/newsfirstlive-kannada/media/post_attachments/wp-content/uploads/2025/01/JOB_aspirants.jpg)
ಉದ್ಯೋಗ ಎನ್ನುವುದು ಮನುಷ್ಯನ ಬದುಕಿನಲ್ಲಿ ಬಹು ಮುಖ್ಯವಾದದ್ದು. ಇದು ಸರ್ಕಾರಿ ಕೆಲಸವಾಗಿರಲಿ, ಖಾಸಗಿ ಉದ್ಯೋಗವಾಗಲಿ ಅಥವಾ ಸ್ವಂತ ಉದ್ಯೋಗವಾಗಲಿ ಇದರ ಮೂಲಕ ಜೀವನದ ಆರ್ಥಿಕತೆಯನ್ನ ಉತ್ತಮ ಪಡಿಸಿಕೊಳ್ಳಬಹುದು. ದಿನ ನಿತ್ಯದಲ್ಲಿ ಹಣದಿಂದಲೇ ಕೆಲ ಕೆಲಸಗಳನ್ನು ಪರಿಹರಿಸಿಕೊಳ್ಳಬಹುದು. ಅಂತವುಗಳನ್ನ ನಾವು ಮಾಡಿದ ಕೆಲಸದಿಂದ ಬರುವ ಹಣದಿಂದ ಸರಿದೂಗಿಸಿಕೊಳ್ಳಬೇಕಾಗುತ್ತದೆ. ಹಣ ಹಾಗೂ ಉದ್ಯೋಗ ಎರಡು ಒಂದಕ್ಕೊಂದು ಪೂರಕವಾಗಿವೆ. ಇದರಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಹೇಗೆಲ್ಲ ತಯಾರಿ ಇರಬೇಕು ಎನ್ನುವುದರ ಕುರಿತು ಇಲ್ಲಿ ಕೆಲ ಅಂಶಗಳನ್ನು ನೀಡಲಾಗಿದೆ.
ಸರ್ಕಾರಿ ಉದ್ಯೋಗ ಬೇಕೆಬೇಕು. ಅದನ್ನು ಪಡೆದೆ ತೀರುತ್ತೇನೆ ಎಂದು ರಾಜ್ಯದಲ್ಲಿ ಹಲವಾರು ಉದ್ಯೋಗಕಾಂಕ್ಷಿಗಳು ಕಾದು ಕುಳಿತ್ತಿದ್ದಾರೆ. ಕೇವಲ ಉದ್ಯೋಗ ಬೇಕು ಎಂದು ಕಾಯುತ್ತ ಕುಳಿತರೆ ಪ್ರಯೋಜನವಿಲ್ಲ. ಅದಕ್ಕೆ ಬೇಕಾದಂತ ತಯಾರಿ ಯಾರೂ ಊಹಿಸಿದ ಮಟ್ಟದಲ್ಲಿರಬೇಕು. ಏಕೆಂದರೆ ಯಶಸ್ಸು ಎಂದರೆ ಒಂದು ಬಾರಿ ಬಂದು ಹೋಗುವುದಲ್ಲ, ಜೀವನದಲ್ಲಿ ನೆಲಕ್ಕುರುಳಿದಾಗ ಮತ್ತೆ ಎದ್ದು ನಿಲ್ಲಬೇಕು ಎಂದರೆ ಯಶಸ್ಸು ಅವಶ್ಯಕ. ಇದನ್ನು ಮೊದಲಿನ ರೀತಿಯಲ್ಲೇ ಪಡೆದು ತೀರುತ್ತೇನೆ ಎಂದರೆ ಈ ಮೊದಲಿನ ಯಶಸ್ಸಿನ ವೇಳೆ ಮಾಡಿದಂತ ಕಠಿಣ ಅಭ್ಯಾಸಗಳನ್ನ ಆಕಾಂಕ್ಷಿ ಮರೆಯಬಾರದು.
ಇದನ್ನೂ ಓದಿ: KPSC ಇಂದ ಅಧಿಸೂಚನೆ.. ಕರ್ನಾಟಕ ಲೋಕೋಪಯೋಗಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಆಹ್ವಾನ
ಎಲ್ಲ ಮೂಲ ದಾಖಲೆಗಳ ತಪ್ಪಿಲ್ಲದೇ ಸರಿಯಾಗಿರಬೇಕು
ಉದ್ಯೋಗಕ್ಕೆ ಅರ್ಜಿ ಕರೆದಿದ್ದಾರೆ ಎಂದು ಗೊತ್ತಾದ ಕೂಡಲೇ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಮೊದಲು ಉದ್ಯೋಗಕ್ಕೆ ಸಲ್ಲಿಸಲು ಬೇಕಾದ ಎಲ್ಲ ಮೂಲ ದಾಖಲೆಗಳನ್ನು ಸಿದ್ಧ ಪಡಿಸಿಕೊಳ್ಳಬೇಕು. ಆ ದಾಖಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಸಹಿ, ದಿನಾಂಕ ಇತ್ಯಾದಿಗಳನ್ನ ಗಮನವಿಟ್ಟು ಅಭ್ಯರ್ಥಿಗಳು ಪರೀಕ್ಷಿಸಿಕೊಳ್ಳಬೇಕು. ಇದರಲ್ಲಿ ಮುಖ್ಯವಾಗಿ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, 10ನೇ ತರಗತಿ, ಪಿಯುಸಿ, ಪದವಿ ಅಂಕಪಟ್ಟಿಗಳಲ್ಲಿ ಅಭ್ಯರ್ಥಿಯ ಹೆಸರು, ತಂದೆ, ತಾಯಿ ಹೆಸರು ಹಾಗೂ ವಿಳಾಸ ಒಂದೇ ರೀತಿಯಲ್ಲಿ ಇರಬೇಕು. ಇವುಗಳಲ್ಲಿ ಯಾವುದಾದರೂ ಸಮಸ್ಯೆ ಇದ್ದರೇ ಇದು ಅಭ್ಯರ್ಥಿಗೆ ಅಧಿಕೃತವಾಗಿ ಸರ್ಕಾರಿ ಕೆಲಸ ನೀಡುವಾಗ ತುಂಬಾ ಸಮಸ್ಯೆ ಮಾಡುತ್ತದೆ. ಕೆಲವೊಮ್ಮೆ ಉದ್ಯೋಗ ನೀಡದೇ ವಾಪಸ್ ಕಳಿಸಬಹುದು.
ಯಾವುದೇ ಉದ್ಯೋಗ ಆಗಲಿ ಆ ಹುದ್ದೆಗೆ ಕೇಳಿದಂತ ವಿದ್ಯಾರ್ಹತೆಗೆ ತಕ್ಕಂತೆ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಉದಾಹರಣೆಗೆ 10ನೇ ತರಗತಿ ಪೂರ್ಣಗೊಳಿಸಿದವರಿಗೆ ಉದ್ಯೋಗ ಎಂದರೆ, 5ನೇ ತರಗತಿಯಿಂದ 10ನೇ ತರಗತಿ ಪುಸ್ತಕಗಳಲ್ಲಿ ಇರುವ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಪರೀಕ್ಷೆಯಲ್ಲಿ ಅಭ್ಯರ್ಥಿಯ ಹೆಚ್ಚಿನ ಜ್ಞಾನ ಪರೀಕ್ಷೆಗಾಗಿ ಇತ್ತೀಚಿನ ಪ್ರಚಲಿತ ವಿದ್ಯಮಾನಗಳ ಕುರಿತು ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳುತ್ತಾರೆ. ಹೀಗಾಗಿ ರಾಜ್ಯ, ದೇಶ, ವಿಶ್ವದಲ್ಲಿ ನಡೆಯುವಂತ ಘಟನೆಗಳು, ಸರ್ಕಾರಿ ಯೋಜನೆಗಳು ಸೇರಿದಂತೆ ಪ್ರಚಲಿತ ವಿದ್ಯಮಾನಗಳನ್ನ ಅಭ್ಯರ್ಥಿಗಳು ನಿತ್ಯ ತಿಳಿದುಕೊಳ್ಳಬೇಕು. ಇದನ್ನು ತಿಳಿದುಕೊಳ್ಳಬೇಕು ಎಂದರೆ ನ್ಯೂಸ್​ ಪೇಪರ್, ನ್ಯೂಸ್​ ಚಾನೆಲ್​ಗಳನ್ನ ಗಮನಿಸಬೇಕು.
ದಿನಕ್ಕೆ ಎಷ್ಟು ಗಂಟೆಗಳವರೆಗೆ ಓದಬೇಕು
ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಮಾಡಿದ ನಂತರ ಉದ್ಯೋಗ ಬರುವುದಿಲ್ಲ, ಆ ಉದ್ಯೋಗಕ್ಕಾಗಿ ಆ ಸರ್ಕಾರಿ ಇಲಾಖೆ ರಿಲೀಸ್ ಮಾಡಿದಂತ ನೋಟಿಫಿಕೇಶನ್ ಅನ್ನು ಸಂಪೂರ್ಣವಾಗಿ ಓದಿ, ಅದರಲ್ಲಿ ಮೀಸಲಾತಿ ಕೋರುವ ಅಭ್ಯರ್ಥಿಗೆ ನಿಯಮಗಳಿರುತ್ತವೆ. (ಕನ್ನಡ ಮಾಧ್ಯಮ, ಗ್ರಾಮೀಣ ಮಾಧ್ಯಮ, ವಿಶೇಷ ಚೇತನ, ಮಾಜಿ ಸೈನಿಕ, 371ಜೆ) ಅಲ್ಲಿ ಕೇಳಿದಂತೆ ಮೀಸಲಾತಿ ದಾಖಲೆ ಅಭ್ಯರ್ಥಿ ಬಳಿ ಸರಿಯಾಗಿ ಇರಬೇಕು.
ಇನ್ನು ಪರೀಕ್ಷೆಗೆ ಯಾವ್ಯಾವ ವಿಷಯಗಳಲ್ಲಿ ಪ್ರಶ್ನೆ ಕೇಳಲಾಗುತ್ತದೆ ಎಂದು ಸಿಲಬಸ್ ಕೊಟ್ಟಿರುತ್ತಾರೆ. ಅವುಗಳ ಪ್ರಕಾರ ಅಭ್ಯರ್ಥಿಗಳು ಓದಬೇಕು. ಕೇವಲ ಒಂದೆರಡು ಗಂಟೆನೋ, 4-5 ಗಂಟೆನೋ ಓದಿದರೆ ಸಾಕಾಗಲ್ಲ. ನಿತ್ಯ 9 ರಿಂದ 10 ಗಂಟೆ ಸ್ಟಡಿ ಮಾಡಬೇಕು. ಯಾವುದೇ ರೀತಿಯ ಬೇರೆ ಯೋಚನೆ ಇರಬಾರದು. ಬುಕ್​ವುಂಟು, ನೀವುಂಟು ಆಗಿರಬೇಕು. ಕೀ ಪ್ಯಾಡ್ ಬೊಬೈಲ್ ಇದ್ದರೇ ಇನ್ನು ಉತ್ತಮ. ನಿತ್ಯ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಓದುತ್ತೇನೆಂದು ಕಥೆ, ಕಾದಂಬರಿ ಇತ್ಯಾದಿ ಓದುವುದಲ್ಲ, ಸಿಲಬಸ್​ನಲ್ಲಿ ಕೇಳಿದಂತೆ ಅಭ್ಯಾಸ ಇರಬೇಕು. ದಿನ ಪತ್ರಿಕೆ ನಿಮ್ಮ ಆಯ್ಕೆ ಆಗಿರಬೇಕು. ಬೆಳಗ್ಗೆ ದಿನ ಪತ್ರಿಕೆ ನೋಡಿದ ತಕ್ಷಣ ನಿಮಗೆ ಇಂಪಾರ್ಟೆಂಟ್ ಎನ್ನುವುದನ್ನ ಬರೆದುಕೊಳ್ಳಬೇಕು. ಬರೆದಿದ್ದನ್ನ ಆಗಾಗ ರಿವೀಸನ್ ಮಾಡಬೇಕು.
ಇದನ್ನೂ ಓದಿ: BELನಲ್ಲಿ 300ಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಖಾಲಿ.. ತಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಬಹುದು
ಪ್ರಚಲಿತ ವಿದ್ಯಮಾನ ಜೊತೆ ವಿಜ್ಞಾನ ಹಾಗೂ ಗಣಿತಕ್ಕೆ ಆಸಕ್ತಿ ವಹಿಸಿ
ಕೆಲವೇ ಕೆಲವು ಸರ್ಕಾರಿ ಉದ್ಯೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಲಕ್ಷಾನುಗಟ್ಟಲೆ ಉದ್ಯೋಗಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸುತ್ತಾರೆ. ಇದರಲ್ಲಿ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಮಾಡಲು ಪರೀಕ್ಷೆಯಲ್ಲಿ ಕಠಿಣ ಪ್ರಶ್ನೆಗಳನ್ನ ಕೊಡುತ್ತಾರೆ. ಅದರಲ್ಲಿ ಪ್ರಚಲಿತ ವಿದ್ಯಮಾನ ಜೊತೆ ವಿಜ್ಞಾನ ಹಾಗೂ ಗಣಿತ ವಿಷಯಗಳ ಪ್ರಶ್ನೆಗಳನ್ನ ಕೊಟ್ಟರೇ ಅಭ್ಯರ್ಥಿಗಳು ಉತ್ತರಿಸಲಾಗದೇ ಮರದಲ್ಲಿನ ಹಣ್ಣೆಲೆಗಳಂತೆ ಉದುರಿ ಹೋಗುತ್ತಾರೆ. ಪುಸ್ತಕ ಓದಿದದವನಿಗೆ ಹೊರಗಿನ ಪ್ರಪಂಚ ಗೊತ್ತಿರಲ್ಲ. ಇದರಿಂದ ಲಕ್ಷಾನುಗಟ್ಟಲೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂಖ್ಯೆ ಸಾವಿರಗಳಲ್ಲಿ ಬಂದು ಬಿಡುತ್ತಾರೆ.
ಇದರಲ್ಲಿ ಮತ್ತೆ ಸಂದರ್ಶನ, ದಾಖಲೆ ಪರಿಶೀಲನೆ, ಶೇಕಡಾವಾರು ಅಂಕ, ಮೂಲ ದಾಖಲೆಗಳಲ್ಲಿ ಇರುವ ಹೆಸರಿನ ಸಮಸ್ಯೆ ಇತ್ಯಾದಿಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಮಾಡಲು ಯತ್ನಿಸುತ್ತಾರೆ. ನಿಮ್ಮನ್ನ ಉದ್ಯೋಗಕ್ಕೆ ತೆಗೆದುಕೊಳ್ಳುವವರು ನಿಮ್ಮ ನ್ಯೂನತೆ ಮೇಲೆ 100ಕ್ಕೆ ನೂರರಷ್ಟು ಗಮನವಿಟ್ಟಿರುತ್ತಾರೆ. ಯಾವ ರೀತಿ ತೆಗೆಯಬೇಕು ಎನ್ನುವುದನ್ನೇ ಯೋಚಿಸುತ್ತಿರುತ್ತಾನೆ. ಇದರಿಂದ ಈ ಮೇಲೆ ಹೇಳಿದಂತೆ ಎಲ್ಲ ಅಂಶಗಳನ್ನು ಅಭ್ಯರ್ಥಿಯು 100ಕ್ಕೆ ನೂರರಷ್ಟು ಪಾಲಿಸಬೇಕು. ಒಂದೇ ಒಂದು ಸರ್ಕಾರಿ ಉದ್ಯೋಗ ಕೈ ಜಾರಿ ಹೋದರೆ ಮತ್ತೊಂದು ಉದ್ಯೋಗ ಸಿಗಬೇಕು ಎಂದರೆ ಕಷ್ಟ, ಅಷ್ಟಿಷ್ಟಲ್ಲ.
ವಿಶೇಷ ವರದಿ;ಭೀಮಪ್ಪ, ಡಿಜಿಟಲ್ ಡೆಸ್ಕ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ