/newsfirstlive-kannada/media/post_attachments/wp-content/uploads/2025/01/Karnataka-Cricket-Team.jpg)
ಕೊಟ್ಯಂತರ ಕನ್ನಡಿಗರ ಪ್ರಾರ್ಥನೆ ಫಲಿಸಿದೆ. ಕೆಲ ವರ್ಷಗಳಿಂದ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳನ್ನ ಕಾಡಿದ್ದ ಟ್ರೋಫಿ ಕೊರಗಿಗೆ ಕೊನೆಗೂ ಬ್ರೇಕ್​ ಬಿದ್ದಿದೆ. ವಡೋದರಾದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ವಿದರ್ಭ ಪಡೆಯನ್ನ ಮಣಿಸಿ ಕರ್ನಾಟಕ ತಂಡದ ಚಾಂಪಿಯನ್​ ಪಟ್ಟಕ್ಕೇರಿದೆ.
ಕನ್ನಡಿಗ VS ಕನ್ನಡಿಗರು.. ಈ ಬಾರಿಯ ವಿಜಯ್​ ಹಜಾರೆ ಟೂರ್ನಿಯ ಫೈನಲ್​ ಫೈಟ್​ ಈ ಕಾರಣಕ್ಕೆ ಸಿಕ್ಕಾಪಟ್ಟೆ ಕುತೂಹಲ ಹುಟ್ಟು ಹಾಕಿತ್ತು. ಈ ಕುತೂಹಲದ ಫೈಟ್​ನಲ್ಲಿ ಕನ್ನಡಿಗರು ಗೆದ್ದು ಬೀಗಿದ್ದಾರೆ. ಕನ್ನಡಿಗ ಕರುಣ್​ ನಾಯರ್​ ನೇತೃತ್ವದ ವಿದರ್ಭವನ್ನ ಮಯಾಂಕ್​ ಅಗರ್​ವಾಲ್​ ನೇತೃತ್ವದ ಕನ್ನಡಿಗರು ಬಗ್ಗು ಬಡಿದಿದ್ದಾರೆ. ವಡೋದರಾದ ಕೊಟಂಬಿ ಸ್ಟೇಡಿಯಂನಲ್ಲಿ ಕನ್ನಡದ ಭಾವುಟವನ್ನ ಹೆಮ್ಮೆಯಿಂದ ಹಾರಿಸಿ ಚಾಂಪಿಯನ್​ ಪಟ್ಟವೇರಿದ್ದಾರೆ. 5ನೇ ಬಾರಿ ವಿಜಯ್​ ಹಜಾರೆ ಟ್ರೋಫಿ ಕರ್ನಾಟಕದ ಪಾಲಾಗಿದೆ.
ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗಿಳಿದ ಕರ್ನಾಟಕ ತಂಡ ಆರಂಭದಲ್ಲಿ ಆಘಾತದ ಮೇಲೆ ಆಘಾತ ಎದುರಿಸಿತು. ಸಾಲಿಡ್​ ಫಾರ್ಮ್​ನಲ್ಲಿದ್ದ ದೇವದತ್​ ಪಡಿಕ್ಕಲ್​ 8 ರನ್​ಗಳಿಗೆ ಆಟ ಅಂತ್ಯಗೊಳಿಸಿದ್ರು, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನೀಶ್​ ಕೆವಿ ಕೂಡ ವಿಗ್​ ಸ್ಕೋರ್​ ಕಲೆ ಹಾಕುವಲ್ಲಿ ಫೇಲ್​ ಆದ್ರು. ಇನ್ನು, ನಾಯಕ ಮಯಾಂಕ್​ ಅಗರ್​​ವಾಲ್​ 31 ರನ್​ಗಳಿಸಿ ಔಟಾದ್ರು.
ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ನೆರವಾದ ಸ್ಮರಣ್​, ಶ್ರೀಜಿತ್​.!
14.3 ಓವರ್​, 67 ರನ್​, 3 ವಿಕೆಟ್​.. ಕರ್ನಾಟಕ ತಂಡ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಕ್ರಿಸ್​ನಲ್ಲಿ ಜೊತೆಯಾಗಿದ್ದು ಸ್ಮರಣ್​ ರವಿಚಂದ್ರನ್​ ಹಾಗೂ ಕೆಎಲ್​ ಶ್ರೀಜಿತ್​​! 4ನೇ ವಿಕೆಟ್​ಗೆ ಜೊತೆಯಾದ ಕರ್ನಾಟಕದ ಈ ಯುವ ಆಟಗಾರರು ವಿದರ್ಭ ಬೌಲರ್​ಗಳ ಬೆಂಡೆತ್ತಿದ್ರು. ಒತ್ತಡದ ಸಂದರ್ಭದಲ್ಲಿ ಎಚ್ಚರಿಕೆಯ ಆಟವಾಡಿದ ಈ ಜೋಡಿ ಬರೋಬ್ಬರಿ 160 ರನ್​ಗಳ ಕಾಣಿಕೆ ನೀಡಿತು.
ಸಂಕಷ್ಟದ ಸಂದರ್ಭದಲ್ಲಿ ದಿಟ್ಟ ಹೋರಾಟ ನಡೆಸಿದ ಶ್ರೀಜಿತ್​​ ಹಾಫ್​ ಸೆಂಚುರಿ ಪೂರೈಸಿದ್ರು. 9 ಬೌಂಡರಿ, 1 ಸಿಕ್ಸರ್​ ಸಿಡಿಸಿ ಮಿಂಚಿದ್ರು.
ಶತಕ ಸಿಡಿಸಿ ಸಂಭ್ರಮಿಸಿದ ಸ್ಮರಣ್​ ರವಿಚಂದ್ರನ್​.!
78 ರನ್​ಗಳಿಸಿ ಶ್ರೀಜಿತ್​ ಔಟಾದ್ರೆ, ಸ್ಮರಣ್ ವಿದರ್ಭ ಬೌಲರ್​ಗಳ ಮೇಲೆ ಸವಾರಿ ಮುಂದುವರೆಸಿದ್ರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಭಿನವ್​ ಮನೋಹರ್​ ಜೊತೆಗೆ ಸ್ಮರಣ್​​ 106 ರನ್​ಗಳ ಜೊತೆಯಾಟವಾಡಿದ್ರು. 92 ಎಸೆತಗಳಲ್ಲೇ ಶತಕ ಸಿಡಿಸಿ ಸಂಭ್ರಮಿಸಿದ್ರು.
ಅಂತಿಮ ಹಂತದಲ್ಲಿ ಅಭಿನವ್​ ಮನೋಹರ್​ ಸ್ಪೋಟ.!
92 ಎಸೆತ ಎದುರಿಸಿ 7 ಬೌಂಡರಿ, 3 ಸಿಕ್ಸರ್​ ಸಹಿತ ಸ್ಮರಣ್​​ 101 ರನ್​ ಸಿಡಿಸಿ ಔಟಾದ್ರು, ಆದ್ರೆ, ಅಭಿನವ್​ ಮನೋಹರ್​ ಅಬ್ಬರ ಮುಂದುವರೆಯಿತು. 188ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ ಅಭಿನವ್​​ 10 ಬೌಂಡರಿ, 4 ಸಿಕ್ಸರ್​​ಗಳ ನೆರವಿನಿಂದ 79 ರನ್​ ಚಚ್ಚಿದ್ರು.
ಕೊನೇ ಹಂತದಲ್ಲಿ ಹಾರ್ದಿಕ್​ ರಾಜ್, ಶ್ರೇಯಸ್​ ಗೋಪಾಲ್​ ಅಲ್ಪ ಕಾಣಿಕೆ ನೀಡಿದ್ರು. ಅಂತಿಮವಾಗಿ ಕರ್ನಾಟಕ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್​ ಕಲೆ ಹಾಕಿತು.
‘ರನ್​ಮಷೀನ್​’ ಕರುಣ್​ ಆಟಕ್ಕೆ ಪ್ರಸಿದ್ಧ್ ಬ್ರೇಕ್​.!
349 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ವಿದರ್ಭ ತಂಡಕ್ಕೆ ಆರಂಭದಲ್ಲೇ ಅಭಿಲಾಷ್​ ಶೆಟ್ಟಿ ಶಾಕ್​ ನೀಡಿದ್ರು. 22 ರನ್​ಗಳಿಸಿದ್ದ ಯಶ್​ ರಾಥೋಡ್​ ಆಟಕ್ಕೆ ಬ್ರೇಕ್​ ಹಾಕಿದ್ರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಜಯ್​ ಹಜಾರೆ ಟೂರ್ನಿಯ ರನ್​ಮಷೀನ್​ ಕರುಣ್​ ನಾಯರ್​ ಆಟಕ್ಕೆ ಪ್ರಸಿದ್ಧ್ ಕೃಷ್ಣ ಬ್ರೇಕ್​ ಹಾಕಿದ್ರು. ಪ್ರಸಿದ್ಧ್​ ಬೌಲಿಂಗ್​ನಲ್ಲಿ ಕಕ್ಕಾಬಿಕ್ಕಿಯಾದ ಕರುಣ್​, ಕ್ಲೀನ್​ ಬೋಲ್ಡ್​ ಆದ್ರು.
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯಶ್​ ಕದಮ್​ ಹಾರ್ದಿಕ್​ ರಾಜ್​ ಬೌಲಿಂಗ್​ನಲ್ಲಿ ಮಂಡಿಯೂರಿದ್ರು. ಆದ್ರೆ, ನಾಲ್ಕನೇ ವಿಕೆಟ್​ಗೆ ಜೊತೆಯಾದ ಜಿತೇಶ್​ ಶರ್ಮಾ, ಧ್ರುವ್​ ಶೋರೆ ಕರ್ನಾಟಕದ ಬೌಲರ್​ಗಳನ್ನ ಕೆಲ ಕಾಲ ಕಾಡಿದ್ರು. ಅಂತಿಮವಾಗಿ ವಿ ಕೌಶಿಕ್​ ಪಾರ್ಟನರ್​ಶಿಪ್​ನ ಬ್ರೇಕ್​ ಮಾಡಿದ್ರು. ಜಿತೇಶ್​ ಶರ್ಮಾ ಆಟ 34 ರನ್​ಗಳಿಗೆ ಅಂತ್ಯವಾಯ್ತು.
ದೃವ್​ ಶೋರೆ ದಿಟ್ಟ ಹೋರಾಟ, ಸಂಕಷ್ಟದಲ್ಲಿ ಶತಕ.!
ಇನ್ನೊಂದು ತುದಿಯಲ್ಲಿದ್ದ ಆರಂಭಿಕ ದೃವ್​​ ಶೋರೆ ಸಾಲಿಡ್​ ಬ್ಯಾಟಿಂಗ್​ ನಡೆಸಿದ್ರು. 36ನೇ ಓವರ್​ನ ​ 3ನೇ ಎಸೆತವನ್ನ ಸಿಕ್ಸರ್​ ಸಿಡಿಸಿದ ಧೃವ್​ ಶೋರೆ 99 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ರು.
ಶುಭಮ್​ ದುಬೆ ಕ್ರಿಸ್​ಗೆ ಬಂದಷ್ಟೇ ವೇಗವಾಗಿ ನಿರ್ಗಮಿಸಿದ್ರೆ, ದೃವ್​ ಶೋರೆ ಶತಕ ಸಿಡಿಸಿ ಔಟಾದ್ರು. ಅಪೂರ್ವ ವಾಂಖಡೆ, ನಚಿಕೇತ್​ ಭತೆಗೆ ವಿ.ಕೌಶಿಕ್​​ ಪೆವಿಲಿಯನ್​ ದಾರಿ ತೋರಿಸಿದ್ರು. ದರ್ಶನ್​ ನಲ್ಕಂಡೆ ಆಟಕ್ಕೆ ಪ್ರಸಿದ್ಧ್​ ಫುಲ್​ ಸ್ಟಾಫ್​ ಹಾಕಿದ್ರು.
8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹರ್ಷ್​​ದುಬೆ ಬೌಂಡರಿ, ಸಿಕ್ಸರ್​ ಸಿಡಿಸಿ ಅಬ್ಬರಿಸಿದ್ರು. ಕೇವಲ 30 ಎಸೆತಗಳಲ್ಲೇ 63 ರನ್​ ಸಿಡಿಸಿ ಮಿಂಚಿದ್ರು. ಆದ್ರೆ, ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದ್ರು. ಹರ್ಷ್​​ದುಬೆ ವಿಕೆಟ್​ನ ಅಭಿಲಾಷ್​ ಶೆಟ್ಟಿ ಕಬಳಿಸೋದ್ರೊಂದಿಗೆ ಕರ್ನಾಟಕ ತಂಡ ಗೆದ್ದು ಬೀಗಿತು.
ವಿದರ್ಭ ತಂಡವನ್ನ 312 ರನ್​ಗಳಿಗೆ ಆಲೌಟ್​ ಮಾಡಿದ ಕರ್ನಾಟಕ 36 ರನ್​ಗಳ ಗೆಲುವು ದಾಖಲಿಸಿತು. ಈ ಮೂಲಕ ಕರ್ನಾಟಕ ತಂಡ 5ನೇ ಬಾರಿ ವಿಜಯ್​​​ ಹಜಾರೆ ಕಿರೀಟಕ್ಕೆ ಮುತ್ತಿಕ್ಕಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us