/newsfirstlive-kannada/media/post_attachments/wp-content/uploads/2025/04/DKS-vs-BYV.jpg)
ರಾಜ್ಯದಲ್ಲೀಗ ಜನಾಕ್ರೋಶ vs ಜನಾಕ್ರೋಶ ಹೋರಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. 20 ತಿಂಗಳು ಅಧಿಕಾರ ಪೂರೈಸಿರುವ ಕಾಂಗ್ರೆಸ್‌ನ ಸಿದ್ದರಾಮಯ್ಯರ ನೇತೃತ್ವದ ಸರ್ಕಾರ, ದಿನನಿತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ಆರಂಭವಾಗಿದೆ. ಇತ್ತ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಇಂಧನ, ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವುದರ ಜೊತೆಗೆ ಚಿನ್ನ, ಬೆಳ್ಳಿ ಬೆಲೆಗಳನ್ನು ದುಪ್ಪಟ್ಟು ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿ ತಾನೂ ಜನಾಕ್ರೋಶ ಯಾತ್ರೆ ಮಾಡುವುದಾಗಿ ಘೋಷಿಸಿಕೊಂಡಿದೆ.
ಸದ್ಯ ಏಪ್ರಿಲ್ 2 ರಂದೇ ಬಿಜೆಪಿ ಸಾಂಕೇತಿಕವಾಗಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ಜನಾಕ್ರೋಶ ಯಾತ್ರೆ ಆರಂಭಿಸಿತ್ತು. ಏಪ್ರಿಲ್ 5 ರಂದು ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಹೋರಾಟ ಮಾಡಿತ್ತು. ಇನ್ನು, ಏಪ್ರಿಲ್ 7 ರಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟ ಬಿಜೆಪಿ ನಾಯಕರು, ಅಂದು ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಡೆಯಿಂದ ಯಾತ್ರೆಗೆ ಚಾಲನೆ ಕೊಡಿಸಿದ್ದಾಗಿದೆ.
ಇದನ್ನೂ ಓದಿ: ಇಂದು ಕರ್ನಾಟಕ ಪಾಲಿಗೆ ಮಹತ್ವದ ದಿನ.. ಸಿದ್ದರಾಮಯ್ಯ ಸರ್ಕಾರದಿಂದ ಐತಿಹಾಸಿಕ ನಿರ್ಧಾರ ಸಾಧ್ಯತೆ..!
ಇನ್ನು ಬಿಜೆಪಿಯ ಯಾತ್ರೆ ಈಗಾಗಲೇ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಸಾಲು ಸಾಲು ಬಿಜೆಪಿ ನಾಯಕರುಗಳು ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.
ಇತ್ತ ಯಾವಾಗ ಬಿಜೆಪಿಯ ರಾಜ್ಯ ನಾಯಕರುಗಳು, ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಸಜ್ಜಾದ್ರೋ, ಕಾಂಗ್ರೆಸ್ ಕೂಡ ತಾನೇನು ಕಡಿಮೆ ಇಲ್ಲ ಎಂಬಂತೆ ಜನಾಕ್ರೋಶ ಹೋರಾಟವನ್ನು ಇಂದು ಘೋಷಿಸಿಯೇ ಬಿಟ್ಟಿದೆ.
ಏಕೆ ಜನಾಕ್ರೋಶ?
ಈಗಾಗಲೇ ರಾಜ್ಯ ಸರ್ಕಾರ ನಮ್ಮ ಮೆಟ್ರೋ, ಬಸ್, ದಿನನಿತ್ಯ ಬಳಕೆ ಮಾಡುವ ವಸ್ತುಗಳು, ಡೀಸೆಲ್ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆಯನ್ನು ಏರಿಸಿದೆ. ಇದಕ್ಕೆ ನಾವು ಜನರ ಪರ ಇದ್ದೇವೆ ಎಂಬ ಸಂದೇಶ ಕೊಡುವ ಉದ್ದೇಶದಿಂದ ಬಿಜೆಪಿ ನಾಯಕರುಗಳು ಜನಾಕ್ರೋಶ ಯಾತ್ರೆ ಮಾಡಲಾರಂಭಿದ್ದಾರೆ. ಇತ್ತ ಬಿಜೆಪಿ ಜನಾಕ್ರೋಶ ಯಾತ್ರೆ ಯಶಸ್ಸು ಕಂಡಿದ್ದು, ಇದು ಸಹಜವಾಗಿಯೇ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ.
ಇದನ್ನೂ ಓದಿ: ಜಾತಿ ಜನಗಣತಿ ಸಮೀಕ್ಷಾ ವರದಿ.. ನಾಳೆ ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ನಿರ್ಧಾರ!
ಯಾವಾಗ ಬಿಜೆಪಿ ಯಾತ್ರೆಯ ಮೂಲಕ ಮೈಲೇಜ್ ತೆಗೆದುಕೊಳ್ಳಲು ಮುಂದಾಯಿತೋ, ಇದಕ್ಕೆ ಟಕ್ಕರ್ ಕೊಡಲೇಬೇಕೆಂದು ರಾಜ್ಯದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೀಟಿಂಗ್ ಕರೆದು, ಜನಾಕ್ರೋಶ ಯಾತ್ರೆ ಮಾಡುವ ಬಗ್ಗೆ ತೀರ್ಮಾನ ಪ್ರಕಟಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ನಾಯಕರುಗಳು ಜನಾಕ್ರೋಶ ಯಾತ್ರೆ ಅಂತಾ ನಾಟಕ ಆರಂಭಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ. All The Best ಎಂದು ಹೇಳುತ್ತಾ, ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಏಪ್ರಿಲ್ 17 ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಜನಾಕ್ರೋಶ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಏಪ್ರಿಲ್ 17 ರಂದು ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್‌ದೀಪ್ ಸಿಂಗ್ ಸುರ್ಜೇವಾಲಾ ಅವರ ನೇತೃತ್ವದಲ್ಲಿ ಕೇಂದ್ರದ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿದ್ದು, ಈ ಮೂಲಕ ರಾಜ್ಯದಲ್ಲೀಗ ಜನಾಕ್ರೋಶ vs ಜನಾಕ್ರೋಶ ಎಂಬ aಖಾಡ ನಿರ್ಮಾಣಗೊಂಡಿದೆ.
ಇದನ್ನೂ ಓದಿ: ಬ್ರೇಕ್ ಅಪ್ ಕೋಪ.. 300 ದುಬಾರಿ ಗಿಫ್ಟ್‌ಗಳನ್ನು ಮನೆಗೆ ಕಳುಹಿಸಿದ ಮಾಜಿ ಪ್ರಿಯಕರ!
ವಿಶೇಷ ವರದಿ : ಪಿ.ಮಧುಸೂದನ್, ಪೊಲಿಟಿಕಲ್ ಬ್ಯೂರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ