/newsfirstlive-kannada/media/post_attachments/wp-content/uploads/2025/07/love-story1.jpg)
ಈಗಂತೂ ಯಾರಿಗೆ, ಯಾರ ಮೇಲೆ ಲವ್ ಆಗುತ್ತೆ ಅಂತ ಹೇಳೋದು ಕಷ್ಟ. ಪ್ರೀತಿಗೆ ವಯಸ್ಸು, ಜಾತಿ, ಧರ್ಮದ ಹಂಗಿಲ್ಲ. ಪ್ರೀತಿ ಅನ್ನೋದೊಂದು ಒಂದು ಶಕ್ತಿ. ಯಾರಿಗೆ, ಯಾರ ಮೇಲೆ, ಯಾವಾಗ, ಹೇಗೆ ಬೇಕಾದ್ರೂ ಲವ್ ಆಗಿ ಬಿಡಬಹುದು. ಆದ್ರೆ, ತಾನು ಪ್ರೀತಿಸಿದ ಹುಡುಗಿಯನ್ನು ಕರೆದುಕೊಂಡು ಬರೋದಕ್ಕೆ ಹೋಗಿ ಪ್ರೇಮಿ ಜೈಲು ಪಾಲಾಗಿದ್ದಾನೆ.
ಹೌದು, ದೇಶದ ಕಣ್ಣು ತಪ್ಪಿಸಿ ಆಕೆಯನ್ನ ಭಾರತದೊಳಕ್ಕೆ ಕದ್ದು ಕರೆತಂದಿದ್ದ ಕರ್ನಾಟಕ ಮೂಲದ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ. ಬೀದರ್ ಮೂಲದ ದತ್ತಾ ಯಾದವ್ ಎಂಬಾತ ಬಾಂಗ್ಲಾ ಮಹಿಳೆಯ ಲವ್ನಲ್ಲಿ ಬಿದ್ದಿದ್ದ. ಆದ್ರೆ ದತ್ತಾ ದೇಶದ ವಿರುದ್ಧವಾಗಿ ಕೆಲಸ ಮಾಡಿ ಜೈಲು ಸೇರಿದ್ದಾನೆ.
ಇದನ್ನೂ ಓದಿ:ಬೆಣ್ಣೆಯಂತೆ ಕೊಬ್ಬು ಕರಗಿಸೋ ಬಟರ್ ಫ್ರೂಟ್.. ಇದರ ಆರೋಗ್ಯ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರಾ!
ಆಕೆ ಬಾಂಗ್ಲಾದೇಶದ ಮಹಿಳೆ ಗುಲ್ಶಾನಾ ಅಕ್ತರ್. ಈತ ಬೀದರ್ ಜಿಲ್ಲೆಯ ದತ್ತಾ ಯಾದವ್. ಇವರಿಬ್ಬರ ನಡುವೆ ಇದ್ದ ಪ್ರೀತಿ, ದೇಶದ ಕಾನೂನುನನ್ನ ಮೀರಿ ನಡೆಯುವಂತೆ ಮಾಡಿದೆ. ತಾನು ಪ್ರೀತಿಸುತ್ತಿದ್ದ ಬಾಂಗ್ಲಾದೇಶದ ಮಹಿಳೆಯನ್ನ ಭಾರತಕ್ಕೆ ಕರೆ ತಂದಿದ್ದಾನೆ. ಅಕ್ರಮವಾಗಿ ಬಾಂಗ್ಲಾದಿಂದ ಗಡಿ ದಾಟಲು ಸಹಾಯ ಮಾಡಿ ತ್ರಿಪುರಗೆ ಕರೆತಂದಿದ್ದಾನೆ. ಇಲ್ಲಿಂದ ಲವ್ ಸ್ಟೋರಿಯಲ್ಲಿ ಪೊಲೀಸ್ ಅಧ್ಯಾಯ ಆರಂಭವಾಗಿದೆ.
ಬಾಂಗ್ಲಾದೇಶದ ಬೊಗ್ರಾ ಜಿಲ್ಲೆಯ ನಿವಾಸಿಯಾಗಿರುವ ಈ ಮಹಿಳೆ ವೀಸಾ ಇಲ್ಲದೆ ತ್ರಿಪುರಾವನ್ನ ದಾಟಿದ್ದಾರೆ. ಸುಳಿವು ದೊರೆತ ತಕ್ಷಣ ಗಡಿ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿದೆ. ಬಾಂಗ್ಲಾ ಮಹಿಳೆ ಮತ್ತು ಯಾದವ್ರನ್ನ ಬಂಧಿಸಿ ತ್ರಿಪುರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಲವ್ ಬರ್ಡ್ಸ್ ಅಗರ್ತಲಾದಿಂದ ಬೆಂಗಳೂರಿಗೆ ಪ್ರಯಾಣಿಸಲು ಪ್ಲಾನ್ ಮಾಡಿಕೊಂಡಿದ್ದ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ. 35 ವರ್ಷದ ಮಹಿಳೆ ಮುಂಬೈನ ಬ್ಯೂಟಿ ಪಾರ್ಲರ್‌ನಲ್ಲಿ ಮತ್ತು ನಂತರ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಬಗ್ಗೆ ಗೊತ್ತಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾದ್ರೆ ಬೀದರ್‌ನ ದತ್ತಾ ಯಾದವ್ನನ್ನ ಭೇಟಿಯಾಗಿದ್ದು, ಇಬ್ಬರ ಮಧ್ಯೆ ಪ್ರೀತಿ ಅನ್ನೋ ಚಿಗುರು ಬೆಳೆದು ಮರವಾಗಿದೆ. ಇತ್ತೀಚೆಗೆ ಭಾರತದಿಂದ ತಮ್ಮ ಬಾಂಗ್ಲಾದೇಶಕ್ಕೆ ಆಕೆ ಹಿಂತಿರುಗಿದ್ದಳು. ಆದರೆ ಗುತ್ತಿಗೆದಾರನಾಗಿದ್ದ ದತ್ತಾ ಯಾದವ್, ಯುವತಿಯನ್ನ ಹಿಂತಿರುಗಿ ಬರುವಂತೆ ನಿತ್ಯ ಹೇಳ್ತಿದ್ದ ಅಂತ ಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗೆ ಪ್ಲಾನ್ ಮಾಡಿದ ರೀತಿ ಬರುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿರೋ ಪೊಲೀಸರು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇಬ್ಬರ ಮೇಲು ದಾಖಲಾದ ಕೇಸ್ಗಳು ಯಾವು..?
01. ಪಾಸ್‌ಪೋರ್ಟ್ ಕಾಯ್ದೆ ಉಲ್ಲಂಘನೆ
02. ವಿದೇಶಿಯರ ಕಾಯ್ದೆ ಉಲ್ಲಂಘನೆ
03. ಬಿಎನ್ಎಸ್ ಅಡಿ ಕೇಸ್
ಬಾಂಗ್ಲಾ ಯುವತಿ ಹಾಗೂ ದತ್ತಾ ಯಾದವ್ ವಿರುದ್ಧ ಪಾಸ್‌ಪೋರ್ಟ್ ಉಲ್ಲಂಘನೆ ಕಾಯ್ದೆ, ವಿದೇಶಿಯರ ಕಾಯ್ದೆ ಉಲ್ಲಂಘನೆ ಆರೋಪ ಮತ್ತು ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ. ಯುವತಿಗೆ ಅಕ್ರಮವಾಗಿ ಗಡಿ ದಾಟಲು ಸಹಾಯ ಮಾಡಿದ ಏಜೆಂಟ್ಗಳ ಬಗ್ಗೆ ತನಿಖೆ ಚುರುಕುಗೊಂಡಿದೆ. ಸದ್ಯ, ಮಾನವ ಕಳ್ಳಸಾಗಣೆ ಜಾಲದ ಬಗ್ಗೆ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ ಉತ್ತರ ಭಾರತದ ಪೊಲೀಸರು. ಆದ್ರೆ, ಈ ಲವ್ ಸ್ಟೋರಿ ಗಡಿಯಲ್ಲಿ ಶುರುವಾಗಿ ಕಂಬಿ ಹಿಂದೆ ಸೇರಿದ್ದು ಮಾತ್ರ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ