/newsfirstlive-kannada/media/post_attachments/wp-content/uploads/2025/07/Samosa_Jalebi.jpg)
ಅನಾರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಕ್ರಮವಾಗಿ ಸಮೋಸ, ಜಿಲೇಬಿ, ಪಕೋಡ, ವಡಾ ಪಾವ್ ಮತ್ತು ಚಾಯ್ ಬಿಸ್ಕತ್ತುಗಳಂತಹ ಜನಪ್ರಿಯ ತಿಂಡಿಗಳ ಬಾಕ್ಸ್ ಮೇಲೆ ಶೀಘ್ರದಲ್ಲೇ ಸಿಗರೇಟ್ ಶೈಲಿಯ ಆರೋಗ್ಯ ಎಚ್ಚರಿಕೆಗಳನ್ನು ನೀಡಲಾಗುತ್ತೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಈ ಎಚ್ಚರಿಕೆಗಳು ಈ ಆಹಾರಗಳಲ್ಲಿ ಹೆಚ್ಚಿನ ಮಟ್ಟದ ಎಣ್ಣೆ, ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬಿನ ಬಗ್ಗೆ ಬೆಳಕು ಚೆಲ್ಲುತ್ತವೆ. ಆಹಾರದ ಪೋಷಕಾಂಶಗಳು ಜೀವನಶೈಲಿ ಕಾಯಿಲೆಗಳಿಗೆ ನಿಕಟ ಸಂಬಂಧ ಹೊಂದಿವೆ. ಹೀಗಾಗಿ ರೋಗಕ್ಕೆ ಕಾರಣವಾಗುವ ಆಹಾರಗಳ ಮೇಲೆ ಸಿಗರೇಟ್ ಶೈಲಿಯ ಆರೋಗ್ಯ ಎಚ್ಚರಿಕೆಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನಾಗಪುರ ಏಮ್ಸ್ನಲ್ಲಿ ಪೈಲಟ್ ಪ್ರಾಜೆಕ್ಟ್ ಆಗಿ ಜಾರಿ
ಈ ಅಭಿಯಾನವನ್ನು ಮೊದಲು ನಾಗ್ಪುರದಲ್ಲಿ ಆರಂಭಿಸಲಾಗುತ್ತಿದೆ. ಮಹಾರಾಷ್ಟ್ರದ ನಾಗಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್ ನಾಗ್ಪುರ)ದಲ್ಲಿ ಈ ಯೋಜನೆಯನ್ನು ಮೊದಲಿಗೆ ಪೈಲಟ್ ಪ್ರಾಜೆಕ್ಟ್ ಆಗಿ ಜಾರಿಗೊಳಿಸಲಾಗುತ್ತಿದೆ. ಏಮ್ಸ್ ಕ್ಯಾಂಪಸ್‌ನಲ್ಲಿರುವ ಕೆಫೆಟೇರಿಯಾಗಳು ಮತ್ತು ಸಾರ್ವಜನಿಕ ಊಟದ ಸ್ಥಳಗಳು ಆಹಾರ ಕೌಂಟರ್‌ಗಳ ಪಕ್ಕದಲ್ಲಿ ಓದಲು ಸುಲಭವಾದ ಎಚ್ಚರಿಕೆ ಫಲಕಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಪೈಲಟ್ ಪ್ರಾಜೆಕ್ಟ್ ಯಶಸ್ವಿಯಾದ ಬಳಿಕ ದೇಶದ ಎಲ್ಲ ಕಡೆ ಈ ಆರೋಗ್ಯ ಎಚ್ಚರಿಕೆ ನೀಡಲಾಗುತ್ತೆ.
ಈ ಕ್ರಮ ಏಕೆ?
ಭಾರತವು ಬೆಳೆಯುತ್ತಿರುವ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳು ಹೆಚ್ಚುತ್ತಿರುವುದರಿಂದ, ಸರ್ಕಾರವು ಜನರ ಆಹಾರ ಪದ್ಧತಿಯ ಮೇಲೆ ತನ್ನ ಗಮನ ಕೇಂದ್ರೀಕರಿಸಿದೆ. ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕರಿದ ಮತ್ತು ಸಕ್ಕರೆ ತಿಂಡಿಗಳ ಆಗಾಗ್ಗೆ ಸೇವನೆಯು ಪ್ರಮುಖ ಕಾರಣವಾಗಿದೆ. 2050ರ ವೇಳೆಗೆ, ಅಂದಾಜು 44 ಕೋಟಿ ಭಾರತೀಯರು ಅಧಿಕ ತೂಕ ಅಥವಾ ಬೊಜ್ಜು ಹೊಂದಬಹುದು ಎಂದು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಜಾಗತಿಕ ವಿಶ್ಲೇಷಣೆ ಅಂದಾಜಿಸಿದೆ.
ಹೀಗಾಗಿ ಭಾರತೀಯರು ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಯಲು ಕೇಂದ್ರ ಸರ್ಕಾರವೇ ಈಗ ಆಹಾರದ ವಾರ್ನಿಂಗ್ ನೀಡಲು ಕ್ಯಾಂಪೇನ್ ಆರಂಭಿಸಿದೆ. ಜನರು ಸಾಧ್ಯವಾದಷ್ಟು ಆರೋಗ್ಯಕರ ಆಹಾರ ಪದ್ಧತಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬುದು ಕೇಂದ್ರ ಸರ್ಕಾರದ ಆಶಯ. ಪ್ರಧಾನಿ ಮೋದಿ ಕೂಡ ಇತ್ತೀಚೆಗೆ ಅಡುಗೆಯಲ್ಲಿ ಬಳಸುವ ಖಾದ್ಯ ಎಣ್ಣೆಯ ಪ್ರಮಾಣ ಕಡಿಮೆ ಮಾಡಲು ಭಾರತೀಯರಿಗೆ ಕರೆ ನೀಡಿದ್ದರು. ಈಗ ಅನಾರೋಗ್ಯಕ್ಕೆ ಕಾರಣವಾಗುವ ಆಹಾರಗಳ ಬಗ್ಗೆ ಕೇಂದ್ರದ ಆರೋಗ್ಯ ಇಲಾಖೆ ವಾರ್ನಿಂಗ್ ನೀಡಲು ಕ್ಯಾಂಪೇನ್ ಆರಂಭಿಸಿದೆ.
ಇದನ್ನೂ ಓದಿ: ಪುನೀತ್-ಸರೋಜಾ ದೇವಿಯ ಈ ಹಾಡು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.. ಕೊನೆಯದಾಗಿ ನಟಿಸಿದ್ದೂ ಅಪ್ಪು ಜೊತೆ..!
ಏನು ಬದಲಾಗುತ್ತದೆ?
- AIIMS ನಾಗ್ಪುರದಂತಹ ಸ್ಥಳಗಳಲ್ಲಿ, ಜನರು ಈ ಫಲಕ, ಸಂದೇಶ ನೋಡಬಹುದು
- ಜನಪ್ರಿಯ ಆಹಾರ ಮಳಿಗೆಗಳ ಪಕ್ಕದಲ್ಲಿ ಎಚ್ಚರಿಕೆ ಪೋಸ್ಟರ್‌ಗಳು
- ಸಕ್ಕರೆ, ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬಿನ ಅಂಶದ ಬಗ್ಗೆ ಸ್ಪಷ್ಟ ಮಾಹಿತಿ
- ಸ್ಯ್ನಾಕ್ಸ್ ಸೇವನೆಯಿಂದ ದೀರ್ಘಕಾಲೀನ ಆರೋಗ್ಯ ಅಪಾಯಗಳನ್ನು ವಿವರಿಸುವ ಸಂದೇಶಗಳು
- ಈ ಎಚ್ಚರಿಕೆಗಳನ್ನು ಸಿಗರೇಟ್ ಪ್ಯಾಕೇಜಿಂಗ್ ಮೇಲಿನ ಎಚ್ಚರಿಕೆಗಳಂತೆಯೇ ನೇರ ಮತ್ತು ಪ್ರಭಾವಶಾಲಿಯಾಗಿ ವಿನ್ಯಾಸಗೊಳಿಸಲಾಗಿದೆ.
ನಿಷೇಧವಲ್ಲ, ಉತ್ತಮ ಜಾಗೃತಿ ಅಷ್ಟೇ - ಇದು ಸಾಂಪ್ರದಾಯಿಕ ಆಹಾರಗಳ ಮೇಲಿನ ನಿಷೇಧವಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
- ಸಮೋಸ ಮತ್ತು ಜಿಲೇಬಿಗಳು ಇನ್ನೂ ಲಭ್ಯವಿರುತ್ತವೆ ಆದರೆ ಗ್ರಾಹಕರು ತಾವು ಏನು ತಿನ್ನುತ್ತಿದ್ದಾರೆ ಎಂಬುದರ ಕುರಿತು ಅವರಿಗೆ ತಿಳಿಸಲಾಗುವುದು
- ನಿರ್ಬಂಧವನ್ನಲ್ಲ, ಮಿತಗೊಳಿಸುವಿಕೆಯನ್ನು ಉತ್ತೇಜಿಸುವುದು ಗುರಿಯಾಗಿದೆ
- ಎಚ್ಚರಿಕೆ-ಲೇಬಲ್ ಅಭಿಯಾನವು ಮುಂಬರುವ ತಿಂಗಳುಗಳಲ್ಲಿ ಇತರ ನಗರಗಳು ಮತ್ತು ಸಂಸ್ಥೆಗಳಿಗೆ ವಿಸ್ತರಿಸುವ ನಿರೀಕ್ಷೆಯಿದೆ
- ಇದು ಎಚ್ಚರಿಕೆಯ ಕರೆಯಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಜನರನ್ನು ಸಮತೋಲಿತ ಆಹಾರದತ್ತ ತಳ್ಳುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹಂತದಲ್ಲಿ ಜನರು ಕೆಫೆಟೇರಿಯಾ ಗೋಡೆಯ ಮೇಲೆ ನೋಡಿದಾಗ ಹೆಚ್ಚು ಜಾಗರೂಕ ಆಹಾರ ಆಯ್ಕೆ ಮಾಡಲು ಪ್ರೋತ್ಸಾಹಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ