/newsfirstlive-kannada/media/post_attachments/wp-content/uploads/2025/06/CET-KEA-Exams.jpg)
ಕರ್ನಾಟಕದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು VTU (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ) ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡುತ್ತಿವೆ. ಈ ಬಗ್ಗೆ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೂ ದೂರು ನೀಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ.
VTU ನಿಗದಿಪಡಿಸಿರುವಷ್ಟು ಶುಲ್ಕವನ್ನು ಮಾತ್ರವೇ ವಿದ್ಯಾರ್ಥಿಗಳಿಂದ ಸಂಗ್ರಹಿಸುವಂತೆ ಖಾಸಗಿ ವಿಶ್ವವಿದ್ಯಾಲಯಗಳಿಗೆ ಸೂಚಿಸುವಂತೆ ಕೋರಿದೆ. VTU ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಶುಲ್ಕ ಸಂಗ್ರಹಿಸಬಾರದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಕರ್ನಾಟಕದಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡುತ್ತೆ. ಜೊತೆಗೆ ಬೇರೆ ಬೇರೆ ಕೆಟಗರಿಗಳಿಗೆ ಸರ್ಕಾರ ನಿಗದಿಪಡಿಸಿರುವ ಶುಲ್ಕ ಮತ್ತು VTU ನಿಗದಿಪಡಿಸಿರುವ ಖಾಸಗಿ ವಿವಿಗಳ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಂಗ್ರಹಿಸುತ್ತೆ.
ಬಳಿಕ ಖಾಸಗಿ ವಿವಿಗಳಿಗೆ ಆ ಶುಲ್ಕದ ಹಣವನ್ನು ವರ್ಗಾಯಿಸುತ್ತೆ. ಆದರೆ, ಕರ್ನಾಟಕದಲ್ಲಿ ಕೆಲವು ಖಾಸಗಿ ವಿಶ್ವವಿದ್ಯಾಲಯಗಳು, ಮೆಡಿಕಲ್, ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ VTU ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡುತ್ತಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಆಕಸ್ಮಿಕವಾಗಿ ಪತ್ನಿಯನ್ನೂ ಕಳ್ಕೊಂಡ.. 32 ವರ್ಷಗಳ ನಂತರ ವರದಕ್ಷಿಣೆ ಕೇಸ್ನಲ್ಲಿ ದೋಷಮುಕ್ತ ಎಂದ ಕೋರ್ಟ್..
ಈ ದೂರಿನ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿಟಿಯು ನಿಗದಿಪಡಿಸಿರುವಷ್ಟು ಶುಲ್ಕವನ್ನು ಮಾತ್ರವೇ ಖಾಸಗಿ ವಿಶ್ವವಿದ್ಯಾಲಯಗಳು ಸಂಗ್ರಹಿಸುವಂತೆ ಸೂಚಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ. ಸೀಟ್ ಮ್ಯಾಟ್ರಿಕ್ಸ್ ಪ್ರಕಾರ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಖಾಸಗಿ ವಿವಿಗಳಲ್ಲಿ ಸರ್ಕಾರಿ ಕೋಟಾದ ಶೇ.40ರಷ್ಟು ಸೀಟುಗಳನ್ನು ಹಂಚಿಕೆ ಮಾಡುತ್ತೆ. ಈ ಶೇ.40ರಷ್ಟು ಸರ್ಕಾರಿ ಕೋಟಾದ ಸೀಟುಗಳಿಗೆ ಸರ್ಕಾರ, ವಿಟಿಯು ನಿಗದಿಪಡಿಸಿದಷ್ಟು ಶುಲ್ಕವನ್ನು ಮಾತ್ರವೇ ವಸೂಲಿ ಮಾಡಬೇಕು ಎಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಪ್ರತಿಯೊಂದು ಖಾಸಗಿ ವಿಶ್ವವಿದ್ಯಾಲಯವು ತನ್ನದೇ ಆದ ರೂಲ್ಸ್ ಮಾಡಿಕೊಂಡಿವೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಶೇ. 60ರಷ್ಟು ಸೀಟುಗಳನ್ನ ಮ್ಯಾನೇಜ್‌ಮೆಂಟ್‌ಗಳು ಹೊಂದಿವೆ. ಆದರೆ ಸರ್ಕಾರಿ ಕೋಟಾದ ಸೀಟುಗಳಿಗೆ ಖಾಸಗಿ ವಿವಿಗಳ ಶುಲ್ಕಗಳು ಅನ್ವಯಿಸಲ್ಲ. ಹೀಗಾಗಿ ಬಡ ವಿದ್ಯಾರ್ಥಿಗಳು, ಗ್ರಾಮೀಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಖಾಸಗಿ ವಿವಿಗಳಿಗೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು. ಖಾಸಗಿ ಕಾಲೇಜುಗಳ ಅಸೋಸಿಯೇಷನ್ ಜೊತೆಗೆ ಈ ಬಗ್ಗೆ ಸರ್ಕಾರವು ಒಪ್ಪಂದ ಮಾಡಿಕೊಳ್ಳುವುದು ಸೂಕ್ತ ಅಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಉನ್ನತ ಶಿಕ್ಷಣ ಇಲಾಖೆಗೆ ಬರೆದ ಪತ್ರದಲ್ಲಿ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ