/newsfirstlive-kannada/media/post_attachments/wp-content/uploads/2024/09/cm-siddu2.jpg)
ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿ. ಇದೇ ಕಲಬುರಗಿಯಲ್ಲಿ ಇವತ್ತು ವಿಶೇಷ ಸಚಿವ ಸಂಪುಟ ನಡೆಯಲಿದ್ದು, ಭರದ ಸಿದ್ದತೆ ನಡೆಯುತ್ತಿದೆ. ಇದರಿಂದ ಕಲ್ಯಾಣ ನಾಡಿನ ಜನರ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಬರೋಬ್ಬರಿ ದಶಕದ ಬಳಿಕ ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಸಂಜೆ 4 ಗಂಟೆಗೆ ಕಲಬುರಗಿಯ ಮಿನಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಇಡೀ ಸರ್ಕಾರವೇ ಕಲಬುರಗಿಗೆ ಶಿಫ್ಟ್ ಆಗ್ತಿದ್ದು, ಭರದ ಸಿದ್ದತೆ ನಡೆಯುತ್ತಿದೆ.
ಇದನ್ನೂ ಓದಿ: ಇಬ್ಬರಲ್ಲೂ ಒಳ್ಳೆಯ ಕೆಮಿಸ್ಟ್ರಿ ಇದೆ ಆದರೆ.. ಜಸ್ವಂತ್, ಆಕ್ರಿತಿ ಲವ್ ಬಗ್ಗೆ ಪೋಷಕರು ಹೇಳಿದ್ದೇನು?
ಸೆಪ್ಟೆಂಬರ್ 17 ಕಲ್ಯಾಣ ಕರ್ನಾಟಕದ ವಿಮೋಚನಾ ದಿನ. ಕಲ್ಯಾಣ ಕರ್ನಾಟಕದ ಪಾಲಿಗೆ ಸ್ವಾತಂತ್ರ್ಯದ ಉತ್ಸವ. ಇದಷ್ಟೇ ಅಲ್ಲ, ಕಲ್ಯಾಣ ನಾಡಿಗೆ 371 (ಜೆ) ವಿಶೇಷ ಸ್ಥಾನಮಾನ ಲಭಿಸಿ ಹತ್ತು ವರ್ಷಗಳು ಕಳೆದಿವೆ. ಈ ದಿನಗಳನ್ನ ಇನ್ನಷ್ಟು ವಿಶೇಷವಾಗಿಸಲು ಸರ್ಕಾರ ಪಣ ತೊಟ್ಟಿದೆ. ಇವತ್ತು ಸಚಿವ ಸಂಪುಟ ಸಭೆ ನಡೆಯುವ ಹಿನ್ನೆಲೆ ಕಲ್ಯಾಣ ನಾಡಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ನಗರದ ಎಸ್ವಿಪಿ ವೃತ್ತದಲ್ಲಿ ವಿಮೋಚನಾ ದಿನದ ಸಂಭ್ರಮ ಮೇಳೈಸಲಿದೆ. ಬೆಳಗ್ಗೆ 8:30ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ನಗರದ ಡಿಎಆರ್ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ರಾಷ್ಟ್ರ ಧ್ವಜಾರೋಹಣ ನೆರವೇರಲಿದೆ. ಅಲ್ಲದೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ, ಲೋಕಾರ್ಪಣೆ ಮಾಡ್ಲಿದ್ದಾರೆ. ಸಂಜೆ 4 ಗಂಟೆಗೆ ಮಿನಿ ವಿಧಾನಸೌಧದ ಪ್ರಾದೇಶಿಕ ಆಯುಕ್ತಾಲಯದ ಸಭಾಂಗಣದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಜರುಗಲಿದೆ.
ಸಂಪುಟ ಸಭೆಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗೇಲಿ ಮಾಡಿದ್ದು, ಇದು ಎರಡು ತಾಸಿನ ನಾಟಕ, ಬದಾಮ್, ಗೋಡಂಬಿ ತಿಂದು ಹೋಗ್ತಾರೆ ಅಂತಾ ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಸೆಪ್ಟೆಂಬರ್ 17 ಕಲ್ಯಾಣ ನಾಡಿಗೆ ವಿಶೇಷ ದಿನ. ಅದರಲ್ಲೂ ದಶಕದ ಬಳಿಕ 2ನೇ ಬಾರಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಅದೇನೇ ಇದ್ರು ಸಹ ಸಂಪುಟ ಸಭೆ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಕಲ್ಯಾಣ ನಾಡಿಗೆ ಬಂಪರ್ ಕೊಡುಗೆ ಸಿಗುತ್ತಾ ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ