/newsfirstlive-kannada/media/post_attachments/wp-content/uploads/2025/05/Kamal-hassan-kannada-2.jpg)
ಬೆಂಗಳೂರು: ತಮಿಳು ನಟ ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ವಿವಾದಕ್ಕೆ ಗುರಿಯಾಗಿದ್ದಾರೆ. ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ ಎಂದು ಹೇಳಿದ ಅವರ ಹೇಳಿಕೆ ಬಗ್ಗೆ ಈಗ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕಮಲ್ ಹಾಸನ್ ಅವರ ಹೊಸ ಚಿತ್ರ ಥಗ್ ಲೈಫ್ ಚಿತ್ರದ ಪ್ರೊಮೋಷನ್ಸ್ಗೆ ಚಿತ್ರತಂಡ ಕಾರ್ಯಕ್ರಮ ನಡೆಸಿತ್ತು. ಆ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಸಹ ಭಾಗಿಯಾಗಿದ್ರು. ಶಿವರಾಜ್ ಕುಮಾರ್ ಅವರ ಎದುರಲ್ಲೇ ಹೀಗೆ ನಾಲಿಗೆ ಹರಿಬಿಟ್ಟಿದ್ದಕ್ಕೆ ಭಾರಿ ಆಕ್ರೋಶಗಳು ಕೇಳಿ ಬಂದಿವೆ.
ಕರವೇ ಪ್ರವೀಣ ಶೆಟ್ಟಿ ಅವರು ಕಮಲ್ ಹಾಸನ್ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಕಮಲ್ ಹಾಸನ್ ಕನ್ನಡಿಗರಿಗೆ ಕ್ಷಮೆ ಕೇಳಬೇಕು. ಈ ಮಾತನ್ನ ಶಿವರಾಜ್ ಕುಮಾರ್ ಎದುರು ಹೇಳಿರೋದು ಸರಿ ಅಲ್ಲ. ಶಿವರಾಜ್ ಕುಮಾರ್ ಕಮಲ್ ಹಾಸನ್ ಅವರನ್ನ ತಂದೆ ಸ್ಥಾನ ನೀಡಿದ್ದಾರೆ. ಆದರೆ ಅದೇ ವೇದಿಕೆಯಲ್ಲಿ ಕಮಲ್ ಹಾಗೇ ಮಾತಾಡಿದ್ದು ಸರಿಯಲ್ಲ. ನಟ ಕಮಲ್ ಅವರು ಕಷ್ಟದಲ್ಲಿ ಇದ್ದಾಗ ಕೈ ಹಿಡಿದದ್ದು ನಮ್ಮ ಕನ್ನಡವೇ. ಆದರೆ ಅವರು ಕನ್ನಡಿಗರನ್ನ ಗೇಲಿ ಮಾಡೋಕೆ ಮುಂದಾಗಿದ್ದಾರೆ ಎಂದು ಕರವೇ ಪ್ರವೀಣ ಶೆಟ್ಟಿ ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕನ್ನಡ ಭಾಷೆ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಕಮಲ್ ಹಾಸನ್ ವಿರುದ್ಧ ಭುಗಿಲೆದ್ದ ಆಕ್ರೋಶ
‘ಥಗ್ ಲೈಫ್’ಗೆ ಕರ್ನಾಟಕದಲ್ಲಿಲ್ಲ ಶೋ ಲೈಫ್!?
ಯಾವ ಚಿತ್ರ ಪ್ರೊಮೊಷನ್ಸ್ಗೆ ಕಮಲ್ ಹಾಸನ್ ಬಾಯಿ ಜಾರಿದ್ದರೋ, ಆ ಚಿತ್ರ ಕರ್ನಾಟಕದಲ್ಲಿ ರಿಲೀಸ್ ಆಗೋದು ಡೌಟ್ ಇದೆ. ಥಗ್ ಲೈಫ್ ಸಿನಿಮಾ ಅಷ್ಟೇಯಲ್ಲ ಕಮಲ್ ಅವ್ರ ಯಾವುದೇ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಅಗೋದಕ್ಕೆ ನಾವು ಬಿಡೋದಿಲ್ಲ. ಒಂದು ವೇಳೆ ರಿಲೀಸ್ ಆದ್ರೆ ನಾವು ಸುಮ್ಮನಿರೋದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೋರಾಟ ಮಾಡುತ್ತೇವೆ ಎಂದು ಕನ್ನಡಿಗರು ಸಿಡಿದೆದ್ದಿದ್ದಾರೆ.
ಜೂನ್ 5ಕ್ಕೆ ಉಗ್ರ ಹೋರಾಟ ನಡೆಯುತ್ತೆ
ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷರಾದ ಎನ್.ಆರ್ ರಮೇಶ್ ಅವರು ಕಮಲ್ ಹಾಸನ್ ಹೇಳಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ಕಮಲ್ ಹಾಸನ್ ಸಿನಿಮಾ ವೇದಿಕೆಯಲ್ಲಿ ಅಣ್ಣಾವ್ರು, ಶಿವಣ್ಣನ ಬಗ್ಗೆ ಒಳ್ಳೆಯ ಮಾತನಾಡಿರೋದು ಸ್ವಾಗತಾರ್ಹ. ಆದರೆ ಅದೇ ವೇದಿಕೆಯಲ್ಲಿ ಅವರಿಗೆ ಗೊತ್ತಿಲ್ಲದಂತೆ ಕನ್ನಡದ ಬಗ್ಗೆ ಮಾತಾಡಿರೋದು ಸರಿಯಲ್ಲ. ಅವರಿಗೆ ಕನ್ನಡ ಭಾಷೆಯ ಇತಿಹಾಸದ ಬಗ್ಗೆ ಅರಿವಿಲ್ಲ. ತಮಿಳು ದುರಾಭಿಮಾನದಿಂದ ಅವರು ಹಾಗೆ ಮಾತನಾಡಿದ್ದಾರೆ. ನಾಳೆ ಸಂಜೆ ಒಳಗೆ ಕಮಲ್ ಹಾಸನ್ ಸ್ಪಷ್ಟನೆ ಕೊಡಬೇಕು. ಇಲ್ಲದಿದ್ರೆ ಜೂನ್ 5 ರಂದು ಸಿನಿಮಾ ಪ್ರದರ್ಶನ ಆಗದಂತೆ ಹೋರಾಟ ಮಾಡೋದಾಗಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ