/newsfirstlive-kannada/media/post_attachments/wp-content/uploads/2025/03/IPL_2025-1.jpg)
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚು ಆಗುತ್ತಿರುವ ಕಾರಣ 2025ರ ಐಪಿಎಲ್ ಸೀಸನ್- 18ರ ಉಳಿದ ಪಂದ್ಯಗಳನ್ನು ಒಂದು ವಾರದ ಕಾಲ ಮುಂದೂಡಲಾಗಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಮಾಹಿತಿ ನೀಡಿದೆ.
ಐಪಿಎಲ್ ಕೊನೆ ಹಂತಕ್ಕೆ ಬಂದಿದ್ದು ಪ್ಲೇ ಆಫ್ ರೇಸ್ ನಡೆಯುತ್ತಿರುವಾಗಲೇ ಎರಡು ದೇಶಗಳ ನಡುವೆ ಘರ್ಷಣೆ ತೀವ್ರಗೊಂಡಿದೆ. ಇದರಿಂದ ಬಿಸಿಸಿಐ ಒಂದು ವಾರ ಕಾಲ ಪಂದ್ಯಗಳನ್ನು ಮುಂದೂಡಿಕೆ ಮಾಡಿದೆ. ಮುಂದಿನ ಪಂದ್ಯಗಳು ನಡೆಯುವ ವೇಳಾಪಟ್ಟಿ, ಹೊಸ ಸ್ಥಳಗಳ ಬಗ್ಗೆ ಶೀಘ್ರದಲ್ಲೇ ಬಿಸಿಸಿಐ ಮಾಹಿತಿ ನೀಡಲಿದೆ ಎಂದು ಹೇಳಲಾಗಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾ ಸ್ಟೇಡಿಯಂನಲ್ಲಿ ಮೇ 8 ರಂದು ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿ ಆಗಿದ್ದವು. ಈ ವೇಳೆ ಜಮ್ಮು ಮತ್ತು ಪಠಾಣ್‌ಕೋಟ್‌ನ ಪ್ರದೇಶಗಳ ಬಳಿ ವಾಯು ದಾಳಿಯ ಎಚ್ಚರಿಕೆ ಬಂದ ಹಿನ್ನೆಲೆಯಲ್ಲಿ ಕೂಡಲೇ ಪಂದ್ಯವನ್ನು ರದ್ದು ಮಾಡಿ ಪ್ರೇಕ್ಷಕರನ್ನು ಸ್ಟೇಡಿಯಂನಿಂದ ಕಳುಹಿಸಲಾಗಿತ್ತು. ಜೊತೆಗೆ ಎರಡು ತಂಡದ ಆಟಗಾರರು ಹಾಗೂ ಎಲ್ಲ ಸಿಬ್ಬಂದಿ ವರ್ಗ ಸೇರಿ ಒಟ್ಟು 300 ಜನರನ್ನು ವಂದೇ ಭಾರತ್ ರೈಲಿನಲ್ಲಿ ದೆಹಲಿಗೆ ಸ್ಥಳಾಂತರ ಮಾಡಲಾಗಿತ್ತು.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ.. ಫೋಟೋಸ್ ಇಲ್ಲಿವೆ
ಸದ್ಯ ಈ ಸೀಸನ್ನಲ್ಲಿ ರದ್ದು ಆಗಿರುವ ಮ್ಯಾಚ್ ಸೇರಿ ಒಟ್ಟು 58 ಪಂದ್ಯಗಳು ಪೂರ್ಣಗೊಂಡಿವೆ. 12 ಲೀಗ್ ಹಂತದ ಪಂದ್ಯಗಳು ಹಾಗೂ 4 ಪ್ಲೇ ಆಫ್ ಮ್ಯಾಚ್ ಸೇರಿದಂತೆ ಕೊಲ್ಕತ್ತಾದಲ್ಲಿ ನಡೆಯುವ ಫೈನಲ್ ಪಂದ್ಯ ಬಾಕಿ ಉಳಿದಿದ್ದವು. ಪ್ಲೇ ಆಫ್ ರೇಸ್‌ನಲ್ಲಿ ನಿರ್ಣಾಯಕ ಸಮಯದಲ್ಲಿ ಲೀಗ್ ಪಂದ್ಯಗಳನ್ನು ಮುಂದೂಡಲಾಗಿದೆ. ಅಂತಿಮ 4ರ ಹಂತ ಪ್ರವೇಶಿಸಲು 7 ತಂಡಗಳ ನಡುವೆ ಸ್ಪರ್ಧೆ ಇದೆ.
ಪಾಯಿಂಟ್ ಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ 16 ಅಂಕಗಳಿಂದ ಮೊದಲ ಸ್ಥಾನದಲ್ಲಿದ್ರೆ, ಆರ್ಸಿಬಿ ಕೂಡ 16 ಅಂಕಗಳಿಂದ 2ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 3ನೇ ಸ್ಥಾನದಲ್ಲಿದ್ದು, ಮುಂಬೈ ಇಂಡಿಯನ್ಸ್ 4ನೇ ಸ್ಥಾನದಲ್ಲಿದೆ. ಇನ್ನುಳಿದಂತೆ ಚೆನ್ನೈ, ರಾಜಸ್ಥಾನ್ ಹಾಗೂ ಹೈದ್ರಾಬಾದ್ ತಂಡಗಳು ಅಧಿಕೃತವಾಗಿ ಟೂರ್ನಿಯಿಂದ ಹೊರ ಬಿದ್ದಿವೆ. ಇದರಿಂದ ಒಟ್ಟು 7 ತಂಡಗಳ ನಡುವೆ ಪ್ಲೇ ಆಫ್ ರೇಸ್ ಇದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ