/newsfirstlive-kannada/media/post_attachments/wp-content/uploads/2024/10/kopal-court-verdict-1.jpg)
ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಇಂದು ಇಡೀ ದೇಶವೇ ತಿರುಗಿ ನೋಡುವಂತ ಐತಿಹಾಸಿಕ ತೀರ್ಪು ನೀಡಿದ್ದಾರೆ. ದಲಿತರ ಮೇಲೆ ಹಲ್ಲೆ, ಧ್ವಂಸ, ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ಜೀವವಾಧಿ ಶಿಕ್ಷೆ ನೀಡಲಾಗಿದೆ. ಇನ್ನುಳಿದ ಮೂವರಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ ₹ 2000 ರೂಪಾಯಿ ದಂಡ ವಿಧಿಸಲಾಗಿದೆ.
ಆಗಸ್ಟ್ 28, 2014ರಂದು ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಗಲಭೆ ನಡೆದಿತ್ತು. ದಲಿತರ ಮೇಲೆ ಹಲ್ಲೆ, ಮನೆಗಳ ಧ್ವಂಸ ಹಾಗೂ ದೌರ್ಜನ್ಯ ಪ್ರಕರಣ ಇಡೀ ರಾಜ್ಯದಲ್ಲಿಯೇ ಸದ್ದು ಮಾಡಿತ್ತು. ಈ ಗಲಾಟೆ ಸಂಬಂಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ 117 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: 25 ಕೆಜಿ ಅಕ್ಕಿ ಚೀಲದಲ್ಲಿ ₹15 ಲಕ್ಷ ಹಣ.. ಕಂತೆ, ಕಂತೆ ನೋಟು ನೋಡಿ ಉಲ್ಟಾ ಹೊಡೆದ ಗ್ರಾಹಕ; ಆಮೇಲೇನಾಯ್ತು?
ಬರೋಬ್ಬರಿ 9 ವರ್ಷಗಳ ನಂತರ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಚಂದ್ರಶೇಖರ್ ಸಿ ಅವರು ಇಂದು ತೀರ್ಪು ಪ್ರಕಟಿಸಿದ್ದಾರೆ. 101 ಆರೋಪಿಗಳ ಪೈಕಿ 98 ಆರೋಪಿಗಳಿಗೆ ಜೀವವಾಧಿ ಶಿಕ್ಷೆ ಹಾಗೂ ತಲಾ ₹5000 ದಂಡ ಹಾಗೂ ಇನ್ನುಳಿದ 3 ಆರೋಪಿಗಳಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ ₹ 2000 ರೂಪಾಯಿ ದಂಡ ವಿಧಿಸಿದ್ದಾರೆ.
ಕಳೆದ ಅಕ್ಟೋಬರ್ 21ರಂದು ಜಿಲ್ಲಾ ನ್ಯಾಯಾಧೀಶರು ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಲು ಸೂಚಿಸಿದ್ದರು. 117 ಅಪರಾಧಿಗಳ ಪೈಕಿ 101 ಅಪರಾಧಿಗಳು ಕೋರ್ಟ್‌ಗೆ ಹಾಜರಾಗಿದ್ದರು. ಉಳಿದ 16 ಅಪರಾಧಿಗಳು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ನೀಡಿರುವ ಹಿನ್ನೆಲೆ 101 ಅಪರಾಧಿಗಳ ವಿರುದ್ಧ ಇರುವ ದಾಖಲೆ ಪರಿಶೀಲಿಸಿದ ನ್ಯಾಯಾಧೀಶರು, ಅಕ್ಟೋಬರ್ 21ರಂದು ಎಲ್ಲಾ ಅಪರಾಧಿಗಳ ವಿರುದ್ಧ ಆರೋಪ ಸಾಬೀತುಪಡಿಸಿ ನ್ಯಾಯಾಂಗ ಬಂಧಕ್ಕೆ ನೀಡಿದ್ದರು. ಆರೋಪಿಗಳನ್ನು ಕೊಪ್ಪಳ ಜಿಲ್ಲಾ ಕಾರಗೃಹದಲ್ಲಿ ಇರಿಸಲಾಗಿತ್ತು. ಅಕ್ಟೋಬರ್ 24ಕ್ಕೆ ಶಿಕ್ಷೆ ಪ್ರಕಟಿಸುವುದಾಗಿ ಕಾಯ್ದಿರಿಸಿದ್ದರು.
ಇಂದು ಸಂಜೆ 101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ಜೀವವಾಧಿ ಶಿಕ್ಷೆ ಹಾಗೂ ಮೂವರಿಗೆ 5 ವರ್ಷ ಕಠಿಣ ಶಿಕ್ಷೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಪ್ರಕಟಿಸಿದ್ದಾರೆ. ಇತಿಹಾಸದಲ್ಲಿಯೇ ಇಂಥದೊಂದು ತೀರ್ಪು ನೀಡಿರುವ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಚಂದ್ರಶೇಖರ್ ಸಿ ಅವರು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ತೀರ್ಪು ನೀಡಿದ ಹಿನ್ನೆಲೆ 101 ಅಪರಾಧಿಗಳನ್ನು ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಜಿಲ್ಲಾ ಕಾರಾಗೃಹಕ್ಕೆ ಹಾಜರು ಪಡಿಸಿದ ಪೊಲೀಸರು ಬಳ್ಳಾರಿ ಜೈಲಿಗೆ ರಾತ್ರಿಯೇ ಸ್ಥಳಾಂತರ ಮಾಡಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ಕೋರ್ಟ್ ಹಾಗೂ ಮರಕುಂಬಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜೀವಾವಧಿ ಶಿಕ್ಷೆಯ ತೀರ್ಪು ಹೊರ ಬರುತ್ತಿದ್ದಂತೆ ಅಪರಾಧಿಗಳ ಕುಟುಂಬಸ್ಥರು ಕೋರ್ಟ್ ಆವರಣದಲ್ಲಿ ಕಣ್ಣೀರಿಟ್ಟರು. ಮಹಿಳೆಯರು, ಮಕ್ಕಳು, ಯುವಕರು ಗ್ರಾಮದ ಮುಖಂಡರು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ, ತಪ್ಪು ಮಾಡದವರಿಗೆ ಯಾಕೆ ಶಿಕ್ಷೆ ಕೊಡುತ್ತಾರೆ. 9 ವರ್ಷಗಳ ನಂತರ ಯಾಕೆ ಶಿಕ್ಷೆ ಕೊಡುತ್ತಿದ್ದಾರೆ. ನಾವೆಲ್ಲರೂ ಗ್ರಾಮದಲ್ಲಿ ಒಂದಾಗಿದ್ದೀವಿ. ಇದೀಗ ಯಾವುದೇ ಅಂತಹ ವಾತಾವರಣ ಇಲ್ಲ ಎಂದು ಕಣ್ಣೀರಿಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ