/newsfirstlive-kannada/media/post_attachments/wp-content/uploads/2025/05/RAINS.jpg)
ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ವರುಣಾರಾಯ ಆರ್ಭಟಿಸಿ, ಬೊಬ್ಬಿರಿದಿದ್ದಾನೆ. ಗುಡುಗು, ಸಿಡಿಲು, ಮಿಂಚಿನೊಡೆಗೆ ಸುರಿದ ಜೋರು ಮಳೆಗೆ ಸಾಕಷ್ಟು ಹಾನಿಯಾಗಿದೆ. ಮಳೆಯ ನರ್ತನ ಜೊತೆಗೆ ಕುಣಿದ ಸಿಡಿಲಿನ ರೌದ್ರಾವತಾರಕ್ಕೆ ಬಳ್ಳಾರಿಯಲ್ಲಿ ಮೂವರು, ಕೊಪ್ಪಳದಲ್ಲಿ ಇಬ್ಬರು, ಚಿಕ್ಕಮಗಳೂರು ಹಾಗೂ ವಿಜಯಪುರದಲ್ಲಿ ಒಬ್ಬೊಬ್ಬರು ಜೀವ ಕಳೆದುಕೊಂಡಿದ್ದಾರೆ.
ಬಳ್ಳಾರಿಯ ಸಿರಗುಪ್ಪ ತಾಲ್ಲೂಕಿನ ರಾರಾವಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರ ದಾರುಣವಾಗಿ ಪ್ರಾಣ ಬಿಟ್ಟಿದ್ದಾರೆ. ರಾರಾವಿ ಗ್ರಾಮದ ಭೀರಪ್ಪ (45), ಸುನೀಲ್ (26) ಹಾಗೂ ವಿನೋದ್ (14) ಮೃತ ದುರ್ದೈವಿಗಳು. ಇವರು ಕುರಿ ಮೇಯಿಸಲು ಹೋಗಿದ್ದರು. ಈ ವೇಳೆ ಮಳೆ ಬಂದಿದ್ದರಿಂದ ಮರದ ಕೆಳಗೆ ಆಶ್ರಯ ಪಡೆದಿದ್ದರು. ಆಗ ಸಿಡಿಲು ಬಡಿದಿದ್ದರಿಂದ ಪ್ರಾಣ ಬಿಟ್ಟಿದ್ದಾರೆ. ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರದಲ್ಲಿ ಸಿಡಿಲು ಬಡಿದು ರೈತ ಜೀವ ಬಿಟ್ಟಿದ್ದಾರೆ. ಮೈಲಾಪುರ ಗ್ರಾಮದ ಬಸನಗೌಡ (39) ಪ್ರಾಣ ಕಳೆದುಕೊಂಡ ರೈತ. ಭತ್ತವನ್ನು ಕಟಾವು ಮಾಡಿ ಒಣಗಿಸಲು ಹಾಕಿದ್ದರು. ಈ ವೇಳೆ ಜೋರು ಮಳೆ ಬಂದಿದ್ದರಿಂದ ಭತ್ತವನ್ನು ಉಳಿಸಿಕೊಳ್ಳಲು ಹೋಗಿದ್ದಾಗ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾನೆ. ಕಾರಟಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ನಟಿ ಅಂಕಿತಾ ಅಮರ್ಗೆ ಒಲಿದ ಅದೃಷ್ಟ; ಸ್ಟಾರ್ ನಟನಿಗೆ ಜೋಡಿಯಾದ ಯುವರಾಣಿ!
ಕೊಪ್ಪಳದಲ್ಲಿ ಸಿಡಿಲು ಬಡಿದು ಮತ್ತೊರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯಾದ್ಯಂತ ಭಾರೀ ಗುಡುಗು, ಬಿರುಗಾಳಿ, ಸಿಡಿಲಿನ ಸಮೇತ ಜೋರು ಮಳೆ ಆಗಿದೆ. ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಘಟನೆ ನಡೆದಿದ್ದು ಹೊಲಕ್ಕೆ ಹತ್ತುಗಳನ್ನು ಕರೆದುಕೊಂಡು ಹೋಗಿದ್ದ ರೈತ ಜೀವ ಬಿಟ್ಟಿದ್ದಾನೆ. ಇನ್ನು ಬೆಲೆ ಬಾಳುವ ಎತ್ತುಗಳು ಕೂಡ ಮೃತಪಟ್ಟಿವೆ. ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಯಂಕಪ್ಪ ಜಾಡಿ (45) ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು.
ಕಾಫಿನಾಡಲ್ಲಿ ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಕಡೂರು ತಾಲೂಕಿನ ಗೆದ್ಲೆಹಳ್ಳಿಯಲ್ಲಿ ಕುರಿಗಾಯಿ ಒಬ್ಬರು ಜೀವ ಬಿಟ್ಟಿದ್ದಾರೆ. ಗೆದ್ಲೆಹಳ್ಳಿಯ ಲೋಕೇಶಪ್ಪ (48) ಮೃತ ದುರ್ದೈವಿ. ಜಮೀನಿನಲ್ಲಿ ಕುರಿ ಕಾಯುವಾಗ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಓರ್ವ ಸಾವನ್ನಪ್ಪಿದ್ದಾನೆ. ತಂಗಡಗಿ ಗ್ರಾಮದ ಮಲ್ಲಪ್ಪ ಗುರಶಾಂತಪ್ಪ ತಾಳಿಕೋಟಿ (47) ಜೀವ ಕಳೆದುಕೊಂಡವರು. ಹಸು ಮೇಯಿಸಲು ಹೊರ ಹೋಗಿದ್ದರು. ಈ ವೇಳೆ ಜೋರು ಸುರಿದ ಮಳೆಯಿಂದಾಗಿ ಆಶ್ರಯ ಪಡೆಯಲು ಹುಣಸೆ ಮರದ ಕೆಳಗೆ ನಿಂತಿದ್ದರು. ಆದರೆ ಸಿಡಿಲಿಗೆ ಬಲಿಯಾಗಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ