/newsfirstlive-kannada/media/post_attachments/wp-content/uploads/2024/12/ISRO-NEW-PROJECT.jpg)
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದ್ರೆ ನಮ್ಮ ಇಸ್ರೋ ಈ ವರ್ಷ ಅನೇಕ ಗುರುತರ ಸಾಧನೆಗಳನ್ನ ಮಾಡಿದೆ. ಮತ್ತೊಂದು ಸಂಶೋಧನೆ ಮೂಲಕ ಇಸ್ರೋ ಸಂಸ್ಥೆ ಈ ವರ್ಷವನ್ನ ಮುಗಿಸಲು ಸಜ್ಜಾಗಿದೆ.. ಭಾರತದ ವಿಜ್ಞಾನಿಗಳು ಮತ್ತೊಂದು ದಾಪುಗಾಲು ಇಡಲು ಇವತ್ತು ಮುಹೂರ್ತ ಫುಕ್ಸ್ ಆಗಿದೆ.
ಬಾಹ್ಯಾಕಾಶದಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾದ ಭಾರತ
ಭಾರತ ತನ್ನ ಬಾಹ್ಯಾಕಾಶ ಯಾತ್ರೆಯಲ್ಲಿ ಹೊಸದೊಂದು ಮೈಲಿಗಲ್ಲು ಸೃಷ್ಟಿಸಲು ಕಾತರಿಸುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಮಹತ್ವಾಕಾಂಕ್ಷಿ ಸ್ಪೇಡೆಕ್ಸ್ ಯೋಜನೆಯ ಉಪಗ್ರವನ್ನು ಡಿಸೆಂಬರ್ 30ರಂದು ಅಂದ್ರೆ ಇವತ್ತು ಭಾರತೀಯ ಕಾಲಮಾನ ರಾತ್ರಿ 9:58ಕ್ಕೆ ಉಡಾವಣೆಗೊಳಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಸಮಸ್ತ ಭಾರತವೇ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಸ್ಪೇಡೆಕ್ಸ್‌ನ ನವಯುಗ ಆರಂಭವಾಗುವುದನ್ನ ನೋಡಲು ಕಾತರದ ಕಣ್ಣುಗಳಿಂದ ಕಾಯುತ್ತಿದೆ.
ಇದನ್ನೂ ಓದಿ:ನಿಶ್ಚಿತಾರ್ಥ ಆಗಿದ್ದ ಕೊಡಗಿನ ವೀರಯೋಧ ಹುತಾತ್ಮ; ಮದುವೆಗೆ ಇನ್ನೂ 2 ತಿಂಗಳು ಬಾಕಿ ಇತ್ತು
ಸ್ಪೇಡೆಕ್ಸ್ ಅಂದ್ರೆ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್.. ಈ ಸ್ಪೇಡೆಕ್ಸ್ ಯೋಜನೆಯು 2024ರಲ್ಲಿ ಇಸ್ರೋದ ಅಂತಿಮ ಯೋಜನೆಯಾಗಲಿದೆ. ಇದೊಂದು ಕಡಿಮೆ ವೆಚ್ಚದ ಯೋಜನೆಯಾಗಿದ್ದು, ಬಾಹ್ಯಾಕಾಶದಲ್ಲಿ ಡಾಕಿಂಗ್ ನಡೆಸುವ ತಂತ್ರಜ್ಞಾನವನ್ನ ಪ್ರದರ್ಶಿಸಲು ವಿನ್ಯಾಸಗೊಂಡಿದೆ. ಡಾಕಿಂಗ್ ಪ್ರಕ್ರಿಯೆಯಲ್ಲಿ ಎರಡು ಬಾಹ್ಯಾಕಾಶ ನೌಕೆಗಳನ್ನ ಬಾಹ್ಯಾಕಾಶದಲ್ಲಿ ಒಂದಕ್ಕೊಂದು ಜೋಡಿಸಲಾಗುತ್ತದೆ. ಈ ಯೋಜನೆಯನ್ನ ಇಸ್ರೋದ ಪಿಎಸ್ಎಲ್‌ವಿ ರಾಕೆಟ್ ಮೂಲಕ ಉಡಾವಣೆಗೊಳಿಸಲಾಗುತ್ತೆ ಎಂದು ಇಸ್ರೋದಿಂದ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ:ಪ್ರಧಾನಮಂತ್ರಿ ಕೋವಿಡ್ ನಿಧಿಗೆ ಇಂದಿಗೂ ಹರಿದು ಬರುತ್ತಿದೆ ಭರಪೂರ ಹಣ; ಎಷ್ಟು ಕೋಟಿ ಸಂಗ್ರಹ?
ಇಸ್ರೋ ಸಂಸ್ಥೆ 2035ಕ್ಕೆ ತನ್ನದೇ ಬಾಕ್ಯಾಕಾಶ ನಿಲ್ದಾಣದ ಗುರಿ ಹೊಂದಿದ್ದು, ಇದಕ್ಕಾಗಿಯೇ ಪೂರಕವಾದ ಬಾಹ್ಯಾಕಾಶ ನೌಕೆಯನ್ನ ಇವತ್ತು ಲಾಂಚ್ ಮಾಡಲಿದೆ. SpaDex ಹೆಸರಿನ ಉಡ್ಡಯಣದಲ್ಲಿ ಚೇಸರ್ ಎಸ್ಡಿಎಕ್ಸ್-1 ಹಾಗೂ ಟಾರ್ಗೆಟ್ ಎಸ್ಡಿಎಕ್ಸ್-2 ಎಂಬ ಎರಡು ಉಪಗ್ರಹಗಳಿರಲಿದೆ. ಈ ನೌಕೆಯನ್ನ ಪಿಎಸ್ಎಲ್‌ವಿ ಸಿ-60ಯನ್ನ ಹೊತ್ತೊಯ್ಯಲಿದೆ. ಹಾಗೆ ಹೊತ್ತೊಯ್ದ ಉಪಗ್ರಹವನ್ನ ಕೆಲ ಹಂತದ ಕಕ್ಷೆಯಲ್ಲಿ ಕೂರಿಸಿ.. ನಂತರ ಒಂದರಲ್ಲಿ ಇನ್ನೊಂದು ಸೇರಿಸಿ ತಂಗುವಂಥ ಪ್ರಯೋಗ ಮಾಡಲಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೊಸ ಮೈಲುಗಲ್ಲು ಸಾಧಿಸಲಿದೆ. ಅಮೆರಿಕ, ರಷ್ಯಾ, ಚೀನಾದ ಬಳಿಕ ಇಂಥ ಸಾಧನೆ ಮಾಡಿದ ವಿಶ್ವದ 4ನೇ ದೇಶವೆಂಬ ಹಿರಿಮೆ ಭಾರತಕ್ಕೆ ಲಭಿಸಲಿದೆ.
ಬಾಹ್ಯಾಕಾಶದಲ್ಲಿ ಬೆಳೆ ಪ್ರಯೋಗಕ್ಕೂ ಇಸ್ರೋ ಮುಂದು
ಇನ್ನು ವಿಎಸ್ಎಸ್‌ಸಿ ಅಭಿವೃದ್ಧಿ ಪಡಿಸಿರುವ ಕ್ರಾಪ್ಸ್ ಪೇಲೋಡ್ ಇಸ್ರೋಗೆ ಬಾಹ್ಯಾಕಾಶದಲ್ಲಿ ಅಥವಾ ಇತರ ಗ್ರಹಗಳಲ್ಲಿ ಸಸ್ಯಗಳನ್ನು ಬೆಳೆಯಲು ಅನುಕೂಲವಾಗುವಂತಹ ಹಂತ ಹಂತದ ವೇದಿಕೆಗಳನ್ನು ಒಳಗೊಂಡಿದೆ. ಇದೊಂದು ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯಾಗಿದ್ದು, ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಬೀಜಗಳು ಮೊಳಕೆಯೊಡೆದು, ಸಣ್ಣ ಸಸ್ಯಗಳಾಗಿ ಮೂಡಬಹುದೇ ಎಂದು ಪರಿಶೀಲಿಸುವ ಐದರಿಂದ ಏಳು ದಿನಗಳ ಪ್ರಯೋಗ ನಡೆಸಲಿದೆ. ಇದು ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ಹೇಗೆ ಆಹಾರ ಧಾನ್ಯಗಳನ್ನು ಬೆಳೆಯಲು ಸಾಧ್ಯ ಎಂದು ತಿಳಿಯಲು ಈ ಸಂಶೋಧನೆ ನೆರವಾಗಲಿದೆ.
ಈ ಸ್ಪೇಡೆಕ್ಸ್ ಯೋಜನೆಯು ಯಶಸ್ವಿಯಾದ್ರೆ.. ಭವಿಷ್ಯದಲ್ಲಿ ಚಂದ್ರನಂಗಳಕ್ಕೆ ಮಾನವರನ್ನ ಕಳುಹಿಸುವುದು, ಚಂದ್ರನಿಂದ ಮಾದರಿಗಳನ್ನು ಸಂಗ್ರಹಿಸುವುದು, ಭಾರತೀಯ ಅಂತರಿಕ್ಷ ಸ್ಟೇಷನ್ ನಿರ್ಮಾಣ ವಿಷ್ಯದಲ್ಲಿ ಮಹತ್ವದ ಸಾಧನೆಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ