/newsfirstlive-kannada/media/post_attachments/wp-content/uploads/2024/10/kiccha6.jpg)
ಬಿಗ್ಬಾಸ್ ಸೀಸನ್ 11 ಶುರುವಾಗಿ ಮೊದಲ ವಾರದ ಕಿಚ್ಚನ ಪಂಚಾಯ್ತಿನೂ ನಡೆದಿದೆ. ಸ್ವರ್ಗ, ನರಕ ಅನ್ನೋ ಹೊಸ ಕಾನ್ಸೆಪ್ಟ್ ಕೂಡ ಜನರಿಗೆ ಇಷ್ಟವಾಗ್ತಿದೆ. ಪ್ರತಿ ವಾರಾಂತ್ಯದಲ್ಲಿ ಕಿಚ್ಚನನ್ನು ನೋಡೋ ಫ್ಯಾನ್ಸ್ಗೆ ಯರ್ರಾಬಿರ್ರಿ ಕುತೂಹಲ ಇರುತ್ತದೆ. ಸುದೀಪ್ ಯಾವ ಡ್ರೆಸ್ ಹಾಕಿರ್ತಾರೆ? ಯಾವ ಗೆಟಪ್ನಲ್ಲಿ ಬರ್ತಾರೆ? ಯಾರನ್ನು ರುಬ್ತಾರೆ? ಯಾರನ್ನ ದಬ್ತಾರೆ ಅನ್ನೋ ಹತ್ತಾರು ಪ್ರಶ್ನೆಗಳು ಕಾಡ್ತಿವೆ. ಆದರೆ, ಈ ಸಲದ ಬಿಗ್ಬಾಸ್ನ ಮೊದಲ ಕಿಚ್ಚನ ಪಂಚಾಯ್ತಿ ಫುಲ್ ಡಿಫರೆಂಟಾಗಿದೆ. ಎಷ್ಟೋ ಅಭಿಮಾನಿಗಳ ತಲೆಗೆ ಹುಳವನ್ನೂ ಬಿಟ್ಟಿದೆ. ಅಚ್ಚರಿಯೂ ಎದುರಾಗಿದೆ. ಕಾರಣ ಸ್ಟೈಲ್ಗೆ ಹೆಚ್ಚು ಪ್ರಾಮುಖ್ಯತೆ ಕೊಡೋ ಸುದೀಪ್ ಕಾಶಿ ಫ್ರಮ್ ವಿಲೇಜ್ ಸಿನಿಮಾ ಪಾತ್ರಧಾರಿಯಂತೆ ಹೋಮ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಇದಕ್ಕಿಂತಲೂ ಅಚ್ಚರಿ ಮ್ಯಾಟ್ರು ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದು.
ಇದನ್ನೂ ಓದಿ: BBK11: ಫಸ್ಟ್ ಟೈಮ್ ಬರಿಗಾಲಲ್ಲಿ ವೀಕೆಂಡ್ ಶೋ ನಡೆಸಿಕೊಟ್ಟ ಕಿಚ್ಚ ಸುದೀಪ್; ಏನಿದರ ವಿಶೇಷ?
ಬರಿಗಾಲಿನಲ್ಲಿ ಬಿಗ್ಬಾಸ್ ವೇದಿಕೆ ಮೇಲೆ ಬಂದಿದ್ದೇಕೆ ಸುದೀಪ್!?
ಬೂದು ಬಣ್ಣದ ಡ್ರೆಸ್ಗೂ ಬರಿಗಾಲಿಗೂ ದಸರಾಗೂ ನಂಟಿದೆಯೇ?
ನವರಾತ್ರಿ ಸಂದರ್ಭದಲ್ಲಿ ನವದುರ್ಗೆಯರನ್ನ ಪೂಜಿಸಲಾಗುತ್ತದೆ. ನವ ಪುಷ್ಪಗಳಿಂದ, ನವ ಬಣ್ಣಗಳಿಂದ ಆರಾಧಿಸಲಾಗುತ್ತದೆ. ಅಂತೆಯೇ ನವರಾತ್ರಿಯ ಮೂರನೇ ದಿನ ಅಂದ್ರೆ ಶನಿವಾರ ತಾಯಿ ದುರ್ಗೆಯನ್ನ ಚಂದ್ರಘಂಟಾ ಹೆಸರಿನಲ್ಲಿ ಪೂಜಿಸಲಾಗುತ್ತದೆ. ತದಿಗೆಯ ದಿನ ಬರುವ ಈ ತಾಯಿಗೆ ಬೂದು ಬಣ್ಣ ಅಂದ್ರೆ ಅಚ್ಚು ಮೆಚ್ಚು. ಅದೇ ರೀತಿ ಕಿಚ್ಚ ಸುದೀಪ್ ಸಹ ಬೂದು ಬಣ್ಣದ ಸಾಂಪ್ರದಾಯಿಕ ಡ್ರೆಸ್ನಲ್ಲಿ ಕಾಣಿಸಿಕೊಂಡ್ರು. ಇದಕ್ಕೆ ಪೂರಕ ಎನ್ನುವಂತೆ ಬರಿಗಾಲಿನಲ್ಲಿ ಬಿಗ್ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ. ಹಾಗಾಗಿಯೇ ನವರಾತ್ರಿಯ ಸಂದರ್ಭದಲ್ಲಿ ಸುದೀಪ್ ಮಹತ್ವದ ಸಂದೇಶ ರವಾನಿಸಿದ್ದಾರೆ. ಅದೇನಂದ್ರೆ ಸುದೀಪ್ ಕಠಿಣ ವ್ರತಾಚರಣೆಯಲ್ಲಿದ್ದಾರೆ ಎಂಬ ಮಹತ್ವದ ಖಚಿತ ಮಾಹಿತಿ ನ್ಯೂಸ್ ಫಸ್ಟ್ಗೆ ಲಭ್ಯವಾಗಿದೆ.
ಸೂಪರ್ ಸಂಡೇ ಶೋನಲ್ಲೂ ಕೇಸರಿ ಬಣ್ಣದ ಡ್ರೆಸ್!
ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲು ಸುದೀಪ್ ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ವಾರದ ಕತೆ ಹಾಗೂ ಸೂಪರ್ ಸಂಡೇ ಎರಡೂ ಶೋವನ್ನು ಕಿಚ್ಚ ಸುದೀಪ್ ಅವರು ಬರಿಗಾಲಲ್ಲಿ ನಡೆಸಿಕೊಟ್ಟಿದ್ದಾರೆ. ಶನಿವಾರ ಬೂದು ಬಣ್ಣ ಮತ್ತು ಭಾನುವಾರ ಕೇಸರಿ ಬಣ್ಣದ ಇಂಡೋ ವೆಸ್ಟ್ರರ್ನ್ ಶೈಲಿಯ ಕುರ್ತಾ ಹಾಕಿರುವ ಕಿಚ್ಚ ಸುದೀಪ್ ಸೂಪರ್ ಸಂಡೇಗೆ ಸ್ಪೆಷಲ್ ಟಚ್ ಕೊಟ್ಟಿದ್ದಾರೆ. ಭಾನುವಾರದ ಲುಕ್ ಹಾಗೂ ಬಣ್ಣ ಕೂಡ ನವರಾತ್ರಿಗಾಗಿ ಕನ್ನಡದ ಪ್ರಖ್ಯಾತ ನಟ ಸುದೀಪ ವ್ರತ ಆಚರಿಸುತ್ತಿದ್ದಾರೆ ಅನ್ನೋದು ಖಚಿತವಾಗುತ್ತದೆ.
ಇದನ್ನೂ ಓದಿ: ಚಪ್ಪಲಿ ಹಾಕದೇ ಬಿಗ್ಬಾಸ್ ವೇದಿಕೆಗೆ ಬಂದ ಕಿಚ್ಚ ಸುದೀಪ್; ಇದಕ್ಕೆ ವಿಶೇಷ ಕಾರಣವುಂಟು
ಯಾಕಂದ್ರೆ, ನವರಾತ್ರಿಯ 4ನೇ ದಿನ ಕೂಷ್ಮಾಂಡ ದೇವಿಯ ರೂಪದಲ್ಲಿ ತಾಯಿ ದುರ್ಗೆಯನ್ನು ಆರಾಧಿಸಲಾಗುತ್ತದೆ. ಈ ತಾಯಿಯನ್ನು ಕೇಸರಿ/ಕಿತ್ತಳೆ ಬಣ್ಣದ ವಸ್ತು, ಪದಾರ್ಥಗಳಿಂದ ಪೂಜಿಸುತ್ತಾರೆ. ಕೂಷ್ಮಾಂಡ ದೇವಿಗೆ ಕೇಸರಿ ಬಣ್ಣ ಅಚ್ಚುಮೆಚ್ಚು. ಹಾಗಾಗಿಯೇ ಸುದೀಪ್ ಭಾನುವಾರದ ಡ್ರೆಸ್ ಕೂಡ ಕಿಚ್ಚ ಕಠಿಣ ವ್ರತವನ್ನು ಆಚರಿಸುತ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿಯಾಗಿದೆ.
4 ವರ್ಷಗಳಿಂದಲೂ ನವರಾತ್ರಿ ವ್ರತ ಆಚರಿಸುತ್ತಿರುವ ಕಿಚ್ಚ ಸುದೀಪ!
ಅಣ್ಣಾವ್ರು ಕೂಡ ದೇವರ ವಿಚಾರದಲ್ಲಿ ಬಲು ಕಟ್ಟುನಿಟ್ಟಾಗಿದ್ದರು!
ನವರಾತ್ರಿ ಸಂದರ್ಭ ಸತತ 9 ದಿನಗಳ ಕಾಲ ಕಟ್ಟುನಿಟ್ಟಿನ ವ್ರತವನ್ನು ಸುದೀಪ್ ಆಚರಿಸುತ್ತಿದ್ದಾರೆ. ಅಚ್ಚರಿಯ ಸಂಗತಿ ಏನಂದ್ರೆ, ಇದೇ ಮೊದಲ ಸಲ ಸುದೀಪ್ ನವರಾತ್ರಿ ವ್ರತವನ್ನು ಆಚರಿಸುತ್ತಿಲ್ಲ. ಬದಲಾಗಿ 2020ರಿಂದಲೂ ಪ್ರತಿ ನವರಾತ್ರಿಯಲ್ಲಿ ಕಟ್ಟುನಿಟ್ಟಿನ ಏಕಭುಕ್ತಿ ಉಪವಾಸ ವ್ರತವನ್ನ ಆಚರಿಸುತ್ತಾ ಬಂದಿದ್ದಾರೆ ಎಂಬ ಖಚಿತ ಮಾಹಿತಿ ನ್ಯೂಸ್ ಫಸ್ಟ್ಗೆ ಲಭ್ಯವಾಗಿದೆ. ಅಣ್ಣಾವ್ರು ಇಂಥಾ ವ್ರತಾಚರಣೆಗಳನ್ನ ಮಾಡುತ್ತಾ ಬಂದಿದ್ದರು. ದೇವರ ವಿಚಾರಕ್ಕೆ ಬಂದರೆ ಡಾ.ರಾಜ್ಕುಮಾರ್ ಬಲು ಕಟ್ಟು ನಿಟ್ಟು. ಗುರುವಾರಗಳಲ್ಲಿ ರಾಯರ ಭಕ್ತರಾಗಿ ರಾಜ್ ಹೇಗಿದ್ರು ಅನ್ನೋದಕ್ಕೆ ಇಂಡಸ್ಟ್ರಿಯಲ್ಲಿ ಗಂಟೆಗಟ್ಟಲೇ ಮಾತಾಡೋಕೆ ದಂಡಿ ದಂಡಿ ಜನರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸುದೀಪ್ ನವರಾತ್ರಿ ವ್ರತಾಚರಣೆ ಮಾಡ್ತಿರೋದು ತಮ್ಮ ಅಭಿಮಾನಿಗಳನ್ನೂ ಸನ್ಮಾರ್ಗದಲ್ಲಿ ನಡೆಯೋದಕ್ಕೆ ಪ್ರೇರೇಪಿಸುವಂತಿದೆ.
ಇದನ್ನೂ ಓದಿ: ಗುಡ್ನ್ಯೂಸ್ ಕೊಡ್ತಾರಾ ಹರಿಪ್ರಿಯಾ ವಸಿಷ್ಠ ಜೋಡಿ; ಬಿಗ್ಬಾಸ್ಗೆ ಹೋಗದೇ ಇರೋದಕ್ಕೆ ಇದೇ ಕಾರಣ!
ಸುದೀಪ್ ವ್ರತ ಹೇಗಿರಲಿದೆ? ಕಿಚ್ಚ ಎಷ್ಟು ಕಟ್ಟುನಿಟ್ಟು ಇರ್ತಾರೆ ಗೊತ್ತಾ?
ಕೋಪ ಮಾಡಿಕೊಳ್ಳುವಂತಿಲ್ಲ, ಜೋರಾಗಿ ಮಾತಾಡುವಂತಿಲ್ಲ!
ಸುದೀಪ್ ಆರೋಗ್ಯದ ಗುಟ್ಟು ಏನು ಅನ್ನೋದನ್ನ ಅಭಿಮಾನಿಗಳು ಪದೇ ಪದೇ ಕೇಳೋ ಪ್ರಶ್ನೆ. ಅಸಲಿಗೆ ನವರಾತ್ರಿ ವ್ರತಾಚರಣೆ ಕೂಡ ಕಿಚ್ಚನ ಆರೋಗ್ಯದ ಗುಟ್ಟಿನ ಒಂದು ಭಾಗವೆಂದೇ ಹೇಳಲಾಗುತ್ತಿದೆ. ಯಾಕಂದ್ರೆ, ಕಳದೆ ನಾಲ್ಕು ವರ್ಷಗಳಿಂದಲೂ ಸುದೀಪ್ ನವರಾತ್ರಿಗಳಲ್ಲಿ ಕಟ್ಟುನಿಟ್ಟಿನ ವ್ರತವನ್ನು ಆಚರಿಸುತ್ತಾ ಬಂದಿದ್ದಾರೆ. ಈ ವಿಷಯಕ್ಕೆ ಬಂದರೆ ಸುದೀಪ್ ಬರಿಗಾಲಿನಲ್ಲಿ ಬಂದಿದ್ದೂ ಸಹ ವ್ರತಾಚಾರಣೆಯ ಒಂದು ಭಾಗವೇ ಆಗಿದೆ. ವಾರದ ಕಥೆ ಕಿಚ್ಚನ ಜೊತೆ ಶೋನಲ್ಲಿ ಸುದೀಪ್ ಅತ್ಯಂತ ಸಂಯಮದಿಂದ ನಗುಮುಖದಲ್ಲೇ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಸಹ ವ್ರತದ ಒಂದು ಬಹುಮುಖ್ಯ ನಿಯಮವಾಗಿದೆ. ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಕೋಪ ಮಾಡಿಕೊಳ್ಳುವಂತಿಲ್ಲ. ಜೋರಾಗಿ ಮಾತಾಡುವಂತಿಲ್ಲ. ಗಟ್ಟಿಯಾಗಿ, ಕೆಟ್ಟದಾಗಿ ಶಬ್ಧಗಳನ್ನು ಬಳಸುವಂತೆಯೂ ಇಲ್ಲ. ಇದೆಲ್ಲಾ ಅಂಶಗಳು ಕಿಚ್ಚಿನ ಪಂಚಾಯ್ತಿ ಹಾಗೂ ಸೂಪರ್ ಸಂಡೇಯಲ್ಲಿ ಕಾಣಿಸುತ್ತಿವೆ.
ವ್ರತಾಚರಣೆಯ 9 ದಿನಗಳ ಕಾಲ ಚಾಪೆಯ ಮೇಲಷ್ಟೇ ನಿದ್ರೆ!
ನವರಾತ್ರಿ ವ್ರತಾಚರಣೆಯ ಬಹುಮುಖ್ಯ ನಿಯಮವಿದು. ಸಾಧ್ಯವಾದಷ್ಟು ನೆಲದ ಮೇಲೆ ಮಲಗಬೇಕು ಅನ್ನೋ ವಿಧಿ ಇದೆ. ಆದರೆ ವಯಸ್ಸು ಹಾಗೂ ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ನೆಲದ ಬದಲಿಗೆ ಚಾಪೆಯ ಮೇಲೆ ಮಲಗಬಹುದು. ಹಾಗಾಗಿಯೇ ಕಿಚ್ಚ ನವರಾತ್ರಿ ವ್ರತಾಚರಣೆಯ ಸಂದರ್ಭ ಒಂಬತ್ತು ದಿನಗಳ ಕಾಲ ಚಾಪೆಯ ಮೇಲೆಯೇ ನಿದ್ದೆ ಮಾಡಲಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ದುರ್ಗಾ ದೀಕ್ಷೆ ತೊಟ್ಟ ಕ್ಷಣದಿಂದಲೇ ಸಂಸಾರಿಯೂ ಸಹ ಬ್ರಹ್ಮಚರ್ಯೆ ಪಾಲಿಸಬೇಕು. ಅಯ್ಯಪ್ಪ ಮಾಲಾಧಾರಿಗಳ ರೀತಿಯಲ್ಲೇ ಪ್ರತ್ಯೇಕ ಜೀವನ ನಡೆಸಬೇಕು. ಅಂತೆಯೇ ಸುದೀಪ್ ಸಹ ಕಟ್ಟುನಿಟ್ಟಿನ ನವರಾತ್ರಿ ವ್ರತವನ್ನು ಆಚರಿಸುತ್ತಿದ್ದಾರೆ. ಹಾಗಿದ್ರೆ ಈ ವ್ರತವನ್ನು ಆಚರಿಸುವ ಸಂದರ್ಭ ಊಟ ಮಾಡೋದಿಲ್ಲವೇ? ಖಂಡಿತ ಊಟ ಮಾಡದೇ ವ್ರತವನ್ನು ಆಚರಿಸೋ ಮಂದಿ ಇದ್ದಾರೆ.
ಮೋದಿ 45 ವರ್ಷಗಳಿಂದ ಬಿಸಿ ನೀರು ಕುಡಿದುಕೊಂಡೇ ವ್ರತ!
ಏಕಭುಕ್ತ ಉಪವಾಸ ಕ್ರಮ ಅನುಸರಿಸುತ್ತಿದ್ದಾರಾ ಸುದೀಪ್?
ಪ್ರಧಾನಿ ನರೇಂದ್ರ ಮೋದಿ 45 ವರ್ಷಗಳಿಂದಲೂ ನವರಾತ್ರಿ ವ್ರತವನ್ನು ಆಚರಿಸುತ್ತಿದ್ದಾರೆ. ನಿಮಗೆ ಅಚ್ಚರಿ ಆಗಬಹುದು ಮೋದಿ ನವರಾತ್ರಿ ವ್ರತ ಆಚರಿಸೋ ಸಂದರ್ಭ ಒಂಬತ್ತೂ ದಿನ ಬರೀ ನೀರನ್ನು ಕುಡಿದು ಉಪವಾಸ ಇರುತ್ತಾರೆ. ಸದ್ಯ, ಸುದೀಪ್ ಸಹ ಮೋದಿ ರೀತಿಯಲ್ಲೇ ನವರಾತ್ರಿ ವ್ರತವನ್ನು ಮಾಡುತ್ತಿದ್ದಾರೆ. ನವರಾತ್ರಿ ವ್ರತದಲ್ಲೂ ಹಲವು ವಿಧಗಳಿವೆ. ಸಪ್ತರಾತ್ರ ಉಪವಾಸ, ಏಕಭುಕ್ತ ಉಪವಾಸ, ವಕ್ತವ್ರತ ಉಪವಾಸ, ತ್ರಿರಾತ್ರ ಉಪವಾಸ, ಯುಗ್ಮರಾತ್ರ ಉಪವಾಸ ಅಂತ ಹಲವು ಉಪವಾಸದ ವಿಧಗಳಿವೆ. ಇಲ್ಲಿ ಕಿಚ್ಚ ಸುದೀಪ್ ಬಿಗ್ಬಾಸ್ನಲ್ಲಿ ಕಾಣಿಸಿಕೊಂಡ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಾತಿನ ವಾಗ್ಝರಿ ನೋಡಿದರೇ ಕಿಚ್ಚ ಏಕಭುಕ್ತ ಉಪವಾಸ ಇದ್ದಾರೆ ಅನ್ನೋದು ತಿಳಿಯುತ್ತದೆ. ಅಂದರೇ, ಯಾರಿಗೆ 9 ದಿನಗಳವರೆಗೆ ಸಂಪೂರ್ಣ ಉಪವಾಸವನ್ನು ಆಚರಿಸಲು ಸಾಧ್ಯವಿಲ್ಲವೋ ಅವರು ಪಂಚಮಿಯಂದು ಮಾತ್ರ ಏಕಭುಕ್ತ ಉಪವಾಸವನ್ನು ಮಾಡಬಹುದು. ಈ ಉಪವಾಸದಲ್ಲಿ, ನೀವು ಒಂದು ಸಮಯದಲ್ಲಿ ಒಂದು ಊಟ ಮಾಡಬಹುದು. ಸುದೀಪ್ ಇದೇ ಉಪವಾಸ ಕ್ರಮವನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸುದೀಪ್ ಸೇವಿಸಿದ ಪಾನೀಯದಲ್ಲೂ ನವರಾತ್ರಿ ವ್ರತದ ಸಂದೇಶ!
ಬಿಗ್ಬಾಸ್ನ ವಾರದ ಕಥೆ ಕಿಚ್ಚನ ಜೊತೆ ಶೋನಲ್ಲಿ ಸುದೀಪ್ ಎಷ್ಟು ಕಟ್ಟುನಿಟ್ಟಿನ ವ್ರತ ಆಚರಿಸುತ್ತಿದ್ದಾರೆ ಅನ್ನೋದಕ್ಕೆ ಒಂದು ಸಾಕ್ಷಿಯೂ ಇತ್ತು. ಅದುವೇ ಸುದೀಪ್ ವೇದಿಕೆ ಮೇಲೆ ಸ್ಪರ್ಧಿಗಳ ಜೊತೆ ಮಾತಾಡುತ್ತಾ ಸೇವಿಸಿದ ಪಾನೀಯ. ಪ್ರತೀ ಸಲ ಸುದೀಪ್ ಗ್ರೀನ್ ಟೀ ಕುಡಿಯುತ್ತಾರೆ. ಆದರೆ, ವ್ರತಾಚರಣೆಯ ವೇಳೆ ಮಸಾಲೆಯುಕ್ತ ಆಹಾರವನ್ನು, ಪಾನೀಯಗಳನ್ನೂ ಸೇವಿಸಬಾರದು ಎಂಬುದು ವ್ರತದ ನಿಯಮ. ಹಾಗಾಗಿಯೇ ಸುದೀಪ್ ಟೀ, ಕಾಫಿಯನ್ನು ಕುಡಿಯುತ್ತಿಲ್ಲ. ಮೋದಿ ಕೇವಲ ಬಿಸಿ ನೀರಿನ ಮೂಲಕವೇ 9 ದಿನ ಉಪವಾಸ ಇರುವಂತೆ, ಕಿಚ್ಚ ಸಹ ಗ್ರೀನ್ ಟೀ ಅಥವಾ ಬಿಸಿ ನೀರನ್ನು ಸೇವಿಸುತ್ತಿದ್ದಾರೆ.
ಈ ಸಲದ ಬಿಗ್ಬಾಸ್ನ ಮೊದಲ ವಾರದ ಕಥೆ ಕಿಚ್ಚನ ಜೊತೆ ಶೋನಲ್ಲೂ ಸುದೀಪ್ ಪಾನೀಯವನ್ನು ಸೇವಿಸಿದ್ದು ಕಾಣಬಹುದು. ಆದರೇ, ಸುದೀಪ್ ಎಷ್ಟರಮಟ್ಟಿಗೆ ಕಟ್ಟುನಿಟ್ಟಿನ ವ್ರತ ಆಚರಿಸುತ್ತಿದ್ದಾರೆ ಅನ್ನೋದಕ್ಕೆ ಬರೀಗಾಲಿನ ನಡಿಗೆ, ಬೂದು, ಕೇಸರಿ ಬಣ್ಣದ ಉಡುಗೆ ತೊಡುಗೆ, ಮಾತು, ರೀತಿ, ನೀತಿ, ಸೇವಿಸಿದ ಪಾನೀಯ ಎಲ್ಲವೂ ಸಹ ಸಾಕ್ಷಿ ನುಡಿಯುತ್ತಿವೆ. ಅಸಲಿಗೆ ಕಿಚ್ಚ ನವ ಶಕ್ತಿ ವ್ರತವನ್ನು ಆಚರಿಸುತ್ತಿರೋದೇಕೆ ಗೊತ್ತಾ? ಈ ವ್ರತಾಚರಣೆಯ ಹಿಂದಿನ ಹೆಬ್ಬಯಕೆ ಇದೀಗ ಅಭಿಮಾನಿಗಳಲ್ಲಿ ಹೊಸದೊಂದು ಕೌತುಕವನ್ನೇ ಹುಟ್ಟು ಹಾಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ