/newsfirstlive-kannada/media/post_attachments/wp-content/uploads/2025/01/gavisiddeshwara.jpg)
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಇನ್ನೇನು ಕೆಲವೇ ಕ್ಷಣಗಳಲ್ಲಿ ಅದ್ಧೂರಿಯಾಗಿ ಆರಂಭಗೊಳ್ಳಲಿದೆ. ಧಾರವಾಡದ ಪ್ರಸಿದ್ಧ ಹಿಂದುಸ್ತಾನಿ ಗಾಯಕ, ಪಂಡಿತ ಪದ್ಮಶ್ರೀ ಎಂ.ವೆಂಕಟೇಶ್ ಕುಮಾರ್ ಅವರು ಗವಿಸಿದ್ದೇಶ್ವರ ಮಹಾರಥೋತ್ಸಕ್ಕೆ ಚಾಲನೆ ನೀಡಲಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ವಿಜಯಪುರದ ಹುಬ್ಬಳ್ಳಿ ಷಣ್ಮುಕರೂಢ ಮಠದ ಅಭಿನವ ಸಿದ್ದಾರೂಢ ಮಹಾಸ್ವಾಮಿ, ಕೈಲಾಸ ಮಂಟಪದಲ್ಲಿ ಜರುಗುವ ಉದ್ಘಾಟನೆ ಸಮಾರಂಭದ ಸಾನಿಧ್ಯ ವಹಿಸಲಿದ್ದಾರೆ. ಅಜ್ಜನ ಜಾತ್ರೆಯಲ್ಲಿ ಅತಿ ದೊಡ್ಡ ಮಹಾದಾಸೋಹ ನಡೆಯುವುದೇ ಎಲ್ಲರ ಗಮನ ಸೆಳೆಯುತ್ತದೆ. ಈ ದಾಸೋಹದಲ್ಲಿ ಜಿಲೇಬಿ ಎಲ್ಲರ ಬಾಯನ್ನೂ ಸಿಹಿ.. ಸಿಹಿ ಮಾಡುತ್ತದೆ. ಜಾತ್ರೆಯಲ್ಲಿನ ಜೆಲೇಬಿ ಗಮ್ಮತ್ತಿನ ಕುರಿತು ಒಂದೇರಡು ಮಾತುಗಳು ಇಲ್ಲಿವೆ.
ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಬಿಸಿ ಬಿಸಿ ಜಿಲೇಬಿಗಳನ್ನು ಮಾಡಿ ಕೊಡಲಾಗುತ್ತದೆ. ಸಾವಿರಲ್ಲ ಅಲ್ಲ, 10 ಸಾವಿರ ಅಲ್ಲ, ಒಂದು ಲಕ್ಷನು ಅಲ್ಲ.. ಲಕ್ಷಾನುಗಟ್ಟಲೇ ಬಿಸಿ ಬಿಸಿ ಜಿಲೇಬಿಗಳನ್ನು ಮಾಡಿ ಭಕ್ತರಿಗೆ ನೀಡಲಾಗುತ್ತದೆ. ಭಕ್ತರಿಗೆ ಜೀಲೆಬಿಗಳನ್ನು ಮಾಡಿಕೊಡುವುದಕ್ಕಾಗಿ ಪ್ರತ್ಯೇಕ ತಂಡ ಜಾತ್ರೆಯಲ್ಲಿ ಠಿಕಾಣಿ ಹೂಡಿದೆ. 200 ರಿಂದ 300 ಬಾಣಸಿಗರು ಈ ಜಿಲೇಬಿಗಳನ್ನು ಮಾಡುತ್ತಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೆಳೆಯರ ಬಳಗದ 200 ರಿಂದ 300 ಬಾಣಸಿಗರು ಜಿಲೇಬಿಗಳನ್ನು ತಯಾರು ಮಾಡುತ್ತಿದ್ದಾರೆ. 100 ಕ್ವಿಂಟಾಲ್ ಮೈದಾಹಿಟ್ಟು, 150 ಕ್ಷಿಂಟಾಲ್ ಸಾವಯವ ಬೆಲ್ಲ, 200 ಲೀಟರ್ ತುಪ್ಪ, 10 ಕೆ.ಜಿ ಯಾಲಕ್ಕಿ, ಹಾಗೇ 200 ಲೀಟರ್ ಮೊಸರನ್ನು ಈ ಜಿಲೇಬಿಗಳಿಗೆ ಬಳಕೆ ಮಾಡಲಾಗಿದೆ. ಈ ಎಲ್ಲ ವಸ್ತುಗಳನ್ನು ಬಳಸಿ ಸುಮಾರು 16 ಲಕ್ಷಕ್ಕೂ ಅಧಿಕ ಜಿಲೇಬಿಗಳನ್ನು ಭಕ್ತರಿಗಾಗಿ ತಯಾರು ಮಾಡಲಾಗುತ್ತದೆ. ಸದ್ಯ ಈಗಾಗಲೇ ಜಾತ್ರೆಗೆ ಬಂದಿರುವ ಭಕ್ತರು ಜಿಲೇಬಿ ಮಾಡುವುದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದ ಕುಂಭಮೇಳ ಎಂದೇ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಖ್ಯಾತಿ ಪಡೆದಿದೆ.
ಇದನ್ನೂ ಓದಿ:ಗವಿಸಿದ್ದೇಶ್ವರ ಜಾತ್ರೆ ಕಣ್ತುಂಬಿಕೊಳ್ಳೋಕೆ ಲಕ್ಷ, ಲಕ್ಷ ಮಂದಿ ಕಾತರ; ಭಕ್ತರು ಓದಲೇಬೇಕಾದ ಸ್ಟೋರಿ ಇದು!
ಇಂದು ಮಹಾರಥೋತ್ಸವ ಸಂಭ್ರಮದಿಂದ ನೆರವೇರಲಿದೆ. ಇದಾದ ಮರುದಿನ ಅಂದರೆ ನಾಳೆ ಜಾತ್ರೆಗೆ ಬರುವ ಎಲ್ಲ ಭಕ್ತರಿಗೆ ಮಾಡಿದ ಜಿಲೇಬಿಗಳನ್ನು ದಾಸೋಹದಲ್ಲಿ ನೀಡಲಾಗುತ್ತದೆ. ಇನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಜಿಲೇಬಿಗಳನ್ನು ತಯಾರಿಸಲು ಅಂದಾಜು 18 ಲಕ್ಷ ರೂಪಾಯಿಗಳು ಖರ್ಚು ಆಗುತ್ತವೆ. ಇದಕ್ಕಾಗಿ ದಾನಿಗಳು, ಭಕ್ತರು, ಜನರು ಈ ಹಣವನ್ನು ಸಹಾಯ ಮಾಡುತ್ತಾರೆ. ಜಾತ್ರೆಯಲ್ಲಿ ಸಿಹಿ ಅಡುಗೆ ಮಾಡುವುದನ್ನು ಸಿಂಧನೂರಿನ ವಿಜಯ್ ಕುಮಾರ್ ಎನ್ನುವರು ಜವಾಬ್ದಾರಿ ತೆಗೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ