/newsfirstlive-kannada/media/post_attachments/wp-content/uploads/2025/04/karun-nair-1.jpg)
ಐಪಿಎಲ್ ಟೂರ್ನಿಯಲ್ಲೀಗ ಕನ್ನಡಿಗನದ್ದೇ ಸೌಂಡು. ಮುಂಬೈ ಎದುರು ಡೆಲ್ಲಿ ಗೆಲ್ಲಲಿಲ್ಲ.. ಆದ್ರೆ ಸೆನ್ಸೇಷನಲ್ ಆಟವಾಡಿದ ಕನ್ನಡಿಗ ಕ್ರಿಕೆಟ್ ಲೋಕವನ್ನೇ ಗೆದ್ದಿದ್ದಾನೆ. ಕರುಣ್ ನಾಯರ್ ಆಡಿದ ಸ್ಟನ್ನಿಂಗ್ ಕಮ್ಬ್ಯಾಕ್ ಇನ್ನಿಂಗ್ಸ್ಗೆ ಎಲ್ರೂ ಉಘೇ ಉಘೇ ಅಂತಿದ್ದಾರೆ. ಇಡೀ ಇನ್ನಿಂಗ್ಸ್ನಲ್ಲಿ ಸ್ವಲ್ಪ ಕೂಡ ಕರುಣೆಯೇ ಇಲ್ಲದಂತೆ ಮುಂಬೈ ಬೌಲರ್ಗಳನ್ನ ಕರುಣ್ ಅಟ್ಟಾಡಿಸಿದ್ರು. ಆ ನಿರ್ಧಯ ಆಟದ ಹಿಂದಿದ್ದಿದ್ದು ನೋವಿನ ಜ್ವಾಲೆ ಏನು ಅನ್ನೋದ್ರ ವಿವರ ಇಲ್ಲಿದೆ.
‘ಡಿಯರ್ ಕ್ರಿಕೆಟ್, ನನಗೆ ಒಂದು ಅವಕಾಶ ಕೊಡು..’
ಅಂದು ಕನ್ನಡಿಗ ಕರುಣ್ ನಾಯರ್ ಮಾಡಿದ್ದ ಈ ಒಂದು ಟ್ವೀಟ್, ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಒಬ್ಬ ಪ್ರತಿಭಾವಂತ ಕ್ರಿಕೆಟಿಗ, ಅವಕಾಶಕ್ಕಾಗಿ ಅಂಗಲಾಚಿ ಬೇಡಿಕೊಳ್ತಿದ್ದಾನೆ ಅಂತ ದೇಶವೇ ಗುಸುಗುಟ್ಟಿತ್ತು. ಸೆಹ್ವಾಗ್ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಸಿಡಿಸಿದ ಆಟಗಾರ ಹೀಗೆ ಬೇಡಿಕೊಂಡ್ರೆ ಉಳಿದವರ ಕಥೆ ಏನು ಅಂತ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆ ನಡೀತು. ಇದು ಒಬ್ಬ ಆಟಗಾರನಿಗೆ ಮಾಡಿದ ಅನ್ಯಾಯನಾ? ಅವಮಾನನಾ? ಅಥವಾ ರಾಜಕೀಯದ ಆಟನಾ ಅಂತಾನೂ ಮಾತನಾಡಿಕೊಂಡ್ರು. ಇದೀಗ ಮುಂಬೈ ಎದುರು ಕರುಣ್ ವಿಸ್ಫೋಟಕ ಆಟವಾಡಿದ ಬೆನ್ನಲ್ಲೇ ಮತ್ತೇ ಇದೇ ಟ್ವೀಟ್ ವೈರಲ್ ಆಗ್ತಿದೆ. ಟ್ಯಾಲೆಂಟೆಡ್ ಕ್ರಿಕೆಟಿಗನಿಗೆ ಆದ ಅನ್ಯಾಯದ ಚರ್ಚೆಯಾಗ್ತಿದೆ.
ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್ ಅಕ್ಷರ್ ಪಟೇಲ್ಗೆ ಬಿಗ್ ಶಾಕ್
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕರುಣ್ ನಾಯರ್ ಬ್ಯಾಟಿಂಗ್ಗೆ ಬಂದಾಗ ಇಂತಹ ಇಂಪ್ಯಾಕ್ಟ್ಫುಲ್ ಇನ್ನಿಂಗ್ಸ್ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಕನ್ನಡಿಗ ಸಿಕ್ಕ ಬಂಗಾರದಂಥ ಅವಕಾಶವನ್ನ ಎರಡೂ ಕೈಗಳಲ್ಲಿ ಬಾಚಿಕೊಂಡ್ರು. ಅರುಣ್ ಜೇಟ್ಲಿ ಮೈದಾನದಲ್ಲಿ ಬೌಂಡರಿ, ಸಿಕ್ಸರ್ಗಳ ಸುನಾಮಿ ಎಬ್ಬಿಸಿದ್ರು.
ಡೆಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಕರುಣ್ ಬೌಲರ್ಗಳನ್ನ ಅಕ್ಷರಶಃ ಚೆಂಡಾಡಿದ್ರು. 12 ಬೌಂಡರಿ, 5 ಸಿಕ್ಸರ್ ಚಚ್ಚಿ ಬಿಸಾಕಿದ್ರು. 40 ಎಸೆತಗಳಲ್ಲಿ 89 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ್ರು. ಆ ಒಂದು ಇನ್ನಿಂಗ್ಸ್ನ ಒಂದೊಂದು ಹೊಡೆತಗಳು ಕೇವಲ ಕ್ರಿಕೆಟ್ ಶಾಟ್ ಆಗಿರಲಿಲ್ಲ. ಬದಲಾಗಿ ಒಂದೊಂದು ಸ್ಟೇಟ್ಮೆಂಟ್ ಆಗಿದ್ವು. ಮನದಲ್ಲಿದ್ದ ಆಕ್ರೋಶದ ಜ್ವಾಲೆ, ನೋವು, ಬೇಸರ, ಅವಮಾನಗಳೆಲ್ಲಾ ಬೌಂಡರಿ, ಸಿಕ್ಸರ್ ರೂಪದಲ್ಲಿ ಹೊರಬಿದ್ವು. ಸಾಮರ್ಥ್ಯ ಪ್ರಶ್ನಿಸಿ, ಟೀಕಿಸಿದವರಿಗೆ ವೀರ ಕನ್ನಡಿಗ ರನ್ಭೂಮಿಯಿಂದಲೇ ಕೊಟ್ಟ ಖಡಕ್ ಆನ್ಸರ್ ಆ ಇನ್ನಿಂಗ್ಸ್.
ಇದನ್ನೂ ಓದಿ: 11 ಬಾಲ್ನಲ್ಲಿ 26 ರನ್ ಚಚ್ಚಿದ ಧೋನಿ, ಕೊನೆಗೂ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್..!
ಅಸಲಿಗೆ ಈ ಕರುಣ್ ನಾಯರ್ ಟೀಮ್ ಇಂಡಿಯಾ ಕಾಲಿಟ್ಟಾಗಲೇ ಧೂಳೆಬ್ಬಿಸಿದ್ರು. ಇಂಗ್ಲೆಂಡ್ ವಿರುದ್ಧ ಚೆನ್ನೈ ಟೆಸ್ಟ್ನಲ್ಲಿ ತ್ರಿಶತಕ ಸಿಡಿಸಿ ಮಿಂಚಿದ್ರು. ಆ ನಂತರ ಆಸ್ಟ್ರೇಲಿಯಾ ವಿರುದ್ಧ ವೈಫಲ್ಯ ಕಂಡ್ರು. ಆ ಬಳಿಕ ಕಳೆದೆ ಹೋದ್ರು. ಅಟ್ಲೀಸ್ಟ್ ಇನ್ನೊಂದು ಸರಣಿಯಲ್ಲಿ ಆಡಲು ಅವಕಾಶ ಕೊಡಬಹುದಿತ್ತು. ಇದ್ದಕ್ಕಿದ್ದಂತೆ ಕರುಣ್ಗೆ ಗೇಟ್ಪಾಸ್ ನೀಡಿ, ಆತನ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಲಾಯ್ತು.
ಟೀಮ್ ಇಂಡಿಯಾದ ಹೊರ ಬಿದ್ದ ಬಳಿಕ ಕರುಣ್ ಕ್ರಿಕೆಟ್ ಕರಿಯರ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯ್ತು. ಕರ್ನಾಟಕದ ತಂಡದಲ್ಲೂ ಸ್ಥಾನ ಸಿಗದೇ ವಿದರ್ಭಕ್ಕೆ ವಲಸೆ ಹೋದ್ರು. ಎಲ್ಲೆಡೆ ಅವಮಾನ ಅನುಭವಿಸಿದ್ರು. ಅಷ್ಟೇ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದ್ರು. ಕರುಣ್ ಕಳೆದ ಸೀಸಸ್ನಲ್ಲಂತೂ ಡೊಮೆಸ್ಟಿಕ್ ಕ್ರಿಕೆಟ್ನ ರನ್ಮಷೀನ್ ಆಗಿದ್ದಾರೆ. ಕಳೆದೈದು ತಿಂಗಳಲ್ಲಿ ಕರುಣ್ ನಾಯರ್, ಎಲ್ಲಾ ಫಾರ್ಮೆಟ್ಗಳಲ್ಲೂ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಪರ್ಫಲ್ ಪ್ಯಾಚ್ನಲ್ಲಿದ್ರೂ, ಟೀಮ್ ಇಂಡಿಯಾ ಡೋರ್ ಮಾತ್ರ ಓಪನ್ ಆಗಿಲ್ಲ.
ಇದನ್ನೂ ಓದಿ: ಇನ್ಮೇಲೆ ಆರ್ಸಿಬಿ ಲೆಕ್ಕಾನೇ ಬೇರೆ.. ಪ್ಲೇ ಆಫ್ ಎಂಟ್ರಿ ಭವಿಷ್ಯ ಅಷ್ಟು ಸುಲಭ ಇಲ್ಲ..!
ರಣಜಿ ಟೂರ್ನಿ, ವಿಜಯ್ ಹಜಾರೆ, ಮುಷ್ತಾಕ್ ಅಲಿ ಟೂರ್ನಿ. ಅಷ್ಟೇ ಯಾಕೆ KSCA ಆಯೋಜಿಸೋ ಮಹಾರಾಜ ಟೂರ್ನಿಯಲ್ಲೂ ಕರುಣ್ ಬ್ಯಾಟ್ ಬೊಂಬಾಟ್ ಸೌಂಡ್ ಮಾಡಿತ್ತು. ಇದೀಗ ಐಪಿಎಲ್ ಅಖಾಡದಲ್ಲೂ ಸಿಕ್ಕ ಅವಕಾಶವನ್ನ ಎರಡೂ ಕೈಗಳಲ್ಲಿ ಬಾಚಿಕೊಂಡಿದ್ದಾರೆ. 2022ರ ಬಳಿಕ ಸಿಕ್ಕ ಮೊದಲ ಅವಕಾಶದಲ್ಲೇ ಅಬ್ಬರದ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಅಲ್ಲಿ ಕರುಣ್ ಸ್ಥಾನ ಸೇಫಾ? ಫಾಫ್ ಡುಪ್ಲೆಸಿ ಫಿಟ್ ಆಗಿ ಕಮ್ಬ್ಯಾಕ್ ಮಾಡಿದ್ರೆ ಮುಂದಿನ ಪಂದ್ಯದಲ್ಲಿ ಕರುಣ್ಗೆ ಸ್ಥಾನ ಸಿಗುತ್ತಾ?
ರೆಡ್ ಹಾಟ್ ಫಾರ್ಮ್ನಲ್ಲಿರೋ ಸಿಕ್ಕೆಲ್ಲಾ ವೇದಿಕೆಗಳಲ್ಲಿ ಕರುಣ್ ನಾಯರ್ ತನ್ನ ಸಾಮರ್ಥ್ಯವನ್ನಂತೂ ಪ್ರೂವ್ ಮಾಡಿದ್ದಾರೆ. ಅತ್ಯುದ್ಭುತ ಆಟವಾಡಿದ್ರೂ ಪದೇ ಪದೇ ಅವಮಾನವೇ ಎದುರಾಗ್ತಿತ್ತು. ಆ ಅವಮಾನವನ್ನ, ಕರುಣ್ ಮರೆತಿರಲಿಲ್ಲ. ಮನಸಿನಲ್ಲಿ ಜ್ವಾಲೆ ಉರಿಯುತ್ತಿದ್ರೂ, ಮಿಸ್ಟರ್ ಕೂಲ್ನಂತೆ ತಾಳ್ಮೆಯಿಂದ ಇದ್ದರು. ಸಮಯ ಬಂದಾಗ ನಾನಲ್ಲ..! ನನ್ನ ಬ್ಯಾಟ್ ಮಾತನಾಡುತ್ತೆ ಅಂತ ಅಗ್ನಿಪರೀಕ್ಷೆಗಿಳಿದ್ರು. ಆ ಯುದ್ಧದಲ್ಲಿ ಕರುಣ್, DISTINCTIONನಲ್ಲಿ ಪಾಸ್ ಆಗಿ, ತನ್ನನ್ನ ಅವಮಾನಿಸಿದವರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ: ಗಾಯಕ್ವಾಡ್ ಬದಲಿಗೆ CSK ಸೇರಿದ 17 ವರ್ಷದ ಹುಡುಗ.. ಧೋನಿ ನಂಬಿಕೆಯಿಟ್ಟ ಆಯುಷ್ ಯಾರು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್