/newsfirstlive-kannada/media/post_attachments/wp-content/uploads/2024/08/SIDDU-DKS.jpg)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನ ಸೌಧದದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ನಿರೀಕ್ಷೆಯಂತೆ ಸಭೆಯಲ್ಲಿ ‘ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ’ಯ ವರದಿ ಮಂಡನೆ ಆಗಿದೆ. ಆದರೆ ಇವತ್ತಿನ ಸಭೆಯಲ್ಲಿ ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ.
ಯಾವುದೇ ನಿರ್ಧಾರ ಆಗಿಲ್ಲ
ಹೆಚ್.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರ ಏಪ್ರಿಲ್ 11 ರಿಂದ ಮೇ 30 ರವರೆಗೆ ಸಮೀಕ್ಷೆ ನಡೆಸಿತ್ತು. ಜಾತಿ ವಿವರವೂ ಒಳಗೊಂಡಂತೆ 54 ಮಾನದಂಡಗಳ ಅಧಾರದಲ್ಲಿ ಸಮೀಕ್ಷೆ ಮಾಡಿತ್ತು. ಕಾಂತರಾಜ ಆಯೋಗ ಅವಧಿ ಮುಕ್ತಾಯದಿಂದ ವರದಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಹೀಗಾಗಿ ಕಾಂತರಾಜ್ ಸಮೀಕ್ಷೆಯ ದತ್ತಾಂಶ ಬಳಸಿಕೊಂಡು ಅಂತಿಮ ವರದಿ ಸಲ್ಲಿಕೆ ಮಾಡುವಂತೆ ಕೆ. ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗಕ್ಕೆ 2023ರಲ್ಲಿ ಸರ್ಕಾರ ಪತ್ರ ಬರೆದಿತ್ತು. ಅದರಂತೆ 2015ರ ಸಮೀಕ್ಷೆಯ ಆಧಾರದ ಮೇಲೆ 2024ರ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆ ಆಯ್ತು. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ 2024ರ ಫೆಬ್ರವರಿ 29ರಂದು ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆ ಮಾಡಿತ್ತು. ಇಂದು ಈ ವರದಿಯು ಇಂದಿನ ಸಂಪುಟ ಸಭೆಯಲ್ಲಿ ಮಂಡನೆ ಆಗಿದೆ. ಆದರೆ ಯಾವುದೇ ನಿರ್ಧಾರವನ್ನು ಸಭೆ ತೆಗೆದುಕೊಂಡಿಲ್ಲ.
ಮುಂದಿನ ಸಭೆಯಲ್ಲಿ ನಿರ್ಧಾರ..!
‘ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ’ ವರದಿಗೆ ಸಂಪುಟದಿಂದ ಅಸ್ತು ಪಡೆಯಲು ರಾಜ್ಯ ಸರ್ಕಾರ ಏಪ್ರಿಲ್ 17 ರಂದು ವಿಶೇಷ ಸಭೆ ಕರೆಯಲು ನಿರ್ಧರಿಸಿದೆ. ಅಂದು ಮತ್ತೊಮ್ಮೆ ವಿಸ್ತೃತವಾಗಿ ಚರ್ಚಿಸಿ ಮುಂದಿನ ತೀರ್ಮಾನಕ್ಕೆ ಬರಲು ನಿರ್ಧರಿಸಲಾಗಿದೆ. ಇಂದಿನ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ ಪರಮೇಶ್ವರ್, ಶಿವರಾಜ್ ತಂಗಡಗಿ, ರಾಮಲಿಂಗ ರೆಡ್ಡಿ, ಹೆಚ್ ಕೆ ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಚೆಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ಬೋಸರಾಜು, ಪ್ರಿಯಾಂಕ್ ಖರ್ಗೆ, ಕೆ.ಜೆ ಜಾರ್ಜ್ , ಶಿವಾನಂದ ಪಾಟೀಲ್, ಕೆ.ಎನ್ ರಾಜಣ್ಣ, ದಿನೇಶ್ ಗುಂಡೂರಾವ್ ಹಾಜರಿದ್ದರು. ಆರು ಮಂದಿ ಸಚಿವರು ಗೈರಾಗಿದ್ದರು.
ಇದನ್ನೂ ಓದಿ: ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಲೇಟಾಗಿದೆ ಅನ್ನೋದು ಅಪ್ರಸ್ತುತ -ಏನಂದ್ರು ಕಾಂತರಾಜು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ