/newsfirstlive-kannada/media/post_attachments/wp-content/uploads/2025/04/KL_RAHUL_DC.jpg)
ತವರಿನ ಪಿಚ್ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರ ಬ್ಯಾಟಿಂಗ್ ಆರ್ಭಟದಿಂದ ರಾಯಲ್ ಚಾಲೆಂಜರ್ಸ್ ಜೊತೆ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ಗಳ ರೋಚಕ ಗೆಲವು ಪಡೆದಿದೆ. ಈ ಮೂಲಕ ಆರ್ಸಿಬಿ ತನ್ನ ನೆಲದಲ್ಲಿಯೇ ಕನ್ನಡಿಗನಿಂದ ಭಾರೀ ಅವಮಾನಕ್ಕೆ ಒಳಗಾದಂತೆ ಆಗಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು, ಆರ್ಸಿಬಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಆರ್ಸಿಬಿ ಪರ ಓಪನರ್ ಬ್ಯಾಟರ್ ಆಗಿ ಕ್ರೀಸ್ಗೆ ಆಗಮಿಸಿದ ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಆರಂಭದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಆದರೆ 7 ಓವರ್ ಆಗುಷ್ಟರಲ್ಲಿ ಆರ್ಸಿಬಿಯ ಚಿತ್ರಣವೇ ಬದಲಾಯಿತು. ಪ್ರಮುಖವಾದ 3 ವಿಕೆಟ್ಗಳು ಉರುಳಿ ತಂಡ ಸಂಕಷ್ಟಕ್ಕೆ ಸಿಲುಕಿತ್ತು.
ಫಿಲಿಪ್ ಸಾಲ್ಟ್ 17 ಬಾಲ್ಗೆ 37 ರನ್ಗಳಿಸಿ ರನೌಟ್ ಆದ್ರೆ ಇವರ ಬೆನ್ನಲ್ಲೇ 3ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬ್ಯಾಟಿಂಗ್ ಮಾಡಲು ಬಂದ ದೇವದತ್ ಪಡಿಕ್ಕಲ್ 1 ರನ್ಗೆ ಕ್ಯಾಚ್ ಕೊಟ್ಟರು. ಪಡಿಕ್ಕಲ್ ಹಿಂದೆಯೇ ವಿರಾಟ್ ಕೊಹ್ಲಿ 22 ರನ್ಗೆ ಬ್ಯಾಟಿಂಗ್ ಮುಗಿಸಿದರು. ರಜತ್ ಪಾಟಿದಾರ್ಗೆ ಜೀವದಾನ ಸಿಕ್ಕರೂ 25 ರನ್ಗೆ ಕೆ.ಎಲ್ ರಾಹುಲ್ಗೆ ಕ್ಯಾಚ್ ನೀಡಿ ಹೊರ ನಡೆದರು. ಕೃನಾಲ್ ಪಾಂಡ್ಯ 18, ಟಿಮ್ ಡೇವಿಡ್ 20 ಬಾಲ್ಗಳಲ್ಲಿ 2 ಫೋರ್ ಹಾಗೂ 4 ಸಿಕ್ಸರ್ಗಳಿಂದ 37 ರನ್ಗಳಿಸಿದರು. ಇವರ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ನಿಗದಿತ 20 ಓವರ್ನಲ್ಲಿ 7 ವಿಕೆಟ್ಗೆ 164 ರನ್ಗಳ ಟಾರ್ಗೆಟ್ ನೀಡಿತ್ತು.
ಈ ಗುರಿ ಬೆನ್ನು ಹತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭವೇನೂ ಚೆನ್ನಾಗಿರಲಿಲ್ಲ. ಏಕೆಂದರೆ ಆರಂಭಿಕ ಬ್ಯಾಟ್ಸ್ಮನ್ಗಳಾದ ಫಾಫ್ಡುಪ್ಲಿಸ್ಸಿ 2, ಮೆಕ್‌ಗುರ್ಕ್ 7, ಪೊರೆಲ್ 7 ರನ್ ಹೀಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿದವು. ಈ ವೇಳೆ ಡೆಲ್ಲಿಗೆ ನೆರವಾಗಿದ್ದು ಕನ್ನಡಿಗ ಕೆ.ಎಲ್ ರಾಹುಲ್. ಕೊನೆವರೆಗೂ ಕ್ರೀಸ್ ಕಚ್ಚಿಕೊಂಡು ರಾಹುಲ್ ಬ್ಯಾಟಿಂಗ್ ಮಾಡಿದರು. ಸೋಲುವ ಪಂದ್ಯವನ್ನು ರಾಹುಲ್ ಅವರೇ ಗೆಲ್ಲಿಸಿಕೊಟ್ಟರು ಎಂದು ಇಲ್ಲಿ ಹೇಳಬಹುದು.
ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ಗೆ ಮಕಾಡೆ ಮಲಗಿದ RCB.. ಅಲ್ಪ ಮೊತ್ತದ ಟಾರ್ಗೆಟ್ ನೀಡಿದ ಬೆಂಗಳೂರು
ಕೆ.ಎಲ್ ರಾಹುಲ್ಗೆ ನಾಯಕ ಅಕ್ಷರ್ ಪಟೇಲ್ ಉತ್ತಮ ಸಾಥ್ ಕೊಟ್ಟರು. ಆದರೆ 15 ರನ್ ಗಳಿಸಿ ಆಡುವಾಗ ಅಕ್ಷರ್ ಕ್ಯಾಚ್ ನೀಡಿ ಔಟ್ ಆದರು. ಇವರ ನಂತರ ಬಂದ ಸ್ಟಬ್ಸ್ ಅವರು ಕೆ.ಎಲ್ ರಾಹುಲ್ ಅವರ ಜೊತೆ ಸೇರಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸುವವರೆಗೆ ಜೊತೆಯಲ್ಲಿದ್ದರು. ಮೊದಲಿನಿಂದಲೂ ತಾಳ್ಮೆಯ ಬ್ಯಾಟಿಂಗ್ ಮಾಡಿದ ಕೆ.ಎಲ್ ರಾಹುಲ್ 53 ಎಸೆತಗಳಲ್ಲಿ 7 ಬೌಂಡರಿ, 6 ಭರ್ಜರಿ ಸಿಕ್ಸರ್ಗಳಿಂದ 93 ರನ್ ಗಳಿಸಿ ಅಜೇಯರಾಗಿ ಉಳಿದರು.
ಕೆ.ಎಲ್ ರಾಹುಲ್ ಆರ್ಭಟದ ಬ್ಯಾಟಿಂಗ್ನಿಂದ ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್ಗಳಲ್ಲಿ 4 ವಿಕೆಟ್ಗೆ 169 ರನ್ಗಳನ್ನ ಗಳಿಸಿ ಅದ್ಭುತವಾದ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಡೆಲ್ಲಿ ತಂಡ ಇನ್ನೇನು ಸೋಲುತ್ತದೆ ಎಂದುಕೊಂಡಿದ್ದರು. ಆದರೆ ಪಂದ್ಯದಲ್ಲಿ ಮುಖ್ಯ ಪಾತ್ರ ವಹಿಸಿದ ಕೆ.ಎಲ್ ರಾಹುಲ್ ಗೆಲ್ಲುವವರೆಗೂ ಹೋರಾಡಿದರು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್ ಈ ಟೂರ್ನಿಯಲ್ಲಿ 4 ಪಂದ್ಯಗಳನ್ನು ಆಡಿ, 4 ರಲ್ಲೂ ಅಮೋಘವಾದ ಗೆಲುವು ಸಾಧಿಸಿ 8 ಅಂಕಗಳನ್ನು ಪಡೆದುಕೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ