/newsfirstlive-kannada/media/post_attachments/wp-content/uploads/2023/06/Nandini.jpg)
ಬೆಂಗಳೂರು: ಕರ್ನಾಟಕದಲ್ಲಿ ಮನೆ ಮಾತಾಗಿರುವ ಕೆಎಂಎಫ್‌ನ 'ನಂದಿನಿ' ಬ್ರಾಂಡ್ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿ ನವದೆಹಲಿಗೂ ತಲುಪಿವೆ. ಇಂದು ಸಿಎಂ ಸಿದ್ದರಾಮಯ್ಯ ದಿಲ್ಲಿಯಲ್ಲಿ ನಂದಿನಿ ಬ್ರಾಂಡ್‌ನ ಹಾಲು, ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ಹೊರ ರಾಜ್ಯದಲ್ಲಿಯೂ ನಂದಿನಿ ತನ್ನ ಮಾರುಕಟ್ಟೆಯನ್ನು ವಿಸ್ತರಣೆ ಮಾಡಲಿದೆ.
ನಂದಿನಿ ಕರ್ನಾಟಕದ ಹೆಮ್ಮೆಯ ಹಾಲಿನ ಉತ್ಪನ್ನಗಳ ಬ್ರ್ಯಾಂಡ್. ಈ ಹಾಲು ಪ್ರತಿ ಮನೆಗಳ ಸಂಗಾತಿ ಕೂಡ ಹೌದು. ಹಾಲು ನಂದಿನಿ ರೂಪ ಪಡೆದು ಲಕ್ಷಾಂತರ ಮನೆಗಳನ್ನು ತಲುಪುತ್ತಿದೆ. ನಂದಿನಿ ಹಾಲಿಗೂ, ಕನ್ನಡಿಗರಿಗೂ ಬಿಡಿಸಲಾಗದ ನಂಟು. ದಕ್ಷಿಣದ ರಾಜ್ಯಗಳಲ್ಲಿ ಕಮಾಲ್ ಮಾಡಿರುವ ನಂದಿನಿ ಇದೀಗ ಉತ್ತರಕ್ಕೂ ಕಾಲಿಟ್ಟಿದೆ.
ನಂದಿನಿ ಹಾಲು ಮಾರಾಟಕ್ಕೆ ಸಿಎಂ ಚಾಲನೆ
ರಾಷ್ಟ್ರರಾಜಧಾನಿ ನವದೆಹಲಿಗೂ ಕರ್ನಾಟಕದ ಅಸಲಿ ಬ್ರ್ಯಾಂಡ್ ನಂದಿನಿ ಕಾಲಿಟ್ಟಿದೆ. ನಂದಿನಿ ಹಾಲು, ಮೊಸರು ಪೂರೈಕೆಗೆ ದೆಹಲಿ ಸರ್ಕಾರ ಹಲವು ತಿಂಗಳಿನಿಂದ ಮನವಿ ಮಾಡಿತ್ತು. ಕಳೆದ 4-5 ತಿಂಗಳಿನಿಂದ ಮಾತುಕತೆಯೂ ನಡೆದಿತ್ತು. ನಂದಿನಿ ದಿಲ್ಲಿ ಜನರ ಮನೆಗಳ ಬಾಗಿಲು ತಲುಪಿದೆ. ಇವತ್ತು ನವದೆಹಲಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದ್ರು. ಮಂಡ್ಯ ಹಾಲು ಒಕ್ಕೂಟದಿಂದ ಪ್ರತಿದಿನ ದೆಹಲಿಗೆ ಹಾಲು ಪೂರೈಕೆಯಾಗಲಿದೆ. ಮುಂದಿನ ದಿನಗಳಲ್ಲಿ ವಿಶೇಷ ನಂದಿನಿ ಸ್ಟೋರ್ ತೆರೆಯಲು ಚಿಂತನೆ ನಡೆಸಲಾಗಿದೆ.
ಮೊದಲ ಹಂತದಲ್ಲಿ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಕಳುಹಿಸಲು ಕೆಎಂಎಫ್ ಸಿದ್ಧತೆ ನಡೆಸಿದೆ. ಮುಂದಿನ ದಿನಗಳಲ್ಲಿ ದೆಹಲಿಗೆ ಒಟ್ಟು 5 ಲಕ್ಷ ಲೀಟರ್ ಹಾಲು ಪೂರೈಸುವ ಗುರಿ ಹೊಂದಿದೆ.
ಈಗಾಗಲೇ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕೇರಳಕ್ಕೆ ಕೆಎಂಎಫ್ನಿಂದ ಹಾಲು ಪೂರೈಕೆ ಆಗುತ್ತಿದೆ. ಈಗ ರಾಷ್ಟ್ರ ರಾಜಧಾನಿಯನ್ನೂ ತಲುಪಿರುವ ನಂದಿನಿ ಹಾಲು ಹೊಸ ಇತಿಹಾಸ ಬರೆದಂತಾಗಿದೆ.
ಇದನ್ನೂ ಓದಿ: ಹೀರೋಯಿನ್ ವಿಚಾರಕ್ಕೆ ನಿರ್ದೇಶಕನ ಮೇಲೆ ಗುಂಡು ಹಾರಿಸಿದ ನಟ; ಸ್ಫೋಟಕ ವಿಚಾರ ಬಯಲು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ