/newsfirstlive-kannada/media/post_attachments/wp-content/uploads/2025/03/NO-SHAMPOO-SOAP-1.jpg)
ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂಥ ಆಹಾರ ಪದಾರ್ಥಗಳ ವಿರುದ್ಧ ಆಹಾರ ಇಲಾಖೆ ಸಮರ ಸಾರಿದೆ. ಇದರ ಬೆನ್ನಲ್ಲೇ ಪರಿಸರ ಸಂರಕ್ಷಣೆ ಕಡೆಗೂ ಸರ್ಕಾರ ಕಣ್ಣ ಹಾಯಿಸಿದೆ. ನದಿ, ಸರೋವರ, ಕಲ್ಯಾಣಿಗಳ ಮಾಲಿನ್ಯವನ್ನು ತಡೆಗಟ್ಟಲು ಅರಣ್ಯ ಸಚಿರುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.
ಗಂಗಾ ಪಾನ, ತುಂಗಾ ಸ್ನಾನ ಎಂಬ ಮಾತಿದೆ, ನಮ್ಮ ದೇಶದಲ್ಲಿ ನದಿಗಳಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಕಾವೇರಿಯನ್ನು ಜೀವ ನದಿ ಎಂದು ಪೂಜ್ಯ ಭಾವನೆಯಿಂದ ಕಾಣುತ್ತೇವೆ. ಕಾವೇರಿ ಮಾತ್ರವಲ್ಲ, ನೇತ್ರಾವತಿ, ತುಂಗಭದ್ರಾ ನದಿಗಳ ಪುಣ್ಯ ಸ್ನಾನ ಮಾಡಿ, ದೇವರ ದರ್ಶನ ಪಡೆದು ಪುನೀತರಾಗ್ತೀವಿ. ಆದ್ರೆ, ಭಕ್ತರ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ ಬಹುತೇಕ ನದಿಗಳು ಮಾಲಿನ್ಯ ಆಗ್ತಿವೆ. ಇದೀಗ ಅದನ್ನು ತಡೆಗಟ್ಟಲು ಅರಣ್ಯ ಮತ್ತು ಪರಿಸರ ಇಲಾಖೆ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಇದನ್ನೂ ಓದಿ:ಸಿಎಂ ಎದುರಲ್ಲೇ ಸಚಿವರ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ ಶಾಸಕರು.. ಬೆನ್ನಲ್ಲೇ ಕಟ್ಟಪ್ಪಣೆ ಹೊರಡಿಸಿದ ಸಿದ್ದು..!
ಆರೋಗ್ಯದ ಕಾಳಜಿ ದೃಷ್ಟಿಯಿಂದ ಆಹಾರ ಪದಾರ್ಥಗಳ ಗುಣಮಟ್ಟದ ಪರಿಶೀಲನೆಗಿಳಿದು, ಜನರ ಜೀವ ರಕ್ಷಣೆಗೆ ಮುಂದಾಗಿದ್ದ ಸರ್ಕಾರ, ಇದೀಗ ಪರಿಸರ ರಕ್ಷಣೆಗೂ ಪಣತೊಟ್ಟಿದೆ. ಪುಣ್ಯ ಕ್ಷೇತ್ರಗಳ ನದಿ, ಸರೋವರ, ಕಲ್ಯಾಣಿಗಳ ಶುಚಿತ್ವ ಕಾಪಾಡಲು, ಸ್ನಾನಘಟ್ಟದ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಮಾರಾಟ ಮಾಡದಂತೆ ನಿಷೇಧಿಸಿಲು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚಿಕ್ಕ ಚಿಕ್ಕ ಶ್ಯಾಂಪೂ ಪ್ಯಾಕೆಟ್, ಕಡಿಮೆ ಬೆಲೆಯ ಸಣ್ಣ ಸೋಪುಗಳು ನದಿ, ಸರೋವರ, ಕಲ್ಯಾಣಗಳ ಬಳಿಯೇ ಇರುವ ಅಂಗಡಿಗಳಲ್ಲಿ ಲಭಿಸುತ್ತವೆ. ಸುಲಭವಾಗಿ ಖರೀದಿಸುವ ಜನರು ಅದನ್ನು ಬಳಸಿ ಉಳಿದ ಸೋಪು, ಶ್ಯಾಂಪೂ ಸ್ಯಾಚೆಟ್‍ಗಳನ್ನು ನೀರಿನಲ್ಲಿ ಅಥವಾ ದಂಡೆಯಲ್ಲಿ ಎಸೆದು ಹೋಗುತ್ತಾರೆ. ಇದು ನೀರಲ್ಲಿ ಬೆರೆತು ಜಲಚರಗಳು ಸಾವನ್ನಪ್ಪುತ್ತಿದ್ದರೆ, ಈ ನೀರು ಕುಡಿಯುವ ಜನ, ಜಾನುವಾರುಗಳು ಕಾಯಿಲೆಯಿಂದ ಬಳಲುವಂತಾಗಿದೆ. ಈ ನಿಟ್ಟಿನಲ್ಲಿ ನದಿಗಳ ಸಮೀಪ ಶ್ಯಾಂಪೂ, ಸೋಪು ಲಭ್ಯವಾಗದಂತೆ ತಡೆಯಲು ಈ ಕ್ರಮ ಅನಿವಾರ್ಯ ಅನ್ನೋದು ಸಚಿವರ ಮಾತಾಗಿದೆ.
ಇದರ ಜೊತೆಗೆ ಜನರು ನದಿಗಳಲ್ಲಿ ವಸ್ತ್ರಗಳನ್ನು ವಿಸರ್ಜನೆ ಮಾಡುತ್ತಿದ್ದು, ಕೆಲವು ತೀರ್ಥ ಕ್ಷೇತ್ರಗಳಲ್ಲಿ ರಾಶಿ ರಾಶಿ ವಸ್ತ್ರ ಬಿದ್ದಿರುವುದು ಗೋಚರಿಸುತ್ತದೆ. ಈ ಹಿನ್ನೆಲೆಯಲ್ಲಿ ಭಕ್ತರು ತಮ್ಮ ವಸ್ತುಗಳನ್ನ ನದಿ ತೀರದಲ್ಲಿ ವಿಸರ್ಜಿಸದಂತೆ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:ಒಂದೇ ದಿನ ಹೋಳಿ ಮತ್ತು ರಂಜಾನ್; ಉತ್ತರ ಭಾರತದಲ್ಲಿ ಬಿಗುವಿನ ವಾತಾವರಣ; ಏನಂದ್ರು ಸಿಎಂ ಯೋಗಿ?
ಪ್ರಕೃತಿ, ಪರಿಸರ ಚೆನ್ನಾಗಿದ್ದರೆ.. ನಾವು ಕೂಡ ಚೆನ್ನಾಗಿರಬಹುದು.. ಶುದ್ಧ ಗಾಳಿ.. ಶುದ್ಧ ನೀರು ಎಲ್ಲರಿಗೂ ಅತ್ಯಗತ್ಯ. ಹೀಗಾಗಿ ಪರಿಸರವನ್ನ ರಕ್ಷಣೆ ಮಾಡೋದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ. ಪ್ರತಿಯೊಬ್ಬರ ನಾಗರೀಕನದ್ದು ಕೂಡ. ಹೀಗಾಗಿ ಅರಣ್ಯ ಸಚಿವರು ಕೈಗೊಂಡಿರುವ ನಿರ್ಧಾರ ನಿಜಕ್ಕೂ ಶ್ಲಾಘನೀಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ