/newsfirstlive-kannada/media/post_attachments/wp-content/uploads/2025/05/KOHLI_RCB-2.jpg)
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18 ಅಂತಿಮ ಘಟ್ಟ ತಲುಪಿದ ಬೆನ್ನಲ್ಲೇ ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಈಗ ಐಪಿಎಲ್ ಎಂಟರ್ಟೈನ್ಮೆಂಟ್ಗಿಂತ ದೇಶದ ಭದ್ರತೆ, ನಾಗರೀಕರತೆ ಸುರಕ್ಷತೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರ ತಳೆದಿರೋ ಬಿಸಿಸಿಐ ಟೂರ್ನಿಯನ್ನ ಒಂದು ವಾರ ಮುಂದೂಡಿದೆ.
ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಹಿಂದೂಗಳ ನರಮೇಧಕ್ಕೆ ಪ್ರತೀಕಾರವಾಗಿ ಮೊನ್ನೆ ಪಾಪಿಸ್ತಾನದಲ್ಲಿದ್ದ 9 ಉಗ್ರರ ನೆಲೆಗಳನ್ನು ಭಾರತೀಯ ಸೇನೆ ಚಿಂದಿ ಉಡಾಯಿಸಿತ್ತು. ಬೆನ್ನಲ್ಲೇ ಗುರುವಾರ ರಾತ್ರಿ ಭಾರತದ ಗಡಿ ಪ್ರದೇಶಗಳ ಮೇಲೆ ಪಾಕಿಸ್ತಾನ ದಾಳಿ ನಡೆಸೋ ವಿಫಲ ಯತ್ನ ಮಾಡಿತ್ತು. ಭಾರತೀಯ ವಾಯುನೆಲೆಯನ್ನ ಗುರಿಯಾಗಿಸಿ ಮಾಡಿದ್ದ ದಾಳಿಯನ್ನ ನಮ್ಮ ಹೆಮ್ಮೆಯ ಭಾರತೀಯ ಸೇನೆ ಹಿಮ್ಮೆಟ್ಟಿಸುಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ದಾಳಿಯನ್ನ ಭಾರತದ ನೆಲ ತಲುಪುಕೋ ಕೂಡ ನಮ್ಮ ಸೇನೆ ಬಿಟ್ಟಿಲ್ಲ.. ಅಟ್ಟಾಡಿಸಿ ಹೊಡೆದಿದೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ಮದುವೆಗೆ ಬಂದ ಬಿಗ್ ಬಾಸ್ ಸ್ಪರ್ಧಿಗಳು.. ಯಾರೆಲ್ಲಾ ಬಂದಿದ್ರು?
ಇಂಡೋ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ
ಪಾಪಿಸ್ತಾನದ ದಾಳಿಯನ್ನ ಸಮರ್ಥವಾಗಿ ಹಿಮ್ಮೆಟ್ಟಿಸಲಾಗಿದೆ. ನರಿ ಬುದ್ಧಿಯ ಕುಂತತ್ರಿ ಪಾಕ್ ಯಾವಾಗ ಏನ್ ಮಾಡುತ್ತೆ ಅನ್ನೋದನ್ನ ಹೇಳೋಕಾಗಲ್ಲ. ಹೀಗಾಗಿ ದೇಶದ ನಾಗರೀಕರ ಸುರಕ್ಷತೆಯ ಸಲುವಾಗಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನ ಕೈಗೊಂಡಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಕೂಡ ಕೇಂದ್ರದ ಜೊತೆ ಕೈ ಜೋಡಿಸಿದೆ. ಗುರುವಾರ ತಡರಾತ್ರಿ ದಾಳಿ-ಪ್ರತಿದಾಳಿ ಆರಂಭವಾದ ಬೆನ್ನಲ್ಲೆ, ಧರ್ಮಶಾಲಾದಲ್ಲಿ ನಡೀತಿದ್ದ ಪಂಜಾಬ್ ಕಿಂಗ್ಸ್-ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಐಪಿಎಲ್ನ ಅಧ್ಯಕ್ಷ ಅರುಣ್ ಧುಮಾಲ್ ಮುಂದೆ ನಿಂತು ಆಟಗಾರರು ಹಾಗೂ ಪ್ರೇಕ್ಷಕರನ್ನ ಸುರಕ್ಷಿತವಾಗಿ ಕಳುಹಿಸಿಕೊಡೋ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ರು. ಇದೀಗ ಐಪಿಎಲ್ ಆಯೋಜನೆ ವಿಚಾರದಲ್ಲಿ ಬಿಸಿಸಿಐ ಮಹತ್ವದ ನಿಲುವು ತಳೆದಿದ್ದು, ಒಂದು ವಾರಗಳ ಕಾಲ ಮುಂದೂಡಿದೆ.
ಇದನ್ನೂ ಓದಿ: ಪಾಕ್ ವಿಫಲ ಡ್ರೋಣ್ ದಾಳಿ.. ಗುರಿ ಮುಟ್ಟವ ಮೊದಲೇ ಫಿನಿಶ್ ಮಾಡಿದ ಭಾರತೀಯ ಸೇನೆ
ಒಂದು ವಾರ ಐಪಿಎಲ್ ಮುಂದೂಡಿಕೆ
2025ರ ಐಪಿಎಲ್ ಟೂರ್ನಿಯನ್ನ ಮುಂದಿನ ಒಂದು ವಾರಗಳ ಕಾಲ ಮುಂದೂಡಲು ಬಿಸಿಸಿಐ ನಿರ್ಧರಿಸಿದೆ. ನಂತರದ ವೇಳಾಪಟ್ಟಿ, ಟೂರ್ನಿ ನಡೆಯುವ ಸ್ಥಳಗಳ ಮಾಹಿತಿಯನ್ನ ನಂತರದಲ್ಲಿ ನೀಡಲಾಗುವುದು. ಈ ಕಠಿಣ ಪರಿಸ್ಥಿತಿಯಲ್ಲಿ ಬಿಸಿಸಿಐ ದೇಶದ ಜೊತೆಗೆ ನಿಲ್ಲುತ್ತದೆ. ಭಾರತ ಸರ್ಕಾರ, ಭಾರತೀಯ ಸೇನೆ, ಹಾಗೂ ಈ ದೇಶದ ಜನರೊಂದಿಗೆ ನಿಲ್ಲುತ್ತೇವೆ. ಕ್ರಿಕೆಟ್ ಈ ದೇಶದ ಪ್ಯಾಷನ್. ಈ ದೇಶಕ್ಕಿಂತ ಯಾವುದು ದೊಡ್ಡದಿಲ್ಲ. ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯ ಮತ್ತು ನಿಸ್ವಾರ್ಥ ಸೇವೆಯನ್ನ ಗೌರವಿಸುತ್ತೇವೆ. ಆಪರೇಷನ್ ಸಿಂಧೂರ ಅಡಿಯಲ್ಲಿ ರಾಷ್ಟ್ರವನ್ನ ರಕ್ಷಿಸುತ್ತಿರೋ ಸೇನೆಗೆ ಸೆಲ್ಯೂಟ್-ದೇವ್ಜಿತ್ ಸೈಕಿಯಾ, ಕಾರ್ಯದರ್ಶಿ, ಬಿಸಿಸಿಐ
ವಾರದ ಬಳಿಕ IPL ಮುಂದುವರೆಯುತ್ತಾ? ಇಲ್ವಾ?
ಸೀಸನ್ 18ರ ಐಪಿಎಲ್ನಲ್ಲಿ ಸದ್ಯ 58 ಪಂದ್ಯಗಳು ನಡೆದಿವೆ. ಧರ್ಮಶಾಲಾದಲ್ಲಿ ರದ್ದಾದ ಡೆಲ್ಲಿ-ಪಂಜಾಬ್ ನಡುವಿನ ಪಂದ್ಯ ಹಾಗೂ ಪ್ಲೇ ಆಫ್ ಸ್ಟೇಜ್ನಲ್ಲಿ ನಡೆಯೋ ಪಂದ್ಯಗಳನ್ನ ಸೇರಿ ಒಟ್ಟು 16 ಪಂದ್ಯಗಳು ಬಾಕಿ ಉಳಿದಿವೆ. ಮುಂದಿನ ಒಂದು ವಾರಗಳಲ್ಲಿ ಪರಿಸ್ಥಿತಿ ಸುಧಾರಿಸಿದ್ರೆ ಇದೇ ತಿಂಗಳ ಅಂತ್ಯದಲ್ಲಿ ಉಳಿದ ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ ಪ್ರತಿ ದಿನ ಡಬಲ್ ಹೆಡ್ಡರ್ ಪಂದ್ಯಗಳನ್ನ ಆಡಿಸಿ, ಪ್ಲೇ ಆಫ್ ಪಂದ್ಯಗಳ ದಿನಕ್ಕೊಂದು ಆಡಿಸಿ ಸೀಸನ್ ಮುಗಿಸೋ ಚರ್ಚೆ ಸದ್ಯ ನಡೆದಿದೆ.
ಇದನ್ನೂ ಓದಿ: ಭಿಕ್ಷೆ ಬೇಡಿದ್ದ ಪಾಕಿಸ್ತಾನಕ್ಕೆ IMF ಆಸರೆ; 19 ಸಾವಿರ ಕೋಟಿ ಸಾಲ ಮಂಜೂರು..!
BCCI ಜೊತೆ ನಿರಂತರ ಸಂಪರ್ಕದಲ್ಲಿ ವಿದೇಶಿ ಮಂಡಳಿಗಳು
ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ವಿದೇಶಿ ಬೋರ್ಡ್ಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ತಮ್ಮ ದೇಶಗಳ ಆಟಗಾರರ ಸುರಕ್ಷತೆಯ ಬಗ್ಗೆ ಅವಲೋಕಿಸಿವೆ. ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟ್ ಬೋರ್ಟ್, ವೆಸ್ಟ್ಇಂಡೀಸ್ ಕ್ರಿಕೆಟ್ ಬೋರ್ಡ್, ಕ್ರಿಕೆಟ್ ಸೌತ್ ಆಫ್ರಿಕಾ ನಿರಂತರವಾಗಿ ಬಿಸಿಸಿಐ ಸಂಪರ್ಕದಲ್ಲಿವೆ. ಬಿಸಿಸಿಐ ಆಟಗಾರರ ಭದ್ರತೆ ವಿಚಾರದಲ್ಲಿ ಮಾಹಿತಿಗಳನ್ನ ಹಂಚಿಕೊಳ್ತಿದೆ. ಆಟಗಾರರ ಸುರಕ್ಷತೆ ವಿಚಾರದಲ್ಲಿ ಹೆಚ್ಚು ನಿಗಾ ವಹಿಸುವಂತೆ ಫ್ರಾಂಚೈಸಿಗಳಿಗೂ ಬಿಸಿಸಿಐ ಸೂಚಿಸಿದೆ.
ಬೆಂಗಳೂರು, ಹೈದ್ರಾಬಾದ್ನಲ್ಲಿ ಉಳಿದ ಪಂದ್ಯಗಳು.?
ಒಂದು ವಾರದ ಬಳಿಕ ಪರಿಸ್ಥಿತಿ ಸುದಾರಿಸಿದ್ರೂ ರಿಸ್ಕ್ ತೆಗೆದುಕೊಳ್ಳಲು ಬಿಸಿಸಿಐ ರೆಡಿಯಿಲ್ಲ. ಹೀಗಾಗಿ ಗಡಿ ಭಾಗದ ಬದಲಾಗಿ ಸೌತ್ ಇಂಡಿಯಾದಲ್ಲಿ ಉಳಿದ ಪಂದ್ಯಗಳನ್ನ ಆಯೋಜಿಸೋ ಬಗ್ಗೆ ಚರ್ಚೆ ನಡೆದಿದೆ. ಬೆಂಗಳೂರು, ಹೈದ್ರಾಬಾದ್ನಲ್ಲಿ ಬಹುತೇಕ ಉಳಿದ ಪಂದ್ಯಗಳನ್ನ ನಡೆಸೋ ಸಾಧ್ಯತೆಗಳಿವೆ.
ಇದನ್ನೂ ಓದಿ: ಕರಾಚಿ ಮೇಲೆ ಭಾರತ ಕ್ಷಿಪಣಿ, ಡ್ರೋಣ್ ಅಟ್ಯಾಕ್.. ಖತಂ ಆಗ್ತಾನಾ ದಾವೂದ್ ಇಬ್ರಾಹಿಂ..?
ಪರಿಸ್ಥಿತಿ ಹೀಗೆ ಮುಂದುವರೆದ್ರೆ ಸಪ್ಟೆಂಬರ್ನಲ್ಲಿ IPL?
ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಹೀಗೆ ಮುಂದುವರೆದ್ರೆ ಸಪ್ಟೆಂಬರ್ ಬಳಿಕವೇ ಐಪಿಎಲ್ ನಡೆಯೋ ಸಾಧ್ಯತೆಯಿದೆ. ಮುಂದಿನ ತಿಂಗಳು ಸೌತ್ ಆಫ್ರಿಕಾ-ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಡೆಯಲಿದ್ರೆ, ಭಾರತ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದೆ. ಅಗಸ್ಟ್ನಲ್ಲಿ ನಡೆಸೋದಾದ್ರೆ ಟೀಮ್ ಇಂಡಿಯಾದ ಬಾಂಗ್ಲಾದೇಶ ಟೂರ್ ಡಿಶೆಡ್ಯೂಲ್ ಮಾಡಬೇಕಾಗುತ್ತದೆ. ಜೊತೆಗೆ ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ನಡುವೆ ಅಗಸ್ಟ್ನಲ್ಲಿ ವೈಟ್ಬಾಲ್ ಸರಣಿಯಿದೆ. ಸೆಪ್ಟೆಂಬರ್ನಲ್ಲಿ 2 ವಾರಗಳ ವಿಂಡೋ ಸಿಗಲಿದೆ. ಅದೇ ತಿಂಗಳು ನಡೆಯೋ ಏಷ್ಯಾಕಪ್ ಟೂರ್ನಿಯನ್ನೂ ಕ್ಯಾನ್ಸಲ್ ಮಾಡಿ ಐಪಿಎಲ್ ನಡೆಸೋ ಚರ್ಚೆಯೂ ನಡೆದಿದೆ.
ಒಟ್ಟಿನಲ್ಲಿ ಐಪಿಎಲ್ ಸೀಸನ್ 18 ಸದ್ಯಕ್ಕಂತೂ ಮುಂದೂಡಿಕೆಯಾಗಿದೆ. ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರದ ಅಗತ್ಯತೆ ಇತ್ತು. ದೇಶದ ಮೇಲೆ ಯುದ್ಧದ ಕರಿಛಾಯೆ ಅವರಿಸಿರೋ ಸಂದರ್ಭದಲ್ಲಿ ನಮ್ಮ ಸೇನೆ, ಸರ್ಕಾರ, ದೇಶದ ಭದ್ರತೆಗೆ ಆದ್ಯತೆ ನೀಡಿರೋ ಬಿಸಿಸಿಐನ ನಿರ್ಧಾರ ಸ್ವಾಗತಾರ್ಹ.
ಇದನ್ನೂ ಓದಿ: ಪಾಕ್ ದಾಳಿಗೆ ಗೋರಂಟ್ಲು ಯೋಧ ಹುತಾತ್ಮ; ಮಧ್ಯಾಹ್ನ ಬೆಂಗಳೂರು ತಲುಪಲಿದೆ ಪಾರ್ಥಿವ ಶರೀರ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್