/newsfirstlive-kannada/media/post_attachments/wp-content/uploads/2025/06/Kamal-Hassan-On-Kannada-tamil-3.jpg)
ಬೆಂಗಳೂರು: ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂದಿರುವ ನಟ ಕಮಲ್ ಹಾಸನ್ ಅವರು ಕ್ಷಮೆ ಕೇಳಲು ನಿರಾಕರಿಸುತ್ತಿದ್ದಾರೆ. ಕಮಲ್ ಹಾಸನ್ ಅವರ ಮೊಂಡಾಟದ ಮಧ್ಯೆ ಅವರು ಅಭಿನಯದ ಥಗ್‌ಲೈಫ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕನ್ನಡಿಗರು ವಿರೋಧಿಸುತ್ತಿರುವ ಬೆನ್ನಲ್ಲೇ ಕಮಲ್ ಹಾಸನ್ ಅವರು ಕ್ಷಮೆ ಕೇಳದೇ ದುಬೈ, ಸಿಂಗಾಪುರ ಪ್ರವಾಸದಲ್ಲಿದ್ದಾರೆ. ಥಗ್ ಲೈಫ್ ಬಿಡುಗಡೆಗೆ ಇನ್ನು 2 ದಿನ ಬಾಕಿ ಇರುವಾಗ ಕಮಲ್ ಅವರು ವಿದೇಶದಲ್ಲಿ ತಮ್ಮ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ.
ಕನ್ನಡ ಸಂಘಟನೆಗಳ ವಾರ್ನಿಂಗ್!
ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆಯಾದ್ರೆ ತೀವ್ರ ಹೋರಾಟ ಮಾಡಲು ಕನ್ನಡಿಗರು ಸಜ್ಜಾಗಿದ್ದಾರೆ. ಕಮಲ್ ಹಾಸನ್ ಅವರ ಹೇಳಿಕೆಯ ಬೆನ್ನಲ್ಲೇ ಕನ್ನಡ ಸಂಘಟನೆ ಕಾರ್ಯಕರ್ತರು ಬೆಂಗಳೂರಿನ ಪ್ರಮುಖ ಥಿಯೇಟರ್‌ಗಳು ಹಾಗೂ ಮಾಲ್‌ಗಳಿಗೆ ಭೇಟಿ ಕೊಟ್ಟು ಎಚ್ಚರಿಕೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಕನ್ನಡಿಗರಿಗೆ ಸೆಡ್ಡು.. ಥಗ್ ಲೈಫ್ ಬಿಡುಗಡೆಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಟ ಕಮಲ್ ಹಾಸನ್!
ಕೆ.ಜಿ ರಸ್ತೆಯ ಭೂಮಿಕ ಚಿತ್ರಮಂದಿರಕ್ಕೆ ಭೇಟಿ ಕೊಟ್ಟ ಕನ್ನಡ ಸಂಘಟನೆ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ಕಮಲ್ ಹಾಸನ್ ಸಿನಿಮಾ ರಿಲೀಸ್ ಮಾಡಬಾರದು ಎಂದು ಥಿಯೇಟರ್ ಆಡಳಿತ ಸಿಬ್ಬಂದಿಗೆ ಎಚ್ಚರಿಸಿದ್ದಾರೆ.
ಕಮಲ್ ಹಾಸನ್ ಕ್ಷಮೆ ಕೇಳದೇ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡುವಂತಿಲ್ಲ. ಒಂದು ವೇಳೆ ಸಿನಿಮಾ ಬಿಡುಗಡೆ ಮಾಡಿದ್ರೆ ಪ್ರತಿಭಟನೆ ಮಾಡ್ತೇವೆ. ಚಿತ್ರಮಂದಿರದ ಸ್ಕ್ರೀನ್ ಹರಿದು ಹಾಕ್ತೇವೆ ಎಂದು ರೂಪೇಶ್ ರಾಜಣ್ಣ ವಾರ್ನಿಂಗ್ ಕೊಟ್ಟಿದ್ದಾರೆ.
ಭೂಮಿಕಾ ಥಿಯೇಟರ್ ಮ್ಯಾನೇಜರ್ ಕುಮಾರ್ ಅವರು ನಾಡು-ನುಡಿ ವಿಚಾರಕ್ಕೆ ಬಂದರೆ ನಮ್ಮ ಬೆಂಬಲ ಇರುತ್ತೆ. ಕನ್ನಡಿಗರು ಸಿನಿಮಾ ರಿಲೀಸ್ ಮಾಡಬಾರದು ಅಂತಿದ್ದಾರೆ. ಹಾಗಾಗಿ ನಾವು ರಿಲೀಸ್ ಮಾಡಲ್ಲ. ನಮ್ಮ ಥಿಯೇಟರ್‌ನಲ್ಲಿ ರಿಲೀಸ್ ಆಗಲ್ಲ ಎಂದಿದ್ದಾರೆ.
ಮಂತ್ರಿ ಮಾಲ್‌ಗೂ ಭೇಟಿ ಕೊಟ್ಟ ಕನ್ನಡ ಸಂಘಟನೆಯ ನಾಯಕರು ಮಾಲ್ ಆಡಳಿತ ಸಿಬ್ಬಂದಿಗೆ ಮನವಿ ಮಾಡಿದರು. ಮಂತ್ರಿ ಮಾಲ್ ಸಿನಿಮಾ ಹೆಡ್ ಶಬೀರ್ ಅವರು ಕನ್ನಡ ಸಂಘಟನೆಗಳು ಮನವಿ ಕೊಟ್ಟಿದೆ. ಈ ವಿಚಾರವನ್ನ ಮ್ಯಾನೇಜ್ಮೆಂಟ್‌ಗೆ ತಿಳಿಸುತ್ತೇವೆ. ಸಿನಿಮಾ ರಿಲೀಸ್ ಆಗಲ್ಲ. ಟಿಕೆಟ್ ಬುಕ್ಕಿಂಗ್ ಸಹ ಓಪನ್ ಆಗಿಲ್ಲ. ಕಮಲ್ ಹಾಸನ್ ಅವರು ಕ್ಷಮಾಪಣೆ ಕೇಳಬೇಕು ಎಂದು ಮಂತ್ರಿ ಮಾಲ್ ಸಿನಿಮಾ ಹೆಡ್ ಶಬೀರ್ ಹೇಳಿಕೆ ನೀಡಿದರು.
ಒರಿಯಾನ್ ಮಾಲ್‌ಗೆ ಭೇಟಿ ಕೊಟ್ಟ ಕನ್ನಡಪರ ಸಂಘಟನೆಗಳು ನಾವು ಲವ್ ಲೆಟರ್ ಕೊಡೋದಕ್ಕೆ ಇಲ್ಲಿಗೆ ಬಂದಿಲ್ಲ. ನೀವು ಸಿನಿಮಾ ರಿಲೀಸ್ ಮಾಡಿದ್ರೆ ಹುಷಾರ್ ಎಂದು ಎಚ್ಚರಿಸಿದರು. PVR ಮುಖ್ಯಸ್ಥರು ಸಿನಿಮಾ ರಿಲೀಸ್ ಬಗ್ಗೆ ಖಚಿತತೆ ನೀಡದಿದ್ದಕ್ಕೆ ತರಾಟೆ ತೆಗೆದುಕೊಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ