ನಿಮ್ಮ ತಲೆ ಮೇಲೆಯೇ ಕಾಡುಪ್ರಾಣಿಗಳು ಹಾದು ಹೋಗುತ್ತವೆ! ಫಸ್ಟ್​ ಟೈಂ ಬೆಂಗಳೂರಲ್ಲಿ ‘ಎಲಿಫೆಂಟ್​ ಓವರ್​ ಪಾಸ್’ ​

author-image
AS Harshith
Updated On
ನಿಮ್ಮ ತಲೆ ಮೇಲೆಯೇ ಕಾಡುಪ್ರಾಣಿಗಳು ಹಾದು ಹೋಗುತ್ತವೆ! ಫಸ್ಟ್​ ಟೈಂ ಬೆಂಗಳೂರಲ್ಲಿ ‘ಎಲಿಫೆಂಟ್​ ಓವರ್​ ಪಾಸ್’ ​
Advertisment
  • ಕರ್ನಾಟಕದಲ್ಲಿ ಮೊದಲ ಬಾರಿಗೆ ನಿರ್ಮಾಣವಾದ ಎಲಿಫೆಂಟ್ ಓವರ್​ಪಾಸ್​​
  • ಕಾಡುಪ್ರಾಣಿಗಳಿಗಾಗಿ ಮೇಲ್ಸೇತುವೆ ನಿರ್ಮಿಸಿದ ಕರ್ನಾಟಕ ಅರಣ್ಯ ಇಲಾಖೆ
  • ಕಾಡುಪ್ರಾಣಿಗಳ ರಸ್ತೆ ಅಪಘಾತ ತಡೆಯಲು ಇದೇ ಸೂಪರ್​ ಐಡಿಯಾ

ಕಾಡುಗಳು ನಾಡಾಗುತ್ತಿವೆ. ಕಾಡಿನತ್ತ ಮನುಷ್ಯ ನುಗ್ಗುತ್ತಿದ್ದಾನೆ. ಕಾಡು ಪ್ರಾಣಿಗಳಿಗೆಂದೇ ಇದ್ದ ವಾಸಸ್ಥಾನವನ್ನು ಕಬಳಿಸುತ್ತಿದ್ದಾನೆ. ಪರಿಣಾಮ ಆಹಾರ ಅರಸಿಕೊಂಡು ಪ್ರಾಣಿಗಳು ನಾಡಿಗಿಳಿಯುತ್ತಿವೆ. ಇದರಿಂದ ಕಾಡು ಪ್ರಾಣಿ ಮತ್ತು ಮನುಷ್ಯ ನಡುವೆ ಸಂಘರ್ಷ ನಡೆಯುತ್ತಿದೆ. ಇದಲ್ಲದೆ ಕಾಡಿನಲ್ಲಿ ರಸ್ತೆ ನಿರ್ಮಿಸಿ ಕಾಡು ಪ್ರಾಣಿಗಳಿಗೆ ತೊಂದರೆಯುಂಟಾಗುತ್ತಿದೆ. ಅನೇಕ ಕಾಡು ಪ್ರಾಣಿಗಳು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ. ವರ್ಷಕ್ಕೆ ಸಾಕಷ್ಟು ಮೂಕ ಪ್ರಾಣಿಗಳು ರಸ್ತೆಯಲ್ಲೇ ಉಸಿರು ಚೆಲ್ಲುತ್ತವೆ. ಆದರೆ ಈ ಸಮಸ್ಯೆಯನ್ನು ಬಗೆಹರಿಸಲು ಓವರ್​ ಪಾಸ್​ ಎಂಬ ಹೊಸ ಕಲ್ಪನೆಯನ್ನು ಭಾರತದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಅಚ್ಚರಿ ಸಂಗತಿ ಎಂದರೆ ಅರಣ್ಯ ಇಲಾಖೆ ಕರ್ನಾಟಕದ ಬೆಂಗಳೂರಿನ ರೂರಲ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಓವರ್​ ಪಾಸ್​ ನಿರ್ಮಿಸಿದೆ.

publive-image

ಹೌದು. ಕಾಡಾನೆಗಳಿಗೆಂದೇ ಬೆಂಗಳೂರು -ಕನಕಪುರ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ 209) ರೋರಿಚ್​ ಮತ್ತು ದೇವಿಕಾರಣಿ ರೋರಿಚ್​ ಎಸ್ಟೇಟ್​ ಪಕ್ಕದಲ್ಲಿ ಓವರ್​ ಪಾಸ್​ ನಿರ್ಮಿಸಲಾಗಿದೆ. 40 ಮೀಟರ್​​ ಅಗಲ ಮತ್ತು 40 ಮೀಟರ್​​ ಉದ್ದದ ಓವರ್​ ಪಾಸ್​ ಇದಾಗಿದ್ದು, ಸಾರ್ವಜನಿಕ ರಸ್ತೆಯ ಮೇಲ್ಭಾಗವಾಗಿ ಹಾದು ಹೋಗುತ್ತದೆ. ಇದರ ಮೂಲಕ ಕಾಡಾನೆ ಮಾತ್ರವಲ್ಲ, ಕಾಡು ಪ್ರಾಣಿಗಳು ರಸ್ತೆ ಮೇಲ್ಭಾಗವಾಗಿ ಹಾದು ಹೋಗುವಂತೆ ನಿರ್ಮಿಸಲಾಗಿದೆ. ಇದರಿಂದಾಗಿ ಕಾಡು ಪ್ರಾಣಿಗಳು ವಾಹನ ಅಪಘಾತಕ್ಕೆ ಬಲಿಯಾಗೋದನ್ನು ತಡೆಯಬಹುದಾಗಿದೆ.

publive-image

ಅಂದಹಾಗೆಯೇ ಬನ್ನೇರುಘಟ್ಟ ನ್ಯಾಷನಲ್​ ಪಾರ್ಕ್​ನಿಂದ ಸಾವನದುರ್ಗ ಕಾಡಿಗೆ ಪ್ರಾಣಿಗಳು ಹಾದು ಹೋಗಲೆಂದು ಓವರ್​ ಪಾಸ್​ ನಿರ್ಮಿಸಲಾಗಿದೆ. ಜೊತೆಗೆ ಪ್ರಾಣಿಗಳಿಗೆ ಆಹಾರವಾಗುವ ಸಸ್ಯಗಳನ್ನು ಇಲ್ಲಿ ನೆಡಲಾಗಿದ್ದು, ಬಿದಿರು ಸೇರಿ ಅನೇಕ ರೀತಿಯ ಸಸ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಮಾತ್ರವಲ್ಲದೆ ಪ್ರಾಣಿಗಳು ರಸ್ತೆಗಿಳಿಯದಂತೆ ತಡೆಗೋಡೆ ನಿರ್ಮಿಸಲಾಗಿದೆ.

publive-image

BMTC ಬಸ್​ ಗುದ್ದಿ ಕಾಡಾನೆ ಸಾವು

27 ಮಾರ್ಚ್​​ 2022ರಲ್ಲಿ ಕಾಡಾನೆಗೆ ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾಡಾನೆ ಸಾವನ್ನಪ್ಪಿತ್ತು. ಇದಲ್ಲದೆ ಈ ಜಾಗದಲ್ಲಿ ಚಿರತೆಗಳ ಓಡಾಟವು ಇದೆ. ಶಾಲೆಗೆ ಹೋಗುವ ಮಕ್ಕಳು ಕಣ್ಣಾರೆ ಕಂಡ ಉದಾಹರಣೆಗಳಿವೆ. ಇದನೆಲ್ಲಾ ಗಮನ ಹರಿಸಿಕೊಂಡು ಕರ್ನಾಟಕ ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಗಾಗಿ ಮೇಲ್ಸೇತುವೆ ನಿರ್ಮಿಸಿದೆ.

publive-image

ಅರಣ್ಯ ಇಲಾಖೆಗೆ ಸೆಲ್ಯೂಟ್​

ಕಾಡು ಪ್ರಾಣಿಗಳು ವಾಹನ ಅಪಘಾತಕ್ಕೆ ಬಲಿಯಾಗೋದನ್ನ ತಡೆಯಲು ಮೇಲ್ಸೇತುವೆ ನಿರ್ಮಿಸಿದ್ದಾರೆ. ಇದಕ್ಕೆಂದೇ ಅತಿ ಎತ್ತರದ ಗೋಡೆಗಳನ್ನು ನಿರ್ಮಿಸಿದ್ದಾರೆ. ಮಾತ್ರವಲ್ಲದೆ ವಾಹನಗಳ ಶಬ್ಧಗಳು ಬಾರದಂತೆ ಇದರ ರಚನೆಯಿದೆ. ಒಟ್ಟಿನಲ್ಲಿ ಭೂಮಿ ಮೇಲೆ ಬದುಕಲು ಮನುಷ್ಯನಿಗೆಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಪ್ರಾಣಿಗಳಿದೆ, ಅದರ ಉಳಿವಿಗಾಗಿ ‘ಎಲಿಫೆಂಟ್​ ಓವರ್​ಪಾಸ್’​ ನಿರ್ಮಿಸಿರುವುದು ಒಂದು ಉತ್ತಮ ಕಾರ್ಯವಾಗಿದೆ. ಈಗಾಗಲೇ ಒಡಿಶಾದಲ್ಲಿ ಸೇರಿ ಕೆಲವೆಡೆ ಓವರ್​ ಪಾಸ್​ ಕಾರ್ಯರೂಪಕ್ಕೆ ಬಂದಿದೆ. ಇದೀಗ ಕರ್ನಾಟಕದಲ್ಲೂ ಮೊದಲ ಬಾರಿಗೆ ಓವರ್​ ಪಾಸ್​ ನಿರ್ಮಾಣವಾಗಿದೆ. ಇದಕ್ಕಾಗಿ ಅರಣ್ಯ ಇಲಾಖೆಗೆ ಧನ್ಯವಾದ ಹೇಳಬೇಕಿದೆ.

ವಿಶೇಷ ವರದಿ: ಹರ್ಷಿತ್​ ಅಚ್ರಪ್ಪಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment