ಇಂದು ಭಾರೀ ಮಳೆಗೆ ತತ್ತರಿಸಿದ ಕರ್ನಾಟಕ; ಬೆಚ್ಚಿಬಿದ್ದ ಜನ; ಎಲ್ಲೆಲ್ಲಿ ಏನಾಯ್ತು?

author-image
Ganesh Nachikethu
Updated On
Rain Alert: ಬೆಂಗಳೂರಲ್ಲಿ ಮತ್ತೆ ಮಳೆ.. ನಾಳೆ ಹೇಗಿರುತ್ತೆ? ಹವಾಮಾನ ಇಲಾಖೆ ಹೇಳಿದ್ದೇನು?
Advertisment
  • ಕರ್ನಾಟಕವನ್ನೂ ಕಂಗಾಲ್ ಮಾಡಿದ ಫೆಂಗಲ್‌
  • ರಾಜ್ಯದಲ್ಲೂ ಫೆಂಗಲ್​ ಚಂಡಮಾರುತ ಅಬ್ಬರ
  • ವರುಣಾರ್ಭಟಕ್ಕೆ ಎಲ್ಲೆಡೆ ಸಮಸ್ಯೆಗಳ ಸರಮಾಲೆ

ಬೆಂಗಳೂರು: ಮಳೆಗಾಲ ಮುಗಿತು, ಚಳಿಗಾಲ ಶುರುವಾಯ್ತು ಅನ್ನೋಷ್ಟರಲ್ಲಿ ಎಂಟ್ರಿ ಕೊಟ್ಟ ಫೆಂಗಲ್ ಚಂಡಮಾರುತ ಮತ್ತೆ ಮಳೆಯನ್ನ ಹೊತ್ತು ಬಂದಿದೆ. ರಾಜ್ಯದ ಹಲವೆಡೆ ಸೈಕ್ಲೋನ್​ ಸಂಕಷ್ಟ ತಂದಿಟ್ಟಿದೆ. ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಅವಾಂತರಗಳನ್ನ ಸೃಷ್ಟಿಸ್ತಿದ್ದಾನೆ.

ತಮಿಳುನಾಡು, ಕೇರಳ ಬಳಿಕ ಫೆಂಗಲ್​ ಕರ್ನಾಟಕವನ್ನ ಕಂಗಾಲ್​ ಮಾಡಿದೆ. ರಾಜ್ಯದಲ್ಲೂ ಫೆಂಗಲ್​ ಚಂಡಮಾರುತ ಅಬ್ಬರಿಸ್ತಿದ್ದು, ವರುಣಾರ್ಭಟ ಎಲ್ಲೆಡೆ ಸಮಸ್ಯೆಗಳ ಸರಮಾಲೆ ಶುರುವಾಗಿದೆ.

ಫೆಂಗಲ್​ ಅಬ್ಬರಕ್ಕೆ ನಾಟಿ ಮಾಡಿದ್ದ ಭತ್ತ ಜಲಾವೃತವಾಗಿದ್ರೆ, ಅಡಿಕೆ, ಬಾಳೆ ತೋಟ ಮುಳುಗಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್​ ಚಂಡಮಾರುತ ಅಬ್ಬರ ಜೋರಾಗಿದ್ದು, ನಿನ್ನೆ ಸಂಜೆ ಭಾರೀ ಮಳೆಯಾಗಿದೆ. ಪರಿಣಾಮ ನಂದಿನಿ ನದಿ ಉಕ್ಕಿ ಹರಿದಿದ್ದು, ಕಿನ್ನಿಗೋಳಿ ಸುತ್ತಮುತ್ತಲ ಹೊಲ ಗದ್ದೆಗಳು ಮುಳುಗಡೆಯಾಗಿದೆ.

ಮಂಗಳೂರಲ್ಲಿ ಅಬ್ಬರ

ಮತ್ತೊಂದೆಡೆ ಗುಡ್ಡದಿಂದ ಹರಿದು ಬಂದ ಅಪಾರ ಪ್ರಮಾಣದ ನೀರು ಮನೆಗಳಿಗೆ ಜಲದಿಗ್ಬಂಧನ ಹಾಕಿದೆ. ಮಂಗಳೂರು ಏರ್​ಫೋರ್ಟ್​​​ನಿಂದ ನಿಲ್ದಾಣದ ಸಿಬ್ಬಂದಿ ಮಳೆ ನೀರನ್ನ ಏಕಾಏಕಿ ಬಿಡೋದ್ರಿಂದ ​ ಕೆಳಭಾಗದ ಗ್ರಾಮಗಳ ಮನೆಗಳಿಗೆ ನೀರು ನುಗ್ಗುತ್ತಿದೆ. ನೀರಿನ ಜೊತೆ ಗುಡ್ಡ ಕುಸಿತದಿಂದ ಮನೆಗಳಿಗೆ ಹಾನಿಯಾಗೋ ಆತಂಕ ಕಾಡ್ತಿದೆ.

ಇತ್ತ ಮಂಗಳೂರು ನಗರದ ಕರಂಗಲಪಾಡಿಯ ಸಿ.ಜಿ ಕಾಮತ್ ರಸ್ತೆಯಲ್ಲಿ ಜಲಸ್ಫೋಟ ಮಾದರಿಯ ಅವಘಡ ಸಂಭವಿಸಿದೆ. ನಿನ್ನೆ ಸುರಿದ ಭಾರೀ ಮಳೆಗೆ ಮೂರು ಮನೆಯ ಆವರಣ ಗೋಡೆ ಕುಸಿತವಾಗಿದೆ. ಅದೃಷ್ಟವಶಾತ್ ಎಲ್ಲರೂ ಮನೆಯೊಳಗಿದ್ದರಿಂದ ದುರಂತ ತಪ್ಪಿದೆ.

ಚಂಡಮಾರುತದ ಅಬ್ಬರಕ್ಕೆ ಬಂದರಿನಲ್ಲಿ ಲಂಗರು ಹಾಕಿದ್ದ 10ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಕೊಚ್ಚಿ ಹೋಗಿವೆ. ಕೊಚ್ಚಿ ಹೋದ ದೋಣಿಗಳನ್ನ ಮೀನುಗಾರರು ಎಳೆದು ತಂದಿದ್ದಾರೆ.

ಉಡುಪಿಯಲ್ಲೂ ಧಾರಕಾರ ಮಳೆ

ಉಡುಪಿ ಜಿಲ್ಲೆಗೂ ಫೆಂಗಲ್ ಸೈಕ್ಲೋನ್​​ ಎಫೆಕ್ಟ್​ ತಟ್ಟಿದೆ. ಜಿಲ್ಲೆಯಾದ್ಯಂತ ರಾತ್ರಿ ಧಾರಾಕಾರ ಮಳೆಯಾಗ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೂ, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಕಡಲು ಅಬ್ಬರಿಸ್ತಿದ್ದು, ಮಲ್ಪೆ ಬೀಚ್​​, ಸೈಂಟ್ ಮೇರಿಸ್ ದ್ವೀಪಕ್ಕೆ ನಿರ್ಬಂಧ ಮಾಡಲಾಗಿದೆ. ಹೀಗಾಗಿ ಸಮುದ್ರ ವೀಕ್ಷಿಸಲು ಬಂದ ಪ್ರವಾಸಿಗರಿಗೆ ನಿರಾಸೆಯಾಗಿದ್ದು, ದೂರದಿಂದಲೇ ಎಂಜಾಯ್ ಮಾಡುತ್ತಿದ್ದಾರೆ. ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಜಿಟಿ ಜಿಟಿ ಮಳೆಗೆ ಮೈಸೂರಿನಲ್ಲಿ ಮರಗಳು ಧರೆಗುರಳಿದೆ. ಮೈಸೂರಿನ ಸರಸ್ವತಿಪುರಂನಲ್ಲಿ ಎರಡು ಮರಗಳು ಉರುಳಿ ಬಿದ್ದ ಪರಿಣಾಮ 2 ಕಾರು ಜಖಂ ಆಗಿದೆ. ಮತ್ತೊಂದೆಡೆ ಜಿಲ್ಲೆಯಾದ್ಯಂತ ಸುರಿಯುತ್ತಿರೋ ಮಳೆ ಹುಣಸೂರು ತಾಲೂಕಿನ ಕಾಳೆನಹಳ್ಳಿಯಲ್ಲಿ ಕಟಾವಿಗೆ ಬಂದಿದ್ದ ಭತ್ತವನ್ನ ಅಪೋಷಣೆ ಪಡೆದುಕೊಂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಕಂಗಾಲಾಗಿದ್ದಾರೆ.

ಇನ್ನೂ, ನಿರಂತರ ಮಳೆಯಿಂದಾಗಿ ಮೈಸೂರು ಚಾಮುಂಡಿ ಬೆಟ್ಟದಲ್ಲಿ ಕಲ್ಲು ಬಂಡೆಗಳು ರಸ್ತೆಗೆ ಉರುಳಿದ್ದು, ಅದೃಷ್ಟವಶಾತ್​​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಕಲ್ಲು ಬಂಡೆಗಳು ರಸ್ತೆಗೆ ಉರುಳಿ ಬಿದ್ದಿದ್ರಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು.

ಚಿನ್ನದ ನಾಡು ಕೋಲಾರಕ್ಕೂ ಫೆಂಗಲ್ ಕಂಟಕವಾಗಿ ಪರಿಣಮಿಸಿದೆ. ನಿರಂತರ ಮಳೆಗೆ ರಾಗಿ, ಅವರೆ, ಟೊಮ್ಯಾಟೊ, ಬೀನ್ಸ್,. ಹೂವು, ಸೊಪ್ಪು ಸೇರಿ ಹಲವು ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಫೆಂಗಲ್​ನ ಆರ್ಭಟಕ್ಕೆ ಮಂಡ್ಯದಲ್ಲಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕೋಣನಹಳ್ಳಿ ಸುತ್ತಮುತ್ತ ಸಾವಿರಾರು ಹೆಕ್ಟರ್​ನಲ್ಲಿ ಬೆಳೆದ ಭತ್ತದ ಬೆಳೆ ಹಾನಿಯಾಗಿದೆ. ಒಟ್ನಲ್ಲಿ, ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಫೆಂಗಲ್​ ಚಂಡಮಾರುತ ತಮಿಳುನಾಡು, ಕೇರಳ ದಾಟಿ ಈಗ ರಾಜ್ಯದಲ್ಲಿ ಅವಾಂತರಗಳನ್ನ ಸೃಷ್ಟಿಸ್ತಿದೆ.

ಇದನ್ನೂ ಓದಿ: ಟೀಮ್​ ಇಂಡಿಯಾದಲ್ಲಿ ಭಾರೀ ಬದಲಾವಣೆ; KL ರಾಹುಲ್​ಗೆ ತನ್ನ ಸ್ಥಾನವನ್ನೇ ಬಿಟ್ಟುಕೊಟ್ಟ ರೋಹಿತ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment