/newsfirstlive-kannada/media/media_files/2025/09/11/paris-2025-09-11-11-00-07.jpg)
ಪ್ಯಾರಿಸ್‌ನಲ್ಲಿ ಬೃಹತ್ ಪ್ರತಿಭಟನೆ
ನೇಪಾಳದಲ್ಲಿ ಹಿಂಸಾಚಾರದ ಕಾವು ಇನ್ನೂ ಕಡಿಮೆಯಾಗಿಲ್ಲ. ಹಿಮಾಲಯ ಬೀಡು ಇನ್ನೂ ಧಗಧಗ ಅಂತಿದೆ. ಈ ಬೆನ್ನಲ್ಲೇ ಫ್ರೆಂಚ್ ರಾಜಧಾನಿ ಪ್ಯಾರಿಸ್ ಹೊತ್ತಿ ಉರಿಯುತ್ತಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸರ್ಕಾರದ ವಿರುದ್ಧ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿವೆ. ಸುಂದರ ಪ್ಯಾರಿಸ್ ಹಿಂಸಾಚಾರದಲ್ಲಿ ಧಗಧಗಿಸುತ್ತಿದೆ. ಬ್ಲಾಕ್ ಎವೆರಿಥಿಂಗ್ ಅಂದ್ರೆ ಎಲ್ಲವನ್ನೂ ತಡೆಯಿರಿ ಅನ್ನೋ ಆಂದೋಲನವು ಅಕ್ಷರಶಃ ಹಿಂಸಾಚಾರಕ್ಕೆ ತಿರುಗಿದೆ.
ಬ್ಲಾಕ್ ಎವೆರಿಥಿಂಗ್ ಆಂದೋಲನ
ಬ್ಲಾಕ್ ಎವೆರಿಥಿಂಗ್ ಆಂದೋಲನ ಮೂಲಕ ಹೆಚ್ಚಿನ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ರಾಜಧಾನಿ ಪ್ಯಾರಿಸ್ ಸೇರಿದಂತೆ ಹಲವು ನಗರಗಳ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಬೆಂಕಿ ಹಚ್ಚಿದ್ದು ಎಲ್ಲೆಲ್ಲೂ ಅಗ್ನಿ ಧಗಧಗಿಸುತ್ತಿದೆ. ರಸ್ತೆಗಳನ್ನು ತಡೆದು, ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ತಡೆಯಲು ಯತ್ನಿಸಿದ ಪೊಲೀಸರ ಜೊತೆಗೂ ವಾಗ್ವಾದಕ್ಕಿಳಿದು ಮಾರಾಮಾರಿ ನಡೆಸಿದ್ದಾರೆ. ಪ್ರತಿಭಟನೆ ನಡೆಸಿದ 300ಕ್ಕೂ ಅಧಿಕ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನಾಕಾರರು ಪ್ಯಾರಿಸ್‌ನ ಬೀದಿಗಳನ್ನು ಮುಚ್ಚಿದ್ದು ಅನೇಕ ಸ್ಥಳಗಳಲ್ಲಿ ಬೆಂಕಿ ಹಚ್ಚಲು ಪ್ರಾರಂಭಿಸಿದ್ದಾರೆ. 80 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಅಖಾಡಕ್ಕೆ ಇಳಿಸಲಾಗಿದ್ದು ಬ್ಯಾರಿಕೇಡ್‌ಗಳನ್ನು ಮುರಿದ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ರೆನ್ನೆಸ್‌ನ ಪಶ್ಚಿಮ ಭಾಗದಲ್ಲಿ ಬಸ್‌ಗೆ ಬೆಂಕಿ ಹಚ್ಚಿದರಿಂದ ಸ್ಥಳೀಯವಾಗಿ ವಿದ್ಯುತ್ ಕಡಿತಗೊಂಡು ರೈಲುಗಳೂ ಕೂಡ ಬಹುತೇಕ ಸ್ತಬ್ದವಾಗಿವೆ.
ಪ್ಯಾರಿಸ್ ಹಿಂಸಾಚಾರ!
ಸರ್ಕಾರದ ಬಜೆಟ್ ಕಡಿತದಂತ ಯೋಜನೆಗಳು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಂತಹ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ಯಾರಿಸ್‌ನಲ್ಲಿ ಬೆಂಕಿ ಹಚ್ಚುವುದಕ್ಕೂ ಮೊದಲು, ಎಲ್ಲವನ್ನೂ ನಿರ್ಬಂಧಿಸಿ ಆಂದೋಲನವನ್ನು ಸಾಮಾಜಿಕ ಮಾಧ್ಯಮದಲ್ಲಿ ಶುರುಮಾಡಲಾಯ್ತು. ಫ್ರೆಂಚ್ ಪ್ರಧಾನಿ ಬೇರೂ ತಮ್ಮ ಬಜೆಟ್‌ನಲ್ಲಿ 44 ಬಿಲಿಯನ್ ಯುರೋ ಅಂದ್ರೆ ಸುಮಾರು 4 ಲಕ್ಷ ಕೋಟಿ ರೂಪಾಯಿಯನ್ನು ಉಳಿಸುವ ಯೋಜನೆ ಮಂಡಿಸಿದ್ದರು.
ಜೊತೆಗೆ 2 ಸರ್ಕಾರಿ ರಜೆಗಳನ್ನು ರದ್ದುಗೊಳಿಸಿದ್ದರು. ಈ ನಡೆ ತೀವ್ರ ಟೀಕೆಗೆ ಒಳಗಾಗಿದ್ದು ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಮಾತ್ರವಲ್ಲದೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರಕ್ಷಣಾ ಸಚಿವ ಲೆಕೋರ್ನುರನ್ನು ನೂತನ ಪ್ರಧಾನಿಯಾಗಿ ನೇಮಿಸಿದರು. ಇಷ್ಟಾದ್ರೂ ಪ್ರತಿಭಟನೆಗಳು ತೀವ್ರಗೊಂಡಿವೆ.
ಒಟ್ಟಾರೆ ಕೆಲವೇ ತಿಂಗಳಲ್ಲೇ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್, ನಾಲ್ವರು ಪ್ರಧಾನಿಗಳನ್ನ ಬದಲಾಯಿಸಿ 5ನೇ ಪ್ರಧಾನಿಯಾಗಿ ಲೆಕೋರ್ನುರನ್ನು ನೇಮಿಸಿದ್ದಾರೆ. ಕೆಲ ಯೋಜನೆಗಳನ್ನು ಬಲಪಡಿಸಿದ್ದಕ್ಕೆ ಜನರು ರೊಚ್ಚಿಗೆದ್ದಿದ್ದಾರೆ. ಸದ್ಯ ಪ್ರಧಾನಿ ಬದಲಾದ ಮೇಲಾದ್ರೂ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆಯುತ್ತಾರಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ