/newsfirstlive-kannada/media/post_attachments/wp-content/uploads/2025/05/IPL_RR_DC_KKR.jpg)
ಐಪಿಎಲ್ ಅಖಾಡದಲ್ಲಿ ಇವರ ಆಟ ನೋಡಿ ಎದುರಾಳಿ ತಂಡಗಳಿಗೆ ನಡುಕ ಶುರುವಾಗಿತ್ತು. ಫ್ಯಾನ್ಸ್ ಡಬಲ್ ಮನರಂಜನೆಯ ಸಿಗುತ್ತೆ ಅಂತಾ ಫುಲ್ ಎಕ್ಸೈಟ್ ಆಗಿದ್ದರು. ಆದ್ರೆ, ಟೂರ್ನಿಯ ಅಂತ್ಯಕ್ಕೆ ಬಂದ್ಮೇಲೆ ಗೊತ್ತಾಗಿರೋದು, ಇವರು ಒನ್ ಮ್ಯಾಚ್ ಕಾ ಹೀರೋಗಳು ಅನ್ನೋದು. ಫಸ್ಟ್ ಹಾಫ್ನಲ್ಲಿ ಮಂಕಾದ ಇವ್ರು ಸೆಕೆಂಡ್ ಹಾಫ್ನಲ್ಲಾದ್ರೂ ಸಿಡಿದೇಳ್ತಾರಾ ಅನ್ನೋ ಕುತೂಹಲ ಸದ್ಯ ಕ್ರಿಕೆಟ್ ವಲಯದಲ್ಲಿದೆ.
ಸ್ಮಾಲ್ ಬ್ರೇಕ್ನ ಬಳಿಕ ಸೀಸನ್-18ರ ಐಪಿಎಲ್ ಪುನರಾರಂಭಕ್ಕೆ ಕೌಂಟ್ಡೌನ್ ಆರಂಭವಾಗಿದೆ. ಈ ಸೀಸನ್ನಲ್ಲಿ ಸಿಕ್ಕ ಅವಕಾಶದಲ್ಲಿ ಕೆಲ ಯುವ ಆಟಗಾರರು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಆದ್ರೆ, ಕೆಲ ಆಟಗಾರರು ಮಾತ್ರ ಒನ್ ಮ್ಯಾಚ್ ಕಾ ಹೀರೋಗಳಾಗಿ ಫ್ರಾಂಚೈಸಿಯನ್ನ ಬಕರಾ ಮಾಡಿದ್ದಾರೆ.
ವೈಲೆಂಟ್ ಸೆಂಚುರಿ ಬಳಿಕ ಇಶನ್ ಫುಲ್ ಸೈಲೆಂಟ್
ಹೈದ್ರಾಬಾದ್ ಪರ ಡೆಬ್ಯೂ ಪಂದ್ಯದಲ್ಲಿ ಘರ್ಜಸಿದ್ದ ಇಶನ್ ಕಿಶನ್, ರಾಜಸ್ತಾನ್ ರಾಯಲ್ಸ್ ಎದುರು ಸೆಂಚುರಿ ಸಿಡಿಸಿದ್ರು. ಇಶನ್ ವೈಲೆಂಟ್ ಆಟಕ್ಕೆ ರಾಜಸ್ತಾನ್ ಥಂಡಾ ಹೊಡೆದಿತ್ತು. ಇಶಾನ್ ಮೇಲಿನ ನಿರೀಕ್ಷೆಯನ್ನೂ ಡಬಲ್ ಮಾಡಿತ್ತು. ಆದ್ರೆ, ಆ ಬಳಿಕ ಕಿಶನ್, ಕಂಪ್ಲೀಟ್ ಫ್ಲಾಪ್ ಆದ್ರು. ಅದು ಯಾವ ಮಟ್ಟಕ್ಕಂದ್ರೆ, ಮೊದಲ ಪಂದ್ಯದಲ್ಲಿ 106 ರನ್ ಗಳಿಸಿದ್ದ ಇಶನ್, ಆ ಬಳಿಕ ಆಡಿದ 10 ಪಂದ್ಯಗಳಿಂದ ಗಳಿಸಿದ್ದು ಜಸ್ಟ್ 90 ರನ್.
ಒಂದೇ ಮ್ಯಾಚ್ಗೆ ಕರುಣ್ ನಾಯರ್ ಸುಸ್ತು..!
ಸಾಲಿಡ್ ಟಚ್ನಲ್ಲಿದ್ದ ಕನ್ನಡಿಗ ಕರುಣ್ ನಾಯರ್, ಮುಂಬೈ ಎದುರು ಅಬ್ಬರಿಸಿ ಬೊಬ್ಬೆರೆದಿದ್ದರು. ಜಸ್ಪ್ರೀತ್ ಬೂಮ್ರಾಯಂತಾ ಘಟಾನಿಘಟಿ ಬೌಲರ್ಗೆ ಚಿಂದಿ ಉಡಾಯಿಸಿದ್ದ ಕರುಣ್ ನಾಯರ್, ಮೊದಲ ಪಂದ್ಯದಲ್ಲೇ 89 ರನ್ ಚಚ್ಚಿದರು. ಕರುಣ್ ಆಟ ನೋಡಿದ ಎಲ್ಲರೂ ಕೊಂಡಾಡಿದ್ದರು. ಆದ್ರೆ, ಕರುಣ್ ನಾಯರ್ರ ನಂತರದ 6 ಪಂದ್ಯಗಳ ಆಟಕ್ಕೆ ಡೆಲ್ಲಿ ಕಂಗಾಲ್ ಆಯ್ತು. ನಂತರದ 6 ಪಂದ್ಯಗಳಿಂದ ಕರುಣ್ ಗಳಿಸಿದ್ದು ಕೇವಲ 65 ರನ್ ಮಾತ್ರ.
ವೆಂಕಿ, ಡಿ ಕಾಕ್ ಆರ್ಭಟ ಒಂದು ಪಂದ್ಯಕ್ಕೆ ಸೀಮಿತ
ಕ್ವಿಂಟನ್ ಡಿಕಾಕ್, ವೆಂಕಟೇಶ್ ಅಯ್ಯರ್.. ಇವರಿಬ್ರು ಕೊಲ್ಕತ್ತಾಗೆ ನೆರವಾಗಿದಕ್ಕಿಂತ ಮುಳುವಾಗಿದ್ದೆ ಹೆಚ್ಚು. ರಾಜಸ್ತಾನ್ ರಾಯಲ್ಸ್ ಎದುರು ರೌದ್ರವತಾರ ಪ್ರದರ್ಶಿಸಿದ್ದ ಕ್ವಿಂಟನ್, ಅಜೇಯ 97 ರನ್ ಗಳಿಸಿದರು. ಮ್ಯಾಚ್ ವಿನ್ನರ್ ಆಗಿ ಮೆರೆದಾಡಿದ್ದರು. ಅದೇ ಮ್ಯಾಚ್ ಕೊನೆ. ಆ ಬಳಿಕ ಅಟ್ಟರ್ ಪ್ಲಾಫ್ ಆದ ಕ್ವಿಂಟನ್ ಡಿ ಕಾಕ್, ಉಳಿದ 6 ಪಂದ್ಯಗಳಿಸಿದ್ದು 46 ರನ್ ಮಾತ್ರ.
ಇದು ಕ್ವಿಂಟನ್ ಡಿಕಾಕ್ ಕಥೆಯಾದ್ರೆ, ಇದೇ ತಂಡದ 23 ಕೋಟಿ ಒಡೆಯ ವೆಂಕಟೇಶ್ ಅಯ್ಯರ್ದ್ದು ಮತ್ತೊಂದು ಕಥೆ. ಆರಂಭದಿಂದಲೇ ವೈಫಲ್ಯ ಅನುಭವಿಸಿದ್ದ ಈತ, ಸನ್ ರೈಸರ್ಸ್ ಹೈದ್ರಾಬಾದ್ ಎದುರು 60, ಲಕ್ನೋ ಎದುರು 45 ರನ್ ಗಳಿಸಿದರು. ಆ ಆಟದ ಬಳಿಕ ಕಮ್ಬ್ಯಾಕ್ ಮಾಡಿದ್ರು ಅಂತಾ ಫ್ಯಾನ್ಸ್ ಅನ್ಕೊಂಡಿದ್ರು. ಆದ್ರೆ, ಆಗಿದ್ದೇ ಬೇರೆ. ವೆಂಕಿ ಅಯ್ಯರ್ ತಮ್ಮ ಹಳೆ ಆಟ ಮುಂದುವರೆಸಿ ಕೊನೆ ಪಂದ್ಯದಲ್ಲಿ ಬೆಂಚ್ ಕಾದ್ರು.
ರಾಜಸ್ತಾನ್ಗೆ ಹೊರೆಯಾದ ಹೆಟ್ಮೆಯರ್, ಜುರೇಲ್.!
ರಾಜಸ್ತಾನ್ ರಾಯಲ್ಸ್ ಅಟ್ಟರ್ ಫ್ಲಾಫ್ ಪರ್ಫಾಮೆನ್ಸ್ಗೆ ಧ್ರುವ್ ಜುರೇಲ್, ಶಿಮ್ರಾನ್ ಹೆಟ್ಮೆಯರ್ ಆಟ ಪ್ರಮುಖ ಕಾರಣ ಅಂದ್ರೆ ತಪ್ಪಾಗಲ್ಲ. ಫಿನಿಶರ್ ರೋಲ್ ನಿಭಾಯಿಸಬೇಕಿದ್ದ ಧ್ರುವ್ ಜುರೇಲ್, ಆರ್ಸಿಬಿ ಎದುರು ಬೆಂಗಳೂರಿನಲ್ಲಿ ಸಿಡಿಸಿದ 47 ರನ್ ಬಿಟ್ರೆ, ಉಳಿದ್ಯಾವ ಮ್ಯಾಚ್ನಲ್ಲಿ ಹೇಳಿಕೊಳ್ಳುವ ಆಟವಾಡಲಿಲ್ಲ.
ಇದನ್ನೂ ಓದಿ: RCBಯಲ್ಲಿ ಈ ಇಬ್ಬರ ಬ್ಯಾಟಿಂಗ್, ಬೌಲಿಂಗ್ ಇಂಪಾರ್ಟೆಂಟ್.. ಟ್ರೋಫಿ ಗೆಲ್ಲಲು ಇವರೇ ಕೀ ಪ್ಲೇಯರ್ಸ್.!
ಇನ್ನು ಶಿಮ್ರಾನ್ ಹೆಟ್ಮೆಯರ್, ಗುಜರಾತ್ ಎದುರು ಅರ್ಧಶತಕ ಸಿಡಿಸಿದ್ದು ಬಿಟ್ರೆ, ಉಳಿದೆಲ್ಲ ಪಂದ್ಯಗಳಲ್ಲಿ ನೀಡಿದ್ದು ಅಟ್ಟರ್ ಪ್ಲಾಫ್ ಪರ್ಫಾಮೆನ್ಸ್.! ಅರ್ಧಶತಕ ಹೊರತು ಪಡಿಸಿದ್ರೆ ಉಳಿದ 11 ಪಂದ್ಯಗಳಿಂದ ಗಳಿಸಿದ್ದು ಕೇವಲ 164 ರನ್ ಮಾತ್ರ.
ಇವ್ರೇ ಅಲ್ಲ.! ಚೆನ್ನೈ ತಂಡದ ರಚಿನ್ ರವೀಂದ್ರ, ಶಿವಂ ದುಬೆ ಕೂಡ ಇದೇ ಸಾಲಿಗೆ ಸೇರಿದವ್ರೇ ಆಗಿದ್ದಾರೆ. ಟೂರ್ನಿಯಲ್ಲಿ ಅಬ್ಬರಿಸುವ ನಿರೀಕ್ಷೆ ಮೂಡಿಸಿದ ಇವರ ವೀರಾವೇಶ ಕೆಲವೇ ಮ್ಯಾಚ್ಗೆ ಸೀಮಿತವಾಗಿದ್ದು, ಫ್ರಾಂಚೈಸಿಗಳಿಗೆ ಕಂಟಕವಾಗಿ ಪರಿಣಮಿಸಿದ್ದು ಸುಳ್ಳಲ್ಲ. ಯುದ್ಧದ ಕಾರ್ಮೋಡ ಕವಿದಿದ್ರಿಂದ ಈ ಎಲ್ಲಾ ಆಟಗಾರರಿಗೆ ಸ್ಟ್ರಾಟಿಜಿಕ್ ಟೈಂ ಔಟ್ ಸಿಕ್ಕಿತ್ತು. ಟೈ ಔಟ್ನ ಬಳಿಕವಾದ್ರೂ ಇವ್ರೆಲ್ಲ ಸಿಡಿದೇಳ್ತಾರಾ?.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ