದ ಜಾಗತಿಕ ಫಲಿತಾಂಶಗಳು ಡಿಸೆಂಬರ್ 2026ರಲ್ಲಿ ಪ್ರಕಟವಾಗಲಿದ್ದು, ಸಾರ್ವಜನಿಕ ನೀತಿ, ಶಿಕ್ಷಣ ಹಾಗೂ ಕಾರ್ಯಕ್ಷೇತ್ರದಲ್ಲಿ ಫಲಿತಾಂಶಗಳು ಉತ್ತಮಗೊಳ್ಳುವ ನಿರೀಕ್ಷೆಯಿದೆ.

ಇದಕ್ಕೂ ಮುನ್ನ, ಡಿಸೆಂಬರ್ 19ರಂದು ಭಾರತ, ಶ್ರೀಲಂಕಾ, ಅಂಡೋರಾ, ಮೆಕ್ಸಿಕೋ, ನೇಪಾಳ ಸೇರಿದಂತೆ ಹಲವು ಸದಸ್ಯ ರಾಷ್ಟ್ರಗಳ ಶಾಶ್ವತ ಪ್ರತಿನಿಧಿಗಳು ಮತ್ತು ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಸೇರಿ ಈ ಪ್ರಾಚೀನ ಧ್ಯಾನಾಭ್ಯಾಸವನ್ನು ನಡೆಸಿದರು. ಜಾಗತಿಕ ಸಾಮಾಜಿಕ, ರಾಜಕೀಯ ಮತ್ತು ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸುವಲ್ಲಿ ಧ್ಯಾನದ ಪ್ರಸ್ತುತತೆಯನ್ನು ಅವರು ಹಂಚಿಕೊಂಡರು. ಈ ಸಂದರ್ಭದಲ್ಲಿ ಗುರುದೇವರ ಮುಖ್ಯ ಭಾಷಣ ಮತ್ತು ಮಾರ್ಗದರ್ಶಿತ ಧ್ಯಾನವು, ಭಾರತದ ಪರಂಪರೆಯಲ್ಲಿನ ಈ ಅಭ್ಯಾಸವನ್ನು ಜಾಗತಿಕ ರಾಜತಾಂತ್ರಿಕತೆಯಲ್ಲಿ  ಹೃದಯಸ್ಪರ್ಶಿಯಾಗಿ ತಲುಪಿಸಿದ ಮಹತ್ವದ ಕ್ಷಣವಾಯಿತು.

MASS MEDITATION BY ART OF LIVING (2)





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mass meditation organise by art of living at United Nation
Advertisment