/newsfirstlive-kannada/media/post_attachments/wp-content/uploads/2025/02/Delhi-CM-Oath-Swearing.jpg)
2025ರ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ 10 ದಿನಗಳೇ ಕಳೆದಿದೆ. ಆಪ್ ಪಕ್ಷವನ್ನು ಅಧಿಕಾರದಿಂದ ಇಳಿಸಿರುವ ಬಿಜೆಪಿ ನಾಯಕರು ಇಂದ್ರಪ್ರಸ್ಥದ ರಾಜ್ಯಭಾರಕ್ಕೆ ನಾನಾ ಲೆಕ್ಕಾಚಾರ ಹಾಕಿದ್ದಾರೆ. ಮುಂದಿನ ಸಿಎಂ ಯಾರಾಗ್ತಾರೆ ಅನ್ನೋ ಸಸ್ಪೆನ್ಸ್ ಮಧ್ಯೆ ಇಂದು ಬಿಜೆಪಿ ಹೈಕಮಾಂಡ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಮಯ, ದಿನಾಂಕ ನಿಗದಿ ಮಾಡಿದೆ.
ಇದೇ ಫೆಬ್ರವರಿ 20ರಂದು ಬೆಳಗ್ಗೆ 11 ಗಂಟೆಗೆ ದೆಹಲಿ ನೂತನ ಸಿಎಂ ಪದಗ್ರಹಣ ನಡೆಯಲಿದೆ. ಪ್ರಮಾಣ ವಚನ ಸ್ವೀಕಾರದ ಸಮಯ, ದಿನಾಂಕ ನಿಗದಿ ಮಾಡಿರುವ ಬಿಜೆಪಿ ಇನ್ನೂ ದೆಹಲಿ ಸಿಎಂ ಆಯ್ಕೆ ಅಂತಿಮಗೊಳಿಸಿಲ್ಲ. ಅಚ್ಚರಿ ಆಯ್ಕೆಯ ಸುಳಿವು ನೀಡಿರುವ ಬಿಜೆಪಿ ವರಿಷ್ಠರ ನಡೆ ರಾಷ್ಟ್ರ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ದೆಹಲಿ ಸಿಎಂ ರೇಸ್‌ನಲ್ಲಿ ಯಾರ್ ಯಾರ್ ಇದ್ದಾರೆ? ಬಿಜೆಪಿಯಿಂದ ಅಚ್ಚರಿ ಹೆಸರು ಘೋಷಣೆ ಆಗುತ್ತಾ?
ನಾಳೆ ದೆಹಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ನಾಳೆ ಮಧ್ಯಾಹ್ನ 3.30ಕ್ಕೆ ನಡೆಯುವ ಸಭೆಯಲ್ಲಿ 48 ಬಿಜೆಪಿ ಶಾಸಕರು ಭಾಗಿಯಾಗಲಿದ್ದಾರೆ. ಈ ಸಭೆಯಲ್ಲೇ ದೆಹಲಿ ಸಿಎಂ ಆಯ್ಕೆ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ನಾಡಿದ್ದು ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿಗದಿಯಾಗಿದೆ.
ಯಾರಿಗೆಲ್ಲಾ ವಿಶೇಷ ಆಹ್ವಾನ?
ದೆಹಲಿ ನೂತನ ಸಿಎಂ ಪ್ರಮಾಣ ವಚನ ಸ್ವೀಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಗಣ್ಯಾತಿಗಣ್ಯರ ಜೊತೆಗೆ ದೆಹಲಿಯ ಸ್ಲಂ ನಿವಾಸಿಗಳು, ರೈತರು, ಮಹಿಳೆಯರಿಗೆ ಬಿಜೆಪಿ ವಿಶೇಷ ಆಹ್ವಾನ ನೀಡಲಿದೆ.
ಸಿಎಂ ಕುರ್ಚಿ ರೇಸ್‌ನಲ್ಲಿ ಮೂವರ ಪೈಪೋಟಿ!
ದೆಹಲಿ ಸಿಎಂ ಪಟ್ಟದ ರೇಸ್‌ನಲ್ಲಿ ಪ್ರಮುಖವಾಗಿ ಮೂವರ ಹೆಸರು ಕೇಳಿ ಬರುತ್ತಿದೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಸೋಲಿನ ರುಚಿ ತೋರಿಸಿದಿ ಪರ್ವೇಶ್ ವರ್ಮಾ, ಶಲಿಮರ್ ಬಾಗ್ ಕ್ಷೇತ್ರದಲ್ಲಿ ಭರ್ಜರಿಯಾಗಿ ಜಯ ಸಾಧಿಸಿರುವ ಶಾಸಕಿ ರೇಖಾ ಗುಪ್ತಾ ಹಾಗೂ ಮನೋಜ್ ತಿವಾರಿ ಅವರ ಹೆಸರು ಕೇಳಿ ಬರುತ್ತಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ನಿರ್ಧಾರವೇ ಅಂತಿಮವಾಗಿದ್ದು, ಬಿಜೆಪಿ ಪಕ್ಷ ಅಧಿಕೃತವಾಗಿ ಘೋಷಣೆ ಮಾಡುವುದೊಂದೇ ಬಾಕಿ ಉಳಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ