/newsfirstlive-kannada/media/post_attachments/wp-content/uploads/2025/07/Japan_airport_3.jpg)
ಜಪಾನ್​ನ ಕನ್ಸಾಯ್ ವಿಮಾನ ನಿಲ್ದಾಣ ಪೆಸಿಫಿಕ್ ಸಮುದ್ರದಲ್ಲಿ ಮುಳುಗುತ್ತಿದೆ. ಇದು ಜಪಾನ್​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ವಿಮಾನ ನಿಲ್ದಾಣವು ಒಸಾಕಾ ಕೊಲ್ಲಿಯಲ್ಲಿಯ ಕೃತಕ ದ್ವೀಪದಲ್ಲಿರುವ ಏರ್​ಪೋರ್ಟ್. ಇದು ಜಪಾನ್‌ನ ಹೊನ್ಶು ದ್ವೀಪದ ದಕ್ಷಿಣ ಕರಾವಳಿಯಲ್ಲಿರುವ ಪೆಸಿಫಿಕ್ ಸಾಗರದ ಒಂದು ಭಾಗ.
ಇದು ಜಗತ್ತಿನ ಸುಂದರ ವಿಮಾನ ನಿಲ್ದಾಣವೂ ಹೌದು. ಅತ್ಯಂತ ಅಪಾಯಕಾರಿ ಏರ್​ಪೋರ್ಟ್ ಆಗಿದ್ದು ಇಲ್ಲಿ ವಿಮಾನ ಲ್ಯಾಂಡ್ ಮಾಡಲು ಪೈಲಟ್​ಗಳ ಎದೆ ನಡುಗುತ್ತದೆ. ಸ್ವಲ್ಪ ಎಡವಟ್ಟಾದ್ರೂ ವಿಮಾನ ಸಮುದ್ರ ಪಾಲು. ಇಂಥ ವಿಮಾನ ನಿಲ್ದಾಣ ಮುಳುಗಿ ಹೋಗುವ ಅಪಾಯ ಎದುರಾಗಿದೆ. ಏರುತ್ತಿರುವ ಸಮುದ್ರ ಮಟ್ಟ ಮತ್ತು ಹವಾಮಾನ ಬದಲಾವಣೆಗಳಿಂದ ವಿಮಾನ ನಿಲ್ದಾಣ ನಿಧಾನವಾಗಿ ಸಮುದ್ರದೊಳಗೆ ಕುಸಿಯುತ್ತಿದೆ. ಇದರಿಂದಾಗಿ ಅದರ ಭವಿಷ್ಯವು ಅಪಾಯದಲ್ಲಿದೆ.
ಇದು ಎಂಜಿನಿಯರಿಂಗ್ ಅದ್ಭುತ
ಸಾಗರದ ಮೇಲೆ ನಿರ್ಮಿಸಲಾದ ವಿಶ್ವದ ಮೊದಲ ವಿಮಾನ ನಿಲ್ದಾಣ. ವಿಮಾನ ನಿಲ್ದಾಣಕ್ಕಾಗಿಯೇ 2 ಕೃತಕ ದ್ವೀಪ ನಿರ್ಮಿಸಲಾಗಿದೆ. ಇದು ವಿಶ್ವದ ಅತ್ಯುತ್ತಮ ‘ಎಂಜಿನಿಯರಿಂಗ್ ಅದ್ಭುತ'ಗಳಲ್ಲಿ ಒಂದಾಗಿದೆ. ಜಪಾನ್‌ನ ಒಸಾಕಾದ ಕರಾವಳಿ ಭಾಗವು ಕಿಶಿ ಜಲಸಂಧಿಯಿಂದ ಪೆಸಿಫಿಕ್ ಮಹಾಸಾಗರಕ್ಕೆ ಸಂಪರ್ಕ ಹೊಂದಿದೆ. ಅಲ್ಲಿನ ಮುಖ್ಯ ವಿಮಾನ ನಿಲ್ದಾಣದಲ್ಲಿ ಸ್ಥಳಾವಕಾಶದ ಕೊರತೆ ಇದ್ದ ಕಾರಣ ಪರ್ಯಾಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆ ಸುಮಾರು 3 ದಶಕಗಳ ಹಿಂದೆಯೇ ಮಾಡಲಾಗಿತ್ತು. ಆದರೆ ಸ್ಥಳೀಯರ ವಿರೋಧದಿಂದ ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಸಾಧ್ಯವಾಗಲಿಲ್ಲ.
ಬೇರೆ ದಾರಿಯಿಲ್ಲದೆ, ಜಪಾನ್ ಸರ್ಕಾರವು ಒಸಕಾ ಕೊಲ್ಲಿಯಲ್ಲಿ ತೇಲುವ ವಿಮಾನ ನಿಲ್ದಾಣವನ್ನು ನಿರ್ಮಿಸಲು ನಿರ್ಧರಿಸಿತು. ಅದರಂತೆ, 15 ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿತು. ವಿಮಾನ ನಿಲ್ದಾಣ ನಿರ್ಮಿಸಲು, ಮೊದಲು ನೀರಿನ ಮೇಲೆ 2 ಪ್ರತ್ಯೇಕ ಕೃತಕ ದ್ವೀಪ ನಿರ್ಮಿಸಲಾಯಿತು. ಪ್ರತಿಯೊಂದು ಕ್ರಮವಾಗಿ 1,260 ಮತ್ತು 1,347 ಎಕರೆ ಅಳತೆ ಹೊಂದಿವೆ.
ನಿರ್ಮಾಣ ಕಾರ್ಯವು 7 ವರ್ಷಗಳ ಕಾಲ ನಡೆಯಿತು. 20 ವರ್ಷಗಳ ಯೋಜನೆ ಮತ್ತು 7 ವರ್ಷಗಳ ನಿರ್ಮಾಣದ ನಂತರ, ವಿಮಾನ ನಿಲ್ದಾಣವು ಸೆಪ್ಟೆಂಬರ್ 1994 ರಲ್ಲಿ ಪ್ರಯಾಣಿಕರಿಗೆ ತೆರೆಯಲ್ಪಟ್ಟಿತು. ಅಂದಿನಿಂದ, ಕನ್ಸೈ ವಿಮಾನ ನಿಲ್ದಾಣವು ಕಳೆದ 30 ವರ್ಷಗಳಿಂದ ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಆದರೆ ಮುಂದಿನ 30 ವರ್ಷಗಳಲ್ಲಿ ಇದರ ಜೀವಿತಾವಧಿ ಕೊನೆಗೊಳ್ಳುತ್ತದೆ ಎಂಬ ಮಾಹಿತಿ ಇದೆ.
12.5 ಅಡಿಯಷ್ಟು ನೀರಲ್ಲಿ ಮುಳುಗಿದ ವಿಮಾನ ನಿಲ್ದಾಣ
2056ರ ವೇಳೆಗೆ ವಿಮಾನ ನಿಲ್ದಾಣವು ಪೆಸಿಫಿಕ್ ಮಹಾಸಾಗರದಲ್ಲಿ ಮುಳುಗುತ್ತದೆ ಅಂತ ಹೇಳಲಾಗುತ್ತದೆ. 1994 ರಿಂದ, ವಿಮಾನ ನಿಲ್ದಾಣ 12.5 ಅಡಿಯಷ್ಟು ನೀರಿನಲ್ಲಿ ಮುಳುಗಿದೆ. ಒಂದು ದ್ವೀಪ 57 ಅಡಿ ನೀರಿನಲ್ಲಿ ಮುಳುಗಿದೆ.
ಈ ವಿಮಾನ ನಿಲ್ದಾಣ ನಿರ್ಮಿಸಲು ಲಕ್ಷಾಂತರ ಲೀಟರ್ ನೀರನ್ನು ತೆಗೆಯಲಾಗಿತ್ತು. ಸಾಗರ ತಳದಲ್ಲಿ ಗೋಡೆ ನಿರ್ಮಿಸಲಾಗಿತ್ತು. ಎಂಜಿನಿಯರ್‌ಗಳು ಸಮುದ್ರದ ಮೇಲ್ಮೈ 5 ಅಡಿ ದಪ್ಪದ ಮರಳಿನ ಪದರ, ಅದರ ಮೇಲೆ, ವಿಮಾನ ನಿಲ್ದಾಣದ ಅಡಿಪಾಯವನ್ನು 16 ಇಂಚು ವ್ಯಾಸದ 2.2 ಮಿಲಿಯನ್ ದಪ್ಪ ಪೈಪ್‌ಗಳಿಂದ ನಿರ್ಮಿಸಲಾಗಿತ್ತು.
ಆದರೆ ಇಷ್ಟೆಲ್ಲಾ ಇದ್ದರೂ, 2018ರ ಹೊತ್ತಿಗೆ ಅದು 38 ಅಡಿಗಳಷ್ಟು ಮುಳುಗಿತ್ತು. ಇದನ್ನು ಊಹಿಸಲಾಗಿದ್ದರೂ, ಕುಸಿತದ ಪ್ರಮಾಣವು ನಿರೀಕ್ಷೆಗಿಂತ ಶೇಕಡಾ 25 ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಅಲ್ಲಿ ವಿಮಾನ ಸೇವೆಗಳು ಇನ್ನೂ ಮುಂದುವರೆದಿವೆ. ವಿಮಾನ ನಿಲ್ದಾಣ ನವೀಕರಣ ಕಾರ್ಯವೂ ನಡೆಯುತ್ತಿದೆ.
ಒಳಚರಂಡಿ ವ್ಯವಸ್ಥೆಗೆ ಭಾರೀ ಹಣ ಖರ್ಚು
2018ರಲ್ಲಿ ಟೈಫೂನ್ ಸೈಕ್ಲೋನ್ ಬಂದು ಭಾರೀ ಪ್ರವಾಹ ಸಂಭವಿಸಿತು ಆಗ ವಿಮಾನ ನಿಲ್ದಾಣವನ್ನು ತಾತ್ಕಾಲಿಕ ಮುಚ್ಚಲಾಗಿತ್ತು. ಎಂಜಿನಿಯರ್‌ಗಳು ವಿಮಾನ ನಿಲ್ದಾಣವನ್ನು ಸ್ಥಿರಗೊಳಿಸುವ ಕೆಲಸದಲ್ಲಿ ನಿರಂತರವಾಗಿ ತೊಡಗಿದ್ದಾರೆ. ಸಮುದ್ರ ಗೋಡೆಗಳನ್ನು ಬಲಪಡಿಸಲು ಮತ್ತು ನೀರಿನ ಒತ್ತಡವನ್ನು ಕಡಿಮೆ ಮಾಡಲು ಲಂಬವಾದ ಮರಳು ಒಳಚರಂಡಿ ವ್ಯವಸ್ಥೆ ಸ್ಥಾಪಿಸಲು $150 ಮಿಲಿಯನ್‌ಗಿಂತಲೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ.
2024ರ ಇತ್ತೀಚಿನ ಮಾಹಿತಿಯ ಪ್ರಕಾರ, ದ್ವೀಪದ ಮೊದಲ ಭಾಗದಲ್ಲಿ ಸರಾಸರಿ ವಾರ್ಷಿಕ 6 ಸೆಂಟಿಮೀಟರ್ ನಷ್ಟು ಕುಸಿತ ದಾಖಲಾಗಿದ್ದರೆ, 2ನೇ ಭಾಗದಲ್ಲಿ ಇದು 21 ಸೆಂಟಿ ಮೀಟರ್‌ಗಳವರೆಗೆ ಕುಸಿದಿದೆ. ಕೆಲವು ಸ್ಥಳಗಳಲ್ಲಿ, ನೆಲವು 17.47 ಮೀಟರ್‌ಗಳವರೆಗೆ ಕುಸಿದಿದೆ. ಇಷ್ಟಿದ್ದರೂ ಈ ವಿಮಾನ ನಿಲ್ದಾಣವು ಇನ್ನೂ 91 ನಗರಗಳಿಗೆ ಅಂತರರಾಷ್ಟ್ರೀಯ ಸಂಪರ್ಕ ಕಲ್ಪಿಸುತ್ತಿದೆ. ಮತ್ತು 2024 ರಲ್ಲಿ 30.6 ಮಿಲಿಯನ್‌ಗಿಂತಲೂ ಹೆಚ್ಚು ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸಿದ್ದಾರೆ.
ವಿಶೇಷ ವರದಿ:ಜಿ.ವಿಶ್ವನಾಥ್,ನ್ಯೂಸ್​ಫಸ್ಟ್​ (ಬ್ರೇಕಿಂಗ್)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ