ತುಂಬಿದ ಕೃಷ್ಣ ನದಿ, ಮಳೆಯಿಂದಾಗಿ ಉರುಳಿ ಬಿದ್ದ ಬಸ್​.. ರಾಜ್ಯದಲ್ಲಿ ವರುಣಾರ್ಭಟಕ್ಕೆ ಸಾಲು ಸಾಲು ಅವಾಂತರ

author-image
AS Harshith
Updated On
ತುಂಬಿದ ಕೃಷ್ಣ ನದಿ, ಮಳೆಯಿಂದಾಗಿ ಉರುಳಿ ಬಿದ್ದ ಬಸ್​.. ರಾಜ್ಯದಲ್ಲಿ ವರುಣಾರ್ಭಟಕ್ಕೆ ಸಾಲು ಸಾಲು ಅವಾಂತರ
Advertisment
  • ಮಳೆಯಿಂದಾಗಿ ಉರುಳಿದ 60ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್​
  • ಭಾರಿ ಗಾಳಿ-ಮಳೆಗೆ ಧರೆಗುರುಳಿದ ಬೃಹತ್ ಮರಗಳು
  • ಯೆಲ್ಲೋ ಅಲರ್ಟ್​.. ಮುಂದಿನ 24 ಗಂಟೆ ಗುಡುಗು ಸಹಿತ ಮಳೆ

ಮಳೆ ಬಂದ್ರೆ ಇಳೆಗೆ ಜೀವ ಕಳೆ. ರಾಜ್ಯದಲ್ಲಿ ಧೋ ಅಂತ ಸುರಿಯುತ್ತಿರೋ ವರುಣಾ ಮಲೆನಾಡನ್ನ ಮಳೆನಾಡಾಗಿ ಮಾಡಿದ್ದಾನೆ. ಅತ್ತ ಮಹಾರಾಷ್ಟ್ರದಲ್ಲಿ ಸುರಿಯುತ್ತಿರೋ ಮಳೆಗೆ ಕೃಷ್ಣಾನದಿ ಮೈತುಂಬಿದ್ರೆ, ಇತ್ತ ಕರಾವಳಿ ನಾಡು ಉಡುಪಿಯಲ್ಲಿ ಎರಡು ದಿನ ಯೆಲ್ಲೋ ಅಲರ್ಟ್​ ಘೋಷಣೆಯಾಗಿದೆ.

ರಾಜ್ಯದ ಬರಗಾಲದ ಬೇಗೆಗೆ ತಂಪೆರೆದ ಮಳೆರಾಯ ರೌದ್ರನರ್ತನ ಮೆರೆಯುತ್ತಿದ್ದಾನೆ. ಕರ್ನಾಟಕದ ಕಿರೀಟ ಬೀದರ್​ನಿಂದ ಹಿಡಿದು ಗಡಿ ಜಿಲ್ಲೆ ಚಾಮರಾಜನಗರದವರೆಗೂ ಜಲಪಾಶ ಬೀಸಿರೋ ವರುಣ ತಂಪೆರೆಯುತ್ತಿದ್ದಾನೆ. ಒಂದ್ಕಡೆ ಮಳೆರಾಯನ ಮಾಸ್​ ಎಂಟ್ರಿ ಜನತೆಗೆ ಸಂತಸ ತಂದ್ರೆ ಮತ್ತೊಂದು ಕಡೆ ಕೆಲ ಸಂಕಷ್ಟಗಳಿಂದ ಜನರನ್ನ ಸಂಕಟಕ್ಕೆ ಸಿಲುಕಿಸಿದೆ.

ಮಳೆಯಿಂದ ನಿಯಂತ್ರಣ ತಪ್ಪಿದ ಬಸ್​.. ತಪ್ಪಿತು ಅನಾಹುತ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಮಗೋಡು ಎಂಬಲ್ಲಿ ಬೆಂಗಳೂರಿನಿಂದ ಹೊಸನಗರ ಮಾರ್ಗವಾಗಿ ಭಟ್ಕಳಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್​ವೊಂದು ಮಳೆಯಿಂದ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಎದುರಿನಿಂದ ಬಂದ ವಾಹನಕ್ಕೆ ಸೈಡ್ ಕೊಡುವಾಗ ಬಸ್ ನಿಯಂತ್ರಣ ತಪ್ಪಿದೆ. ಅದೃಷ್ಟವಶಾತ್​ ಮರಕ್ಕೆ ಬಸ್​ ಡಿಕ್ಕಿಯಾದ ಕಾರಣ 100 ಅಡಿ ಆಳಕ್ಕೆ ಬೀಳಬೇಕಿದ್ದ ಬಸ್​ ಮಾವಿನ ಮರಕ್ಕೆ ಸಿಕ್ಕಿ ಸಿಲುಕಿಕೊಂಡಿದೆ. ಅದೃಷ್ಟವಶಾತ್​ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ 60ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣ-ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ.

publive-image

ಶಿವಮೊಗ್ಗದ ಹೊಸನಗರ ತಾಲೂಕಿನಲ್ಲಿ ವರುಣಾರ್ಭಟ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಾದ್ಯಂತ ಭಾರೀ ಮಳೆಯಾಗ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.. ಗುಡುಗು, ಸಿಡಿಲು ಜೊತೆ ಬಿರುಗಾಳಿ ಸೇರಿ ಸುರಿದ ಮಳೆ ಹೊಸನಗರ ತಾಲೂಕಿನ ಹ‌ಲವೆಡೆ ಅಬ್ಬರಿಸಿ ಬೊಬ್ಬಿರಿದಿದೆ.. ಭಾರಿ ಗಾಳಿ-ಮಳೆಗೆ ಬೃಹತ್ ಮರಗಳು ಧರೆಗುರುಳುತ್ತಿದ್ದು, ವಿದ್ಯುತ್​ ಸಂಪರ್ಕ ಕಡಿತಗೊಂಡಿದೆ.

publive-image

ಮಹಾರಾಷ್ಟ್ರದ ಕೊಂಕಣದಲ್ಲಿ ಭಾರೀ ಮಳೆ.. ತುಂಬಿದ ಕೃಷ್ಣಾ ನದಿ

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಎರಡು ಅಡಿ ಏರಿಕೆಯಾಗಿದೆ‌. ಪರಿಣಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ - ಭಾವನಸೌದತ್ತಿ ಗ್ರಾಮದ ಹಳೆ ಸೇತುವೆ ಮುಳುಗಡೆಯಾಗಿದೆ.. ಇನ್ನೂ ಧಾರಾಕಾರ ಮಳೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

publive-image

ಉಡುಪಿ ಜಿಲ್ಲೆಯಲ್ಲಿ ಎರಡು ದಿನ ಯೆಲ್ಲೋ ಅಲರ್ಟ್

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಎರಡು ದಿನ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಚುರುಕುಗೊಂಡಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 41 ಒಂದು ಮಿ.ಮೀ ಮಳೆಯಾಗಿದೆ. ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

publive-image

ಮುಂದಿನ 24 ಗಂಟೆ ರಾಜ್ಯಾದ್ಯಂತ ಗುಡುಗು ಸಹಿತ ಮಳೆ

ಮುಂದಿನ 24 ಗಂಟೆಯಲ್ಲಿ ಮಲೆನಾಡು, ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ..

ಒಟ್ನಲ್ಲಿ ರಾಜ್ಯಾದ್ಯಂತ ಆರಂಭದಲ್ಲೇ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣಾ ಸಕಲ ಜೀವರಾಶಿಗಳಿಗೆ ತಂಪೆರೆಯುತ್ತಿದ್ದಾನೆ. ಮಳೆರಾಯ ರೌದ್ರರೂಪ ತಾಳದೇ, ಅತೀವೃಷ್ಠಿ, ಅನಾವೃಷ್ಠಿಗೆ ಕಾರಣವಾಗದೇ ಇರಲಿ ಅನ್ನೋದು ನಾಡಿನ ಜನರ ಪ್ರಾರ್ಥನೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment