/newsfirstlive-kannada/media/post_attachments/wp-content/uploads/2025/02/Bangalore-Press-Club.jpg)
ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯ ಅಧ್ಯಕ್ಷರಾದ ಲೋಕೇಶ್ವರ ಅವರು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯ ಸಮಸ್ಯೆಗಳ ಬಗ್ಗೆ ಹಾಗೂ ರಾಜ್ಯ ಕ್ರೀಡಾ ನೀತಿ ಮತ್ತು ಸರ್ವಾಧಿಕಾರ ಧೋರಣೆಯಿಂದ ಕರ್ನಾಟಕ ಕ್ರೀಡೆಯು ನಾಶವಾಗಿರುವ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕಳೆದ 75 ವರ್ಷಗಳಿಂದ ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯು ತಮ್ಮ ಕರ್ತವ್ಯವನ್ನು ಅಧಿಕೃತವಾಗಿ ಮಾಡಿಕೊಂಡಿರುವುದು ಸರಿಯಷ್ಟೇ. ಕಳೆದ 40 ವರ್ಷಗಳಲ್ಲಿ ರಾಷ್ಟ್ರ ಮಟ್ಟದ ಸ್ಫರ್ಧೆಗಳಲ್ಲಿ ಮೊದಲ 3 ಸ್ಥಾನಗಳಲ್ಲಿ ನಮ್ಮ ರಾಜ್ಯದ ಸ್ಥಾನವನ್ನು ಉಳಿಸಿಕೊಂಡು ಬಂದಿರುವುದು ಅಷ್ಟೇ ಸತ್ಯ. ಎರಡು ಬಾರಿ ಅರ್ಜುನ ಪ್ರಶಸ್ತಿ, ಹತ್ತಾರು ಬಾರಿ ರಾಷ್ಟ್ರ ಮಟ್ಟದ ಏಕಲವ್ಯ, ಝಾನ್ಸಿರಾಣಿ, ವೀರ ಅಭಿಮನ್ಯು, ಜಾನಕಿ ಭರತ ಮತ್ತು ಇಳಾ ಪ್ರಶಸ್ತಿಗಳನ್ನು ನಮ್ಮ ರಾಜ್ಯದ ಆಟಗಾರರು ಪಡೆದು ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿರುತ್ತಾರೆ. ಕಳೆದ ವಾರವಷ್ಟೇ ವಿಶ್ವ ಮಟ್ಟದ ಪಂದ್ಯಾವಳಿಯಲ್ಲಿ ಮಹಿಳಾ ಮತ್ತು ಪುರುಷರ ತಂಡದಲ್ಲಿ ಭಾರತ ದೇಶವು ಗೆದಿದ್ದು, ಆ ತಂಡಗಳಲ್ಲಿ ನಮ್ಮ ರಾಜ್ಯದ ಕುಮಾರಿ. ಚೈತ್ರ ಮತ್ತು ಗೌತಮ್ ಎಂಬ ಆಟಗಾರರು ಭಾಗವಹಿಸಿದ್ದು ಪ್ರಶಂಸನೆಗೆ ಒಳಗಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ವಿಶ್ವ ಸ್ಪರ್ಧೆಯಲ್ಲಿ ಗೆದ್ದ ನಮ್ಮ ಆಟಗಾರರಿಗೆ ನಮ್ಮ ರಾಜ್ಯ ಸರ್ಕಾರ ತಮ್ಮ ಕಳಪೆ ಕ್ರೀಡಾ ನೀತಿಯಿಂದ ಸರಿಯಾಗಿ ಗೌರವಿಸದೆ ಅವಮಾನ ಮಾಡಿದ್ದು, ಆಟಗಾರರಿಗೆ, ದೇಶದ ಕ್ರೀಡಾಭಿಮಾನಿಗಳಿಗೆ ನೋವಾಗಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಆ ಬಹುಮಾನದ ಹಣವನ್ನು ನಮ್ಮ ರಾಜ್ಯದ ಆಟಗಾರರು ಮತ್ತು ರಾಜ್ಯ ಸಂಸ್ಥೆಯು ತಿರಸ್ಕರಿಸಿದ್ದಾರೆ.
ಅದನ್ನು ಸರಿಪಡಿಸಬೇಕಂತ 10 ದಿನಗಳಿಗೂ ಹೆಚ್ಚು ದಿನ ಕಾಲಾವಕಾಶವನ್ನು ನಾವು ಸರ್ಕಾರಕ್ಕೆ ನೀಡಿದ್ದೆವು. ಈ ಬಗ್ಗೆ ಮುಖ್ಯಮಂತ್ರಿಗಳು ಸಹ ಸರಿಪಡಿಸುತ್ತೇನೆ ಅಂತ ಪತ್ರಿಕಾ ವರದಿಗಾರರಿಗೆ ತಿಳಿಸಿದ್ದರು. ಆದರೆ ಯಾವುದೇ ಸರಿಪಡಿಸುವ ಕೆಲಸ ಮಾಡಿರುವುದಿಲ್ಲ. ಇದಲ್ಲದೆ ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯು ರಾಷ್ಟ್ರೀಯ ಖೋ-ಖೋ ಫೆಡರೇಶನ್‌ಗೆ ಅಧಿಕೃತ ನೊಂದಣಿ ಆಗಿರುವಂತಹ ಸಂಸ್ಥೆ. ಇದಲ್ಲದೆ ನಮ್ಮ ಕರ್ನಾಟಕ ರಾಜ್ಯ ಸಂಸ್ಥೆಯು ಕರ್ನಾಟಕ ಒಲಂಪಿಕ್ ಸಂಸ್ಥೆಯ ಸಂಸ್ಥಾಪಕ ಸದಸ್ಯರಾಗಿದ್ದು ನಿಜ. ಕಳೆದ ಎಂಟು ವರ್ಷಗಳಿಂದ ನಮ್ಮ ಸಂಸ್ಥೆಗೆ ಯಾವುದೇ ನೋಟಿಸ್ ನೀಡದೆ ನಮ್ಮನ್ನು ನೋಂದಣಿ ಮಾಡಿಕೊಳ್ಳದೆ ಬೇರೆ ಒಂದು ನಕಲಿ ಸಂಸ್ಥೆಯನ್ನು ನೋಂದಣಿ ಮಾಡಿಕೊಂಡು ನಡೆಸುತ್ತಿರುವುದು ಸಹ ನಿಜ. ಹಾಗೂ 2014 ರಿಂದ 2025 ವರೆಗೆ ನಮ್ಮ ಸಂಸ್ಥೆಯ ಕ್ರೀಡಾ ಚಟುವಟಿಕೆ ನಡೆಸಲು ಕೊಡಬೇಕಾಗಿದ್ದ ಸರ್ಕಾರದ ಅನುದಾನವನ್ನು ಸಹ ನೀಡಿರುವುದಿಲ್ಲ. ಪ್ರತಿವರ್ಷ ನಮ್ಮ ರಾಜ್ಯದ ಕ್ರೀಡಾಪಟುಗಳನ್ನು ಸೀನಿಯರ್, ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗಗಳಲ್ಲಿ ಆಯ್ಕೆ ಮಾಡಿ ತರಬೇತಿ ನೀಡಿ ರಾಷ್ಟ್ರದ ವಿವಿಧ ಮಟ್ಟದ ಭಾಗಗಳಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವರಿಗೆ ಸಂಚಾರ ಭತ್ಯೆ ಆಹಾರ ಭತ್ಯೆ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಡಲು ಸುಮಾರು 20 ರಿಂದ 25 ಲಕ್ಷ ಖರ್ಚುಗಳಿರುತ್ತವೆ.
2018ರಲ್ಲಿ ಕರ್ನಾಟಕ ರಾಜ್ಯ ಮಾಡಿದ್ದ ಕ್ರೀಡಾ ನೀತಿಯಲ್ಲಿ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಂಸ್ಥೆಯು ತಮ್ಮ ಸರ್ವಾಧಿಕಾರಿ ಪ್ರವೃತ್ತಿಯನ್ನು ನಡೆಸಲು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗೋವಿಂದರಾಜುರವರು ರಾಜ್ಯದ ಎಲ್ಲಾ ಕ್ರೀಡಾ ಸಂಘಗಳು ಕರ್ನಾಟಕ ಒಲಂಪಿಕ್ ಸಂಸ್ಥೆಯ ಮೂಲಕವೇ ಸರ್ಕಾರದ ಅನುದಾನವನ್ನು ಕೇಳಬೇಕೆಂಬ ನಿಯಮವನ್ನು ಸೇರಿಸಿ ನಮ್ಮ ಸಂಸ್ಥೆಗೆ ನೋಂದಣಿ ಕೊಡದೆ ಅನುದಾನ ನೀಡದೆ ಅನ್ಯಾಯ ಮಾಡಿಸಿರುತ್ತಾರೆ. ಹಾಗೂ ರಾಷ್ಟ್ರೀಯ ಫೆಡರೇಶನ್‌ಗೆ ದಾಖಲಾಗದ ನಕಲಿ ರಾಜ್ಯ ಖೋ-ಖೋ ಸಂಸ್ಥೆ ಒಂದನ್ನು ಹುಟ್ಟುಹಾಕಿ, ಅವರಿಗೆ 10 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿ ನಿಜವಾದ ಕ್ರೀಡಾ ಸಂಸ್ಥೆಗೆ ಮತ್ತು ಕ್ರೀಡಾಪಟುಗಳಿಗೆ ಅನ್ಯಾಯ ಮಾಡಿರುತ್ತಾರೆ.
ಇದನ್ನೂ ಓದಿ: ಇನ್ಮುಂದೆ ನಾನು ಸುಮ್ಮನಿರಲ್ಲ.. ಪಕ್ಷ ಬಿಡುವ ಬಗ್ಗೆ ಶ್ರೀರಾಮುಲು ಹೇಳಿದ್ದೇನು? ಬಿಜೆಪಿಗೆ ಖಡಕ್ ಎಚ್ಚರಿಕೆ!
ರಾಜಕೀಯ ಪ್ರಭಾವದಿಂದ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಭಾರತೀಯ ಒಲಂಪಿಕ್ ಸಂಸ್ಥೆಯ ನಿಯಮಗಳನ್ನು ಗಾಳಿಗೆ ತೂರಿ ಯಾವುದನ್ನು ಪಾಲಿಸದೆ ಮೂರು ಅವಧಿಯ ನಂತರ ಮಧ್ಯಂತರ ವಿರಾಮ ನೀಡಿ ಮತ್ತೆ ಸ್ಪರ್ಧಿಸುವಂತಹ ಕಾನೂನಿದ್ದರೂ ಅವೆಲ್ಲವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಂಸ್ಥೆಯ ನಿಯಮಾವಳಿಗಳನ್ನು ಬದಲಾಯಿಸಿಕೊಂಡು ನಿರಂತರವಾಗಿ 24 ವರ್ಷಗಳಿಂದ ಅಧ್ಯಕ್ಷರಾಗಿಯೂ ಅನಂತರಾಜು ಎಂಬುವರು 22 ವರ್ಷಗಳಿಂದ ಕಾರ್ಯದರ್ಶಿಯಾಗಿಯೂ (ಎರಡು ಅವಧಿಯ ನಂತರ ಇವರು ಮಧ್ಯಂತರ ವಿರಾಮ ನೀಡಬೇಕಿತ್ತು) ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇವರಿಗೆ ರಾಜಕೀಯ ಬೆಂಬಲವಿದ್ದು ಕ್ರೀಡಾ ನಿಯಮಾವಳಿಯಂತೆ ಯಾವುದೇ ರಾಜಕೀಯ ಸಂಬಂಧ ಇಟ್ಟುಕೊಳ್ಳದೆ ಕ್ರೀಡಾ ಸಂಸ್ಥೆಯನ್ನು ನಡೆಸಿಕೊಂಡು ಹೋಗಬೇಕೆಂಬ ನಿಯಮವಿದ್ದರೂ ತಾವು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಎರಡು ಅವಧಿಯಲ್ಲಿ ಮತ್ತು ಕ್ರೀಡಾ ಸಂಸ್ಥೆಯ ಅಧ್ಯಕ್ಷರಾಗಿಯೂ ತಮ್ಮ ಸರ್ವಾಧಿಕಾರವನ್ನು ಮುಂದುವರೆಸಿರುತ್ತಾರೆ. ಮತ್ತು ಪ್ರತಿವರ್ಷ ಸರ್ಕಾರದ ಅನುದಾನದಲ್ಲಿ ರಾಜ್ಯಮಟ್ಟದ ಒಲಂಪಿಕ್ ಕ್ರೀಡೆಗಳನ್ನು ನಡೆಸುತ್ತಿರುವ ಗೋವಿಂದರಾಜುರವರು ತಮ್ಮನ್ನು ಬೆಂಬಲಿಸದ ಎಲ್ಲಾ ಅಧಿಕೃತ ಕ್ರೀಡಾ ಸಂಸ್ಥೆಗಳನ್ನು ದೂರ ಇಟ್ಟು ಈ ಸ್ಫರ್ಧೆಗಳನ್ನು ನಡೆಸುತ್ತಿರುವುದು ಸಹ ನಮ್ಮ ರಾಜ್ಯದ ಕ್ರೀಡಾಪಟುಗಳಿಗೆ ಅನ್ಯಾಯ ಆಗಿರುತ್ತದೆ.
1. ವಿಶ್ವಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದಂತಹ ಮಕ್ಕಳಿಗೆ ಪಕ್ಕದ ರಾಜ್ಯಗಳಲ್ಲಿ ನೀಡುತ್ತಿರುವಂತೆ A ಗ್ರೇಡ್ ಮತ್ತು B ಗ್ರೇಡ್ ಸರ್ಕಾರಿ ಹುದ್ದೆಯನ್ನು ನೀಡುವುದು ಮತ್ತು ಕನಿಷ್ಠ 50 ಲಕ್ಷ ರೂಪಾಯಿಗಳನ್ನಾದರೂ ಬಹುಮಾನದ ಹಣವಾಗಿ ಪ್ರತಿಯೊಬ್ಬ ಕ್ರೀಡಾಪಟುಗಳಿಗೆ ಕೊಡುವಂತಹ ನಿಯಮವನ್ನು ರೂಪಿಸಬೇಕು.
2. ಅಧಿಕೃತ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ಈ ಹಿಂದೆ ನೀಡುತ್ತಿದ್ದಂತೆ ನೇರವಾಗಿ ಮನವಿಯನ್ನು ಪಡೆದು ಅನುದಾನವನ್ನು ನೀಡುವ ಪದ್ಧತಿಯನ್ನು ಜಾರಿಗೊಳಿಸಬೇಕು. ಈಗ ಇರುವ ರಾಜ್ಯ ಒಲಂಪಿಕ್ ಸಂಸ್ಥೆಯ ಮೂಲಕ ಅನುದಾನ ಕೇಳುವ ಪದ್ದತಿಯನ್ನು ರದ್ದುಗೊಳಿಸಬೇಕು.
3. ಎಲ್ಲಾ ರಾಜ್ಯ ಅಧಿಕೃತ (ರಾಷ್ಟ್ರೀಯ ಫೆಡರೇಶನ್ಗೆ ನೋಂದಣಿಯಾದ) ರಾಜ್ಯ ಕ್ರೀಡಾ ಸಂಸ್ಥೆಗಳನ್ನು ಕಡ್ಡಾಯವಾಗಿ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸದಸ್ಯರಾಗಿ ನೇಮಿಸುವಂತೆ ಕ್ರಮ ಕೈಗೊಳ್ಳಬೇಕು. ಕರ್ನಾಟಕ ರಾಜ್ಯ ಒಲಂಪಿಕ್ ಅಸೋಸಿಯೇಷನ್ ಯಾವುದೇ ರಾಜ್ಯ ಕ್ರೀಡಾ ಸಂಸ್ಥೆಗಳನ್ನು ಅನವಶ್ಯಕ ಕಾರಣಗಳಿಗೆ ತೊಂದರೆ ಕೊಡದಂತೆ ನೋಡಿಕೊಳ್ಳುವ ಕ್ರಮ ಕೈಗೊಳ್ಳಬೇಕು.
4. ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯಲ್ಲಿರುವ ಯಾವುದೇ ಕಾನೂನುಗಳನ್ನು ರಾಜ್ಯ ಒಲಂಪಿಕ್ ಸಂಸ್ಥೆಯು ಬದಲಾಯಿಸಿದ್ದರೆ ಮತ್ತೆ ಅದನ್ನು ಸರಿಪಡಿಸುವಂತೆ ಮತ್ತು ಮುಂದೆ ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ಅನುಮತಿ ಇಲ್ಲದೆ ಯಾವುದೇ ಬದಲಾವಣೆಗಳನ್ನು ಮಾಡದಂತೆ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಂಸ್ಥೆಗೆ ಈಗಾಗಲೇ ನೀಡಿರುವ ಅನುದಾನದ ಬಗ್ಗೆ ದುರುಪಯೋಗ ಪಡಿಸಿಕೊಂಡಿರುವ ಆರೋಪಗಳಿದ್ದು ಅವುಗಳನ್ನು ತನಿಖೆ ಮಾಡಿಸಬೇಕು.
ಈ ಮೇಲ್ಕಂಡ ಎಲ್ಲಾ ಬೇಡಿಕೆಗಳನ್ನು ರಾಜ್ಯ ಎಲ್ಲಾ ಕ್ರೀಡಾಪಟು ಮತ್ತು ಸಂಸ್ಥೆಗಳ ಪರವಾಗಿ ನಾವು ಸರ್ಕಾರವನ್ನು ಒತ್ತಾಯಿಸಲು ಸ್ವತಂತ್ರ ಉದ್ಯಾನದ ಬಳಿ ಪ್ರತಿಭಟನಾ ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಹಾಗೂ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಮುಂದೆ ನಮ್ಮ ಕ್ರೀಡಾಪಟುಗಳು ಧರಣಿ ನಡೆಸಿ ಸಾರ್ವಜನಿಕರಿಂದ ವಿಶ್ವವಿಜೇತ ಕ್ರೀಡಾಪಟುಗಳಿಗೆ ನಾಗರೀಕರಿಂದ ಸಹಾಯಧನವನ್ನು ಕೇಳಲಾಗುವುದು ಎಂದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ