/newsfirstlive-kannada/media/post_attachments/wp-content/uploads/2025/06/Jeff-Bezos-4.jpg)
ವಿಶ್ವದ ನಾಲ್ಕನೇ ಅತಿ ದೊಡ್ಡ ಶ್ರೀಮಂತ ಉದ್ಯಮಿ ಅಮೆಜಾನ್ ಕಂಪನಿ ಸ್ಥಾಪಕ ಜೆಫ್ ಬೇಜೋಸ್ (Jeff Bezos) 2019ರಲ್ಲಿ ದುಬಾರಿ ವಿವಾಹ ವಿಚ್ಛೇದನದ ಮೂಲಕ ಜಗತ್ತಿನ ಗಮನ ಸೆಳೆದಿದ್ದರು. ಇದೀಗ ಅವರು ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದು ವಿವಾಹದ ಬಂಧನಕ್ಕೊಳಗಾಗುತ್ತಿದ್ದಾರೆ. ಜೆಫ್ಗೆ ಈಗ 61 ವರ್ಷ. ಮೊದಲ ಪತ್ನಿಗೆ ನಾಲ್ಕು ಮಕ್ಕಳಿದ್ದಾರೆ. ಇದೀಗ 56 ವರ್ಷದ ಲೌರೆನ್ ಸಚೆಜ್ರನ್ನು (Lauren Sanchez) ವಿವಾಹವಾಗುತ್ತಿದ್ದಾರೆ. ಜೆಫ್ ಬೇಜೋಸ್ ಬರೋಬ್ಬರಿ 226 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯರಾಗಿದ್ದು, ಪೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ 4ನೇ ಶ್ರೀಮಂತರಾಗಿದ್ದಾರೆ!
ಮದುವೆಗೆ ವಿರೋಧ
ಅಮೆಜಾನ್ ಕಂಪನಿಯ (Amazon) ಸ್ಥಾಪಕ ಜೆಫ್ ಬೇಜೋಸ್ ವೆನ್ನಿಸ್ ನಗರಕ್ಕೆ (venice)ಆಗಮಿಸಿದ್ದರು. ಪ್ರವಾಸಿಯಾಗಿ ನಗರವನ್ನು ನೋಡಲು ಜೆಫ್ ಬಂದಿರಲಿಲ್ಲ. ವೆನ್ನಿಸ್ ನಗರದಲ್ಲೇ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಪ್ರವೇಶಿಸಲು ಪತ್ರಕರ್ತೆ ಲೌರೆನ್ ಸಂಚೆಜ್ ಜೊತೆ ಆಗಮಿಸಿದ್ದರು. ವೆನ್ನಿಸ್ ನಗರದಲ್ಲಿ ಜೆಫ್ ಬೇಜೋಸ್ ವಿವಾಹವು ಸ್ಥಳೀಯರ ವಿರೋಧಕ್ಕೆ ಕಾರಣವಾಯಿತು. ಬಿಲಿಯನೇರ್ ಉದ್ಯಮಿ ತನ್ನ ಮದುವೆಗಾಗಿ ಇಡೀ ನಗರದ ಜನಜೀವನ ಅಸ್ತವ್ಯಸ್ತವಾಗಲು ಕಾರಣವಾಗುತ್ತಿದ್ದಾರೆ. ಹೀಗಾಗಿ ನಗರದ ನಿತ್ಯದ ಜನಜೀವನ ಅಸ್ತವ್ಯಸ್ತ ಮಾಡಬೇಡಿ ಎಂದು ವೆನ್ನಿಸ್ ಜನ ಜೆಫ್ ಬೇಜೋಸ್ಗೆ ಆಗ್ರಹಿಸಿದ್ದಾರೆ. ವೆನ್ನಿಸ್ನಲ್ಲಿ ಜೆಫ್ ಬೇಜೋಸ್ ಅದ್ದೂರಿ ವಿವಾಹವನ್ನು ಸ್ಥಳೀಯ ನಿವಾಸಿಗಳು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
[caption id="attachment_129207" align="aligncenter" width="800"] ಮೊದಲ ಪತ್ನಿ ಜೊತೆ ಜೆಫ್[/caption]
ವೆನ್ನಿಸ್ ನಗರದಲ್ಲಿ ಮನೆ ಬಾಡಿಗೆ ವೆಚ್ಚ ಏರಿಕೆಯಾಗುತ್ತಿದೆ. ಹವಾಮಾನ ಬದಲಾವಣೆಯಾಗುತ್ತಿದೆ. ಅತಿಯಾದ ಟೂರಿಸಂನಿಂದ ವೆನ್ನಿಸ್ ನಗರ ತತ್ತರಿಸಿ ಹೋಗಿದೆ. ನೀರಿನಲ್ಲಿ ತೇಲುವ ವೆನ್ನಿಸ್ ನಗರವು ಮೊದಲೇ ಪ್ರವಾಸಿಗಳಿಂದ ತುಂಬಿದೆ. ಈಗ ಮತ್ತೆ ವಿಐಪಿ ಮದುವೆಯಿಂದ ಮತ್ತಷ್ಟು ಜನರು ನಗರದಲ್ಲಿ ತುಂಬಿಕೊಂಡು ನಗರದ ಜನಜೀವನ ಅಸ್ತವ್ಯಸ್ತ ಆಗೋದು ಬೇಡ ಎಂದು ಸ್ಥಳೀಯ ಜನರು ಜೆಫ್ ಬೇಜೋಸ್ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ವೆನ್ನಿಸ್ ನಗರದಲ್ಲಿ ಜೆಫ್ ಬೇಜೋಸ್ಗೆ ಜಾಗವಿಲ್ಲ ಎಂಬ ಪೋಸ್ಟರ್, ಬ್ಯಾನರ್ ಗಳು ಕಾಣಿಸಿಕೊಂಡಿದ್ದವು.
ಇದನ್ನೂ ಓದಿ: 75 ಕೋಟಿ ಸಂಬಳ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ ಅಂಬಾನಿ ಬಲಗೈ ಭಂಟ..!
ವೆನ್ನಿಸ್ ನಗರ ಬಿಲಿಯನೇರ್ಗಳ ಪ್ಲೇಗ್ರೌಂಡ್ ಅಲ್ಲ ಎಂದು ಜನರು ಪೋಸ್ಟರ್ ಪ್ರದರ್ಶಿಸಿದ್ದರು. ಇದರಿಂದಾಗಿ ಜೆಫ್ ಬೇಜೋಸ್ ತಮ್ಮ ವಿವಾಹದ ಸ್ಥಳವನ್ನು ಬದಲಾಯಿಸಿಕೊಂಡಿದ್ದಾರೆ. ನಗರದ ಜನನಿಬಿಡ ಪ್ರದೇಶವನ್ನು ಬಿಟ್ಟು ದೂರದ ಸ್ಥಳದಲ್ಲಿ ಧಾಂ ಧೂಮ್ ಅಂತ ಮದುವೆಯಾಗಲು ಜೆಫ್ ಬೇಜೋಸ್ ನಿರ್ಧರಿಸಿದ್ದಾರೆ. ವೆನ್ನಿಸ್ ನಗರಕ್ಕೆ ಲೌರೆನ್ ಸಂಚೆಜ್ ಜೊತೆ ಬಂದ ಜೆಫ್ ಬೇಜೋಸ್ ಜನರಿಂದ ದೂರ ಇರುವ ಸ್ಥಳಕ್ಕೆ ಹೋಗಿದ್ದಾರೆ. ಭದ್ರತೆಯ ಕಾರಣ ಹಾಗೂ ಪ್ರತಿಭಟನೆ ಎದುರಾಗಬಾರದೆಂಬ ಕಾರಣದಿಂದ ನಗರದಿಂದ ದೂರವಿರುವ ಸ್ಥಳದಲ್ಲಿ ಮದುವೆಯಾಗಲು ಜೆಫ್ ನಿರ್ಧರಿಸಿದ್ದಾರೆ. ಮದುವೆ ಪಾರ್ಟಿಯನ್ನು ಅರಸನಾಲೆಗೆ ಜೆಫ್ ಬೇಜೋಸ್ ಶಿಫ್ಟ್ ಮಾಡಿದ್ದಾರೆ.
ಮದುವೆಗಾಗಿ ವೆನ್ನಿಸ್ನ ಟಾಪ್ ಹೋಟೆಲ್ಗಳನ್ನು ಅತಿಥಿಗಳ ವಾಸ್ತವ್ಯಕ್ಕಾಗಿ ಬುಕ್ ಮಾಡಿಕೊಂಡಿದ್ದಾರೆ. ಜೆಫ್ ಬೇಜೋಸ್ ಮತ್ತು ಸಂಜೆಜ್ 2023ರಲ್ಲಿ ತಮ್ಮಿಬ್ಬರು ಎಂಗೇಜ್ ಆಗಿರುವುದಾಗಿ ಘೋಷಿಸಿದ್ದರು. ಸಂಚೆಜ್ ಮತ್ತು ಜೆಫ್ ಬೇಜೋಸ್ ಇಬ್ಬರಿಗೂ ಇದು ಮೊದಲ ಮದುವೆಯೇನಲ್ಲ. ಲೌರೆನ್ ಸಂಚೆಜ್ ಮೊದಲಿಗೆ ಪ್ಯಾಟ್ರಿಕ್ ವೈಟ್‌ಸೆಲ್ ರನ್ನು ವಿವಾಹವಾಗಿದ್ದರು. ಈ ದಾಂಪತ್ಯಕ್ಕೆ ಇವಾನ್, ಇಲಾ ಎಂಬಿಬ್ಬರು ಮಕ್ಕಳಿದ್ದಾರೆ. ಬಳಿಕ ಲೌರೆನ್ ಸಂಚೆಜ್ ಅವರು ಎನ್‌ಎಫ್‌ಎಲ್ ಸ್ಟಾರ್ ಟೋನಿ ಗೋನಜಲೆಜ್ ಜೊತೆ ಇದ್ದರು. ಟೋನಿ ಗೋನಜಲೆಜ್ರಿಂದ ನಿಕೂ ಎಂಬ ಮಗನನ್ನು ಪಡೆದಿದ್ದಾರೆ. ಈಗ ಜೆಫ್ ಬೇಜೋಸ್ರನ್ನು ವಿವಾಹವಾಗುತ್ತಿದ್ದಾರೆ.
ಇದನ್ನೂ ಓದಿ: ಪ್ಯಾರಾಸಿಟಮೋಲ್ ಸೇರಿ ಅಪಾಯಕಾರಿ 15 ಔಷಧಗಳು ಕರ್ನಾಟಕದಲ್ಲಿ ಬ್ಯಾನ್..! ಅವು ಯಾವುವು?
ಜೆಫ್ ಬೇಜೋಸ್ ಮ್ಯಾಕೇಂಜಿ ಸ್ಕಾಟ್ ರಿಂದ ನಾಲ್ಕು ಮಕ್ಕಳನ್ನು ಪಡೆದಿದ್ದಾರೆ. 1993ರಲ್ಲಿ ಜೆಫ್ ಬೇಜೋಸ್ ಮ್ಯಾಕೇಂಜಿ ಸ್ಕಾಟ್ರನ್ನು ವಿವಾಹವಾಗಿದ್ದರು. 2019ರಲ್ಲಿ ಜೆಫ್ ಬೇಜೋಸ್ ಮತ್ತು ಮ್ಯಾಕೇಂಜಿ ಸ್ಕಾಟ್ ವಿವಾಹ ವಿಚ್ಛೇದನ ಪಡೆದರು. ಈ ವೇಳೆ ವಿವಾಹ ವಿಚ್ಛೇದನದ ಪರಿಹಾರವಾಗಿ ಜೆಫ್ ಬೇಜೋಸ್, ಮ್ಯಾಕೇಂಜಿ ಸ್ಕಾಟ್ಗೆ ಅಮೆಜಾನ್ ಕಂಪನಿಯ ಶೇ.4 ರಷ್ಟು ಷೇರುಗಳನ್ನು ನೀಡಿದ್ದರು. ಇದರಿಂದಾಗಿ ಈಗ ಮ್ಯಾಕೇಂಜಿ ಸ್ಕಾಟ್ ಬರೋಬ್ಬರಿ 165 ಬಿಲಿಯನ್ ಡಾಲರ್ ಸಂಪತ್ತಿನ ಒಡತಿಯಾಗಿದ್ದಾರೆ. ಜಗತ್ತಿನ ದುಬಾರಿ ವಿವಾಹ ವಿಚ್ಛೇದನಗಳಲ್ಲಿ ಜೆಫ್ ಬೇಜೋಸ್ ವಿವಾಹ ವಿಚ್ಛೇದನವೂ ಒಂದು. 2025ರಲ್ಲಿ ಮ್ಯಾಕೇಂಜಿ ಸ್ಕಾಟ್ ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.
ಜೆಫ್ ಬೇಜೋಸ್ ಈಗ ವಿವಾಹವಾಗುತ್ತಿರುವ ಲೌರೆನ್ ಸಚೆಜ್ ಈ ಹಿಂದೆ ಟಿವಿ ಪತ್ರಕರ್ತೆಯಾಗಿದ್ದರು. ಟಿವಿ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದರು. ಜೆಫ್ ಬೇಜೋಸ್ ವಿವಾಹದಲ್ಲಿ ಭಾಗಿಯಾಗಲು ವಿವಿಐಪಿಗಳು, ಉದ್ಯಮಿಗಳು ವೆನ್ನಿಸ್ ನಗರಕ್ಕೆ ಆಗಮಿಸುತ್ತಿದ್ದಾರೆ. ಈ ವಾರ ನಡೆಯುವ ಮದುವೆಯಲ್ಲಿ ಭಾಗಿಯಾಗಲು ಪ್ರೈವೇಟ್ ವಿಮಾನಗಳಲ್ಲಿ ಗಣ್ಯರು ವೆನ್ನಿಸ್ ಗೆ ಆಗಮಿಸುತ್ತಿದ್ದಾರೆ. ಈ ವಿವಾಹವನ್ನು ವೆಡ್ಡಿಂಗ್ ಆಫ್ ದಿ ಸೆಂಚುರಿ ಎಂದೇ ಕರೆಯಲಾಗುತ್ತಿದೆ. ತಮ್ಮ ಮದುವೆಗೆ ಜೆಫ್ ಬೇಜೋಸ್ 46 ರಿಂದ 56 ಮಿಲಿಯನ್ ಡಾಲರ್ ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ಗುರುವಾರದಿಂದ ಶನಿವಾರದವರೆಗೂ ಮದುವೆ, ಮದುವೆ ಪಾರ್ಟಿಗಳು ನಡೆಯಲಿವೆ. 200 ರಿಂದ 250 ಮಂದಿ ವಿಐಪಿಗಳು ಮದುವೆ , ಮದುವೆ ಪಾರ್ಟಿಗೆ ಆಗಮಿಸುತ್ತಿದ್ದಾರೆ. ಮಂಗಳವಾರವೇ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಮದುವೆಯಲ್ಲಿ ಭಾಗಿಯಾಗಲು ವೆನ್ನಿಸ್ಗೆ ಆಗಮಿಸಿದ್ದಾರೆ.
ಇದನ್ನೂ ಓದಿ: ಹಲ್ಲುಗಳು ಫಳಫಳ ಹೊಳಿಬೇಕಂತ ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ.. ಈ ಟಿಪ್ಸ್ ಪಾಲಿಸಿ..!
ವಿಶ್ವದ ನಾಲ್ಕನೇ ಅತಿ ದೊಡ್ಡ ಶ್ರೀಮಂತನಾಗಿರುವ ಜೆಫ್ ಬೇಜೋಸ್ ಬಳಿ ಹಣಕ್ಕೇನೂ ಕೊರತೆ ಇಲ್ಲ. ತಮ್ಮ ವಿವಾಹಕ್ಕೂ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿದ್ದಾರೆ. ಮದುವೆಯ ಬಳಿಕ ಮೂರು ದಿನಗಳ ಕಾಲ ಅದ್ದೂರಿ ವಿಐಪಿ ಪಾರ್ಟಿ ಆಯೋಜಿಸಿದ್ದಾರೆ. ಮದುವೆಯ ಸ್ಥಳವನ್ನು ಮಾತ್ರ ಇನ್ನೂ ಜೆಫ್ ಬೇಜೋಸ್ ಸೀಕ್ರೆಟ್ ಆಗಿಯೇ ಇಟ್ಟಿದ್ದಾರೆ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ