/newsfirstlive-kannada/media/post_attachments/wp-content/uploads/2025/07/KL_RAHUL_PANT.jpg)
ಕನ್ನಡಿಗ ಕೆ.ಎಲ್ ರಾಹುಲ್ ಅವರು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಮೋಘವಾದ ಸೆಂಚುರಿ ಬಾರಿಸುವ ಮೂಲಕ ಟೀಮ್ ಇಂಡಿಯಾಕ್ಕೆ ನೆರವಾಗಿದ್ದಾರೆ.
ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದ ಆಂಗ್ಲರು ಬೂಮ್ರಾ ಅವರ ಬೌಲಿಂಗ್ ದಾಳಿಗೆ ಧೂಳೀಪಟವಾಗಿದ್ದರು. ಜೋ ರೂಟ್ ಅವರ ಸೆಂಚುರಿ ಬಿಟ್ಟರೇ ಉಳಿದ ಬ್ಯಾಟ್ಸ್ಮನ್ಗಳು 50ರ ಗಡಿಗೆ ಬರುವಷ್ಟರಲ್ಲಿ ಔಟ್ ಆಗಿದ್ದರು. ಹೀಗಾಗಿ ಇಂಗ್ಲೆಂಡ್ ತಂಡ 2ನೇ ದಿನದ ಅರ್ಧದಲ್ಲೇ 387 ರನ್ಗೆ ಆಲೌಟ್ ಆಗಿತ್ತು.
ಇದನ್ನೂ ಓದಿ:ವೈಭವ್ ಸೂರ್ಯವಂಶಿಗೆ ಭಾರತ ತಂಡದಲ್ಲಿ ಸ್ಥಾನ ಇಲ್ವಾ.. ಇನ್ನು ಎಷ್ಟು ವರ್ಷ ಕಾಯಬೇಕು?
ಇದರ ಬೆನ್ನಲ್ಲೇ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದ ಟೀಮ್ ಇಂಡಿಯಾ ಆರಂಭದಲ್ಲೇ ಜೈಸ್ವಾಲ್ (13) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಏಕೆಂದರೆ ಇವರ ಬೆನ್ನಲ್ಲೇ ಕನ್ನಡಿಗ ಕರುಣ್ ನಾಯರ್ 40 ರನ್ಗೆ ಬ್ಯಾಟಿಂಗ್ ಮುಗಿಸಿ ಮತ್ತೊಮ್ಮೆ ವಿಫಲರಾದರು. ಎರಡು ಟೆಸ್ಟ್ಗಳಲ್ಲಿ ಶತಕ ಸಿಡಿಸಿದ್ದ ನಾಯಕ ಶುಭ್ಮನ್ ಗಿಲ್ 3ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 16 ರನ್ಗೆ ಕ್ಯಾಚ್ ಕೊಟ್ಟು ಹೊರ ನಡೆದರು. ಆದರೆ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ್ದ ಕೆ.ಎಲ್ ರಾಹುಲ್, ಪಂತ್ ಜೊತೆ ಸೇರಿ ಅದ್ಭುತವಾದ ಇನ್ನಿಂಗ್ಸ್ ಕಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮತ್ತೊಂದು ಶತಕ ಬಾರಿಸೋ ಮೂಲಕ ಕನ್ನಡಿಗ ಕೆ.ಎಲ್ ರಾಹುಲ್ ಅವರು ಟೀಮ್ ಇಂಡಿಯಾಕ್ಕೆ ನೆರವಾಗಿದ್ದಾರೆ. 3 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಕೆ.ಎಲ್ ರಾಹುಲ್ ಬ್ಯಾಟಿಂಗ್ ಹೊಸ ಭರವಸೆಯನ್ನ ಮೂಡಿಸಿದೆ. ಸದ್ಯ ಪಂದ್ಯದಲ್ಲಿ ಒಟ್ಟು 176 ಎಸೆತಗಳನ್ನು ಎದುರಿಸಿರುವ ಕೆ.ಎಲ್ ರಾಹುಲ್ ಅವರು ಒಂದೂ ಸಿಕ್ಸರ್ ಬಾರಿಸದೇ ಕೇವಲ 13 ಬೌಂಡರಿಗಳಿಂದ ಶತಕ ಸಿಡಿಸಿ ಸಂಭ್ರಮಿಸಿದರು. ಸದ್ಯ ಟೀಮ್ ಇಂಡಿಯಾ 5 ವಿಕೆಟ್ಗೆ 254 ರನ್ಗಳನ್ನು ಗಳಿಸಿ ಬ್ಯಾಟಿಂಗ್ ಮುಂದುವರೆಸಿದೆ. ಕೆ.ಎಲ್ ರಾಹುಲ್ ಅವರು ಹ್ಯಾರಿ ಬ್ರೂಕ್ಗೆ ಕ್ಯಾಚ್ ಕೊಟ್ಟು ಔಟ್ ಆಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ