/newsfirstlive-kannada/media/post_attachments/wp-content/uploads/2025/07/actress-bhavana.jpg)
ಕನ್ನಡ ಚಿತ್ರರಂಗದಲ್ಲಿ ಕೆಲ ಕಾರಣಗಳಿಂದ ಅನೇಕ ನಟ, ನಟಿಯರು ಮದುವೆ ಆಗದೇ ಹಾಗೇ ಉಳಿದುಕೊಂಡಿದ್ದಾರೆ. ಸಿನಿಮಾ ವೃತ್ತಿ ಬದುಕಿನಲ್ಲಿ ಉತ್ತುಂಗದಲ್ಲಿರುವಾಗ ಮದುವೆಯಾದರೇ, ಅವಕಾಶಗಳು ಕಡಿಮೆಯಾಗ್ತಾವೆ ಎಂಬ ಕಾರಣ, ಕೌಟುಂಬಿಕ ಕಾರಣ ಸೇರಿದಂತೆ ಬೇರೆ ಬೇರೆ ವಿಚಾರಗಳಿಂದ ಸಿನಿಮಾ ತಾರೆಯರು ಮದುವೆ ಮಾಡಿಕೊಳ್ಳುವುದು ತಡ ಮಾಡ್ತಾರೆ. ಆದ್ರೆ ಹೀಗೆ ಮಾಡಿದ್ರೆ ವಯಸ್ಸು ಮೀರಿದ ಮೇಲೆ ಸೂಕ್ತ ಜೋಡಿ ಸಿಗೋದು ಕಷ್ಟವಾಗುತ್ತೆ.
ಅಷ್ಟೇ ಅಲ್ಲದೇ ಕೆಲವರು ತಮಗೆ ಸೂಕ್ತ ಜೋಡಿಯೇ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದು ಉಂಟು. ನೀವು ಹುಡುಗನನ್ನು ನೋಡಿ, ನಮ್ಮ ಜಾತಿ ಹುಡುಗರನ್ನೇ ನಾವು ಮದುವೆಯಾಗುತ್ತೇವೆ, ಮದುವೆಯಾಗಲು ನಾವು ರೆಡಿ ಎಂದು ಖ್ಯಾತ ನಟಿ ರಮ್ಯಾ, ರಚಿತಾ ರಾಮ್ ಹೇಳಿದ್ದರು. ಇಬ್ಬರೂ ಇನ್ನೂ ಮದುವೆಯಾಗಿಲ್ಲ. ಇದು ಅವರ ವೈಯಕ್ತಿಕ ವಿಷಯ ಬಿಡಿ.
ಇದನ್ನೂ ಓದಿ: ಮೀಟಿಂಗ್ಗೂ ಮುನ್ನ ಸಿಎಂಗೆ ರೈತರಿಂದ ಟಕ್ಕರ್.. ಮಾವು, ಹೂವು, ಬಾಳೆ, ತರಕಾರಿ ಕೊಟ್ಟು ಆಕ್ರೋಶ
ಆದ್ರೆ, ಇವತ್ತಿನ ಹೊಸ ವಿಷಯ ಏನೆಂದರೇ, ಖ್ಯಾತ ನಟಿ ಹಾಗೂ ಭರತನಾಟ್ಯ ಕಲಾವಿದೆ ಭಾವನಾ ರಾಮಣ್ಣ, ತಮ್ಮ 40ನೇ ವಯಸ್ಸಿನಲ್ಲಿ ಒಂಟಿಯಾಗಿ ತಾಯಿಯಾಗುವ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾವನಾ, ಇನ್ನೂ ಮದುವೆಯಾಗಿಲ್ಲ. ಆದ್ರೆ ತಾಯಿಯಾಗಬೇಕೆಂಬ ಹಂಬಲ ಭಾವನಾ ಅವರಲ್ಲಿ ಇತ್ತು. ಹೀಗಾಗಿ ಈಗ ಐವಿಎಫ್ (In vitro fertilization) ಇನ್ ವಿಟ್ರೊ ಫಲೀಕರಣ (IVF) ಎಂದರೆ ಪ್ರಯೋಗಾಲಯದಲ್ಲಿ ಮೊಟ್ಟೆ ಮತ್ತು ವೀರ್ಯವನ್ನು ಸಂಯೋಜಿಸುವ ಮೂಲಕ ಗರ್ಭಧರಿಸಲು ಸಹಾಯ ಮಾಡುವ ಒಂದು ಚಿಕಿತ್ಸೆಯಾಗಿದೆ. ಈ ಮೂಲಕ ನಟಿ ಸದ್ಯ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ.
ಚಿಕ್ಕಂದಿನಿಂದಲೂ ಭಾವನಾ, ಮಕ್ಕಳ ಜೊತೆಗಿರುವುದನ್ನು ಇಷ್ಟಪಡುತ್ತಿದ್ದರು. ಆದರೆ, ತಮ್ಮ 20ನೇ ವಯಸ್ಸಿನಲ್ಲಿ ತಾಯಿಯಾಗುವ ಯೋಚನೆ ಗಂಭೀರವಾಗಿರಲಿಲ್ಲ. 30ನೇ ವಯಸ್ಸಿನಲ್ಲಿ ಪ್ರೀತಿಯ ಆಕಾಂಕ್ಷೆಯಿದ್ದರೂ, ತಾಯಿಯಾಗುವ ಬಗ್ಗೆ ಯೋಚನೆ ಮಾಡಿರಲಿಲ್ಲ. ನಾನು ಯಾವಾಗಲೂ ಮಕ್ಕಳ ಸುತ್ತಲಿರುವ ವಾತಾವರಣದಲ್ಲಿ ಬೆಳೆದೆ. ನನ್ನ ತಂದೆ-ತಾಯಿ, ಮೂವರು ಸಹೋದರ-ಸಹೋದರಿಯರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ತುಂಬಿದ ಮನೆಯಲ್ಲಿ ಬೆಳೆದೆ. ಆದರೆ 40ನೇ ವಯಸ್ಸಿಗೆ ತಲುಪಿದಾಗ ತಾಯಿಯಾಗಬೇಕೆಂಬ ಆಸೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಭಾವನಾ ಇಂಗ್ಲೀಷ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಮದುವೆಯಾಗಿ ಪತಿಯಿಂದ ಮಕ್ಕಳನ್ನು ಪಡೆಯೋದು ನಮ್ಮ ದೇಶದಲ್ಲಿ ಸಂಪ್ರದಾಯಿಕ ರೀತಿಯಲ್ಲಿ ನಡೆಯುತ್ತೆ. ಆದರೆ, ಭಾವನಾ ಅವರಿಗೆ ಬೇರೆ ಬೇರೆ ಕಾರಣಗಳಿಂದ ಮದುವೆಯಾಗಲು ಸಾಧ್ಯವಾಗಲಿಲ್ಲ. ರಾಜಕೀಯ ರಂಗದಲ್ಲಿ ಸಕ್ರಿಯವಾಗಿದ್ದರೂ, ವಿಧಾನಸಭೆ, ವಿಧಾನಪರಿಷತ್‌ಗೆ ಭಾವನಾ ಹೆಸರು ಪ್ರಬಲವಾಗಿ ಕೇಳಿ ಬಂದರೂ, ಅಂತಿಮ ಆಯ್ಕೆ ಸಾಧ್ಯವಾಗಲಿಲ್ಲ. ವೈಯಕ್ತಿಕ ಆಸೆಗಳನ್ನು ಈಡೇರಿಸಿಕೊಳ್ಳುವತ್ತ ಭಾವನಾ ಗಮನ ಹರಿಸಿದ್ದರು. ಕೊನೆಗೆ ಐವಿಎಫ್ ಮೂಲಕ ಮಗುವನ್ನು ಪಡೆಯಲು ಭಾವನಾ ನಿರ್ಧರಿಸಿದ್ದರು. ಇದಕ್ಕೆ ಕೆಲ ಅಡೆತಡೆಗಳು ಎದುರಾದವು. ಆದರೂ ಈಗ ಯಶಸ್ವಿಯಾಗಿ ಐವಿಎಫ್ ಚಿಕಿತ್ಸೆ ಪಡೆದಿದ್ದಾರೆ. ಭಾವನಾ ಅವರು ಇನ್ನೂ ಮೂರು ತಿಂಗಳಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು, ಆದರೆ, ದಯಾಳು ಪುರುಷರು ನನ್ನ ಮಕ್ಕಳ ಸುತ್ತ ಇರುತ್ತಾರೆ ಎಂದು ಭಾವನಾ ಹೇಳಿದ್ದಾರೆ. ದಯಾಳು ಪುರುಷರು ಎಂದರೆ ಕರುಣೆ ಮತ್ತು ಸಹಾನುಭೂತಿ ಉಳ್ಳ ಪುರುಷರು ಎಂದರ್ಥ.
ಇನ್ನೂ, ಭಾವನಾ ಅವರ ಮೂಲ ಹೆಸರು ನಂದಿನಿ. ಚಿತ್ರರಂಗಕ್ಕೆ ಬಂದ ಮೇಲೆ ತಮ್ಮ ಹೆಸರು ಅನ್ನು ಭಾವನಾ ಎಂದು ಬದಲಾಯಿಸಿಕೊಂಡಿದ್ದಾರೆ. ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಅನೇಕ ಸಿನಿಮಾಗಳಲ್ಲಿ ಭಾವನಾ ನಟಿಸಿದ್ದಾರೆ. ಕಲಾತ್ಮಕ ಸಿನಿಮಾಗಳ ಅಭಿನಕ್ಕೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ಶಾಂತಿ ಸಿನಿಮಾದಲ್ಲಿ ಏಕ ವ್ಯಕ್ತಿ ಪ್ರದರ್ಶನವನ್ನು ಭಾವನಾ ನೀಡಿದ್ದರು. ಈ ಸಿನಿಮಾ ಜನರ ಮೆಚ್ಚುಗೆ ಮತ್ತು ಪ್ರಶಸ್ತಿ ಎರಡನ್ನೂ ಗಳಿಸಿದೆ. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿದೆ. 1996 ರಿಂದ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ಭಾವನಾ, 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ನಿರ್ದೇಶಕ ಕೂಡ್ಲು ರಾಮಕೃಷ್ಣ ಅವರು ನಂದಿನಿ ಹೆಸರು ಅನ್ನು ಭಾವನಾ ಎಂದು ಬದಲಾಯಿಸಿ, ಚಿತ್ರರಂಗಕ್ಕೆ ಭಾವನಾ ಹೆಸರಿನ ಮೂಲಕ ಪರಿಚಯಿಸಿದ್ದರು.
ಇದನ್ನೂ ಓದಿ:ಗುಡ್ನ್ಯೂಸ್ ಎಂದ ಭಾವನಾ ರಾಮಣ್ಣ.. 40ನೇ ವಯಸ್ಸಲ್ಲಿ ಅಮ್ಮ ಆಗ್ತಿದ್ದಾರೆ ಸ್ಯಾಂಡಲ್ವುಡ್ ನಟಿ
ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಭಾವನಾ, ʻಚಂದ್ರಮುಖಿ ಪ್ರಾಣಸಖಿʼ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಭಾವನಾ ʻನೀ ಮುಡಿದ ಮಲ್ಲಿಗೆʼ, ʻಕ್ಷಾಮʼ, ʻಭಾಗೀರಥಿʼ ಸಿನಿಮಾಗಾಗಿ ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆಯಿಂದ ಭಾವನಾ, ಮುಂಬೈಗೆ ಹೋಗಿದ್ದರು. ಬಾಲಿವುಡ್ ಸಿನಿಮಾ ಫ್ಯಾಮಿಲಿಯಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದರು.
ನಟಿಯಾಗಿ ಮಾತ್ರವಲ್ಲ, ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಸದ್ಯ ಭಾವನಾ ರಾಮಣ್ಣ ಅವರ ಈ ನಿರ್ಧಾರಕ್ಕೆ ನೆಟ್ಟಿಗರು, ಜನರು ಮೆಚ್ಚುಗೆ ಸೂಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ