/newsfirstlive-kannada/media/post_attachments/wp-content/uploads/2025/07/rare-blood-group.jpg)
ಬೆಂಗಳೂರು: ಜಗತ್ತಿನಲ್ಲಿಯೇ ಈವರೆಗೆ ಯಾರಲ್ಲೂ ಪತ್ತೆಯಾಗದ ರಕ್ತದ ಗುಂಪು ಮಹಿಳೆಯೊಬ್ಬರಲ್ಲಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಹೃದಯ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ 38 ವರ್ಷದ ಮಹಿಳೆಯೊಬ್ಬರು ಕೆಲವು ದಿನಗಳ ಹಿಂದೆ ದಾಖಲಾಗಿದ್ದರು.
ಇದನ್ನೂ ಓದಿ: ಕೈಮುಗಿದು ನ್ಯಾಯಾಧೀಶರ ಮುಂದೆ ನಿಂತಿದ್ದ ಪ್ರಜ್ವಲ್ ರೇವಣ್ಣ.. ಆಗಸ್ಟ್ 1ಕ್ಕೆ ತೀರ್ಪು ಪ್ರಕಟ..!
ಮಹಿಳೆಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ ನಂತರ ವೈದ್ಯರು ಶಾಕ್ ಆಗಿದ್ದಾರೆ. ಸಾಮಾನ್ಯವಾಗಿ ಮಹಿಳೆಯ ರಕ್ತದ ಗುಂಪು ಎಲ್ಲರಲ್ಲೂ ಕಂಡುಬರುವ O Rh+ ಆಗಿತ್ತು. ಆದರೆ ಲಭ್ಯವಿರುವ ಯಾವುದೇ O+ ರಕ್ತ ಅವರ ರಕ್ತಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ಹೀಗಾಗಿ ಹೆಚ್ಚಿನ ಪರೀಕ್ಷೆಗಾಗಿ ಅವರ ರಕ್ತದ ಮಾದರಿಯನ್ನು ರೋಟರಿ ಬೆಂಗಳೂರು ಟಿಟಿಕೆ ಬ್ಲಡ್ ಸೆಂಟರ್ನಲ್ಲಿರುವ ಅಡ್ವಾನ್ಸ್ಡ್ ಇಮ್ಯುನೊಹೆಮಟಾಲಜಿ ರೆಫರೆನ್ಸ್ ಲ್ಯಾಬೋರೇಟರಿಗೆ ಕಳುಹಿಸಿಕೊಡಲಾಗಿತ್ತು.
ಆಗ ಅತ್ಯಾಧುನಿಕ ಸೆರೋಲಾಜಿಕಲ್ ತಂತ್ರಗಳನ್ನು ಬಳಸಿಕೊಂಡು, ವೈದ್ಯರ ತಂಡವು ಅವರ ರಕ್ತವನ್ನು ಪರೀಕ್ಷೆಗೆ ಒಳಪಡಿಸಿದೆ. ಮಹಿಳೆಯ ರಕ್ತವು ಪ್ಯಾನ್ರಿಯಾಕ್ಟಿವ್ (ಅಂದರೆ, ಸೀರಮ್ ಅಥವಾ ಪ್ಲಾಸ್ಮಾ, ಪ್ರಯೋಗಾಲಯದಲ್ಲಿ ಪರೀಕ್ಷಿಸಲಾದ ಎಲ್ಲಾ ಕೆಂಪು ರಕ್ತ ಕಣಗಳೊಂದಿಗೆ ಪ್ರತಿಕ್ರಿಯಿಸುವ ಪರಿಸ್ಥಿತಿ) ಆಗಿರುವುದು ಕಂಡುಬಂದಿದೆ. ಆ ರಕ್ತವು ಎಲ್ಲಾ ಪರೀಕ್ಷಾ ಮಾದರಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂಬುದು ಪತ್ತೆಯಾಯಿತು. ಇದು ಅಪರೂಪದ ಅಥವಾ ತಿಳಿದಿಲ್ಲದ ರಕ್ತದ ಪ್ರಕಾರದ ಸಂಭವನೀಯ ಪ್ರಕರಣವೆಂದು ಗುರುತಿಸಲಾಗಿದೆ ಎಂದು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ವೈದ್ಯ ಡಾ. ಅಂಕಿತ್ ಮಾಥುರ್ ತಿಳಿಸಿದ್ದಾರೆ.
ಇನ್ನೂ ಅಚ್ಚರಿ ಏನೆಂದರೆ, ವೈದ್ಯರು ಆ ಮಹಿಳೆಯ ಕುಟುಂಬದವರಲ್ಲಿ ಯಾರಲ್ಲಾದರೂ ಸೇಮ್ ರಕ್ತ ಇದೆಯೇ ಎಂದು ತಿಳಿಯಲು ಪ್ರಯತ್ನಿಸಲಾಯಿತು. ಅವರ ಕುಟುಂಬದ 20 ಸದಸ್ಯರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ ಅವುಗಳಲ್ಲಿ ಯಾವುದೂ ಮಹಿಳೆಯ ರಕ್ತದೊಂದಿಗೆ ಹೊಂದಿಕೆಯಾಗಲಿಲ್ಲ ಎಂದೂ ಅಂಕಿತ್ ಮಾಥುರ್ ತಿಳಿಸಿದ್ದಾರೆ. ಇನ್ನೂ, ಈ ಪ್ರಕರಣವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲಾಯಿತು. ವೈದ್ಯರು ಮತ್ತು ಕುಟುಂಬದವರ ಪ್ರಯತ್ನದಿಂದ, ರಕ್ತ ವರ್ಗಾವಣೆಯ ಅಗತ್ಯವಿಲ್ಲದಂತೆಯೇ ಅವರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು ಎಂಬುದನ್ನೂ ವರದಿ ಉಲ್ಲೇಖಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ