/newsfirstlive-kannada/media/post_attachments/wp-content/uploads/2025/02/janardhan-rao-veljan.jpg)
ಹೈದರಾಬಾದ್: ವೆಲ್ಜನ್ ಗ್ರೂಪ್ (Veljan) ಕಂಪನಿಯ ಸಂಸ್ಥಾಪಕ ವೇಲಮತಿ ಚಂದ್ರಶೇಖರ್ ಜನಾರ್ಧನ್ ರಾವ್ ಅವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವೆಲ್ಜನ್ ಗ್ರೂಪ್ ಕಟ್ಟಿ ಬೆಳೆಸಿದ್ದ ಜನಾರ್ಧನ್ ರಾವ್ ಅವರ ದುರಂತ ಅಂತ್ಯ ಬೆಚ್ಚಿ ಬೀಳಿಸಿದೆ.
ಆಂಧ್ರದ ಖ್ಯಾತ ಉದ್ಯಮಿ ಜನಾರ್ಧನ್ ರಾವ್ ಅವರನ್ನ ಭೀಕರವಾಗಿ ಕೊಲೆ ಮಾಡಿರೋದು ಬೇರೆ ಯಾರು ಅಲ್ಲ. ಜನಾರ್ಧನ್ ರಾವ್ ಅವರ ಮೊಮ್ಮಗ ಕೀರ್ತಿ ತೇಜ ಚಾಕುವಿನಿಂದ 73 ಬಾರಿ ಚುಚ್ಚಿ, ಚುಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
1965ರಲ್ಲಿ ಜನಾರ್ಧನ್ ರಾವ್ ಅವರು ವೆಲ್ಜನ್ ಕಂಪನಿ ಆರಂಭಿಸಿದ್ದರು. ಈ ಕಂಪನಿ ಆಂಧ್ರಪ್ರದೇಶದಲ್ಲಿ ಹಡಗು ನಿರ್ಮಾಣ, ಎನರ್ಜಿ, ಮೊಬೈಲ್ ಮತ್ತು ಕೈಗಾರಿಕಾ ವಿಭಾಗಗಳಿಗೆ ಸಂಬಂಧಪಟ್ಟ ಸೇವೆ ನೀಡುತ್ತಿದೆ. ಕಳೆದ 60 ವರ್ಷಗಳಿಂದ ವೆಲ್ಜನ್ ಕಂಪನಿ ಕಟ್ಟಿ ಬೆಳೆಸಿದ್ದ ಕೋಟ್ಯಾಧಿಪತಿ ಜನಾರ್ಧನ್ ರಾವ್ ತನ್ನ ಮೊಮ್ಮಗನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾರೆ.
ಜನಾರ್ಧನ್ ರಾವ್ ಅವರ ಹೈದರಾಬಾದ್ ಸೊಮಾಜಿಗುಡಾ ಮನೆಯಲ್ಲೇ ಉದ್ಯಮಿಯ ಮೃತದೇಹ ಪತ್ತೆಯಾಗಿದೆ. ಹೈದರಾಬಾದ್ ಪೊಲೀಸರು ಜನಾರ್ಧನ್ ರಾವ್ ಮೊಮ್ಮಗ ಕೀರ್ತಿ ತೇಜ ಅವರನ್ನು ಬಂಧಿಸಿದ್ದಾರೆ.
ಜನಾರ್ಧನ್ ರಾವ್ ಅವರ ಮೊಮ್ಮಗ ಕೀರ್ತಿ ತೇಜ ಅವರು ಇತ್ತೀಚಿಗಷ್ಟೇ ಅಮೆರಿಕಾದಿಂದ ಭಾರತಕ್ಕೆ ಬಂದಿದ್ದರು. ಆಸ್ತಿಗಾಗಿ ಕುಟುಂಬದಲ್ಲಿ ಕಲಹ ಉಂಟಾಗಿದ್ದು, ರೌದ್ರಾವತಾರ ತಾಳಿದ ಮೊಮ್ಮಗನೇ ತಾತನನ್ನು 73 ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಒಬ್ಬನ ಯಡವಟ್ಟಿಗೆ 5 ವಾಹನ ಅಪಘಾತ.. 2 ಕಾರು ಜಖಂ; ಎದೆ ದಸಕ್ ಎನ್ನುವ ವಿಡಿಯೋ ಸೆರೆ!
ತಾತನ ಕೊಲೆಗೆ ಕಾರಣವೇನು?
ಆರೋಪಿ ಕೀರ್ತಿ ತೇಜ ಉದ್ಯಮಿ ಜನಾರ್ಧನ್ ರಾವ್ 2ನೇ ಮಗಳು ಸರೋಜಿನಿ ದೇವಿ ಅವರ ಮಗ. ಈ ಹಿಂದೆ ಮೊಮ್ಮಗನಿಗೆ 4 ಕೋಟಿ ರೂಪಾಯಿ ಮೌಲ್ಯದ ಕಂಪನಿ ಷೇರುಗಳನ್ನು ಜನಾರ್ಧನ್ ರಾವ್ ನೀಡಿದ್ದರು. ಇಷ್ಟಾದರೂ ಆಸ್ತಿ ವಿಚಾರದಲ್ಲಿ ಗಲಾಟೆ ಮಾಡುತ್ತಿದ್ದ ಮೊಮ್ಮಗ ಮನೆಗೆ ಬಂದಿದ್ದ. ಮಗಳು ಸರೋಜಿನಿ ದೇವಿ ಟೀ ತರಲು ಮನೆಯೊಳಗೆ ಹೋಗಿದ್ದಾಗ ಮೊಮ್ಮಗ ಕೀರ್ತಿ ತೇಜ ತಾತನಿಗೆ ಚಾಕುವಿನಿಂದ 73 ಬಾರಿ ಚುಚ್ಚಿದ್ದಾನೆ.
ಉದ್ಯಮಿ ಜನಾರ್ಧನ್ ರಾವ್ ಅವರು ಆಂಧ್ರಪ್ರದೇಶದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಏಲೂರು ಸರ್ಕಾರಿ ಆಸ್ಪತ್ರೆ ಹಾಗೂ ತಿರುಪತಿ ದೇವಾಲಯಕ್ಕೆ ಸಾಕಷ್ಟು ಧನಸಹಾಯ ಮಾಡಿ ಸುದ್ದಿಯಾಗಿದ್ದರು. ದಾನ ಧರ್ಮ ಅಂತಿದ್ದ ಈ ಖ್ಯಾತ ಉದ್ಯಮಿಗೆ ತನ್ನ ಮೊಮ್ಮಗನಿಂದಲೇ ಸಾವು ಬಂದಿರೋದು ದುರಂತದಲ್ಲಿ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ