/newsfirstlive-kannada/media/post_attachments/wp-content/uploads/2025/06/PURI_TEMPLE.jpg)
ರಾಜ್ಯವನ್ನ ಕಾಡಿ ಕಂಗೆಡಿಸಿದ್ದ ಕಾಲ್ತುಳಿತದ ಭೂತ ಸದ್ಯ ಒಡಿಶಾದಲ್ಲೂ ಆತಂಕ ಸೃಷ್ಟಿಸಿದೆ. ಸಂಭ್ರಮದ ಪುರಿ ಜಗನ್ನಾಥ ಯಾತ್ರೆ ಕಾಲ್ತುಳಿತದ ಕಂಟಕದಿಂದ ಸಾವು-ನೋವಿಗೆ ಕಾರಣ ಆಗುತ್ತಿದೆ. ಮೂವರನ್ನ ಬಲಿಪಡೆದಿರೋ ಕರಾಳ ಕಾಲ್ತುಳಿತ ಹಲವರನ್ನ ಆಸ್ಪತ್ರೆ ಪಾಲುಮಾಡಿದೆ.
ಪುರಿ ಜಗನ್ನಾಥ ದೇವಾಲಯ ಒಡಿಶಾದ ಪುರಿ ನಗರದಲ್ಲಿರೋ ಈ ದೇವಾಲಯ ಹಿಂದೂ ಧರ್ಮದ ಪ್ರಮುಖ ದೇವಾಲಯಗಳಲ್ಲೊಂದು. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಗನ್ನಾಥ ರಥಯಾತ್ರೆಗೆ ಸಾಕಷ್ಟು ಪ್ರಖ್ಯಾತಿ ಇದೆ. ಲಕ್ಷ ಲಕ್ಷ ಜನರು ಈ ಯಾತ್ರೆ ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಯಿಂದ ಆಗಮಿಸುತ್ತಾರೆ. ಆದರೆ ಈ ಬಾರಿ ಈ ಯಾತ್ರೆಯ ದಿಕ್ಕೇ ಬದಲಾಗಿದೆ. ಲಕ್ಷಗಟ್ಟಲೇ ಭಕ್ತರ ಭಕ್ತಿಯ ಪುಳಕದಲ್ಲಿ ವಿಜೃಂಭಿಸಬೇಕಿದ್ದ ಯಾತ್ರೆಗೆ ಈ ಬಾರಿ ಸಾವು-ನೋವಿನ ಸೂತಕ ಕಾಡಿದೆ.
/newsfirstlive-kannada/media/post_attachments/wp-content/uploads/2025/06/PURI_JAGANNATH.jpg)
ಮೂವರು ಜಗನ್ನಾಥನ ಭಕ್ತರನ್ನ ಬಲಿಪಡೆದ ಕಾಲ್ತುಳಿತ
ಒಡಿಶಾದ ಪುರಿಯಲ್ಲಿ ನಡೆಯುತ್ತಿರುವ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿ ಮೂವರು ಭಕ್ತರು ಮೃತಪಟ್ಟಿದ್ದಾರೆ. ಗುಂಡಿಚಾ ದೇವಾಲಯದ ನಿನ್ನೆ ಈ ದುರ್ಘಟನೆ ಸಂಭವಿಸಿದ್ದು, 50 ಯಾತ್ರಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ರಥಗಳು ತಲುಪಲು ವಿಳಂಬವಾದ ಕಾರಣ ಜನಸಂದಣಿ ಹೆಚ್ಚಾಗಿ ಕಾಲ್ತುಳಿತಕ್ಕೆ ಕಾರಣ ಅಂತ ಹೇಳಲಾಗ್ತಿದೆ. ಯಾತ್ರೆಯ ಸ್ಥಳದಲ್ಲಿ ವಿಪರೀತ ಬಿಸಿಲು ಹಾಗೂ ಸೆಕೆಯಿಂದಾಗಿ ಭಕ್ತರು ಹೈರಾಣಾಗಿದ್ದಾರೆ. ರಥಯಾತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ.
ಕಾಲ್ತುಳಿತದಲ್ಲಿ 80 ವರ್ಷದ ಪ್ರೇಮಕಾಂತ ಮೊಹಂತಿ, 36 ವರ್ಷದ ಬಸಂತಿ ಸಾಹೂ ಮತ್ತು 42 ವರ್ಷದ ಪ್ರಭಾತಿ ದಾಸ್ ಎಂಬವರು ಮೃತಪಟ್ಟಿದ್ದಾರೆ. ರಥವು ತಿರುವು ಪಡೆಯುವಾಗ ಸಿಕ್ಕಿಹಾಕಿಕೊಂಡ ಪರಿಣಾಮ, ಇತರ 2 ರಥಗಳು ಮುಂದೆ ಸಾಗಲು ಅಡಚಣೆಯಾದ ಕಾರಣ ಕಾಲ್ತುಳಿತ ಉಂಟಾಗಿದೆ. ಇನ್ನೂ ಕಳೆದ ಜೂನ್ 27ರಂದು, ಬಿಸಿಲಿನ ತಾಪಮಾನ ಮತ್ತು ಜನದಟ್ಟಣೆ ಕಾರಣವಾಗಿ ಸುಮಾರು 625 ಮಂದಿ ಅಸ್ವಸ್ಥರಾದ ಕಾರಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲ್ತುಳಿದ ಘಟನೆ ಬಗ್ಗೆ ಭಕ್ತರಿಗೆ ಕ್ಷಮೆ ಕೇಳಿದ ಸಿಎಂ
ಕಾಲ್ತುಳಿತ ಘಟನೆಯಲ್ಲಿ ಮೂವರು ಮೃತಪಟ್ಟಿರೋ ಬಗ್ಗೆ ಒಡಿಶಾ ಸಿಎಂ ಮೋಹನ್ ಚರಣ್​ ಮಾಝಿ ಕ್ಷಮೆಯಾಚಿಸಿದ್ದಾರೆ.
ಭಕ್ತರಲ್ಲಿ ಕ್ಷಮೆಯಾಚಿಸುತ್ತೇನೆ!
ಸರ್ಕಾರದ ಪರವಾಗಿ ನಾನು ಜಗನ್ನಾಥ ದೇವರ ಭಕ್ತರಲ್ಲಿ ಕ್ಷಮೆಯಾಚಿಸುತ್ತೇನೆ. ಮೃತರ ಕುಟುಂಬಗಳಿಗೆ ಸಂತಾಪಗಳನ್ನು ಸೂಚಿಸುತ್ತೇನೆ. ಈ ಕಠಿಣ ಸಂದರ್ಭದಲ್ಲಿ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಕಾಲ್ತುಳಿತದಲ್ಲಿ ಭದ್ರತಾ ಲೋಪ ಉಂಟಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುವುದು. ಯಾರಾದರೂ ತಪ್ಪಿಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿರ್ಲಕ್ಷ್ಯವನ್ನು ಕ್ಷಮಿಸಲಾಗದು. ಭದ್ರತಾ ಲೋಪದ ಕುರಿತು ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ.
ಮೋಹನ್ ಚರಣ್ ಮಾಝಿ, ಒಡಿಶಾ ಸಿಎಂ
ಇದನ್ನೂ ಓದಿ: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ
/newsfirstlive-kannada/media/post_attachments/wp-content/uploads/2025/06/PURI_TEMPLE_New.jpg)
ಮೃತರಿಗೆ 25 ಲಕ್ಷ ಪರಿಹಾರ.. ಅಧಿಕಾರಿಗಳ ತಲೆದಂಡ
ಕಾಲ್ತುಳಿತದಲ್ಲಿ ಮೃತ ಪಟ್ಟವರ ಕುಟುಂಬದವರಿಗೆ ತಲಾ 25 ಲಕ್ಷ ಪರಿಹಾರ ನೀಡುವುದಾಗಿ ಒಡಿಶಾ ಸಿಎಂ ಮೋಹನ್ ಚರಣ್​ ಮಾಝಿ ತಿಳಿಸಿದ್ದಾರೆ. ಇನ್ನೂ ಕಾಲ್ತುಳಿತ ಘಟನೆ ಸಂಬಂಧ ಪುರಿ ಜಿಲ್ಲೆಯ ಜಿಲ್ಲಾಧಿಕಾರಿ ಸಿದ್ಧಾರ್ಥ್​​ ಶಂಕರ್​ ಸ್ವೈನ್​ ಹಾಗೂ ಎಸ್​ಪಿ ವಿನೀತ್​ ಅಗರ್ವಾಲ್​​​ ವರ್ಗಾವಣೆ ಮಾಡಲಾಗಿದೆ. ಇಬ್ಬರು ಪೊಲೀಸ್​ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ.
ಪುರಿ ಜಗನ್ನಾಥನ ರಥಯಾತ್ರೆಯನ್ನ ಕಣ್ತುಂಬಿಕೊಳ್ಳಲು ಬಂದ ಮೂವರು ಸಾವಿನ ಮನೆಯ ಕದ ತಟ್ಟಿದ್ದಾರೆ. ಇನ್ನೂ 6 ದಿನಗಳ ಕಾಲ ರಥಯಾತ್ರೆ ನಡೆಯಲಿದ್ದು ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us