/newsfirstlive-kannada/media/post_attachments/wp-content/uploads/2025/01/ISRO-3.jpg)
ಅದೊಂದು ಕಾಲವಿತ್ತು. ಬಾಹ್ಯಾಕಾಶದಲ್ಲಿ ನಡೆಯುವ ಪವಾಡಗಳು ಕೇವಲ ಎರಡ್ಮೂರು ದೇಶಗಳಿಗೆ ಮಾತ್ರ ಸೀಮಿತವಾಗಿದ್ದವು. ಅಮೆರಿಕ, ರಷ್ಯಾ, ಚೀನಾ ಬಿಟ್ಟರೆ ಬೇರೆ ಯಾವ ದೇಶಗಳೂ ಅಂತಹ ಸಾಹಸಕ್ಕೆ ಕೈ ಹಾಕಿರಲಿಲ್ಲ. ಕೆಲವು ಸಣ್ಣಪುಟ್ಟ ದೇಶಗಳು ಚಂದಮಾಮನಂಥ ಕಾಯಗಳ ಬಗ್ಗೆ ಕನಸು ಕಂಡಾಗ ಗಹಗಹಿಸಿ ನಕ್ಕಿದ್ದವು ಇದೇ ದೇಶಗಳು. ಅಂತೆಯೇ ಸುಮಾರು ನಾಲ್ಕು ದಶಕಗಳ ಹಿಂದೆ ಭಾರತ ಬಾಹ್ಯಾಕಾಶ ಯಾತ್ರೆ ಆರಂಭಿಸಿದಾಗ ಹಲವು ದೇಶಗಳು ಮೂದಲಿಸಿದ್ದವು. ಭಾರತೀಯ ವಿಜ್ಞಾನಿಗಳನ್ನು ಅಪಹಾಸ್ಯ ಮಾಡಿದ್ದವು. ಅಂತಹ ದೇಶಗಳಿಗೆ ಸಾಧ್ಯವಾಗದಂತ ನಿರ್ಣಾಯಕ ಪ್ರಯೋಗಗಳಲ್ಲಿ ಇಂದು ಭಾರತ ಯಶಸ್ವಿಯಾಗಿದೆ. ಜೊತೆಗೆ ತಾನು ಏನು ಅನ್ನೋದನ್ನೂ ಜಗತ್ತಿಗೆ ಎತ್ತಿ ತೋರಿಸಿದೆ!
ಹೌದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅತ್ಯಂತ ಜಟಿಲ ಮತ್ತು ನಿರ್ಣಾಯಕ ಪ್ರಯೋಗಗಳನ್ನು ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆ ಮೂಲಕ ಪ್ರಮುಖ ದೇಶಗಳೊಂದಿಗೆ ಸ್ಪರ್ಧಿಸಲು ಭಾರತ ಸಮರ್ಥವಾಗಿದೆ. ಮಾನವ ಸಹಿತ ಗಗನಯಾನಕ್ಕೆ ಸಿದ್ಧವಾಗಿರುವ ಇಸ್ರೋ, ಇದೀಗ ತನ್ನದೆ ಆದ ‘ಬೃಹತ್ ಲಾಂಚ್ ಪ್ಯಾಡ್’ ತಯಾರಿಯಲ್ಲಿದೆ. ಮಹತ್ವಾಕಾಂಕ್ಷೆಯ ದೊಡ್ಡ ದೊಡ್ಡ ಮಾಡ್ಯುಲ್, ಸ್ಯಾಟಲೈಟ್​ಗಳನ್ನು ಹೊತ್ತು ಗಗನಕ್ಕೆ ಚಿಮ್ಮುವ ಬಾಹುಬಲಿ ರಾಕೆಟ್​​ಗಾಗಿ (Bahubali LVM-3) ಇಸ್ರೋ ಹೊಸ ಲಾಂಚ್​ ಪ್ಯಾಡ್​ ನಿರ್ಮಿಸಲಿದೆ.
3,985 ಕೋಟಿ ಹಣ ಬಿಡುಗಡೆ
ಬಾಹುಬಲಿ ರಾಕೆಟ್​​ಗಾಗಿ ಇಸ್ರೋ ಮೂರನೇ ಲಾಂಚ್ ಪ್ಯಾಡ್ (Third launch pad) ನಿರ್ಮಿಸಲು ಸಿದ್ಧವಾಗಿದೆ. ಅದಕ್ಕಾಗಿ ಭಾರತ ಸರ್ಕಾರ ಬರೋಬ್ಬರಿ 3,985 ಕೋಟಿ ಹಣವನ್ನು ಬಿಡುಗಡೆಗೆ ಅನುಮೋದನೆ ಮಾಡಿದೆ. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟಾದಲ್ಲಿ 2 ಲಾಂಚ್ ಪ್ಯಾಡ್‌ಗಳನ್ನ ಇಸ್ರೋ ಹೊಂದಿದೆ. ಸುಮಾರು 30 ವರ್ಷಗಳ ಹಿಂದೆ ಇಸ್ರೋ ಮೊದಲ ಬಾರಿಗೆ ಉಡಾವಣಾ ಕೇಂದ್ರ ಸ್ಥಾಪಿಸಿತು. ಅದಾಗಿ 10 ಪೂರೈಸಿದ ಬೆನ್ನಲ್ಲೇ ಎರಡನೇ ಲಾಂಚ್​ ಪ್ಯಾಡ್​ ನಿರ್ಮಿಸಿತು. ಅಂದರೆ 20 ವರ್ಷಗಳಿಂದ ಇಸ್ರೋ ಎರಡು ಲಾಂಚ್​​ ಪ್ಯಾಡ್​​ನಲ್ಲಿ ಕಾರ್ಯಾಚರಣೆ ನಡೆಸ್ತಿದೆ. ಅದರಲ್ಲಿ ಯಶಸ್ಸು ಕೂಡ ಕಂಡಿದೆ.
ಆದರೆ..
ಹೆಮ್ಮೆಯ ಇಸ್ರೋ ಈಗ ಬದಲಾಗಿದೆ. 20 ವರ್ಷಗಳ ಹಿಂದೆ ಇದ್ದ ಪ್ಲಾನ್​ಗಳು ಯಾವುದೂ ಇಲ್ಲ. ವಿಜ್ಞಾನಿಗಳ ದೂರದೃಷ್ಟಿಯ ಯೋಜನೆಗಳು ಬದಲಾಗಿವೆ. ಬಾಹ್ಯಾಕಾಶದಲ್ಲಿ ಹೊಸ ಹೊಸ ಆವಿಸ್ಕಾರದತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದ್ದಾರೆ. ಅಂತೆಯೇ ಭಾರತದ ಭವಿಷ್ಯದ ದೃಷ್ಟಿಯಿಂದ ‘ನಿರ್ಣಾಯಕ ಉಡಾವಣೆ’ಗಳನ್ನು ಮಾಡುವ ಯೋಜನೆಯಲ್ಲಿ ಇಸ್ರೋ ಇದೆ. ಅದಕ್ಕೆ ಅಸ್ತಿತ್ವದಲ್ಲಿರುವ ಲಾಂಚ್ ಪ್ಯಾಡ್‌ಗಳನ್ನು ಮೀರಿದ ಸಾಮರ್ಥ್ಯ ಹೊಂದಿರುವ ಉಡಾವಣೆ ಕೇಂದ್ರದ ಅಗತ್ಯವಿದೆ.
ಇದನ್ನೂ ಓದಿ: ಭಾರತ ಮತ್ತೊಂದು ದಿಟ್ಟ ಹೆಜ್ಜೆ; ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲು ಎಂಜಿನ್ ಅಭಿವೃದ್ಧಿ
/newsfirstlive-kannada/media/post_attachments/wp-content/uploads/2025/01/ISRO-4.jpg)
ಇಲ್ಲಿಯವರೆಗೆ ಇಸ್ರೋ ಉಡಾವಣೆ ಮಾಡಿರುವ ರಾಕೆಟ್​ಗಳು, ಎರಡರಿಂದ ನಾಲ್ಕು ಟನ್ ತೂಕದ ಉಪಗ್ರಹಗಳನ್ನು ಹೊತ್ತು ಆಕಾಶಕ್ಕೆ ನೆಗೆದಿವೆ. ಈಗ ಇಸ್ರೋದ ಮುಂದೆ ಇರೋದು ಮಾನವ ಸಹಿತ ಗಗನಯಾನ. ಇಂಥ ಯೋಜನೆಗಳಿಗೆ ಬಾಹ್ಯಾಕಾಶ ನೌಕೆಗಳನ್ನು ಬೃಹತ್ ರಾಕೆಟ್ ಮೂಲಕ ಕಳುಹಿಸಿಬೇಕಾಗುತ್ತದೆ. ಭಾರವಾದ ಮಾಡ್ಯೂಲನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಿದೆ.
ಸ್ವಂತ ಬಾಹ್ಯಾಕಾಶ ನಿಲ್ದಾಣದ ಗುರಿ
ಇಸ್ರೋದ ವಿಜ್ಞಾನಿಗಳ ಬಹುದೊಡ್ಡ ಕನಸುಗಳಲ್ಲಿ ಇದು ಕೂಡ ಒಂದು. 2035ರ ವೇಳೆಗೆ ಬಾಹ್ಯಾಕಾಶದಲ್ಲಿ ಸ್ವಂತ ನಿಲ್ದಾಣ ಸ್ಥಾಪಿಸುವ ಗುರಿ ನಮ್ಮ ವಿಜ್ಞಾನಿಗಳದ್ದಾಗಿದೆ. ಜೊತೆಗೆ 2040ರ ವೇಳೆಗೆ ಚಂದ್ರನ ಅಂಗಳಕ್ಕೆ ಗಗನಯಾತ್ರಿಗಳು ಇಳಿಯುವ ಮಹತ್ವಾಕಾಂಕ್ಷೆಯನ್ನೂ ಹೊಂದಿದ್ದಾರೆ. ಕಾರಣ ಹೀಗಿರುವಾಗ ರಾಕೆಟ್‌ನ ತೂಕದ ಹೊರತಾಗಿ, ರಾಕೆಟ್ ಹೊತ್ತೊಯ್ಯುವ ಮಾಡ್ಯೂಲ್​​ಗಳ ಭಾರ ಕೂಡ ಹೆಚ್ಚಾಗಿರುತ್ತದೆ. 70 ರಿಂದ 75 ಟನ್‌ಗಳ ಪೇಲೋಡ್ ಕಳುಹಿಸುವ ಸಮರ್ಥ ರಾಕೆಟ್‌ಗಳನ್ನು ತಯಾರಿಸುವ ಅನಿವಾರ್ಯತೆ ಇದೆ.
ಇದನ್ನೂ ಓದಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಸಾಧನೆ; ಚಂದ್ರಯಾನ-4, ಗಗನಯಾನಕ್ಕೆ ವೇದಿಕೆ ಸಿದ್ಧ..!
/newsfirstlive-kannada/media/post_attachments/wp-content/uploads/2025/01/ISRO-5.jpg)
ಇನ್ನು, ಇಸ್ರೋ ಹೊಸ ತಲೆಮಾರಿನ ಉಡಾವಣ ವಾಹನ ವಿನ್ಯಾಸ (NGLV) ಹೊಂದಿದೆ. ಈ ರಾಕೆಟ್‌ಗಳ ಉಡಾವಣೆಗೆ ಉಡಾವಣ ಪ್ಯಾಡ್​ನ ಸಾಮರ್ಥ್ಯ ಭಾರೀ ಹೆಚ್ಚಳದ ಅಗತ್ಯವಿರುತ್ತದೆ. ಅಲ್ಲದೆ, ಬಾಹ್ಯಾಕಾಶಕ್ಕೆ ಹೋಗಿ ಭೂಮಿಗೆ ಮರಳುವ ನೌಕೆಯನ್ನು ಇಳಿಸಲು ರನ್‌ವೇ ಕೂಡ ಅಗತ್ಯವಿದೆ. ಆ ರನ್‌ವೇಯನ್ನೂ ನಿರ್ಮಿಸಲು ಇಸ್ರೋ ಪ್ಲಾನ್​​ನಲ್ಲಿದೆ.
ಹೊಸ ಭರವಸೆ..
ಹೊಸದಾಗಿ ನಿರ್ಮಿಸಲಾಗುವ ಮೂರನೇ ಉಡಾವಣಾ ಪ್ಯಾಡ್ ಲಭ್ಯವಾದರೆ, ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಯೋಗಗಳನ್ನು ನಡೆಸಲು ಸಾಧ್ಯವಾಗುತ್ತದೆ. ಈ ಲಾಭವನ್ನು ಇಸ್ರೋ ಸಂಪೂರ್ಣವಾಗಿ ಪಡೆಯಲಿದೆ. ಹೇಗೆಂದರೆ ಒಂದು ರಾಕೆಟ್ ತಯಾರಿ ಪೂರ್ಣಗೊಂಡ ನಂತರ, ಪ್ರಯೋಗವನ್ನು ಪೂರ್ಣಗೊಳಿಸಲು ಸುಮಾರು 10 ದಿನಗಳು ಬೇಕಾಗುತ್ತದೆ. ಸದ್ಯ ಇಸ್ರೋ ಬಳಿ ಎರಡು ಲಾಂಚ್ ಪ್ಯಾಡ್​​ಗಳಿವೆ. ಮೂರನೇ ಲಾಂಚ್ ಪ್ಯಾಡ್ ಲಭ್ಯವಿದ್ದರೆ, ಪ್ರಯೋಗಗಳ ಸಂಖ್ಯೆ ಸಹಜವಾಗಿ ಹೆಚ್ಚಾಗುತ್ತವೆ.
ಇದನ್ನೂ ಓದಿ:ಆರೋಪಿ ಪತ್ತೆಗೆ ಸಹಾಯ ಆಗಿದ್ದು ಈ ತಂತ್ರಜ್ಞಾನ.. ಸೈಫ್ ಮೇಲೆ ದಾಳಿ ಮಾಡಿದವನ ಗುರುತಿಸಿದ್ದು ಹೀಗೆ..
/newsfirstlive-kannada/media/post_attachments/wp-content/uploads/2025/01/ISRO_PRESIDENT.jpg)
ಇಸ್ರೋ ಇದುವರೆಗೆ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಮತ್ತು ಮಾರ್ಕ್- 3 ಮಾದರಿಯ ವಾಹಕ ನೌಕೆಗಳನ್ನು ವಿನ್ಯಾಸಗೊಳಿಸಿದೆ. ಇತ್ತೀಚೆಗೆ ಎಸ್‌ಎಸ್‌ಎಲ್‌ವಿ (SSLV) ಹೆಸರಿನ ಸಣ್ಣ ರಾಕೆಟ್​ಗಳನ್ನೂ ವಿನ್ಯಾಸಗೊಳಿಸಿ ಪರೀಕ್ಷಿಸಿದೆ. ಸಣ್ಣ ರಾಕೆಟ್​ಗಳ ಉಡಾವಣೆಗಾಗಿ ತಮಿಳುನಾಡಿನ ಕುಲಶೇಖರಂ ಪಟ್ಟಣದಲ್ಲಿ ಉಡಾವಣಾ ಕೇಂದ್ರ ಸ್ಥಾಪಿಸುವ ಪ್ಲಾನ್​ನಲ್ಲಿದೆ. ಆ ಮೂಲಕ ಇಸ್ರೋ ರಾಕೆಟ್ ಉಡಾವಣೆಗಾಗಿ ಒಟ್ಟು ನಾಲ್ಕು ಲಾಂಚ್ ಪ್ಯಾಡ್​​ಗಳನ್ನು ಪಡೆಯಲಿದೆ. ಪ್ರಸ್ತುತ ಇಸ್ರೋ ವರ್ಷಕ್ಕೆ 10ರಿಂದ 15 ಪ್ರಯೋಗಗಳು ಮಾತ್ರ ನಡೆಸುತ್ತಿದೆ. ಭವಿಷ್ಯದಲ್ಲಿ 100ಕ್ಕೂ ಹೆಚ್ಚು ಪ್ರಯೋಗ ಮಾಡುವ ವ್ಯವಸ್ಥೆಗೆ ನಮ್ಮ ವಿಜ್ಞಾನಿಗಳು ಸಿದ್ಧರಾಗುತ್ತಿದ್ದಾರೆ.
ಒಟ್ಟಾರೆ ಚಂದ್ರಯಾನ 3ನಲ್ಲಿ ಕಂಡ ಯಶಸ್ಸು, ಸೂರ್ಯ ಶಿಕಾರಿಗೆ ಮುನ್ನುಡಿ ಬರೆದಿತ್ತು. ಇದೀಗ ಸ್ಪೆಡೆಕ್ಸ್ ಡಾಕಿಂಗ್​​ ಪ್ರಯೋಗದಲ್ಲಿ ಯಶಸ್ವಿ ಆಗುವ ಮೂಲಕ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಗೆ ಭಾರತ ಅರ್ಹ ಎಂಬ ಸಂದೇಶವನ್ನು ವಿಶ್ವಕ್ಕೆ ರವಾನೆ ಮಾಡಿದೆ. ಅದರ ಜೊತೆಗೆ ಚಂದ್ರಯಾನ-4 ಹಾಗೂ ಮಾನವ ಸಹಿತ ಗಗನಯಾನಕ್ಕೂ ವೇದಿಕೆ ರೆಡಿ ಎಂಬ ಸಂದೇಶವನ್ನು ಸಾರಿರುವ ಇಸ್ರೋಗೆ ಆದಷ್ಟು ಬೇಗ ಮೂರನೇ ಲಾಂಚ್ ಪ್ಯಾಡ್ ಸಿಗಲಿ.
-ಗಣೇಶ ಕೆರೆಕುಳಿ, ನ್ಯೂಸ್​ಫಸ್ಟ್, ಡಿಜಿಟಲ್ ಡೆಸ್ಕ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us